ನಾನೂ ಕೂಡ ಜಾ.ದಳದ ಟಿಕೆಟ್ ಆಕಾಂಕ್ಷಿಯಾಗಿದ್ದು ಒಂದು ವೇಳೆ ಹಾಲಿ ಶಾಸಕ ಎಂ. ಶ್ರೀನಿವಾಸ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸಿದರೆ ನನ್ನ ಅಭ್ಯಂತರವಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಂ.ಜೆ. ಚಿಕ್ಕಣ್ಣ ತಿಖಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಾನು 1989 ರಂದು ಜಾ.ದಳದಿಂದ ರಾಜಕೀಯ ಪ್ರವೇಶ ಮಾಡಿ ಪಕ್ಷದ ನಗರ ಕಾರ್ಯದರ್ಶಿಯಾಗಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ನಗರ ಸಭೆ ಸದಸ್ಯ, ಉಪಾಧ್ಯಕ್ಷ ಮತ್ತು ಅಧ್ಯಕ್ಷನಾಗಿ ಪಕ್ಷವನ್ನು ಸಂಘಟಿಸಿದ್ದೇನೆ.
ಕಾವೇರಿ ಹೋರಾಟ ಸೇರಿದಂತೆ ಕನ್ನಡಪರ ಚಳವಳಿಯಲ್ಲಿ ಭಾಗವಹಿಸಿದ್ದೇನೆ. ಮಾಜಿ ಪ್ರಧಾನಿ ದೇವೆಗೌಡರು, ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಜನ್ಮ ದಿನಾಚರಣೆಯಂದು ಸಾಂಸ್ಕೃತಿಕ, ಧಾರ್ಮಿಕ ಕಾಐðಕ್ರಮಗಳನ್ನು ಆಯೋಜಿಸುವುದರ ಜತೆಗೆ ಉಚಿತ ಸರಳ ಸಾಮೂಹಿಕ ಕಾರ್ಯಕ್ರಮಗಳನ್ನು ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಆಯ್ಕೆಗೆ ಸಭೆ ನಡೆಸಿಲ್ಲ
ಈ ಬಾರಿ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನೆಟ್ಟಿನಲ್ಲಿ ಯಾವುದೇ ಸಭೆಯನ್ನು ಕರೆದಿಲ್ಲ. ಕೇವಲ ಐದು ಮಂದಿ ಕುಳಿತು ತೀರ್ಮಾನ ಮಾಡಿದ್ದಾರೆ ಆ ಮೂಲಕ ಹಿಂದಿನ ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೂರು ಸ್ಥಾನ ಕಳೆದುಕೊಂಡಿದ್ದೇವೆ
ನಾವು ಜಿಲ್ಲೆಯಲ್ಲಿ ಈಗಾಗಲೇ ಲೋಕಸಭೆ ಮತ್ತು ಎರಡು ವಿಧಾನ ಪರಿಷತ್ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಬಿಜೆಪಿಗೆ ಅವಕಾಶ ನೀಡಿದ್ದೇವೆ. ಇದು ಯಾರ ವೈಫಲ್ಯ? ಪಕ್ಷದ ವೈಫಲ್ಯವೋ ಅಥವಾ ನಾಯಕರ ವೈಫಲ್ಯವೋ ಎಂದು ಹರಿಹಾಯ್ದಿದ್ದಾರೆ.
2 ಕ್ಷೇತ್ರದಲ್ಲಿ ಗೆಲುವು
ವಿಧಾನಸಭೆಯ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ. ಮೇಲುಕೋಟೆಯಲ್ಲಿ ಪುಟ್ಟರಾಜು, ಮದ್ದೂರಿನಲ್ಲಿ ಡಿ.ಸಿ. ತಮ್ಮಣ್ಣ ಅವರು ಗೆಲ್ಲುತ್ತಾರೆ. ಪಕ್ಷ ಇಷ್ಟು ದುರ್ಬಲವಾಗಲು ಯಾರು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖಂಡರ ರಾಜಿನಾಮೆ
ಜಾ.ದಳದ ಕೆಲವು ಮುಖಂಡರು ಪಕ್ಷಕ್ಕೆ ರಾಜಿನಾಮೆ ನೀಡುತ್ತಿದ್ದಾರೆ. ಆಗಾಗಲೇ ತಗ್ಗಳ್ಳಿ ವೆಂಕಟೇಶ್, ಶಶಿಧರ್ ರಾಜಿನಾಮೆ ನೀಡಿದ್ದಾರೆ, ಇಂದು ಚಿಕ್ಕೋನಹಳ್ಳಿ ತಮ್ಮಣ್ಣ ನೀಡಿದ್ದಾರೆ ಎಂದು ಬೇಸರಿಸಿದ್ದಾರೆ.
ಜಿಲ್ಲಾಧ್ಯಕ್ಷರ ವಿರುದ್ದ ಆಕ್ರೋಶ
ಕೆಲವರು ಪಕ್ಷ ಬಿಡಲು ಜಾ.ದಳ ಜಿಲ್ಲಾಧ್ಯಕ್ಷರೇ ಕಾರಣರಾಗಿದ್ದಾರೆ. ಅವರ ನಡವಳಿಕೆ ಪಕ್ಷದ ಕಾರ್ಯಕರ್ತರಲ್ಲಿ ಮುಜುಗರ ತರುತ್ತಿದೆ. ಪಕ್ಷದ ಸಭೆಗಳಿಗೆ ಮುಖಂಡರನ್ನು ಆಹ್ವಾನಿಸುತ್ತಿಲ್ಲ. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ನಾನೂ ಟಿಕೆಟ್ ಆಕಾಂಕ್ಷಿ
ಹಾಲಿ ಶಾಸಕ ಎಂ. ಶ್ರೀನಿವಾಸ ಮತ್ತು ಮಾಜಿ ಮುಖ್ಯ ಮಂತ್ರಿ ಹೆಚ್. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಅವರ ಗೆಲುವಿಗೆ ಶ್ರಮಿಸುತ್ತೇನೆ . ಒಂದು ವೇಳೆ ಶ್ರೀನಿವಾಸ್ ಅವರು ಬೇರೆಯವರಿಗೆ ಅವಕಾಶ ನೀಡಿದರೆ ಅದಕ್ಕೆ ನನ್ನ ಸಹಮತವಿಲ್ಲ. ನಾನೂ ಕೂಡ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.




