Thursday, September 19, 2024

ಪ್ರಾಯೋಗಿಕ ಆವೃತ್ತಿ

ನೇರ – ನಿಷ್ಟುರವಾದಿ ಶ್ರೀನಿವಾಸ್ ಪ್ರಸಾದ್ ಸ್ವಾಭಿಮಾನದ ಸಂಕೇತ: ಜ್ಞಾನ ಪ್ರಕಾಶ್ ಸ್ವಾಮೀಜಿ

ನೇರ, ನಿಷ್ಟುರವಾದಿಯಾಗಿದ್ದ ಪ್ರಸಾದ್, ಬಿಜೆಪಿ ಪಕ್ಷದಲ್ಲಿದ್ದಾಗಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದರು, ದೇವೇಗೌಡರನ್ನು ಸಹ ಬಿಟ್ಟಿರಲಿಲ್ಲ, ಆದರೆ ಯಾರನ್ನು ವೈಯಕ್ತಿಕವಾಗಿ ದ್ವೇಷಿಸುತ್ತಿರಲಿಲ್ಲ, ತಪ್ಪು ಮಾಡಿದವರ ವಿರುದ್ಧ ಸಾತ್ವಿಕ ಸಿಟ್ಟು ಪ್ರದರ್ಶಿಸುತ್ತಿದ್ದರು, ಇವರ ಹೋರಾಟದ ಇಂದಿನ ಯುವಕರಿಗೆ ದಾರಿದೀಪವಾಗಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅಭಿಪ್ರಾಯಿಸಿದರು.

ಮಂಡ್ಯ ನಗರದ ಗಾಂಧಿ ಭವನದಲ್ಲಿ ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳ ಬಳಗ, ಸುಂಡಹಳ್ಳಿ ನಾಗರಾಜ್ ಅಭಿಮಾನಿ ಬಳಗ ಆಯೋಜಿಸಿದ್ದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಯ ಹಾದಿಯಲ್ಲಿ ಮುನ್ನಡೆದು ಸ್ವಜನ ಪಕ್ಷಪಾತವಿಲ್ಲದೆ ಕಪ್ಪು ಚುಕ್ಕೆ ಇಲ್ಲದ ಸ್ವಚ್ಛ ರಾಜಕಾರಣ ಮಾಡಿದ ಕೀರ್ತಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಸಲ್ಲಲಿದೆ ಎಂದು ತಿಳಿಸಿದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ದಕ್ಕೆ ಬಂದಾಗ ಸ್ವಪಕ್ಷೀಯ ನಾಯಕರ ವಿರುದ್ಧ ತಿರುಗಿ ಬೀಳುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ರಾಜಕೀಯದ ಹಾದಿಯಲ್ಲಿ ಪಕ್ಷ ಮುಖ್ಯವಾಗಿರಲಿಲ್ಲ, ತಮ್ಮ ರಾಜಕೀಯ ಜೀವನದಲ್ಲಿ ಅಂಬೇಡ್ಕರ್ ರವರ ಆಶಯ ಮೈಗೂಡಿಸಿಕೊಂಡಿದ್ದ ಪ್ರಸಾದ್, ಅಂಬೇಡ್ಕರ್ ರಂತೆ ಜನಸಾಮಾನ್ಯರಲ್ಲಿ ಹೋರಾಟದ ಕಿಚ್ಚು ಹಚ್ಚಿದವರು, ಸಮುದಾಯದ ಹಿತ ಕಾಪಾಡಲು ಸದಾಕಾಲ ಮುಂದಿದ್ದರು. ಆದರೆ ಇವರು ಯಾವುದೇ ಜಾತಿ ಧರ್ಮಕ್ಕೆ ಸೀಮಿತರಾಗಿರಲಿಲ್ಲ, ಬದಲಾಗಿ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ, ನಾಯಕತ್ವವನ್ನು ಕೊಟ್ಟವರು, ಇಂಥವರು ಇಂದಿನ ರಾಜಕಾರಣಿಗಳಿಗೆ ಆದರ್ಶಪ್ರಾಯ, ಇವರ ಸ್ವಾಭಿಮಾನ ನಮ್ಮೆಲ್ಲರಿಗೂ ಮಾರ್ಗಸೂಚಿಯಾಗಲಿ ಎಂದು ಆಶಿಸಿದರು.

ಯುವಕರಾಗಿದ್ದಾಗ ಬೂಸಾ ಚಳವಳಿ ನಾಯಕತ್ವ ವಹಿಸಿದ್ದ ಶ್ರೀನಿವಾಸ್ ಪ್ರಸಾದ್ ಈಗಿನವರಂತೆ ಮನೆಯಲ್ಲಿ ಇದ್ದುಕೊಂಡು ಶಾಸಕ, ಸಂಸದರಾದವರಲ್ಲ, ಬದಲಾಗಿ ಹೋರಾಟದ ಮೂಲಕ ರಾಜಕೀಯ ಸ್ಥಾನಮಾನ ಪಡೆದವರು, ಸ್ವಾಭಿಮಾನದ ಬದುಕನ್ನು ರೂಪಿಸಿಕೊಂಡಿದ್ದ ಮೇದಾವಿ ರಾಜಕಾರಣಿ ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್ ವೀರಯ್ಯ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ರವರ ಗುಣ,ನಡತೆ, ಸೇವೆ ಸ್ವಾಭಿಮಾನದ ಗಣತಿಯಾಗಿದೆ, ಅವರು ಎಂದಿಗೂ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಿದವರಲ್ಲ, ಪಕ್ಷ ರಾಜಕಾರಣ ಅವರಿಗೆ ಮುಖ್ಯವಾಗಿರಲಿಲ್ಲ, ಬದಲಾಗಿ ಸಮಾಜದ ಹಿತಕ್ಕಾಗಿ ಹಲವು ಪಕ್ಷವನ್ನು ತೊರೆದು ಬಂದಿದ್ದರು, ಬಲಿಷ್ಠ ವರ್ಗದ ವಿರುದ್ಧ ರಾಜಕಾರಣ ಮಾಡಿದವರು ಎಂದು ಗುಣಗಾನ ಮಾಡಿದರು.

, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಎಸ್ಸಿ ಎಸ್ಟಿ ನಿವೃತ್ತ ನೌಕರರ ಸಂಘದ ಗುರುಮೂರ್ತಿ, ಚಂದ್ರ ಹಾಸ್, ಪ್ರೊ.ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್ ಸುಂಡಹಳ್ಳಿ ರಾಜು, ದೇವರಾಜ ಅರಸು ಹಿಂದುಳಿದ ವರ್ಗ ವೇದಿಕೆ ಅಧ್ಯಕ್ಷ ಸಂದೇಶ್, ಮೈಸೂರು ಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ, ನಗರಸಭೆ ಸದಸ್ಯ ಶ್ರೀಧರ್ ಇತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!