Thursday, September 19, 2024

ಪ್ರಾಯೋಗಿಕ ಆವೃತ್ತಿ

ಅ.16ರಿಂದ ಸಾಂಪ್ರದಾಯಿಕ ಶ್ರೀರಂಗಪಟ್ಟಣ ದಸರಾ ಆಚರಣೆ: ಶಾಸಕ ರಮೇಶ್ ಬಾಬು

ಮಂಡ್ಯ ಜಿಲ್ಲಾಡಳಿತದ ವತಿಯಿಂದ ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಅಕ್ಟೋಬರ್ 16,17,18 ರಂದು ಮೂರು ದಿನಗಳ ಕಾಲ ಸಾಂಪ್ರದಾಯಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದರು.

ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀರಂಗಪಟ್ಟಣ ದಸರಾ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾ ಮಹೋತ್ಸವವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು. ಎಲ್ಲಾ ಉಪಸಮಿತಿಗಳು ಸಮನ್ವಯ ಸಾಧಿಸಿ ಅತ್ಯುತ್ತಮವಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಮುಖೇನ ದಸರಾ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ತಿಳಿಸಿದರು.

ಮೂರು ದಿನಗಳ ಕಾಲ ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ, ಪಾರಂಪರಿಕವಾಗಿ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ‌.ಕುಮಾರ ಮಾತನಾಡಿ, ದಸರಾ ಮಹೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿಧಾನಸಭಾ ಹಾಗೂ ವಿಧಾನಪರಿಷತ್ ಶಾಸಕರನ್ನೊಳಗೊಂಡ ಸಂಪೂರ್ಣ ದಸರಾ ಆಚರಣಾ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಮೆರವಣಿಗೆ, ವಸ್ತು ಪ್ರದರ್ಶನ, ಆರೋಗ್ಯ, ನಗರ ಅಲಂಕಾರ, ಕ್ರೀಡಾ, ಆಹಾರ ಹಾಗೂ ಹಣಕಾಸು ಸಮಿತಿ ರಚಿಸಲಾಗಿದೆ. ಎಲ್ಲಾ ಸಮಿತಿಯ ಸದಸ್ಯರು ಸಮನ್ವಯ ಸಾಧಿಸಿ ದಸರಾ ಮಹೋತ್ಸವ ಯಶಸ್ವಿಗೊಳಿಸಿ ಎಂದರು.

ದಸರಾ ಮಹೋತ್ಸವದ ಮುಖ್ಯ ಆಯಾಮವೇ ಸಾಂಸ್ಕೃತಿಕ ಕಾರ್ಯಕ್ರಮ. ಹಾಗಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿವಿಧ ಕಲಾತಂಡಗಳ ಮೆರುಗು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಜೊತಗೆ ಸ್ಥಳೀಯ ಕಲಾತಂಡದವರೆಗೆ ಆದ್ಯತೆ ನೀಡಲಾಗುವುದು ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್ ಮಾತನಾಡಿ, ಕಿರಂಗೂರು ಬನ್ನಿಮಂಟಪ, ಜಂಬೂ ಸವಾರಿ ಸಾಗುವ ರಸ್ತೆ, ಕಾರ್ಯಕ್ರಮ ನಡೆಯುವ ವೇದಿಕೆ ಸ್ಥಳಗಳನ್ನು ಸ್ವಚ್ಚಗೊಳಿಸುವ ಕೆಲಸ ಬರದಿಂದ ಸಾಗಲಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್. ಎಲ್.ನಾಗರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಕೃಷ್ಣಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!