Friday, September 20, 2024

ಪ್ರಾಯೋಗಿಕ ಆವೃತ್ತಿ

ದೆಹಲಿ ಪ್ರವೇಶಿಸದಂತೆ ರೈತರನ್ನು ತಡೆಯಲು ಹರಸಾಹಸ: ಅಶ್ರುವಾಯು ಪ್ರಯೋಗ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಮಖಂಡರು ಮತ್ತು ಕೇಂದ್ರ ಸರಕಾರದ ನಡುವಿನ ನಾಲ್ಕನೇ ಸುತ್ತಿನ ಮಾತುಕತೆ ವಿಫಲವಾದ ಬೆನ್ನಲ್ಲಿ ಕೇಂದ್ರದ ಐದು ವರ್ಷಗಳ ಎಂಎಸ್‌ಪಿ ಗ್ಯಾರೆಂಟಿಯನ್ನು ತಿರಸ್ಕರಿಸಿ ರೈತ ಮುಖಂಡರು ದೆಹಲಿ ಚಲೋ ಪ್ರತಿಭಟನೆಯನ್ನು ಮತ್ತೆ ಮುಂದುವರಿಸಿದ್ದು, ಪಂಜಾಬ್-ಹರ್ಯಾಣ ಗಡಿಯಲ್ಲಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಬಳಸಲಾಗಿದೆ. ರೈತರನ್ನು ದೆಹಲಿ ಪ್ರವೇಶಿಸದಂತೆ ತಡೆಯಲು ಹರ್ಯಾಣದ ಬಿಜೆಪಿ ಸರಕಾರ ಮತ್ತು ಕೇಂದ್ರ ಸರಕಾರ ಸತಾಯಗತಾಯ ಪ್ರಯತ್ನಿಸುತ್ತಿದೆ.

ಪ್ರತಿಭಟನೆಯಿಂದಾಗಿ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಟ್ರಾಫಿಕ್ ಜಾಮ್‌ಗಳು ಉಂಟಾಗಿದೆ. ದೆಹಲಿಯಲ್ಲಿ ಕೂಡ ಭಾರೀ ಜನಸಂದಣಿ ಕಂಡು ಬಂದಿದೆ. ಶಂಭು ಗಡಿಯಲ್ಲಿ 14,000 ಜನರು ಮತ್ತು 1,200 ಟ್ರಾಕ್ಟರ್‌ಗಳಿವೆ. ರೈತರ ದೆಹಲಿ ಚಲೋ ಹಿನ್ನೆಲೆ ರೈತರಿಂದ ಮಣ್ಣು ತೆಗೆಯುವ ಉಪಕರಣಗಳನ್ನು ವಶಪಡಿಸಿಕೊಳ್ಳಿ ಎಂದು ಪಂಜಾಬ್‌ ಪೊಲೀಸರಿಗೆ ಹರ್ಯಾಣ ಡಿಜಿಪಿ ಸೂಚನೆ ನೀಡಿದ್ದಾರೆ.

ರೈತರು ಶಂಭು ಗಡಿಯಿಂದ ದೆಹಲಿಯತ್ತ ಮೆರವಣಿಗೆ ಆರಂಭಿಸಿದಾಗ ಹರಿಯಾಣ ಪೊಲೀಸರು ಯಾವುದೇ ಪ್ರಚೋದನೆ ಇಲ್ಲದೆ 14 ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದಾರೆ ಎಂದು ಪಟಿಯಾಲಾ ರೇಂಜ್‌ನ ಡಿಐಜಿ ಎಚ್‌ಎಸ್ ಭುಲ್ಲಾರ್ ಬುಧವಾರ ಹೇಳಿದ್ದಾರೆ.

ಈ ಮಧ್ಯೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ಬುಧವಾರ ಮತ್ತೆ ರೈತ ಮುಖಂಡರನ್ನು ಎಂಎಸ್‌ಪಿ ವಿಷಯದ ಕುರಿತು ಚರ್ಚೆಗೆ ಆಹ್ವಾನಿಸಿದ್ದಾರೆ. ಐದನೇ ಸುತ್ತಿನಲ್ಲಿ ಎಂಎಸ್‌ಪಿ ಬೇಡಿಕೆ, ಬೆಳೆ ವೈವಿಧ್ಯೀಕರಣ, ರೈತರ ಮೇಲಿನ ಎಫ್‌ಐಆರ್‌ ಸೇರಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್, ಶಂಭು ಗಡಿಯಲ್ಲಿ ರೈತರೊಂದಿಗೆ ಮಾತನಾಡಿ, ನೀವು ಹಿಂದೆ ಇರಿ, ನಾವು ಮೆರವಣಿಗೆಯನ್ನು ಮುನ್ನಡೆಸುತ್ತೇವೆ. ಯಂತ್ರಗಳನ್ನು ನಿಲ್ಲಿಸೋಣ ಮತ್ತು ನಾವು ನಡೆಯೋಣ ಎಂದು ಕರೆ ನೀಡಿದ್ದಾರೆ. ಎಲ್ಲ ಕಡೆಯೂ ರಾಜಕೀಯ ನಡೆಯುತ್ತಿದೆ. ಪಂಜಾಬ್ ಈ ಯಂತ್ರಗಳನ್ನು ಪ್ರತಿಭಟನಕಾರರನ್ನು ಮೊದಲೇ ಏಕೆ ನಿಲ್ಲಿಸಲಿಲ್ಲ? ಎಂದು ಪಂಜಾಬ್‌ ಹರ್ಯಾಣ ಹೈಕೋರ್ಟ್‌ ಪ್ರಶ್ನಿಸಿತ್ತು. ಹರ್ಯಾಣ ಸರ್ಕಾರವು ಬುಧವಾರ ಮತ್ತೆ ಹೈಕೋರ್ಟ್‌ ಮೊರೆ ಹೋಗಿದ್ದು, ರೈತರು ತಮ್ಮ ಉಪಕರಣಗಳೊಂದಿಗೆ ಮುಂದುವರಿಯುವುದನ್ನು ತಡೆಯಲು ನಿರ್ದೇಶನಗಳನ್ನು ಕೋರಿದೆ.

ಪ್ರತಿಭಟನೆಯ ಬಗ್ಗೆ ಮಾದ್ಯಮವನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ದಲ್ಲೆವಾಲ್ ಅವರು ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರಿಂದಾಗಿ ದೆಹಲಿಗೆ ಶಾಂತಿಯುತವಾಗಿ ಮೆರವಣಿಗೆ ನಡೆಸಬಹುದು. ಇದಲ್ಲದೆ ರಾಷ್ಟ್ರದಹಿತಾಸಕ್ತಿಗಾಗಿ ಸಾಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಬುಧವಾರ ಬೆಳಗ್ಗೆ 11 ಗಂಟೆಗೆ ಗಡಿ ಪ್ರದೇಶವಾದ ಶಂಭು ಮತ್ತು ಖಾನೌರಿಯಿಂದ ದೆಹಲಿಗೆ ರೈತರ ಪ್ರತಿಭಟನಾ ಮೆರವಣಿಗೆ ಆರಂಭವಾದ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಭದ್ರತಾ ಕ್ರಮಗಳನ್ನು ಹೆಚ್ಚಿಸಿದೆ.

ರೈತ ಸಂಘಟನೆಗಳು ದೆಹಲಿಯತ್ತ ಪಾದಯಾತ್ರೆಗೆ ಸಿದ್ಧತೆ ನಡೆಸಿದ್ದು, ಶಂಭು ಗಡಿಯಲ್ಲಿ ರೈತ ಸಂಘಟನೆಗಳು ಮಾನವ ಸರಪಳಿ ನಿರ್ಮಿಸಿವೆ. ಒಂದು ಕಡೆ, ಅಗೆಯುವ ಯಂತ್ರಗಳು ಮತ್ತು ಟ್ರ್ಯಾಕ್ಟರ್‌ಗಳ ಸಾಲು ನಿಂತಿದ್ದರೆ, ಇನ್ನೊಂದು ಕಡೆ ಬ್ಯಾರಿಕೇಡ್‌ಗಳನ್ನು ಮುರಿದು ರೈತರು ಹರ್ಯಾಣಕ್ಕೆ ಪ್ರವೇಶಿಸುವ ಬಗ್ಗೆ ಪೊಲೀಸರು ಅಲರ್ಟ್‌ನಲ್ಲಿದ್ದಾರೆ.

ಗಡಿ ಪ್ರದೇಶಗಳಲ್ಲಿ ಭಾರೀ ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿದ್ದು, ದೆಹಲಿ ಪೊಲೀಸ್ ಸಿಬ್ಬಂದಿಗಳ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ. ಕೆಂಪು ಕೋಟೆ ಮತ್ತು ಇಂಡಿಯಾ ಗೇಟ್‌ನಂತಹ ಐತಿಹಾಸಿಕ ಸ್ಥಳಗಳಿಗೆ ಭಾರೀ ಭದ್ರತೆ ಒದಗಿಸಲಾಗಿದೆ. ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಗಡಿಗಳು ಸಂಘರ್ಷದ ಕೇಂದ್ರ ಬಿಂದುಗಳಾಗಿವೆ. ಅಗೆಯುವ ಯಂತ್ರಗಳನ್ನು ಹೊಂದಿದ ರೈತರು, ಹರ್ಯಾಣ ಭದ್ರತಾ ಸಿಬ್ಬಂದಿ ನಿರ್ಮಿಸಿದ ಬ್ಯಾರಿಕೇಡ್‌ಗಳನ್ನು ಭೇದಿಸಲು ನಿರ್ಧರಿಸಿದ್ದಾರೆ.

ರೈತರ ಬೇಡಿಕೆಯೇನು? 

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಫೆಬ್ರವರಿ 13ರಿಂದ ಪಂಜಾಬ್-ಹರಿಯಾಣ ಗಡಿ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ರೈತರು ಉದ್ದೇಶಿಸಿದ್ದ ದೆಹಲಿ ಚಲೋಗೆ ಬಿಜೆಪಿ ಸರಕಾರ ತಡೆದಿದ್ದು, ಸಿಂಘು ಬಾರ್ಡರ್, ಟಿಕ್ರಿ ಬಾರ್ಡರ್ ಮತ್ತು ಘಾಜಿಪುರ ಬಾರ್ಡರ್‌ಗಳಲ್ಲಿ ಮುಳ್ಳುತಂತಿ, ಮೊಳೆಗಳು, ಸಿಮೆಂಟ್ ಮತ್ತು ಕಲ್ಲಿನ ಗೋಡೆಗಳನ್ನು, ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ರೈತರು ದೆಹಲಿಗೆ ತೆರಳದಂತೆ ತಡೆದಿದ್ದರು.

23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ರೈತರ ಸಾಲ ಮನ್ನಾ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರ ಹೆಚ್ಚಳ ಬೇಡ, ರೈತರ  ಮೇಲಿನ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಭೂ ಸ್ವಾಧೀನ ಕಾಯಿದೆ ಮತ್ತು 2020-21ರ ಪ್ರತಿಭಟನೆ ವೇಳೆ ಮೃತ ರೈತರಿಗೆ ಪರಿಹಾರವನ್ನು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!