Friday, September 20, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳ ಉತ್ಸಾಹ ಕಲ್ಲಿದ್ದಲಿನೊಳಗಿನ ಕಾವಾಗಬೇಕು, ಹುಲ್ಲಿಗೆ ಹಚ್ಚಿದ ಬೆಂಕಿಯಾಗಬಾರದು

✍️ ಸಿ ಎಸ್ ಮಂಜುನಾಥ
ಪ್ರಭಾರ ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿನಕುರಳಿ 

‘ಜ್ಞಾನ ರತ್ನ’ ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಮಾನಿನಿ ನಿನ್ನವಳಲ್ಲ ಅವು ಜಗಕಿಕ್ಕಿದ ವಿಧಿ
ನಿನ್ನ ಒಡವೆಯೆಂಬುದು ಜ್ಞಾನ ರತ್ನ ಅಂತಪ್ಪ ದಿವ್ಯ ರತ್ನವ ಕೆಡಗುಡದೇ ಆ ದಿವ್ಯ ರತ್ನವ ನೀ ಅಲಂಕರಿಸಿದೆಯಾದಡೆ ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನೆವೇ
ಪ್ರೀತಿಯ ವಿದ್ಯಾರ್ಥಿಗಳೇ, ನಿಮಗೆ ಜ್ಞಾನದ ಹಸಿವು ಇರಬೇಕು ಓದುವ,ಬರೆಯುವ ಹಪಾಹಪಿ ನಿಮ್ಮದಾಗಬೇಕು.

ಹಸಿವಿದ್ದಾಗ ನಮಗೆ ಓದು ರುಚಿಸುತ್ತದೆ. ‘ಕಷ್ಟ ಪಟ್ಟರೆ ಸುಖ’, ‘ಕೈ ಕೆಸರಾದರೆ ಬಾಯಿ ಮೊಸರು’. ಅದಕ್ಕೆ ಹೇಳಿಲ್ಲವೇ ಹಿರಿಯರು. ‘ಖಾಲಿ ಜೇಬು ನೂರು ಪಾಠಗಳನ್ನು ಕಲಿಸಿದರೆ, ತುಂಬಿದ ಜೇಬು ನೂರು ಆಟಗಳನ್ನು ಆಡಿಸುತ್ತದೆ’. ನಮ್ಮಲ್ಲಿ ಸಾಧನೆ ಮಾಡಿದವರನ್ನು ನೋಡಿದರೆ ಡಾ. ಬಿಆರ್ ಅಂಬೇಡ್ಕರ್, ಡಾ. ಅಬ್ದುಲ್ ಕಲಾಂ ಮತ್ತು ಸರ್ ಎಂ ವಿಶ್ವೇಶ್ವರಯ್ಯನವರು ಬಡತನದ ಹಸಿವಿನಲ್ಲಿ ಓದಿ ಬೆಳೆದು, ಹೆಸರನ್ನು ಕೀರ್ತಿಯನ್ನು ,ಗಳಿಸಿದವರು. ಬಿಲ್ ಗೇಟ್ಸ್ ಹೇಳುತ್ತಾರೆ ‘ಬಡತನದಲ್ಲಿ ಹುಟ್ಟೋದು ನಿಮ್ಮ ತಪ್ಪಲ್ಲ, ನೀನು ಸಾಯುವಾಗ ಬಡತನದಲ್ಲಿ ಸತ್ತರೆ ಅದು ನಿನ್ನ ತಪ್ಪು.’

ನಮ್ಮ ವಿಜಯ ಸಂಕೇಶ್ವರರು ಒಂದು ಟ್ರಕ್ ನಿಂದ ಪ್ರಾರಂಭ ಮಾಡಿದ ವ್ಯವಹಾರ ಇವತ್ತು 5000 ಟ್ರಕ್ ಗಳ ಒಡೆಯರಾಗಿ ವಿಜಯಾನಂದ ರೋಡ್ ಲೈನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ವಿದ್ಯಾರ್ಥಿಗಳಿಗೆ ಅಂತಹ ಏಕಾಗ್ರತೆ, ಬದ್ಧತೆ, ಆಸಕ್ತಿ ಇದ್ದರೆ ಏನೆಲ್ಲಾ ಸಾಧನೆ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ. ಸರಳ, ಸಜ್ಜನಿಕೆ,ಪ್ರಾಮಾಣಿಕ, ವ್ಯಕ್ತಿತ್ವವುಳ್ಳ ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿ ಸಾಧನೆ ಮಾಡಿ ನಮ್ಮ ಭಾರತೀಯ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ. ಈ ನಾಡು ಕಂಡ ಶ್ರೇಷ್ಠ ಪುರುಷ ಸಿಂಹ ಸ್ವಾಮಿ ವಿವೇಕಾನಂದರು ವಿದ್ಯಾರ್ಥಿಗಳನ್ನು ಕುರಿತು ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ‘ ನಿಮ್ಮ ಏಳಿಗೆಗೆ ನೀವೇ ಶಿಲ್ಪಿ’ಎಂದು ಹೇಳಿದ್ದಾರೆ.

ಮುಂದುವರಿಯುತ್ತಾ ಅವರು ‘ಸಾಧನೆ ಮಾಡುವ ತನಕ ಕಿವುಡನಾಗಿರು, ಸಾಧನೆ ಮಾಡಿದ ಮೇಲೆ ಮೂಕನಾಗಿರು.’ ಎಂದು ಹೇಳುತ್ತಾರೆ. ನಾನು ವಿದ್ಯಾರ್ಥಿಗಳಿಗೆ ಆಗಾಗ ಹೇಳುತ್ತಿರುತ್ತೇನೆ. ಸಾಧನೆ ಮಾಡುವಾಗ ನಿಮಗೆ ಒಂದು ಹುಚ್ಚು ಇರಬೇಕು, ಆ ಹುಚ್ಚು ಸಾಧನೆಯನ್ನು ಮಾಡುವ ಕ್ಷೇತ್ರಗಳ ಮೇಲೆ ಮನಸ್ಸಿರಬೇಕು. ಅಂದರೆ ಒಬ್ಬ ಚೆನ್ನಾಗಿ ಓಡುತ್ತಾನೆ ಎಂದರೆ ಆತ ಚೆನ್ನಾಗಿ ಓಡುವ ಅಭ್ಯಾಸ ಮಾಡಬೇಕು. ಒಬ್ಬ ಹಾಡುತ್ತನೆಂದರೆ ಚೆನ್ನಾಗಿ ಹಾಡುವುದನ್ನು ಅಭ್ಯಾಸ, ಮಾಡಲಿ ಒಬ್ಬ ಚೆನ್ನಾಗಿ ಮಾತನಾಡುತ್ತೇನೆಂದರೆ ಚೆನ್ನಾಗಿ ಮಾತನಾಡುವ ಅಭ್ಯಾಸವನ್ನು ಮಾಡಲಿ, ಜೊತೆಗೆ ವಿದ್ಯಾರ್ಥಿ ಉತ್ತಮ ಭಾಷಣಕಾರನಾಗಬೇಕಾದರೆ ಒಬ್ಬ ಉತ್ತಮ ಕೇಳುಗನಾಗಬೇಕಂತೆ. ಮಾತನಾಡುವ ವ್ಯಕ್ತಿಯ ಮಾತುಗಳನ್ನು,ಭಾಷಣಗಳನ್ನು ಕೇಳಿಸಿಕೊಂಡಾಗ ಆತ ಉತ್ತಮ ಭಾಷಣಕಾರನಾಗುತ್ತಾನೆ.ಈ ರೀತಿಯ ಕ್ರಿಯೆ, ಅಭ್ಯಾಸ ಮಾಡುವಾಗ ಜನ ನಿನ್ನನ್ನು ನೋಡಿ ಹುಚ್ಚ ಎ ನ್ನುತ್ತಾರೆ,ಆಮೇಲೆ ನಿನ್ನನ್ನು ನಿರ್ಲಕ್ಷಿಸುತ್ತಾರೆ, ಅನಂತರ ನಿನ್ನ ಸಾಧನೆಯನ್ನು ನೋಡಿ ನಿನ್ನನ್ನು ಹೊಗಳುತ್ತಾರೆ, ಮೆಚ್ಚಿಕೊಳ್ಳುತ್ತಾರೆ.ಆಗ ನೀನು ಗೆದ್ದಂತೆ ಎಂದು ಮಹಾತ್ಮ ಗಾಂಧಿಯವರು ಹೇಳುತ್ತಾರೆ.

ಕನ್ನಡದ ವಚನಕಾರ್ತಿ ಅಮುಗೆರಾಯಮ್ಮ ನವರು ಒಂದು ವಚನದಲ್ಲಿ ‘ಎನ್ನ ಕಾಲೋಳಗಣ ಮುಳ್ಳ ನಾನೇ ತೆಗೆಯಬೇಕು ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೇ ಮುರಿಯಬೇಕು ಎನ್ನ ಅಂಗದಲ್ಲಿಪ್ಪ ಮಾಯಾ ಪ್ರಪಂಚವ ನಾನೇ ಸುಡಬೇಕು. ಎನ್ನುವ ಮಾತನ್ನು ಹೇಳುತ್ತಾರೆ ಅಂದರೆ ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ.ನಿನ್ನ ಸಾಧನೆಗೆ ನೀನೇ ಸ್ಪೂರ್ತಿ,ನಿನಗೆ ನೀನೇ ಎಂದು ಹೇಳುತ್ತಾರೆ.ರಾಷ್ಟ್ರಕವಿ ಕುವೆಂಪುರವರು ವಿದ್ಯಾರ್ಥಿಗಳನ್ನು ಕುರಿತು ‘ಪ್ರತಿಯೊಬ್ಬ ವಿದ್ಯಾರ್ಥಿಯು ಒಬ್ಬ ‘ಗೌರವ ತಪಸ್ವಿ’ ಎಂದು ವಿದ್ಯಾರ್ಥಿಗಳಿಗೆ ‘ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಎಂದು ಹೇಳುತ್ತಾ ‘ವಿದ್ಯಾರ್ಥಿಗಳ ಉತ್ಸಾಹ ಕಲ್ಲಿದ್ದಲಿನೊಳಗಿನ ಕಾವಾಗಬೇಕು, ಹುಲ್ಲಿಗೆ ಹಚ್ಚಿದ ಬೆಂಕಿಯಾಗಬಾರದು’ಎಂದು ಹೇಳುತ್ತಾರೆ.

ನಮ್ಮ ಕ್ಷಿಪಣಿ ತಜ್ಞ ಡಾ. ಅಬ್ದುಲ್ ಕಲಾಂ ಅವರು ‘ಎಲ್ಲಾ ಮಕ್ಕಳ ಕನಸುಗಳು ಒಂದೇ. ವಿದ್ಯಾರ್ಥಿಗಳಿಗೆ ಮೊದಲು ಕುತೂಹಲವಿರಬೇಕು,ಆನಂತರಆಸಕ್ತಿ, ಆಮೇಲೆ ಕಷ್ಟಪಟ್ಟು ಗುರಿ ಸಾಧಿಸುವ ಛಲ ಇರಬೇಕು ಎಂದು ಹೇಳುತ್ತಾರೆ. ಅವರ ಆತ್ಮ ಚರಿತ್ರೆ ‘ವಿಂಗ್ಸ್ ಆಫ್ ಫೈರ್’ನಲ್ಲಿ ನನ್ನ ಆತ್ಮ ಚರಿತ್ರೆಯನ್ನು ಎಲ್ಲಾ ವಿದ್ಯಾರ್ಥಿಗಳು ಓದಿ ಬದಲಾಗುತ್ತಾರೆ ಎನ್ನುವ ನಂಬಿಕೆ ನನಗಿಲ್ಲ,ನನ್ನಂತಹ ಒಬ್ಬ ಯಾವನೋ ದೂರದ ಹಳ್ಳಿಯ ವಿದ್ಯಾರ್ಥಿ ನನ್ನಂತೆ ಮೂಲಭೂತ ಸೌಕರ್ಯಗಳಿಂದ ವಂಚಿತನಾಗಿ ನನ್ನ ಪುಸ್ತಕ ಆ ಹುಡುಗನ ಕೈಗೆ ಸಿಕ್ಕಾಗ ಅದನ್ನು ಓದಿ ಅವನ ಜೀವನ ಅರಳಿದರೆ ಅಷ್ಟೇ ಸಾಕು. ಎನ್ನುವ ಮಾತನ್ನು ಹೇಳುತ್ತಾರೆ.

ಈ ನಾಡು ಕಂಡ ಶ್ರೇಷ್ಠ ಚಿಂತಕ ದೇವನೂರು ಮಹದೇವರವರು ‘ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ.’ಎಂದು ಹೇಳುತ್ತಾರೆ. ನಾವು ಸಾಧಕರ ಚರಿತ್ರೆಯನ್ನು ಓದುವುದರ ಜೊತೆಗೆ, ಹಲವಾರು ಬಾರಿ ಸೋತು ಗೆದ್ದಿರುವವರ ಚರಿತ್ರೆಯನ್ನು ಓದಬೇಕು. ರಾಷ್ಟ್ರಕವಿ ಕುವೆಂಪುರವರು ಹೇಳುತ್ತಾರೆ ‘ನೂರು ಸಾರಿ ಬಿದ್ದಿದ್ದರೆನಂತೆ, ನೂರು ಸಾರಿ ಸೋತಿದ್ದರೆನಂತೆ, ಬಿದ್ದರಲ್ಲವೆ ಮೇಲೇಳುವುದು ಬೀಳದವ ಎಂದು ಮೇಲೆದ್ದಿಲ್ಲ.’ ಇಡೀ ಜಗತ್ತಿಗೆ ಶಾಂತಿ,ಅಹಿಂಸೆಯನ್ನು ಸಾರಿದ ಈ ಜಗತ್ತು ಕಂಡ ಜ್ಞಾನದ ಬೆಳಕು ಬುದ್ದ ಹೇಳುತ್ತಾರೆ ‘ಬೇರೆಯವರಿಗೆ ಬೆಳಕಾಗು’ ಎಂದು ಬುದ್ಧರ ಮನಸ್ಸು ಎಷ್ಟು ದೃಢವಾಗಿತ್ತು ಅನ್ನೋದಕ್ಕೆ ಆತ ಸನ್ಯಾಸನಾಗುತ್ತಾನೆ ಎಂದು ಭವಿಷ್ಯ ನಡೆದಿದ್ದ ಜ್ಯೋತಿಷಿ, ತಂದೆ ಶುದ್ಧೋಧನ ಮಗನನ್ನು ಹೊರಗಡೆಗೆ ಕಳಿಸದೆ ಅರಮನೆಯಲ್ಲಿ ಇರಿಸಿ ಆತನನ್ನು ರಕ್ಷಣೆ ಮಾಡಿದ್ದ. ಒಂದು ದಿನ ಆತ ಮನೆಯಿಂದ ಹೊರಗಡೆ ಹೋದಾಗ ಆತ ಶವವನ್ನು, ರೋಗಿಯನ್ನು ವೃದ್ಧನನ್ನು ನೋಡಿ ಆತನಿಗೆ ಜ್ಞಾನೋದಯವಾಗಿ ,ತಂದೆ, ತಾಯಿ, ಹೆಂಡತಿ, ಮಗನನ್ನು ಬಿಟ್ಟು ಅರಮನೆಯಿಂದ ಹೊರ ಹೋಗುತ್ತಾರೆ, ಅನಂತರ ಊರೂರು ಸುತ್ತುತ್ತಿರುವ ಮಗನನ್ನು ತಂದೆ ಅರಮನೆಗೆ ಕರೆಸಲು ಮಾಡಿದ ಪ್ರಯತ್ನಗಳು ವಿಫಲವಾಗುತ್ತವೆ.

ಒಂದು ದಿನ ಭಿಕ್ಷಾಟನೆಗೆಂದು ತನ್ನ ಊರಾದ ಪಾಟಲೀಪುತ್ರಕ್ಕೆ ಬಂದು ಭಿಕ್ಷೆ ಕೇಳುತ್ತಿರುವ ಸಂದರ್ಭವನ್ನು ನೋಡಿದ ತಂದೆಗೆ,ಹೆಂಡತಿಗೆ, ಮಗ ಭಿಕ್ಷೆ ಬೇಡುತ್ತಿರುವುದನ್ನು ನೋಡಿ ಮನೆಗೆ ಬಾ ಎಂದು ಕರೆದಾಗ ಆತನ ಮನಸ್ಸು ಒಪ್ಪುವುದಿಲ್ಲ, ಆ ಸಂದರ್ಭವನ್ನು ನೋಡಿದ ಹೆಂಡತಿಗೆ ಅದೇಷ್ಟು ನೋವಾಗಿರಬೇಕು,ಯಶೋಧ ರೆ ಅದೆಷ್ಟು ಅತ್ತಿರಬೇಕು.ಹೆಂಡತಿ ಅತ್ತರು ಬುದ್ಧನ ಮನಸ್ಸು ಕರಗಲಿಲ್ಲ, ತನ್ನ ಮಗ ರಾಹುಲನನ್ನು ನೋಡಿದರೂ ಬುದ್ಧನ ಮನಸ್ಸು ಬದಲಾಗಲಿಲ್ಲವೆಂದ ಮೇಲೆ ಬುದ್ಧನ ಚಿತ್ತ ಎಷ್ಟು ಖಚಿತವಾಗಿ ರಬೇಕು. ಅಂತಹ ಓದುವ,ಬರೆಯುವ, ಮನಸ್ಸು ನಿಮ್ಮದಾಗಬೇಕು, ವಿದ್ಯಾರ್ಥಿಗಳೇ ದೃಢ ಸಂಕಲ್ಪವನ್ನು ಮಾಡಿ ಸಾಧನೆಯನ್ನ ಮಾಡಬೇಕು. ಕುದುರೆಗೆ ಜೀನನ್ನು ಕಟ್ಟುತ್ತಾರೆ ಕುದುರೆ ಆ ಕಡೆ ಈ ಕಡೆ ನೋಡದೆ ನೇರವಾಗಿ ಹೋಗಲೆಂದು ಹಾಗೆ ನೀವು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಆಕರ್ಷಣೆಗೆ ಒಳಗಾಗದೆ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡು ನಿಮ್ಮ ತಂದೆ ತಾಯಿಯರಿಗೆ, ಗುರುಹಿರಿಯರಿಗೆ ಮತ್ತು ನಮ್ಮ ಕಾಲೇಜಿಗೆ ಕೀರ್ತಿ ತನ್ನಿ ಎಂದು ಹಾರೈಸುತ್ತೇನೆ, ನಿಮ್ಮ ಜೀವನ ಉಜ್ವಲವಾಗಿರಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!