Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳು | ಸಾಮಾಜಿಕ ಬಂಡವಾಳ ಮತ್ತು ಮೈಕಲ್ ಹೋಲ್ಡಿಂಗ್ ಮನದಾಳದ ಮಾತುಗಳು

✍️ ಹರೀಶ್ ಗಂಗಾಧರ್


  • ಜಾರ್ಜ್ ಫ್ಲೋಯ್ಡ್ ಕೊಲೆಯಾದ ದಿನದಂದು ಆತ ತುಂಬ ಭಾವುಕನಾಗಿ ಮಾತನಾಡಿದ್ದ
  • ಟ್ಯಾಕ್ಸಿ ಚಾಲಕನಿಗೂ ಒಬ್ಬ ಕಪ್ಪು ವರ್ಣದವನನ್ನು ಕಾರಿನೊಳಗೆ ಹತ್ತಿಸಿಕೊಳ್ಳವುದು ಇಷ್ಟವಿರಲಿಲ್ಲ
  • ಆ ಒಂಬತ್ತುವರೆ ನಿಮಿಷದಲ್ಲಿ ಇಡಿಯ ಕಪ್ಪು ವರ್ಣದವರ ಮೇಲಾದ ದಬ್ಬಾಳಿಕೆಯ ಭೀಕರ ಇತಿಹಾಸ

ನೆನ್ನೆ ವಿದ್ಯಾರ್ಥಿಗಳ ಕುರಿತು ಒಂದು ಪೋಸ್ಟ್ ಹಾಕಿದ್ದೆ. ಸೋಶಿಯಲ್ ಕ್ಯಾಪಿಟಲ್ (ಸಾಮಾಜಿಕ ಬಂಡವಾಳದ) ಪ್ರಸ್ತಾಪ ಆ ಲೇಖನದಲ್ಲಿತ್ತು. ಕೆಲವರು ಈಗ ಎಲ್ಲರ ಬಳಿ ದುಡ್ಡಿದೆ, ಮೀಸಲಾತಿ ಎಲ್ಲರಿಗು ಸೋಶಿಯಲ್ ಕ್ಯಾಪಿಟಲ್ ನೀಡಿದೆ ಅಂದರು. ಜನರ ಮನಸ್ಥಿತಿ ಈಗ ಬದಲಾಗಿದೆ ತಾರತಮ್ಯ ಈಗಿಲ್ಲವೆಂದರು, ಇನ್ನು ಕೆಲವರು ಇದೆಲ್ಲವನ್ನು ಮೀರಿ ಬಡ ವಿದ್ಯಾರ್ಥಿಗಳು ಬೆಳೆಯಬೇಕು, ಆತ್ಮ ವಿಶ್ವಾಸ ಮುಖ್ಯವೆಂದರು.

ಮೈಕಲ್ ಹೋಲ್ಡಿಂಗ್ ಕ್ರಿಕೆಟಿನ ದಂತಕತೆ. ಅವನ ಕ್ರಿಕೆಟ್ ಕಾಮೆಂಟರಿಗೆ ಮರುಳಾಗದವರಿಲ್ಲ. ಇಷ್ಟೆಲ್ಲಾ ಇದ್ದರು ಅವ ಕಪ್ಪುವರ್ಣದವನೆಂಬ ಕಾರಣಕ್ಕೆ ಅನುಭವಿಸಿದ ಅವಮಾನದ ಕುರಿತು ಜಾರ್ಜ್ ಫ್ಲೋಯ್ಡ್ ಕೊಲೆಯಾದ ದಿನದಂದು ಆತ ತುಂಬ ಭಾವುಕನಾಗಿ ಮಾತನಾಡಿದ್ದ. ಈ ಮಾತುಗಳನ್ನ ಭಾರತಕ್ಕೆ contextualize ಮಾಡಿಕೊಂಡು ಅರ್ಥ ಮಾಡಿಕೊಳ್ಳುವಿರಿ ಎಂಬ ಆಶಾವಾದದಿಂದ ಈ ಹಿಂದೆ ಪೋಸ್ಟ್ ಮಾಡಿದ್ದ ಲೇಖನವನ್ನ ಮತ್ತೆ ಶೇರ್ ಮಾಡುತ್ತಿದ್ದೇನೆ… Thanks for all the love…

ಮೈಕಲ್ ಹೋಲ್ಡಿಂಗ್ ಮನದಾಳದ ಮಾತುಗಳು

ನಾವು ಶಾಲೆಗಳಲ್ಲಿ ಪದೇ ಪದೇ ಓದಿರುತ್ತೇವೆ, ಥಾಮಸ್ ಅಲ್ವಾ ಎಡಿಸನ್ ಬಲ್ಬ್ ಕಂಡುಹಿಡಿದ ಎಂದು. ಆದರೆ ಎಡಿಸನ್ ಕಂಡು ಹಿಡಿದ ಬಲ್ಬ್ ಒಳಗಿನ ಕಾಗದದ ಎಳೆ ( ಪೇಪರ್ ಫಿಲಮೆಂಟ್) ಬಹು ಬೇಗ ಉರಿದು ಉದುರಿ ಹೋಗುತ್ತಿತ್ತು. ಆದರೆ ನಿಮಗೆ ಗೊತ್ತೆ ಬಲ್ಬ್ ಗಳ ಒಳಗೆ ದೀರ್ಘ ಕಾಲ ಉರಿದು ಬೆಳಕು ಕೊಡುವಂತಹ ಫಿಲಮೆಂಟ್ ಯಾರು ಕಂಡುಹಿಡಿದಿದ್ದು ಎಂದು?

ಯಾರಿಗೂ ಗೊತ್ತಿರಲಿಕ್ಕಿಲ್ಲ. ಈ ವಿಚಾರವನ್ನ ಶಾಲೆಗಳಲ್ಲೂ ಹೇಳಿಕೊಟ್ಟಿರಲಿಕ್ಕಿಲ್ಲ ಏಕೆಂದರೆ ಅದನ್ನ ಕಂಡುಹಿಡಿದವನೊಬ್ಬ ಕಪ್ಪು ವರ್ಣದವ- ಲೂಯಿಸ್ ಹೋವರ್ಡ್ ಲ್ಯಾಟಿಮರ್- ಈತ ದೀರ್ಘವಾಗಿ ಉರಿಯುವ ಕಾರ್ಬನ್ ಫಿಲಮೆಂಟ್ ಕಂಡುಹಿಡಿದ. ಲ್ಯಾಟಿಮರ್ ತಂದೆ ತಾಯಿ ಗುಲಾಮಗಿರಿ ತಪ್ಪಿಸಿಕೊಂಡು ಸ್ವತಂತ್ರವಾಗಿ ಬದುಕಲು ಪಟ್ಟಪಾಡು ಅಷ್ಟಿಷ್ಟಲ್ಲ. ಇದೂ ಕೂಡ ವಿದ್ಯಾರ್ಥಿಗಳಿಗೆ ತಿಳಿದಿರಲಿಕ್ಕಿಲ್ಲ.
ಶಾಲೆಗಳಲ್ಲಿ ಎಲ್ಲವನ್ನು ಹೇಳಿಕೊಡಬೇಕು. ಶಾಲೆಯಲ್ಲಿ ಹೇಳಿಕೊಟ್ಟಿದ್ದೇ ಜೀವನ ಪರ್ಯಂತ ನೆನಪಿನಲ್ಲಿ ಉಳಿಯೋದು. ಕಪ್ಪು ವರ್ಣದವರ ಕುರಿತಾದ ಯಾವ ಒಳ್ಳೆಯ ವಿಚಾರಗಳನ್ನು ನನಗೆ ಶಾಲೆಯಲ್ಲಿ ಹೇಳಿಕೊಡಲಿಲ್ಲ. ಆಳುವವರಿಗೆ ಅನುಕೂಲವಾಗುವಂತಹ ವಿಚಾರಗಳನ್ನೇ ನಮಗೆ ಭೋದಿಸಲಾಯಿತು. ಇತಿಹಾಸ ಆಳುವವರಿಂದ ರಚಿಸಲ್ಪಡುತ್ತದೆಯೇ ಹೊರತು ಅಧೀನಕ್ಕೊಳಗಾದ ದಮನಿತರಿಂದಲ್ಲ. ಇತಿಹಾಸ ಹಾನಿ ಮಾಡುವವರಿಂದ ರಚಿಸಲ್ಪಡುತ್ತದೆ ಹೊರತು ಹಾನಿಗೊಳಗಾದವರಿಂದಲ್ಲ.

ಇದನ್ನೂ ಓದಿ : https://nudikarnataka.com/sorry-dear-students/

ಜಗತ್ತಿನ ಸರ್ವ ಒಳಿತು ಬಿಳಿಯರಿಂದಲೇ ಆಗಿದೆ ಹಾಗೂ ಎಲ್ಲಾ ಕೆಡುಕು ಕಪ್ಳು ವರ್ಣದಿಂದಲೇ ಆಗಿದೆಯೆಂದು ಮಕ್ಕಳಿಗೆ ಶಾಲೆಗಳಲ್ಲಿ ಹೇಳಿಕೊಡುತ್ತಾ ಹೋದರೆ ಅಥವಾ ಕಪ್ಪು ವರ್ಣದವರ ಸಾಧನೆಗಳನ್ನ ಮರೆಮಾಚುತ್ತಾ ಹೋದರೆ, ನಾವು ಎಂತಹ ಸಾಮಾಜ ಕಟ್ಟುತ್ತೇವೆ? ಅದೆಂತಹ ಭೌದ್ಧಿಕವಾಗಿ ದಿವಾಳಿಯಾದ ಸಮಾಜವದು? ಹೀಗೆ ಸಾಂಸ್ಥಿಕಗೊಳಿಸಲಾದ ವರ್ಣಭೇದದ ಸಮಾಜದಿಂದ ಆರೋಗ್ಯಕರ ಮನಸ್ಸುಗಳು ಹೇಗೆ ಹುಟ್ಟುಬಲ್ಲವು? ಇತಿಹಾಸದ ಎಲ್ಲ ಆಯಾಮಗಳನ್ನೂ ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಉದಾಹರಣೆಗೆ ಯೂರೋಪಿನ ಇತಿಹಾಸ ಅಂತ ನೀವು ಪುಸ್ತಕ ಬರೆದರೆ ಯುರೋಪಿಯನ್ ದೇಶದ ಬಗ್ಗೆ ಎಲ್ಲವನ್ನ, that means just EVERYTHING ಯಾಕೆ ಬರೆಯಬಾರದು?

ವರ್ಣಭೇದದ ನನ್ನ ಅನುಭವಗಳನ್ನೇ ಹೇಳುತ್ತೇನೆ- ನಾನು ಇಂಗ್ಲೆಂಡಿನಲ್ಲಿ ಕ್ರಿಕೆಟ್ ಆಡಲು ಬಂದಾಗ ನನ್ನ ಪೋರ್ಚುಗೀಸ್, ಬ್ರೌನ್ almost ಬಿಳಿಯ ಹೆಂಡತಿಯ ಜೊತೆ ಲೆಸ್ಟರ್ ನಗರ ಸುತ್ತಲೂ ಹೋದೆ. ಶಾಪಿಂಗ್ ಮುಗಿದ ಮೇಲೆ ಇಬ್ಬರು ಜೊತೆಗೆ ನಿಂತು ಟ್ಯಾಕ್ಸಿಗಾಗಿ ಕಾದೆವು. ದೂರದಲ್ಲೊಂದು ಟ್ಯಾಕ್ಸಿ ನಮ್ಮ ಕಡೆಗೇ ಬರುವುದು ಕಾಣಿಸಿತು. ಮೇಲೆ ‘ಬಾಡಿಗೆಗೆ’ ಎಂಬ ದೀಪ ಉರಿಯುತ್ತಿತು. ನಾನು ಮುಂದೆ ಬಂದು ಟ್ಯಾಕ್ಸಿ ನಿಲ್ಲಿಸಲು ಕೈ ಚಾಚಿದೆ. ಟಾಕ್ಸಿಯವನು ನನ್ನ ನೋಡಿ ದೀಪಹಾರಿಸಿಕೊಂಡು ಮುಂದೆ ಸಾಗಿ ಸ್ವಲ್ಪ ದೂರ ಚಲಿಸಿ ಮತ್ತೆ “ಬಾಡಿಗೆಗೆ” ಎಂಬ ದೀಪ ಹಾಕಿಕೊಂಡ. ಟ್ಯಾಕ್ಸಿ ಚಾಲಕನಿಗೂ ಒಬ್ಬ ಕಪ್ಪು ವರ್ಣದವನನ್ನು ಕಾರಿನೊಳಗೆ ಹತ್ತಿಸಿಕೊಳ್ಳವುದು ಇಷ್ಟವಿರಲಿಲ್ಲ. ರಸ್ತೆಯ ಆ ಬದಿಯಲ್ಲಿ ನಿಂತಿದ್ದ ನನ್ನ ಗೆಳೆಯ ಕೂಗಿ “ಲೋ ನಿನ್ ಬಿಳಿ ಹೆಂಡತಿಯನ್ನ ಕೈ ಚಾಚುವಂತೆ ಹೇಳು ಆಗ ಟ್ಯಾಕ್ಸಿ ನಿಲ್ಲುತ್ತವೆ. ಇಲ್ಲಿ ಬಿಳಿಯರಿಗೆ ವಿಶೇಷ ಸವಲತ್ತಿದೆ!!” ಎಂದು ಹೇಳಿದ. ಹಾಗೆಯೇ ಮಾಡಿದೆ. ಟ್ಯಾಕ್ಸಿ ನಿಲ್ಲಿಸಿತು ಕೂಡ.

ಇದು ಇಂಗ್ಲೆಂಡ್ ಕತೆಯಾದರೆ ಅಸ್ಟ್ರೇಲಿಯದಲ್ಲೂ ಈ ತರಹದ ಅನುಭವವೆ ಆಗಿದೆ. ಪ್ರತಿಷ್ಠಿತ ಹೋಟೆಲ್ನಲ್ಲಿ ನಾವು ತಂಗಿದ್ದೆವು. ನಾನು ನನ್ನ ಗೆಳೆಯರು ಹೋಟೆಲ್ಲಿನ ಲಿಫ್ಟ್ ನಲ್ಲಿನಿಂತಿದ್ದೇವು. ಇನ್ನೇನು ಲಿಫ್ಟಿನ ಬಾಗಿಲುಗಳು ಮುಚ್ಚುವುದರಲಿತ್ತು ಆಗ ಬಿಳಿಯನೊಬ್ಬ ಓಡಿಬಂದು ಲಿಫ್ಟ್ ಗುಂಡಿ ಒತ್ತಿದ. ಬಾಗಿಲು ತೆರದಾಗ ಆತನಿಗೆ ಅಚ್ಚರಿ ಕಾದಿತ್ತು. ಪುಟ್ಟ ಲಿಫ್ಟಿನಲ್ಲಿ ಇದ್ದವರೆಲ್ಲ ಕಪ್ಪು ವರ್ಣದವರೇ. ಆತ ಲಿಫ್ಟ್ ಹತ್ತಲಿಲ್ಲ. ಬಾಗಿಲು ಇನ್ನೆನ್ನು ಮುಚ್ಚುಕೊಳ್ಳುವಾಗ “ಹಾಳಾದ ಕರಿಯರು” ಎಂದು ಗೊಣಗಿದ. ಇದು ನನ್ನಂತಹ ಖ್ಯಾತ ಕ್ರಿಕೆಟಿಗನ ಅನುಭವಗಳು.

ಇಷ್ಟೆಲ್ಲಾ ಆದರೂ ಬಿಳಿಯರಿಗೆ ಯಾವ ವಿಶೇಷ ಸವಲತ್ತುಗಳು ಸಿಕ್ಕಿಲ್ಲವೆಂದು, ಎಲ್ಲೂ ತಾರತಮ್ಯವಿಲ್ಲವೆಂದು ಕೆಲವರು ವಾದಿಸುತ್ತಾರೆ. Give me a break. ಅಮೇರಿಕಾದ ಜಾರ್ಜ್ ಫ್ಲೋಯ್ಡ್ ಎಂಬ ಕಪ್ಪುವರ್ಣದವನ ಕುತ್ತಿಗೆಯ ಮೇಲೆ ಬಿಳಿಯ ಪೊಲೀಸನೊಬ್ಬ ತನ್ನ ಮಂಡಿಯನ್ನ 9ನಿಮಿಷ 29ಸೆಕೆಂಡ್ ಬಲವಾಗಿ ಊರಿರುವಾಗ, ಫ್ಲೋಯ್ಡ್ನ ” ಸರ್ ನನಗೆ ಉಸಿರಾಡಲಾಗುತ್ತಿಲ್ಲ. I can’t breath” ಎಂಬ ನಿರಂತರ ಕೂಗನ್ನು ನಿರ್ಲಕ್ಷಿಸಿ, ಈ ಹೇಯ ಕೃತ್ಯವನ್ನ ಫೋನ್ ಕ್ಯಾಮೆರಗಳಲ್ಲಿ ಸೆರೆಹಿಡಿಯುತ್ತಿದ್ದರೂ ಸ್ವಲ್ಪವೂ ಹೇಸದೆ ಆತನನ್ನ ಕೊಂದಾಗ, ಆ ಒಂಬತ್ತುವರೆ ನಿಮಿಷದಲ್ಲಿ ಇಡಿಯ ಕಪ್ಪು ವರ್ಣದವರ ಮೇಲಾದ ದಬ್ಬಾಳಿಕೆಯ ಭೀಕರ ಇತಿಹಾಸ, ಕಪ್ಪು ಚರ್ಮದವರನ್ನ (ಟ್ರಾನ್ಸ್ ಅಟ್ಲಾಂಟಿಕ್ ಸ್ಲೇವ್ ಟ್ರೇಡ್) ಗುಲಾಮರನ್ನಾಗಿಸಿ ಮಾರುಕಟ್ಟೆಗಳಲ್ಲಿ ಪ್ರಾಣಿಗಳಂತೆ ಮಾರಿದ್ದು, ಕರಿಯ ಹೆಂಗಸರ ಮೇಲೆ ಬಿಳಿಯರು ಮಾಡಿದ ಅತ್ಯಾಚಾರಗಳ ಕರಾಳ ಇತಿಹಾಸ ಅಡಗಿತ್ತು. ಬಿಳಿಯರು ಕಪ್ಪುವರ್ಣದವರನ್ನ ದೂರಬಹುದು, ಅದು ಬಿಳಿಯರಿಗಿರುವ ಸವಲತ್ತು. ಕಪ್ಪು ವರ್ಣದವರು ಆರೋಪ ಸುಳ್ಳು, ನಾವು ಮುಗ್ದರು ಎಂದು ಸಾಬೀತು ಪಡಿಸುವವರೆಗೆ ಬದುಕಿದ್ದರೆ ಅದೇ ಅದೃಷ್ಟ! (To kill a Mocking Bird, the Green Mile ಚಿತ್ರ ವೀಕ್ಷಿಸಿ) ಬಳಿಯರಿಗೆ privilege ಇಲ್ಲವಂತೆ. Give me a break.

ಬಿಳಿಯರು ಮತ್ತು ಕಪ್ಪು ವರ್ಣದವರಿಬ್ಬರು ವ್ಯವಸ್ಥಿತ ಬ್ರೈನ್ ವಾಷಿಂಗ್ನ ಬಲಿಪಶುಗಳು. ನಾನು ಧಾರ್ಮಿಕ ವ್ಯಕ್ತಿಯಲ್ಲ ಆದರೂ ಹೇಳುತ್ತೇನೆ ಕೇಳಿ. ನಮ್ಮ ಊರಿನ ಯೇಸು ಬಿಳಿಯ! ನೀಲಿ ಕಂಗಳಿನವನು, ಚಿನ್ನದ ಬಣ್ಣದ ಕೂದಲಿನವನು. ನಮ್ಮ ಊರಿನಲ್ಲಿ ಅವನಂತೆ ಯಾರು ಇಲ್ಲ. ಆದರೂ ನಮ್ಮ ಊರಿನ ಕಪ್ಪು ವರ್ಣದವರಿಗೆ ಆತನೇ ದೇವರು. ಪರಿಪೂರ್ಣತೆಯ ಸಂಕೇತ. ಇನ್ನೊಂದೆಡೆ ಯೇಸುವಿಗೆ ದ್ರೋಹ ಬಗೆದ ಜೂದ ಕಪ್ಪು ವರ್ಣದವ So black is essentially evil. White is divine. ಇಂತಹ ಹಸಿ ಹಸಿ ಸುಳ್ಳುಗಳನ್ನ ತಮ್ಮ ಡಿಎನ್ಎ ಒಳಗೆ ಸೇರಿಸಿಕೊಂಡುಬಿಟ್ಟಿರುವ ಜನರಿರುವ ಸಮಾಜ ಆರೋಗ್ಯಕರವಾಗಿರಲು ಹೇಗೆ ಸಾಧ್ಯ …

ಆದರೆ ಎಲ್ಲವೂ ಮುಗಿದು ಹೋಗಿಲ್ಲ. ಜನರಲ್ಲಿ ಇವುಗಳ ಬಗ್ಗೆ ಅರಿವು ಮುಡಿಸಬೇಕಿದೆ. ಜಾರ್ಜ್ ಫ್ಲೋಯ್ಡ್ ಹತ್ಯೆಯ ನಂತರ ಕೃತ್ಯವನ್ನ ಖಂಡಿಸಿ ಬೀದಿಗಿಳಿದವರಲ್ಲಿ ಯುವಕರೇ, ಕೆಲವೆಡೆ ಬಿಳಿಯ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅದೊಂದೇ ನನಗೆ ಆಶಾಕಿರಣ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!