Thursday, July 25, 2024

ಪ್ರಾಯೋಗಿಕ ಆವೃತ್ತಿ

ಹೀಗೊಂದು ಚಿಂತನೆ…….

ವಿವೇಕಾನಂದ ಎಚ್.ಕೆ

ಹೀಗೊಂದು ಚಿಂತನೆ…….

ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಚಿಂತನೆಗಳಿಂದ ಪ್ರಭಾವಿತವಾದ ಒಂದು ವರ್ಗ,

ವೇದ ಉಪನಿಷತ್ತುಗಳು, ಮನಸ್ಮೃತಿಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಶಂಕರಾಚಾರ್ಯ, ನಾಥುರಾಮ್ ಘೋಡ್ಸೆ, ಶಿವಾಜಿ, ಸಾರ್ವರ್ಕರ್ ಇವರುಗಳಿಂದ ಪ್ರೇರಣೆಗೊಂಡ ಮತ್ತೊಂದು ವರ್ಗ,

ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ನೆಹರು ಲೋಹಿಯಾ ಮುಂತಾದವರ ಚಿಂತನೆಗಳಿಂದ ಸ್ಪೂರ್ತಿಗೊಂಡ ಮಗದೊಂದು ವರ್ಗ,

ಕಾರ್ಲ್ ಮಾರ್ಕ್ಸ್, ಮಾಹೋತ್ಸೆತುಂಗ್, ಚೆಗುವಾರ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ಕ್ರಾಂತಿಕಾರಿಗಳಿಂದ ಪ್ರೇರಣೆಗೊಂಡಿರುವ ಇನ್ನೊಂದು ವರ್ಗ,

ಕಬೀರ, ಮೀರಾಬಾಯಿ, ರಮಣ, ನಾರಾಯಣ ಗುರು, ಕನಕಪುರಂದರ ಹೀಗೆ ದಾಸ, ಭಕ್ತಿ ಪಂಥದ ಚಳವಳಿಗಳಿಂದ ಪ್ರಭಾವಕ್ಕೊಳಗಾದ ಒಂದು ವರ್ಗ,

ಅಲೆಕ್ಸಾಂಡರ್, ಅಕ್ಬರ್, ಹಿಟ್ಲರ್, ಸ್ಟಾಲಿನ್, ನೆಪೋಲಿಯನ್, ಮುಸಲೋನಿ, ಸದ್ದಾಂ ಹುಸೇನ್, ಮಹಮದ್ ಗಡಾಫಿ ಮುಂತಾದ ಆಡಳಿತದಿಂದ ಪ್ರೇರೇಪಿತರಾದ ಮತ್ತಷ್ಟು ಜನ,

ರಾಮ, ಕೃಷ್ಣ, ಏಸು, ಅಲ್ಲಾ, ಮಹಮ್ಮದ್, ಲಕ್ಷ್ಮಿ, ಸರಸ್ವತಿ, ವೆಂಕಟೇಶ್ವರ ಮುಂತಾದ ದೇವರುಗಳ ಪ್ರಭಾವಕ್ಕೊಳಗಾದವರು ಮತ್ತೇಷ್ಟೋ ಜನ,

ಎಲಾನ್ ಮಸ್ಕ್, ಬರ್ನಾಡ್ ಅರ್ನಾಲ್ಟ್, ಜೇಫ್ ಬಿಜೋಸ್ ಮಾರ್ಕ್ ಜುಗರ್ ಬರ್ಗ್, ಲಾರಿ ಎರಿಸನ್, ಅಂಬಾನಿ, ಅದಾನಿ, ಹಿಂದುಜಾ ಮುಂತಾದವರ ಶ್ರೀಮಂತಿಕೆಗೆ ಮರುಳಾದ ಮತ್ತೊಂದಿಷ್ಟು ಜನ,

ತೆಂಡೂಲ್ಕರ್, ಕೊಹ್ಲಿ, ಧೋನಿ, ರೋಹಿತ್ ಶರ್ಮ ಮುಂತಾದ ಸ್ಟಾರ್ ಕ್ರಿಕೆಟರುಗಳಿಗೆ ಶರಣಾದ ಮಗದೊಂದಿಷ್ಟು ಜನ,

ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಅಮಿತಾ ಬಚ್ಚನ್, ಚಿರಂಜೀವಿ, ರಜನಿಕಾಂತ್, ಪುನೀತ್, ದರ್ಶನ್, ಯಶ್, ಸುದೀಪ್ ಅಭಿಮಾನಿಗಳಾದವರು ಇನ್ನೊಂದಿಷ್ಟು ಜನ,

ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಜ್ಯೋತಿ ಬಸು, ವಾಜಪೇಯಿ, ಮಾಯಾವತಿ, ರಾಹುಲ್ ಗಾಂಧಿ, ನರೇಂದ್ರ ಮೋದಿ ಮುಂತಾದವರ ಹಿಂಬಾಲಕರಾದವರು ಹಲವಾರು ಮಂದಿ,

ಜಾತಿ, ಧರ್ಮ, ಭಾಷೆ ನೆಲ ಜಲ ಮುಂತಾದವುಗಳಿಗಾಗಿ ಹೋರಾಟ ಮಾಡುವ ಮಗದೊಂದಿಷ್ಟು ಜನ,

ಈ ಎಲ್ಲದರ ನಡುವೆ ಬದುಕಿಗಾಗಿ ತಮ್ಮ ತಮ್ಮ ಕಾಯಕವನ್ನು ಅನಿವಾರ್ಯವಾಗಿ ಮಾಡುತ್ತಿರುವ ಕೋಟಿ ಕೋಟಿ ಜನ,

ಇದರ ಒಟ್ಟು ಮೊತ್ತವೇ
ಒಂದು ಸಮಾಜ, ಅದಕ್ಕೊಂದು ಒಂದು ಸರ್ಕಾರ ಮತ್ತು ಇಡೀ ಜೀವನ,

ಇಂತಹ ವೈರುಧ್ಯಮಯ, ವೈವಿಧ್ಯಮಯ, ವಿರೋಧಾಭಾಸದ ಅನೇಕ ಚಿಂತನೆಗಳ ನಡುವೆ ಸಾಕಷ್ಟು ಗೊಂದಲಗಳಾಗುವುದು ಸಹಜ. ಆದರೆ ಆ ಗೊಂದಲಗಳು ತೀವ್ರವಾಗಿ ಘರ್ಷಣೆ, ಹತ್ಯೆ, ವಿನಾಶಕಾರಿ ನಿಲುವುಗಳಾಗಿ ಬದಲಾಗುವುದು ಮಾತ್ರ ಆತಂಕಕಾರಿ.

ಎಲ್ಲವನ್ನೂ ಕಾಲಕ್ಕೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ, ವಾಸ್ತವದ ನೆಲೆಯಲ್ಲಿ ಯೋಚಿಸಿ, ಪ್ರಾಯೋಗಿಕವಾಗಿ ಸ್ವೀಕರಿಸಿದರೆ ಸಮಾಜ ಶಾಂತಿಯುತವಾಗಿ, ನೆಮ್ಮದಿಯಿಂದ, ಕ್ರಮಬದ್ಧವಾಗಿ ಮುಂದುವರೆಯುತ್ತದೆ, ಇಲ್ಲದಿದ್ದರೆ ಸದಾ ಅತೃಪ್ತ ಆತ್ಮದ ರೀತಿ ಹೊಡೆದಾಟ, ಬಡಿದಾಟಗಳಲ್ಲಿಯೇ ಸಾಗುತ್ತಿರುತ್ತದೆ,

ಇದೆಲ್ಲಕ್ಕೂ ವೈಚಾರಿಕ, ವೈಜ್ಞಾನಿಕ, ಪ್ರಾಯೋಗಿಕ, ವಾಸ್ತವಿಕ ಅಡಿಪಾಯ ಬೇಕಾಗುತ್ತದೆ. ಸಾರ್ವತ್ರಿಕ ಸತ್ಯಗಳು ಮುನ್ನಡೆಗೆ ಬರಬೇಕಾಗುತ್ತದೆ. ಭಾವನಾತ್ಮಕ, ಧಾರ್ಮಿಕ ವಿಷಯಗಳು ಇದನ್ನು ಓವರ್ಟೇಕ್ ಮಾಡಲು ಬಿಡಬಾರದು.

ಮೆಕ್ಕಾದಲ್ಲಿ 52 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾದ ಕಾರಣ 900ಕ್ಕೂ ಹೆಚ್ಚು ಜೀವಗಳು ಬಲಿಯಾದವು. ದೈವ ದರ್ಶನಕ್ಕೆ ಹೋಗಿದ್ದ ಜನರ ಮನಸ್ಸಿನಲ್ಲಿ ಆ ದೇವರು ತಾಪಮಾನವನ್ನು ಏಕೆ ಕಡಿಮೆ ಮಾಡಲಿಲ್ಲ ಎಂದು ಕೇಳುವ ಆತ್ಮಸ್ಥೈರ್ಯವಾದರು ಬೇಕಾಗುತ್ತದೆ.

ಕೇರಳದ ಶಬರಿಮಲೆಯಲ್ಲಿ ದೇವರ ದರ್ಶನದ ಸಮಯದಲ್ಲಿ ನೂಕ ನುಗ್ಗಲಾಗಿ ಕಾಲ್ತುಳಿತಕ್ಕೆ ಹಲವಾರು ಜನರು ಸತ್ತಾಗಲು ಈ ಪ್ರಶ್ನೆ ಕೇಳುವುದಿಲ್ಲ. ರಿಷಿಕೇಶ, ಹರಿದ್ವಾರದಲ್ಲಿ ಮೇಘ ಸ್ಫೋಟಗಳಾಗಿ ಅನೇಕ ಜನ ದೇವಸ್ಥಾನದ ಸಮೇತ ಕೊಚ್ಚಿ ಹೋದಾಗಲು ನಮ್ಮೊಳಗೆ ಆ ಪ್ರಶ್ನೆ ಏಳುವುದಿಲ್ಲ.

ಏಕೆಂದರೆ ವಾಸ್ತವವನ್ನು ಎದುರಿಸಲು ನಮಗೆ ಸಾವು ಮತ್ತು ಸೋಲಿನ ಭಯ ಬಿಡುವುದಿಲ್ಲ……..

ದೀರ್ಘ ಅನುಭವ, ಅಧ್ಯಯನ, ಚಿಂತನೆ, ವಿಶಾಲ ಮನೋಭಾವ, ಸಮಷ್ಠಿ ಪ್ರಜ್ಞೆ, ಪ್ರಾಮಾಣಿಕ ಕಾಯಕ, ಒಳ್ಳೆಯತನ, ಪ್ರಾಕೃತಿಕ ನಿಷ್ಠೆ ಮುಂತಾದ ಅಂಶಗಳನ್ನು ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳುವ ಮುಖಾಂತರ ಬದುಕನ್ನು ಸಹನೀಯಗೊಳಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದು……..

ಅರಿಷಡ್ವರ್ಗಗಳ ಮೇಲಿನ ( ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ) ಸಾಧಿಸಿದಲ್ಲಿ ಇದು ಸಾಧ್ಯ…..

ಆ ಎಲ್ಲಾ ಇಸಂಗಳನ್ನು ಹೊರತುಪಡಿಸಿದ ಮನಸ್ಥಿತಿ ನಮಗೆಲ್ಲಾ ಸಿದ್ದಿಸಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!