Wednesday, September 18, 2024

ಪ್ರಾಯೋಗಿಕ ಆವೃತ್ತಿ

ಕಳೆದ ಬಾರಿಯ ಎದುರಾಳಿಗಳು ಈಗ ದೋಸ್ತಿಗಳು| ಹಾಸನದ ಪಾಲಾದ ಸುಮಲತಾ ಸ್ವಾಭಿಮಾನ

ಮಳವಳ್ಳಿ ಹುಚ್ಚೇಗೌಡರ ಸೊಸೆ ಸುಮಲತಾ ಅಂಬರೀಶ್ ಹಾಸನ ಹೆಚ್.ಡಿ. ದೇವೇಗೌಡರ ಮಗ ಕುಮಾರಸ್ವಾಮಿಗೆ ಬೆಂಬಲ ಘೋಷಣೆ ಮಾಡುವ ಮೂಲಕ ತಮ್ಮ ಸ್ವಾಭಿಮಾನವನ್ನು ಹಾಸನದ ಪಾಲು ಮಾಡಿದ್ದಾರೆ. ಆ ಮ‌ೂಲಕ ತಾವೊಬ್ಬ ಪಕ್ಕಾ ಅವಕಾಶವಾದಿ ರಾಜಕಾರಣಿ ಎಂದು ನಿರೂಪಿಸಿದ್ದಾರೆ.

ಸುಮಲತಾ ಅವರನ್ನು ಜೆಡಿಎಸ್ ನಾಯಕರು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹಳ ಕೆಟ್ಟದಾಗಿ ನಿಂದಿಸಿದ್ದರು. ಎಚ್.ಡಿ.ರೇವಣ್ಣ ಗಂಡ ಸತ್ತು ತಿಂಗಳಾಗಿಲ್ಲ.ಇವರಿಗೇಕೆ ರಾಜಕೀಯ ಎಂದರೆ,ಎಚ್.ಡಿ.ಕುಮಾರಸ್ವಾಮಿ ಅಂಬರೀಶ್ ಅವರ ಅಂತ್ಯಕ್ರಿಯೆ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡಿದ್ದರು. ಇನ್ನು ಜೆಡಿಎಸ್ ಸ್ಥಳೀಯ ನಾಯಕರು ಸುಮಲತಾ ಅವರನ್ನು ಹೆಣ್ಣೆಂದೂ ನೋಡದೆ ಕೆಟ್ಟದಾಗಿ ಹೇಳಿಕೆ ನೀಡಿದ್ದರು.ಅದೆಲ್ಲವನ್ನು ಮರೆತು ಸುಮಲತಾ ಕುಮಾರಸ್ವಾಮಿ ಅವರಿಗೆ ಜೈ ಅಂದಿರುವುದರ ಹಿಂದೆ ಸ್ವಾರ್ಥ ಹಿತಾಸಕ್ತಿ ಅಡಗಿದೆ.

ನಾಟಕವಷ್ಟೇ

ಇಂದು ಸುಮಲತಾ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆಂಬುದು ಬಹುತೇಕ ಎಲ್ಲರಿಗೂ ಗೊತ್ತಾಗಿತ್ತು. ಹಾಗಾಗಿ ಮಂಡ್ಯದ ಜನರಿಗೆ ಸುಮಲತಾ ನಿರ್ಧಾರದ ಬಗ್ಗೆ ಯಾವ ಕುತೂಹಲವೂ ಇರಲಿಲ್ಲ. ಯಾವಾಗ ಎಚ್.ಡಿ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ಅವರ ಮನೆಗೆ ಹೋಗಿ ಬೆಂಬಲ ಕೇಳಿದರೋ, ಅಂದೇ ಅವರು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆ ಎಂಬುದು ನಿರ್ಧಾರವಾಗಿ ಹೋಗಿತ್ತು. ಆದರೆ ಅಂದು ಸ್ಪಷ್ಟ ನಿರ್ಧಾರ ಹೇಳದೆ ಮಂಡ್ಯದಲ್ಲಿಯೇ ಏಪ್ರಿಲ್ 4ರಂದು ತನ್ನ ನಿರ್ಧಾರ ತಿಳಿಸುವುದಾಗಿ ಘೋಷಿಸಿದ್ದು, ಕೇವಲ ನಾಟಕದ ಒಂದು ಭಾಗವಾಗಿತ್ತಷ್ಟೆ.

ನಿಂದಿಸಿದ ಜೆಡಿಎಸ್ ನಾಯಕರಿಗೆ ಸಹಕಾರ

ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರಿಂದಲೇ ಗೆದ್ದು ಸಂಸದೆ ಆದ ಸುಮಲತಾ ಅವರು ತನ್ನ ಸ್ವಾರ್ಥಕ್ಕಾಗಿ ಸ್ವಾಭಿಮಾನದ ನಾಟಕ ಆಡಿ ಈಗ ತಮ್ಮನ್ನು ನಿಂದಿಸಿದ ಜೆಡಿಎಸ್ ನಾಯಕರಿಗೆ ಸಹಕಾರ ನೀಡಿರುವುದು ಸ್ವಾರ್ಥ ರಾಜಕೀಯದ ಒಂದು ಉದಾಹರಣೆಯಷ್ಟೇ ಎಂಬುದು ಕಾಂಗ್ರೆಸ್ ಮುಖಂಡರೊಬ್ಬರ ಅಭಿಪ್ರಾಯ.

2019ರ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಹೆಸರಲ್ಲಿ ಸ್ಪರ್ಧಿಸಿದ ಸುಮಲತಾ ಅಂಬರೀಶ್ ಅವರಿಗೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಹಕರಿಸದಿದ್ದರೆ ಆಕೆ ಸಂಸತ್ ಭವನಕ್ಕೆ ಕಾಲಿಡುವುದು ಕನಸಾಗಿತ್ತು. ರಾಜಕೀಯ ಮೆಟ್ಟಿಲೇರಲು ಸಹಕರಿಸಿದ ಕಾಂಗ್ರೆಸ್ ಏಣಿಯನ್ನೇ ಒದ್ದು ಬಿಜೆಪಿಗೆ ಬೆಂಬಲ ಘೋಷಿಸಿರುವುದು ಸುಮಲತಾ ಅಂಬರೀಶ್ ರವರ ಅವಕಾಶವಾದಿತನವನ್ನು ತೋರಿಸುತ್ತದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತೆರಿಗೆಯಲ್ಲಿ ಪಾಲು ನೀಡದೆ ವಂಚಿಸಿದ್ದರೂ, ರಾಜ್ಯದಲ್ಲಿ ಭೀಕರ ಬರ ತಾಂಡವಾಡುತ್ತಿರುವ ನಯಾ ಪೈಸೆ ಕೊಡದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಪ್ರಶ್ನಿಸದೆ ಅವರ ಪಕ್ಷಕ್ಕೆ ಬೆಂಬಲ ನೀಡಿರುವುದು ಎಷ್ಟು ಸರಿ? ಎಂಬುದು ಜಿಲ್ಲೆಯ ಸಾಮಾನ್ಯ ಜನರ ಮಾತಾಗಿದೆ.

ಬೆಂಬಲಿಗರ ಬಾಯಿ ಮುಚ್ಚಿಸಿದರು

ಮಂಡ್ಯದ ಕಾಳಿಕಾಂಬ ಸಮುದಾಯ ಭವನದಲ್ಲಿ ಇಂದು ನಡೆದ ಸಭೆಯಲ್ಲಿ ಸುಮಲತಾ ಅವರಿಗೆ ಬಹುತೇಕ ಬೆಂಬಲಿಗರು ನೀವು ಆಯ್ಕೆ ಆಗಲು ಕಾಂಗ್ರೆಸ್ ಕಾರಣ. ಹಾಗಾಗಿ ಕಾಂಗ್ರೆಸ್ ಪಕ್ಷ ಸೇರಿ ಎಂದರೆ, ಕಾಂಗ್ರೆಸ್ ಪಕ್ಷಕ್ಕೆ ನನ್ನ ಅವಶ್ಯಕತೆ ಇಲ್ಲವೆಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಮಗೆ ರಾಜಕೀಯದ ಒಳ ಸುಳಿಗಳು ಅರ್ಥವಾಗುವುದಿಲ್ಲ ಎಂದು ಬೆಂಬಲಿಗರ ಬಾಯಿ ಮುಚ್ಚಿಸಿದರು. ಸುಮಲತಾ ಅವರ ಸ್ವಾರ್ಥ ರಾಜಕೀಯ ಸುಳಿಗಳ ಬಗ್ಗೆ ಮಂಡ್ಯದ ಜನರಿಗೆ ಗೊತ್ತಿದೆ‌.

ನನಗೆ ರಾಜಕೀಯಕ್ಕಿಂತ ನನ್ನ ಬೆಂಬಲಿಗರ ಹಿತವೇ ಮುಖ್ಯ ಎಂದ ಸುಮಲತಾ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದರೆ ಹೆಣ್ಣು ಎಂಬುದನ್ನು ನೋಡದೆ ಕಳೆದ ಚುನಾವಣೆಯಲ್ಲಿ ಕೆಟ್ಟದಾಗಿ ಬೈದು, ಬಾಯಿ ಚಪಲ ತೀರಿಸಿಕೊಂಡ ಜೆಡಿಎಸ್ ನಾಯಕರ ವಿರುದ್ಧ ನಿಲ್ಲಬೇಕಿತ್ತು. ಆದರೆ ಅವೆಲ್ಲವನ್ನೂ ಮರೆತು ಜೆಡಿಎಸ್ ನಾಯಕರ ಜೊತೆಗೆ ನಿಲ್ಲಲು ಮುಂದಾಗಿರುವುದು ಇವರ ಸ್ವಾಭಿಮಾನವನ್ನೇ ಅನುಮಾನದಿಂದ ನೋಡುವಂತಾಗಿದೆ ಎನ್ನುವುದು ಸುಮಲತಾ ಅವರಿಗೆ ಮತ ಹಾಕಿದವರೊಬ್ಬರ ಅಸಮಾಧಾನದ ನುಡಿ.

ನಿಮಗೇಕೆ ಟಿಕೆಟ್ ಕೊಡಲಿಲ್ಲ

ಮಂಡ್ಯವನ್ನು ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷೇತರ ಸಂಸದೆಯಾದರೂ 4 ಸಾವಿರ ಕೋಟಿ ಅನುದಾನ ಕೊಟ್ಟಿದ್ದು ಬಿಜೆಪಿ. ಪ್ರತಿ ವಿಷಯದಲ್ಲೂ ನನ್ನನ್ನು ವಿಶ್ವಾಸಕ್ಕೆ ಪಡೆದರು. ನಿಮ್ಮ ನಾಯಕತ್ವ ಬೇಕು ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ನನಗೆ ಹೇಳಿದರು. ನಾಯಕತ್ವ ಬೆಳೆಸೋ ಗುಣ ಬಿಜೆಪಿಯಲ್ಲಿದೆ ಎಂದು ಹೇಳಿದ್ದಾರೆ.
ಅವರು ಮಂಡ್ಯ ಕ್ಷೇತ್ರಕ್ಕೆ ನಾಲ್ಕು ಸಾವಿರ ಕೋಟಿ ಅನುದಾನ ತಂದಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಕೊಡಬೇಕು. ಬಿಜೆಪಿ ನಾಯಕತ್ವ ಬೆಳೆಸುತ್ತದೆ ಅನ್ನುವುದಾದರೆ ನಿಮಗೇಕೆ ಟಿಕೆಟ್ ಕೊಡಲಿಲ್ಲ. ನಿಮಗೆ ಕೊಟ್ಟರೆ ಹೀನಾಯವಾಗಿ ಸೋಲುತ್ತೀರಿ. ಕಳೆದ ಐದು ವರ್ಷಗಳಲ್ಲಿ ಜೆಡಿಎಸ್ ನಾಯಕರ ಜೊತೆ ವಾಗ್ವಾದ ಮಾಡುವುದನ್ನೇ ಕಾಯಕ ಮಾಡಿಕೊಂಡ ನೀವು ನಿಜಕ್ಕೂ ಅಭಿವೃದ್ಧಿ ಮಾಡಿದ್ದರೆ ಮಂಡ್ಯ ಜನರೇ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಿದ್ದರು.

ಮಂಡ್ಯ ಸ್ವಾಭಿಮಾನ ಅಂತೆಲ್ಲ ಮಾತನಾಡದಿರಿ

ಆದರೆ ನೀವು ಜನರ ಕೈಗೆ ಸಿಗದೆ ಬೆಂಗಳೂರಿನಿಂದಲೇ ರಾಜಕೀಯ ಮಾಡಿದ್ದರಿಂದ ಜನರೂ ಕೂಡ ನಿಮ್ಮ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲೇ ಇಲ್ಲ. ನಿಮ್ಮ ಜೊತೆಗಿದ್ದ ಯಂಕ, ಸೀನ, ನಾಣಿ‌ ಎನ್ನುವ ಮೂರು ಮುಕ್ಕಾಲು ಜನರಿಗೆ ಬಿಟ್ಟರೆ ನೀವು ಮಂಡ್ಯದ ಜನರಿಗೆ ಗಗನ ಕುಸುಮವಾಗಿಯೇ ಉಳಿದಿರಿ. ಈಗ ಬಿಜೆಪಿ ಸೇರಿ ಕುಮಾರಸ್ವಾಮಿಗೆ ಬೆಂಬಲ ನೀಡುತ್ತಿದ್ದೀರಿ. ನಿಮ್ಮದು ಅಂತ ಎಷ್ಟು ಓಟ್ ಬ್ಯಾಂಕ್ ಇದೆ ಎಂದು ಜನರಿಗೂ, ನಿಮಗೂ ಗೊತ್ತಿದೆ. ಮತ್ತೆಂದೂ ಮಂಡ್ಯ ಸ್ವಾಭಿಮಾನ ಅಂತೆಲ್ಲ ಮಾತನಾಡದಿರಿ. ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸಿದ ನೀವು ಸೌಹಾರ್ದತೆಯ ಮಂಡ್ಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದೀರಿ ಎಂಬುದು ಪ್ರಗತಿಪರ ಮುಖಂಡರೊಬ್ಬರ ಆಕ್ರೋಶದ ನುಡಿಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!