Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ಹುಚ್ಚೇಗೌಡರ ಸೊಸೆಯಿಂದ ಹಾಸನದ ಹೆಚ್.ಡಿ.ದೇವೇಗೌಡರ ಮಗನಿಗೆ ಬೆಂಬಲ !

ಮಂಡ್ಯವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ, ಬಿಜೆಪಿ ಟಿಕೆಟ್ ಸಿಗಲಿ ಅಥವಾ ಸಿಗದಿರಲಿ, ನನ್ನ ಸ್ಪರ್ಧೆ ಖಚಿತ ಎಂದು ಹೇಳಿಕೊಂಡು ಬಂದಿದ್ದ ಮಳವಳ್ಳಿ ಹುಚ್ಚೇಗೌಡರ ಸೊಸೆ ಸುಮಲತಾ ಅಂಬರೀಶ್, ಅಂತಿಮವಾಗಿ ಇಂದಿನ ಲೋಕಸಭಾ ಚುನಾವಣಾ ಕಣದಲ್ಲಿರುವ ಹಾಸನದ ಹೆಚ್.ಡಿ. ದೇವೇಗೌಡರ ಮಗ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷ ಬೆಂಬಲ ಘೋಷಣೆ ಮಾಡಿದ್ಧಾರೆ.

ಮಂಡ್ಯ ನಗರದ ಕಾಳಿಕಾಂಭ ಸಮುದಾಯ ಭವನದಲ್ಲಿ ಬುಧವಾರ ನಡೆದ ತಮ್ಮ ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ನಟ ದರ್ಶನ್ ಹಾಗೂ ಪುತ್ರ ಅಭಿಷೇಕ್ ಸಮ್ಮುಖದಲ್ಲಿ ಬಿಜೆಪಿಯ ಮೋದಿ ನಾಯಕತ್ವದ ಬೆಂಬಲಿಸುವುದಾಗಿ ತಿಳಿಸಿದರು.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ಸೆರೆಗೊಡ್ಡಿ ಮತಗಳನ್ನು ಕೇಳಿ ಅಂದಿನ ಪ್ರತಿಸ್ಪರ್ಧಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ದ ಪಕ್ಷೇತರವಾಗಿ ಗೆಲುವು ಸಾಧಿಸಿದ್ದ ಸುಮಲತಾ ಅವರು, ಇಂದು ಹಳೇಯ ಎದುರಾಳಿಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಪ್ರತಿ ವಿಷಯದಲ್ಲೂ ತಮ್ಮನ್ನು ವಿಶ್ವಾಸಕ್ಕೆ ಪಡೆದು ನನ್ನ ನಾಯಕತ್ವವನ್ನು ಬೆಂಬಲಿಸಿರುವ ಹಿನ್ನೆಲೆಯಲ್ಲಿ ಭವಿಷ್ಯತ್ತಿನ ರಾಜಕಾರಣವನ್ನು ಎನ್.ಡಿ.ಎ ಸಖ್ಯದಲ್ಲಿ ಉಳಿಸಿಕೊಳ್ಳುವುದಾಗಿ ತಿಳಿಸಿದ ಸುಮಲತಾ, ದೇಶ ಸಮೃದ್ದವಾಗಿದ್ದರೆ ರಾಜ್ಯ ಹಾಗೂ ಜಿಲ್ಲೆ ಚೆನ್ನಾಗಿರುತ್ತವೆ, ನಾನು ಮಂಡ್ಯದ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಕಳೆದ 5 ವರ್ಷದಲ್ಲಿ ಮಾಡಿದ್ದೇನೆ, ಕ್ಷೇತ್ರದ ಅಭಿವೃದ್ದಿಗೆ ಹಲವಾರು ಸ್ತರಗಳಲ್ಲಿ ಕೆಲಸ ನಿರ್ವಹಿಸಿದ್ದು, ರೈಲ್ವೇ ಕೆಳಸೇತುವೆ, ಎಸ್ಕ್ಯುಲೇಟರ್ ಅಳವಡಿಕೆ, ಮಳವಳ್ಳಿ ಸಿ.ಆರ್.ಪಿ.ಎಫ್ ಮಹಿಳಾ ತರಬೇತಿ ಕೇಂದ್ರ ಸೇರಿದಂತೆ ಹಲವು ಮಹತ್ತರ ಕಾರ್ಯಗಳು ನನ್ನ ಅವಧಿಯಲ್ಲಿ ಜಾರಿಯಾಗಿವೆ ಎಂದರು.

ನನ್ನ ಅಧಿಕಾರಾವಧಿಯಲ್ಲಿ ಜಿಲ್ಲೆಯ ಘನತೆಯನ್ನು ಇಂಡಿಯಾದಲ್ಲಿ ಎತ್ತಿ ಹಿಡಿದಿರುವ ಕೀರ್ತಿ ನನ್ನದಾಗಿದೆ. ಮಂಡ್ಯ ಜಿಲ್ಲೆಯ ಸೊಸೆಯಾಗಿ ಮತ ಕೇಳಿ, ಮಾವ ಹಾಗೂ ಪತಿ ಅಂಬರೀಶ್ ಅವರ ಹೆಸರಿಗೆ ಚ್ಯುತಿಬಾರದಂತೆ ಕಾರ್ಯನಿರ್ವಹಿಸಿದ್ದೇನೆಂದರು.

2019ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದಾಗ ಎದುರಾದ ವಿರೋಧ ಲೆಕ್ಕಿಸದೇ ನಮ್ಮ ಮನೆಯ ಮಕ್ಕಳಾಗಿ ನನ್ನ ಪರ ಚುನಾವಣೆಯಲ್ಲಿ ಶ್ರಮಿಸಿದ ಚಲನಚಿತ್ರ ನಟರಾದ ದರ್ಶನ್ ಹಾಗೂ ಯಶ್ ಅವರ ಕಾರ್ಯವನ್ನ ಸ್ಮರಿಸುತ್ತೇನೆ, ಅಂದಿನ ಗೆಲುವು ಮತ್ತು ಆಶೀರ್ವಾದವನ್ನು ನಾನೆಂದು ಮರೆಯುವುದಿಲ್ಲ ಎಂದು ತಿಳಿಸಿದರು.

ಪ್ರಸ್ತುತ ಎದುರಾಗಿರುವ ಲೋಕಸಭಾ ಚುನಾವಣೆ ಮತ್ತೊಂದು ಸವಾಲು ಸೃಷ್ಠಿಸಿದೆ, 2019ರಂದು ಪ್ರದಾನಿ ನರೇಂದ್ರ ಮೋದಿಯವರು ಪತಿ ಅಂಬರೀಶ್ ಹೆಸರೇಳಿ, ನನ್ನ ಪರ ಮತಯಾಚಿಸಿದರು. ಬಿಜೆಪಿ ಬಾಹ್ಯ ಬೆಂಬಲ ಘೋಷಿಸಿತು. ಅದಕ್ಕಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದೇನೆ ಎಂದು ವಿವರಸಿದರು.

ಇದೇ 26ರಂದು ನಡೆಯಲಿರುವ ಲೋಕಸಭಾ ಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿಗೆ ಮುಂದಾಗಿ ಸ್ಪರ್ಧೆ ನಡೆಸುತ್ತಿವೆ, ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ನನ್ನ ಹೋರಾಟ ಮುಂದುವರಿದಿತ್ತು. ಆದರೆ ಮೈತ್ರಿ ಕಾರಣಕ್ಕಾಗಿ ನನಗೆ ಅನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ಒದಗಿ ಬಂತು. ಆದರೆ ನಾನು ಮಂಡ್ಯ ಜಿಲ್ಲೆಯ ಬಾಂಧವ್ಯವನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಕಾರಣ, ನಾನು ಚುನಾಯಿತಳಾಗಿದ್ದ ಕ್ಷೇತ್ರದ ಸ್ಪರ್ಧೆಯನ್ನೇ ತೊರೆಯುವಂತಾಯಿತು ಎಂದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಸುಮಲತಾ ಅವಶ್ಯಕತೆ ನಮಗಿಲ್ಲವೆಂದಿದ್ದಾರೆ. ನನ್ನ ಅವಶ್ಯಕತೆಯಿಲ್ಲದವರ ಪಕ್ಷಕ್ಕೆ ನಾನು ತೆರಳುವ ಅವಶ್ಯಕತೆ ಇಲ್ಲ, ಇದು ನನಗೆ ಅಂಬರೀಶ್ ಅವರಿಂದ ಬಂದಿರುವ ಸ್ವಾಭಿಮಾನ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಲೆಳೆದರು.

ನನಗೆ ಸ್ವಾರ್ಥ ರಾಜಕಾರಣ ಗೊತ್ತಿಲ್ಲ, ಅಧಿಕಾರಕ್ಕೆ ನಾನಾಗಲಿ, ಅಂಬರೀಶ್ ಆಗಲಿ ಎಂದು ಆಸೆಪಟ್ಟಿಲ್ಲ, ನಮ್ಮ ಆಪ್ತ ಬೆಂಬಲಿಗರು, ಹಿತೈಷಿಗಳನ್ನು ಕಡೆಗಣಿಸುವುದಿಲ್ಲ, ನನಗೆ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದ್ದು, ಅಂದು ಸಹ ನಾನು ನನ್ನ ಜನರೊಟ್ಟಿಗೆ ಇರುತ್ತೇನೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!