Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜೆಡಿಎಸ್ ಸೇರ್ಪಡೆಗೆ ವಿಜಯ್ ಆನಂದ್ ಬೆಂಬಲಿಗರ ಒತ್ತಾಯ

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಸೂಕ್ತ ಎಂದು ಅವರ ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.

ಮಂಡ್ಯದ ಕಲ್ಲಹಳ್ಳಿ ವಿ.ವಿ.ನಗರದ ಹೊಂಬಾಳೆ ಫಂಕ್ಷನ್ ಹಾಲ್ ನಲ್ಲಿ ಇಂದು ನಡೆದ ಕೆ.ಎಸ್.ವಿಜಯ್ ಆನಂದ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಹುತೇಕರು ಭವಿಷ್ಯದ ರಾಜಕಾರಣಕ್ಕಾಗಿ ಜೆಡಿಎಸ್ ಸೇರ್ಪಡೆ ಸೂಕ್ತ. ಜಿಲ್ಲೆಯಲ್ಲಿ ಜನತಾ ಪರಿವಾರ ಬಲವರ್ಧನೆಯಾಗಲು ಕೆ.ವಿ.ಶಂಕರಗೌಡರ ಕೊಡುಗೆ ಅಪಾರವಾಗಿದೆ. ಅದೇ ರೀತಿ ಜೆಡಿಎಸ್ ಮೂಲಕ ರಾಜಕೀಯ ಭವಿಷ್ಯ ಕಂಡುಕೊಂಡಿದ್ದ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಅವರು ಮರಳಿ ಮಾತೃ ಪಕ್ಷ ಜೆಡಿಎಸ್‌ಗೆ ಸೇರ್ಪಡೆಯಾಗಬೇಕೆಂದು ಒತ್ತಾಯಿಸಿದರು.

ಜನತಾ ಪರಿವಾರ ಕಟ್ಟುವಲ್ಲಿ ಕೆ.ವಿ. ಶಂಕರಗೌಡರ ಶ್ರಮ ಅಪಾರ.ಆದರೆ, ಇಂದಿನ ಆ ಪಕ್ಷದ ನಾಯಕರು ಅವರನ್ನು ಸ್ಮರಿಸದಿರುವುದು ವಿಷಾದನೀಯ. ಜಿಲ್ಲೆಯ ಬೆಳವಣಿಗೆಗೆ ಪೂರಕವಾಗುವಂತೆ ಆರ್.ಎ.ಪಿ.ಸಿ.ಎಂ.ಎಸ್., ಡಿಸಿಸಿ ಬ್ಯಾಂಕ್ ಹಾಗೂ ಜನತಾ ಶಿಕ್ಷಣ ಟ್ರಸ್ಟ್ ಆರಂಭಿಸಿದ್ದಾರೆ. ಅವರು ಕುಟುಂಬಕ್ಕೆ ಏನನ್ನೂ ಮಾಡಿಕೊಂಡಿಲ್ಲ. ಅಂತಹ ಕುಟುಂಬದ ಕುಡಿ ರಾಜಕಾರಣದಲ್ಲಿ ಮುಂದುವರಿಯಲು ಜನರ ಸಹಕಾರ ಅಗತ್ಯ ಎಂದು ಹಲವು ಮುಖಂಡರು ಅಭಿಪ್ರಾಯ ಪಟ್ಟರು.

ಮುಖಂಡ ಸಿದ್ದಪ್ಪ ಮಾತನಾಡಿ, ವಿಜಯ್ ಆನಂದ್ ಅವರ ಕುಟುಂಬ ಮಂಡ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದರೆ, ಭೈರವ ಮಾತನಾಡಿ, ರಾಜಕಾರಣದಲ್ಲಿ ಹಣವೇ ಪ್ರಾಬಲ್ಯ ಸಾಧಿಸುತ್ತಿದೆ. ಕೆ.ವಿ.ಎಸ್. ಕುಟುಂಬ ರಾಜಕಾರಣದಲ್ಲಿ ಉಳಿಯಲು ನಮ್ಮೆಲ್ಲರ ಸಹಕಾರ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ವಿಜಯ್ ಆನಂದ್ ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್.ಎಸ್. ನರಸಿಂಹಮೂರ್ತಿ ಮಾತನಾಡಿ, ಕೆವಿಎಸ್ ಕುಟುಂಬದ ಕುಡಿ ರಾಜಕಾರಣದಲ್ಲಿ ಬೆಳೆಯಬೇಕು. ಅದಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು. ಎಚ್.ಡಿ. ಕುಮಾರಸ್ವಾಮಿ ಅವರು ಆರೋಗ್ಯವಾಗಿ ಮರಳಿದ ನಂತರ ಪಕ್ಷ ಸೇರ್ಪಡೆಯಾಗಿ ಕೆ.ವಿ. ಶಂಕರಗೌಡರ ದಾರಿಯಲ್ಲಿ ಸಾಗಲಿ ಎಂದು ಹಾರೈಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ತಿಮ್ಮೇಗೌಡ ಮಾತನಾಡಿ, ಕೆ.ವಿ. ಶಂಕರಗೌಡರ ತ್ಯಾಗ, ಪರಿಶ್ರಮ ನೆನೆಯುವ ಕೆಲಸವಾಗಬೇಕಿದೆ. ವಿಜಯ್ ಆನಂದ್ ಪ್ರಚಾರದಲ್ಲಿ ಜನಸಾಗರವೇ ಸೇರುತ್ತಿತ್ತು. ರಾಜಕೀಯ ಹರಿಯುವ ನೀರಿನಂತಾಗಿದೆ. ಜನರ ಮಧ್ಯೆ ಇರುವ ಯುವ ನಾಯಕನಾಗಿ ಕೆ.ಎಸ್. ವಿಜಯ್ ಆನಂದ್ ಬೆಳೆಯಲು ನಮ್ಮೆಲ್ಲರ ಸಹಕಾರವಿರುತ್ತದೆ ಎಂದರು.

ವಿಜಯಾನಂದ ಅವರನ್ನು ಪಕ್ಷಕ್ಕೆ ಆಹ್ವಾನಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನೊಡನೆ ಮಾತನಾಡಿದ್ದಾರೆ. ಕೆಲವು ನಾಯಕರಿಂದ ಈ ಹಿಂದಿನ ಚುನಾವಣೆಯಲ್ಲಿ ಅನ್ಯಾಯವಾಗಿದೆ. ಜೆಡಿಎಸ್ ಪಕ್ಷ ನಿಮ್ಮಂತಹ ಕಾರ‍್ಯಕರ್ತರಿಂದ ಬೆಳೆದಿರುವ ಪಕ್ಷ. ನೀವೇ ಇಲ್ಲದಿದ್ದರೆ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದಾರೆ. ಅವರ ಮನವಿಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದರು.

ಜೆಡಿಎಸ್ ಸೇರುವುದು ನಿಶ್ಚಿತ
ಇಂದು ನಡೆದ ಸಭೆಯಲ್ಲಿ ಭಾಗವಹಿಸಿದ ಹಲವು ಮುಖಂಡರು ಕೆ.ಎಸ್. ವಿಜಯಾನಂದ ಅವರು ಮುಂದಿನ ರಾಜಕಾರಣಕ್ಕಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಜಯ್ ಆನಂದ್ ಜೆಡಿಎಸ್ ಸೇರುವುದು ನಿಶ್ಚಿತವಾಗಿದೆ.

ಸಭೆಯಲ್ಲಿ ಮುಖಂಡರಾದ ಪಣಕನಹಳ್ಳಿ ಯತೀಶ್ ಬಾಬು, ಉಮೇಶ್,ಜಯಶೀಲಮ್ಮ, ವೆಂಕಟೇಶ್, ನಗರಸಭೆ ಸದಸ್ಯ ಪೂರ್ಣಚಂದ್ರ, ಮಾಜಿ ಸದಸ್ಯೆ ಗೀತಾ ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!