Tuesday, September 17, 2024

ಪ್ರಾಯೋಗಿಕ ಆವೃತ್ತಿ

ಅಪಪ್ರಚಾರಕ್ಕೆ ಕಿವಿಗೊಡಬೇಡಿ – ನನ್ನ ಸ್ಪರ್ಧೆ ಖಚಿತ : ತಗ್ಗಹಳ್ಳಿ ವೆಂಕಟೇಶ್

ನಾನು ಯಾವ ನಾಯಕರ ಜೊತೆಯೂ ಮಾತನಾಡಿಲ್ಲ. ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ಖಚಿತ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್ ಸ್ಪಷ್ಟಪಡಿಸಿದರು.

ಮಂಡ್ಯ ತಾಲೂಕಿನ ಸಂತೆಕಸಲಗೆರೆ ಗ್ರಾಮದ ಭೂಮಿ ಸಿದ್ದೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ತಗ್ಗಹಳ್ಳಿ ವೆಂಕಟೇಶ್ ಹಿತೈಷಿಗಳು ಹಾಗೂ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.

ರಾಜಕೀಯದಲ್ಲಿ ಗಾಡ್ ಫಾದರ್ ಇಲ್ಲದೆ ಬೆಳೆದಿದ್ದೇನೆ

ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರು ಹರಡುತ್ತಿರುವ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನನ್ನ ಬಳಿ ಹಣವಿಲ್ಲ ಎಂಬುದು ನಿಜ. ಆದರೆ ಕಳೆದ 35 ವರ್ಷಗಳಿಂದ ಜನರ ಪ್ರೀತಿ, ವಿಶ್ವಾಸಗಳಿಸಿದ್ದೇನೆ. ಆರು ಚುನಾವಣೆಗಳಲ್ಲಿ ಗೆದ್ದು ರಾಜಕೀಯದಲ್ಲಿ ಗಾಡ್ ಫಾದರ್ ಇಲ್ಲದೆ ಬೆಳೆದಿದ್ದೇನೆ. ಜನರೇ ನನ್ನ ಗಾಡ್ ಫಾದರ್ ಆಗಿದ್ದಾರೆ.ಈ ಚುನಾವಣೆ ಹಣದ ಚುನಾವಣೆಯಾಗದೆ, ಹಣ ಬಲವೋ, ಜನ ಬಲವೋ ಎಂಬುದು ತಿಳಿಯಲಿದೆ. ಹಣದಿಂದಲೇ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಶಾಸಕ ರವೀಂದ್ರಶ್ರೀಕಂಠಯ್ಯ ಸಭೆಗೆ ಹೋಗದಂತೆ ಕೆಲವರನ್ನು ತಡೆದಿದ್ದಾರೆ. ಬಹುತೇಕ ಜೆಡಿಎಸ್ ಕಾರ್ಯಕರ್ತರು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಬೆಂಬಲಿಸುವುದಾಗಿ ತಿಳಿಸಿದ್ದಾರೆ ಎಂದರು.

35 ವರ್ಷಗಳಿಂದ ಪ್ರಾಮಾಣಿಕನಾಗಿ ದುಡಿದಿದ್ದೇನೆ

ಜೆಡಿಎಸ್ ಪಕ್ಷಕ್ಕೆ ಕಳೆದ 35 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಪ್ರಾಮಾಣಿಕನಾಗಿ ದುಡಿದಿದ್ದೇನೆ. ಆದರೆ ಆ ಪ್ರಾಮಾಣಿಕತೆಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಟಿಕೆಟ್ ಭರವಸೆ ನೀಡುತ್ತಾ ನಂತರ ಟಿಕೆಟ್ ಕೊಡದೆ ಮೋಸ ಮಾಡಿದರು. ಆದರೂ ಕೊನೇ ಗಳಿಗೆಯವರು ಕಾಯುತ್ತೇನೆ. ಆದರೂ ಕೊಡಲಿಲ್ಲ ಎಂದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ನನ್ನ ಕೈಬಿಡಬೇಡಿ ಎಂದು ಭಾವುಕರಾದರು.

ಜೆಡಿಎಸ್ ಕಾರ್ಯಕರ್ತರಿಗೆ, ಮುಖಂಡರಿಗೆ ಬೆಲೆ ನೀಡುತ್ತಿಲ್ಲ

ಶಾಸಕ ರವೀಂದ್ರಶ್ರೀಕಂಠಯ್ಯ ಜೆಡಿಎಸ್ ಕಾರ್ಯಕರ್ತರಿಗೆ, ಮುಖಂಡರಿಗೆ ಬೆಲೆ ನೀಡುತ್ತಿಲ್ಲ. ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅನೇಕರು ನನ್ನ ಬಳಿ ಹೇಳಿದ್ದಾರೆ. ಅಲ್ಲದೆ, ಕ್ಷೇತ್ರಕ್ಕೆ ಬರದೆ ಕಾರ್ಯಕರ್ತರ ಫೋನ್‌ಗಳನ್ನು ತೆಗೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ಸ್ವಾಮಿ ಮತ್ತು ರಮೇಶ್ ಸೇರಿದಂತೆ ಕೆಲವು ಮುಖಂಡರು ರಾಜೀನಾಮೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ರವೀಂದ್ರ ಶ್ರೀಕಂಠಯ್ಯ ಅವರ ಮನೆ ಬಾಗಿಲಿಗೆ ಹೋಗಿ ಟಿಕೆಟ್ ನೀಡಿ ಗೆಲ್ಲಿಸಿದರು. ಆದರೆ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಾನು ಬಂಡಾಯ ಸಾರಿದ ಮೇಲೆ ಈಗ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಕೊತ್ತತ್ತಿ ಹೋಬಳಿಯನ್ನು ನಿರ್ಲಕ್ಷ್ಯ ಮಾಡಿದ್ದ ಶಾಸಕ ರವೀಂದ್ರಶ್ರೀಕಂಠಯ್ಯ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಲ್ಲಲ್ಲಿ ಗುದ್ದಲಿ ಹಿಡಿದು, ಜೆಸಿಬಿ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಾನು ಯಾವುದೇ ಸಾವು-ನೋವಿಗೆ ಬರುವುದಿಲ್ಲ. 15 ರೂ. ಹಾರ ಹಾಕಿದರೆ ಏನು ಪ್ರಯೋಜನವಿಲ್ಲ ಎಂದು ಅಹಂಕಾರದ ಮಾತುಗಳನ್ನಾಡಿದ ನೀವು, ಈಗ ಪತಿ-ಪತ್ನಿ ಇಬ್ಬರೂ ಅದೇ 15 ರೂ. ಹಾರ ಹಿಡಿದುಕೊಂಡು ಸಾವು ಸಂಭವಿಸುವ ಮನೆಗಳಿಗೆ ಯಾಕೆ ಸುತ್ತುತ್ತಿದ್ದೀರಾ ಎಂದು ಟೀಕಿಸಿದರು.

ಈಗ ಚುನಾವಣೆ ಹತ್ತಿರ ಬಂದಿರುವುದರಿಂದ ಈಗ ಜನರ ನೋವುಗಳು ನಿಮಗೆ ಅರ್ಥವಾಗಿದೆಯೇ ಎಂದು ಪ್ರಶ್ನಿಸಿದ ಅವರು, ನಾನು ಬಂಡಾಯ ಎದ್ದ ಮೇಲೆ ನಿಮಗೆ ಜ್ಞಾನೋದಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏನು ಕಳ್ಕೊಂಡಿದ್ದಾರೋ

ಮಾಜಿ ಶಾಸಕ ರಮೇಶ್‌ಬಾಬು ಅವರಿಗೆ ಅಕ್ರಮಗಳೇ ಸುತ್ತುವರೆದಿವೆ. ಅವರು ಮಾಡಿರುವ ಅಕ್ರಮಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ಯಾವಾಗ ಬೇಕಾದರೂ ಜೈಲಿಗೆ ಹೋಗಬಹುದು. ಅವರು ಸಹ ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ.ಅಪ್ಪ,ಅಮ್ಮ,ಮಗ ಎಲ್ಲರೂ ಅಧಿಕಾರ ಪಡೆದಿದ್ದರೂ ಏನೋ ಕಳ್ಕೊಂಡಿದ್ದಾರೆಂದು ಸುತ್ತುತ್ತಿದ್ದಾರೆ.

ಅರಕೆರೆಯ ಎರಡು ಕುಟುಂಬಗಳು ಸ್ವಾರ್ಥ ರಾಜಕಾರಣ ಮಾಡುತ್ತಿವೆ. ಇದುವರೆಗೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಯಾರೂ ಸಹ ವಿಶೇಷ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ನನಗೆ ಆಶೀರ್ವಾದ ಮಾಡಿ ನಿಮ್ಮ ಮತಕ್ಕೆ ನ್ಯಾಯ ಒದಗಿಸುತ್ತೇನೆ. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಗ್ಗಹಳ್ಳಿ ವೆಂಕಟೇಶ್ ಅವರನ್ನು ಅವರ ಪಕ್ಷ ಕಡೆಗಣಿಸಿದೆ

ರೈತನಾಯಕ ಎಸ್.ಸಿ.ಮಧುಚಂದನ್ ಮಾತನಾಡಿ, ತಗ್ಗಹಳ್ಳಿ ವೆಂಕಟೇಶ್ ಅವರನ್ನು ಅವರ ಪಕ್ಷ ಕಡೆಗಣಿಸಿದೆ. ಅವರು ಚುನಾವಣೆಗೆ ನಿಲ್ಲುವುದು ಖಚಿತ. ಅವರು ಚುನಾವಣೆಗೆ ನಿಂತರೆ ಗೆಲುವು ಸಾಧಿಸುವುದು ಖಚಿತ. ಮಣ್ಣಿನ ಮಕ್ಕಳು ಬೆಳೆಯಬೇಕು‌. ತಗ್ಗಹಳ್ಳಿ ವೆಂಕಟೇಶ್ ಅವರ ಚುನಾವಣಾ ಖರ್ಚಿಗೆ ಒಂದು ಲಕ್ಷ ರೂ‌. ನೀಡುತ್ತೇನೆ. ಕೊತ್ತತ್ತಿ ಭಾಗದ ಮಾಣಿಕ್ಯ ವೆಂಕಟೇಶ್ ಹೋರಾಟಗಾರರಾಗಿದ್ದು, ಕಬ್ಬು,ಭತ್ತ,ರಾಗಿ, ಹಾಲಿನ ಬೆಲೆಗಳ ಹೆಚ್ಚಳಕ್ಕಾಗಿ ಅವರು ಹೋರಾಟ ರೂಪಿಸಲಿದ್ದಾರೆ ಎಂದರು.

ಕ್ಷೇತ್ರದ ಜನರು ಹೃದಯದಿಂದ ತೀರ್ಮಾನ ತೆಗೆದುಕೊಳ್ಳಬೇಕು

ರೈತ ಮುಖಂಡರಾದ ಪ್ರಸನ್ನ ಎನ್.ಗೌಡ ಮಾತನಾಡಿ, ವೆಂಕಟೇಶ್ ಅವರ ಗೆಲುವಿಗಾಗಿ ಕ್ಷೇತ್ರದ ಜನರು ಹೃದಯದಿಂದ ತೀರ್ಮಾನ ತೆಗೆದುಕೊಳ್ಳಬೇಕು. ಹಣಬಲ, ಅಹಂಕಾರ ತೋರಿದವರನ್ನು ಜನ ದೋಸೆ ಮಗುಚಿದ ಹಾಗೆ ಮಗುಚಿ ಹಾಕಬೇಕು. ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ಮುಳುಗಿರುವ ಅಭ್ಯರ್ಥಿ ಗಳನ್ನು ತಿರಸ್ಕರಿಸಿ, ತಗ್ಗಹಳ್ಳಿ ವೆಂಕಟೇಶ್, ಮಧುಚಂದನ್, ದರ್ಶನ್ ಪುಟ್ಟಣ್ಣಯ್ಯ ಅವರಂತಹವರನ್ನು ಜನರು ಆಯ್ಕೆ ಮಾಡಬೇಕು ಎಂದರು.

ಗೆಲ್ಲುವುದು ಶತಸಿದ್ಧ

ಮಂಗಲ ಲಂಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ತಗ್ಗಹಳ್ಳಿ ವೆಂಕಟೇಶ್ ಅವರ ಸಭೆಗೆ ಬಂದ ಜನರಿಗೆ ಹಣ ಕೊಟ್ಟು ಕರೆಸಿಲ್ಲ. ಜನರೇ ವೆಂಕಟೇಶ್ ಅವರ ಮೇಲಿನ ಪ್ರೀತಿಯಿಂದ ಬಂದಿದ್ದಾರೆ. ಐದು ವರ್ಷ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡದವರನ್ನು ತಿರಸ್ಕರಿಸಬೇಕು. ಹಣವಂತರಿಗೆ ಪಕ್ಷದ ಟಿಕೆಟ್‌ ನೀಡಿದರೆ ಗುಣವಂತರು ಏನಾಗಬೇಕು. ವೆಂಕಟೇಶ್ ಅವರು ಸ್ಪರ್ಧೆ ಮಾಡಿ ಗೆಲ್ಲುವುದು ಶತಸಿದ್ಧ ಎಂದರು.

ವಿಕ್ರಾಂತ್ ಟೈರ್ಸ್ ಲೋಕೇಶ್, ತಗ್ಗಹಳ್ಳಿ ಪ್ರಸನ್ನ, ಕನ್ನಡ ಸೇನೆ ಮಂಜುನಾಥ್, ಗ್ರಾಪಂ ಅಧ್ಯಕ್ಷರಾದ ಲಕ್ಷ್ಮಮ್ಮ, ಲಿಖಿತ, ಅರೆಕೆರೆ ಸಿದ್ದೇಗೌಡ, ದಲಿತ ಮುಖಂಡ ಮುಕುಂದ, ಎಂ.ಬಿ.ಲೋಕೇಶ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!