Thursday, July 25, 2024

ಪ್ರಾಯೋಗಿಕ ಆವೃತ್ತಿ

ಮೋದಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ| ಕೇಂದ್ರ ಬಜೆಟ್ ನಲ್ಲಿ ದೊಡ್ಡಮಟ್ಟದ ಅನುದಾನ ಕೇಳಿದ ನಿತೀಶ್!

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅತೀ ದೊಡ್ಡ ಮಿತ್ರಪಕ್ಷ ಆರಂಭದಲ್ಲೇ ಸಂಕಷ್ಟ ತಂದೊಡ್ಡಿದೆ. ನೂತನ ಸರ್ಕಾರದ ಬಜೆಟ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ್‌ ರಾಜ್ಯ ಸರ್ಕಾರ ಹಲವು ಯೋಜನೆಗಳಿಗೆ ಸಹಾಯವಾಗಲು 30 ಸಾವಿರ ಕೋಟಿ ರೂ ಅನುದಾನ ನೀಡುವಂತೆ ಬೇಡಿಕೆಯಿಟ್ಟಿದೆ. ಎನ್‌ಡಿಎ ಸರ್ಕಾರಕ್ಕೆ ಮೊದಲನೇ ದೊಡ್ಡ ಪರೀಕ್ಷೆ ಇದಾಗಿದೆ.

ಜೆಡಿಯುದ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ಪ್ರತಿನಿಧಿಗಳು ಕಳೆದ ತಿಂಗಳು ಹಮ್ಮಿಕೊಳ್ಳಲಾಗಿದ್ದ ನಿರ್ಮಲಾ ಸೀತಾರಾಮನ್‌ ನೇತೃತ್ವದ ಬಜೆಟ್‌ ಪೂರ್ವಸಿದ್ಧತಾ ಸಭೆಯ ವೇಳೆ ಬಹಿರಂಗವಾಗಿ ಕೇಳಲಿಲ್ಲವಾದರೂ ಖಾಸಗಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಸರ್ಕಾರ ಬಿಹಾರದ ಮನವಿಯನ್ನು ಸ್ವೀಕರಿಸಿದ್ದು, ರಾಜ್ಯಕ್ಕೆ ಈ ವರ್ಷ ಎಷ್ಟು ಅನುದಾನ ನೀಡುತ್ತೇನೆಂದು ತಿಳಿಸಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನರೇಂದ್ರ ಮೋದಿ ಸರ್ಕಾರದ ಎನ್‌ಡಿಎ ಸರ್ಕಾರದಲ್ಲಿ ಚಂದ್ರಬಾಬು ನೇತೃತ್ವದ ತೆಲುಗು ದೇಶಂ ಪಕ್ಷ ಈಗಾಗಲೇ ಆಂಧ್ರ ಪ್ರದೇಶ ರಾಜ್ಯಕ್ಕೆ ಮುಂದಿನ ಕೆಲವು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಅನುದಾನ ನೀಡುವಂತೆ ತನ್ನ ಬೇಡಿಕೆಯೊಡ್ಡಿದೆ.

ಎರಡು ಮಿತ್ರಪಕ್ಷಗಳ ಸಂಯೋಜಿತ ಹಣಕಾಸಿನ ಬೇಡಿಕೆಗಳು ಕೇಂದ್ರದ ಒಟ್ಟು ಬಜೆಟ್ ಮೊತ್ತವಾದ 2.2 ಲಕ್ಷ ಕೋಟಿ ಮೊತ್ತದಲ್ಲಿ ಅರ್ಧದಷ್ಟು ಹಣವಾಗಿದೆ. ಮೋದಿ ಸರ್ಕಾರ ಆರಂಭದಲ್ಲೇ ಈ ಸವಾಲನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಚರ್ಚೆಯ ವಿಷಯವಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಮೋದಿ ಸರ್ಕಾರಕ್ಕೆ ಒಂದಿಷ್ಟು ಅವಕಾಶವಿದೆ. ಕೇಂದ್ರ ಬ್ಯಾಂಕ್‌ ಸರ್ಕಾರಕ್ಕೆ ದಾಖಲೆ ಮೊತ್ತದ ಲಾಭಾಂಶ ನೀಡಿದೆ. ಜೊತೆಗೆ ತೆರಿಗೆ ಮೊತ್ತವು ಹೆಚ್ಚಾಗಿದೆ. ಇದರಿಂದ ಒಂದಷ್ಟು ಅನುಕೂಲವಾಗಬಹುದು.

ಕಳೆದ ಒಂದು ದಶಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಮೊದಲ ಬಾರಿಗೆ ಬಹುಮತ ಗಳಿಸಲು ವಿಫಲವಾಗಿದ್ದು, ಇತರ ಮಿತ್ರಪಕ್ಷಗಳನ್ನು ನೆಚ್ಚಿಕೊಂಡಿದೆ. ಟಿಡಿಪಿ ಹಾಗೂ ಜೆಡಿಯು ಪಕ್ಷಗಳು ಎನ್‌ಡಿಎ ಒಕ್ಕೂಟದಲ್ಲಿ ಶೇ.9.5 ರಷ್ಟು ಸಂಸದರ ಸ್ಥಾನವನ್ನು ಹೊಂದಿವೆ.

ಹಣಕಾಸಿನ ನಿಯಮಗಳು ರಾಜ್ಯಗಳಿಗೆ ಪ್ರದೇಶವಾರು ಜಿಡಿಪಿ ಆಧಾರದ ಮೇಲೆ ಶೇ.3 ರಷ್ಟು ಸಾಲ ನೀಡಬೇಕೆಂದು ಹೇಳುತ್ತವೆ. ಆದರೆ ಬಿಹಾರ್‌ ರಾಜ್ಯವು ಶೇ.1ರಷ್ಟು ಹೆಚ್ಚಿಗೆ ಕೇಳಿದರೆ, ಆಂದ್ರ ಪ್ರದೇಶ ಶೇ.0.5 ರಷ್ಟು ಅಧಿಕ ಕೇಳುತ್ತಿದೆ.

ಈ ತಿಂಗಳ ಜುಲೈ 23ರಂದು ಮಂಡಿಸಲಾಗುವ ಬಜೆಟ್ ಮಾರ್ಚ್‌ 2025ರವರೆಗೆ ಜಾರಿಯಲ್ಲಿರುತ್ತದೆ. ಕೆಲವು ರಾಜ್ಯಗಳು ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡಿದರೂ ದೊಡ್ಡ ಮೊತ್ತದ ಸಾಲ ಪಡೆಯಲು ನಿರ್ಬಂಧವಿದೆ. ಮೋದಿ ಸರ್ಕಾರದ ಮೊದಲ ಆಡಳಿತದ ಅವಧಿಯಲ್ಲಿ ಬಿಹಾರ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ 1.25 ಲಕ್ಷ ಕೋಟಿ ರೂ. ಪ್ಯಾಕೇಜ್‌ ಪಡೆದಿತ್ತು.

ಈ ನಡುವೆ ಕೆಲವು ವರ್ಷಗಳಿಂದ ಬಿಹಾರ ಮತ್ತು ಆಂಧ್ರಪ್ರದೇಶ ಆರ್ಥಿಕ ಕೊರತೆಯನ್ನು ಎದುರಿಸುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ಕಡಿಮೆ ಮಾಡಿವೆ. ಬಿಹಾರವು ರಾಜ್ಯದ ಒಟ್ಟು ಆದಾಯದ ಶೇ. 40 ರಷ್ಟು ಹಣವನ್ನು ವೇತನ, ಪಿಂಚಣಿ ಹಾಗೂ ಬಡ್ಡಿ ಮರು ಪಾವತಿಗೆ ವ್ಯಯಿಸುತ್ತಿದೆ. ಆರ್ಥಿಕತೆ ವಿಚಾರದಲ್ಲಿ ಆಂಧ್ರ ಪ್ರದೇಶದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!