Friday, September 20, 2024

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯನವರ ಬಗ್ಗೆ `ಆ ವ್ಯಕ್ತಿ’ ಹೇಳಿದ `ಆ’ ಮಾತು…

✍️ ಮಾಚಯ್ಯ ಎಂ ಹಿಪ್ಪರಗಿ

ನಿಜಕ್ಕೂ ನನಗೆ ಆ ವ್ಯಕ್ತಿಯನ್ನು ಭೇಟಿ ಮಾಡಲು ಇಷ್ಟವಿರಲಿಲ್ಲ. ನನಗೂ ಅವರಿಗೂ ವೈಯಕ್ತಿಕ ದುಶ್ಮನಿಯೇನಾದರು ಇತ್ತಾ? ಖಂಡಿತ ಇಲ್ಲ. ಅವರನ್ನು ನಾನು ಇದುವರೆಗು ಒಮ್ಮೆಯೂ ಮುಖತಃ ಭೇಟಿಯಾಗಿರಲಿಲ್ಲ. ಅಂತದ್ದರಲ್ಲಿ ದುಶ್ಮನಿ ಎಲ್ಲಿಂದ ಬರಬೇಕು! ಆದರೆ ಒಬ್ಬ ವ್ಯಕ್ತಿಯನ್ನು ಇಷ್ಟಪಡಲು, ಇಷ್ಟಪಡದೇ ಇರಲು, ಪ್ರೀತಿಸಲು, ಅಭಿಮಾನಿಸಲು ಭೇಟಿಯಾಗಲೇ ಬೇಕು ಅಂತ ಏನಿಲ್ಲವಲ್ಲ. ಅವರ ನಡವಳಿಕೆ, ಆದ್ಯತೆಗಳನ್ನು ದೂರದಿಂದ ಗಮನಿಸಿ ಅರ್ಥ ಮಾಡಿಕೊಂಡರೂ ಅವರ ಬಗ್ಗೆ ನಮ್ಮಲ್ಲೊಂದು ಪಾಸಿಟಿವ್ ಅಥವಾ ನೆಗೆಟಿವ್ ಅಭಿಪ್ರಾಯ ರೂಪುಗೊಳ್ಳುತ್ತದೆ. ನಾನು ಭೇಟಿಯಾದ ಆ ವ್ಯಕ್ತಿಯ ಬಗ್ಗೆ ನನ್ನಲ್ಲಿ ಅಂತದ್ದೇ ಒಂದು ಸಲ್ಲದ ಅಭಿಪ್ರಾಯ ರೂಪುಗೊಂಡಿದ್ದರಿಂದ ಅವರನ್ನು ಭೇಟಿಯಾಗುವ ಬಗ್ಗೆ ನನಗೆ ಆಸಕ್ತಿ ಇರಲಿಲ್ಲ.

ವೃತ್ತಿಯಿಂದ ಆತನೊಬ್ಬ ನಾಡಿನ ಹೆಸರಾಂತ ಪತ್ರಕರ್ತ. ಪತ್ರಕರ್ತ ಅನ್ನೋದಕ್ಕಿಂತ ಟೀವಿಕರ್ತ ಅನ್ನಬಹುದು. ನ್ಯೂಸ್ ಚಾನೆಲ್ ಒಂದರ ಪ್ರಧಾನ ವ್ಯಕ್ತಿಯಾಗಿರುವ ಆತ, ದೊಡ್ಡ ಇನ್ಫ್ಲ್ಯುಯೆನ್ಸರ್ ಅಂತ ಗುರುತಿಸಿಕೊಂಡಿದ್ದಾನೆ. ತನ್ನನ್ನು ತಾನು ಅಭಿನವ ಸರ್ವಜ್ಞ ಎಂದುಕೊಂಡ ಭ್ರಮಾಜೀವಿ. ಮೇಲ್ನೋಟಕ್ಕೆ ಬ್ಯಾಲೆನ್ಸ್ಡ್ ಜರ್ನಲಿಸ್ಟ್ ಥರ ಕಾಣಿಸಿದರೂ, ಆಂತರ್ಯದಲ್ಲಿ ಪ್ರಖರ ಜಾತಿವಾದಿ, ನೀಳ ಕೋಮುವಾದಿ. ಬಿಜೆಪಿ ಪಾಲಿನ ಭೀಷ್ಮಾಚಾರ್ಯ! ನಾನು ವೈಯಕ್ತಿಕವಾಗಿ ಆತನನ್ನು ಇಷ್ಟಪಡದಿರುವುದು ಇದೇ ಕಾರಣಕ್ಕೆ.

ಆದರೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನನ್ನ ಗೆಳೆಯರೋರ್ವರು ತುಂಬಾ ಒತ್ತಾಯ ಮಾಡಿದ್ದರಿಂದ, ಅವರ ಮಗಳ ಮದುವೆಯ ಇನ್ವಿಟೇಷನ್ ಕೊಡುವ ಸಲುವಾಗಿ ಅವರೊಟ್ಟಿಗೆ ಆ ಟೀವಿಕರ್ತನನ್ನು ಭೇಟಿಯಾಗಲು ಹೋಗಿದ್ದೆ. ನಿರೀಕ್ಷಿಸಿದಂತೆಯೇ ಸುಪಿರೀಯಾರಿಟಿಯ ಗತ್ತಿನಲ್ಲಿ ನಮ್ಮನ್ನು ಕರೆದು ಕೂರಿಸಿದ. ಆಮಂತ್ರಣ ಪತ್ರಿಕೆ ಕೊಟ್ಟ ನಂತರ, ನನ್ನ ಗೆಳೆಯ ಮತ್ತು ಆತನ ನಡುವಿನ ಮಾತುಕತೆ ಸಮಕಾಲೀನ ರಾಜಕಾರಣದತ್ತ ಹೊರಳಿತು. `ತನಗೆಲ್ಲವೂ ಗೊತ್ತು, ನಿಮಗೆ ತಿಳಿದಿರುವುದು ಏನೇನು ಅಲ್ಲ’ ಎನ್ನುವರ್ಥದಲ್ಲಿ ಆತನ ಮಾತುಗಳು ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಆಂತರಿಕ ಕಲಹದಿಂದ, ಮೋದಿಯವರ ರಾಮಮಂದಿರ ಉದ್ಘಾಟನೆಯ ಮಹಾನ್(?) ಸಾಧನೆಯವರೆಗೆ ಹೊರಳಾಡಿ ಬಂದವು. ಆತ ಮೋದಿಯ ಬಗ್ಗೆ, ಕಾಂಗ್ರೆಸ್ಸಿನವರ ಬಗ್ಗೆ, ದೇವೇಗೌಡರು ಮತ್ತವರ ಮಗನ ಅವಕಾಶವಾದಿ ರಾಜಕಾರಣದ ಬಗ್ಗೆ, ರಾಹುಲ್ ಗಾಂಧಿಯ ಬಗ್ಗೆ ಏನೆಲ್ಲಾ ಮಾತನಾಡಿದನೋ, ಆ ವಿಚಾರಗಳ ಬಗ್ಗೆ ಹಾಗೆಯೇ ಮಾತನಾಡುತ್ತಾನೆ ಎಂದು ನಾನು ಮೊದಲೇ ಅಂದಾಜಿಸಿಕೊಂಡು ಹೋಗಿದ್ದರಿಂದ ನನಗೆ ಆತನ ಮಾತಿನಿಂದ ಆಘಾತವಾಗಲಿ, ಕಿರಿಕಿರಿಯಾಗಲಿ ಉಂಟಾಗಲಿಲ್ಲ. ಆದರೆ ಸಿದ್ದರಾಮಯ್ಯನವರ ಬಗ್ಗೆ ಆತನಾಡಿದ ಮಾತು ತುಂಬಾ ಅಚ್ಚರಿಗೆ ಕಾರಣವಾಯ್ತು.

“ಈ ಸಿದ್ರಾಮಯ್ಯ ಇದಾರಲ್ವಾ, ಅವ್ರು ನಿಜಕ್ಕೂ ನ್ಯಾಷನಲ್ ಪೊಲಿಟಿಕ್ಸ್ ನಲ್ಲಿ ಇರಬೇಕಾದ ತೂಕದವರು ಕಣ್ರಿ. ನಿಮಗೆ ನಿಮ್ಮ ಬೇರೆ ಲೀಡರ್‍ಸ್ ಬಗ್ಗೆ ಏನು ಅಭಿಪ್ರಾಯ ಇದ್ಯೋ ನನಗ್ ಗೊತ್ತಿಲ್ಲ. ಆದ್ರೆ ನನಗಂತೂ, ಕಾಂಗ್ರೆಸಿನೊಳಗೆ ಮೋದಿಗೆ ಎದುರಾಳಿಯಾಗಿ ನಿಲ್ಲಬಲ್ಲ ಸಾಮರ್ಥ್ಯ ಇರೋ ಏಕೈಕ ವ್ಯಕ್ತಿ ಅಂದ್ರೆ ಸಿದ್ರಾಮಯ್ಯ ಕಣ್ರಿ.” ಹೀಗೆ ಹೇಳುವಾಗ ಆತನ ಮನದಲ್ಲಿ ಸಿದ್ರಾಮಯ್ಯನವರ ಬಗ್ಗೆ ಅಭಿಮಾನವಿರಲಿಲ್ಲ, ಅಪಾರ ಹೊಟ್ಟೆಕಿಚ್ಚು ಇತ್ತು. ಆದರೆ, ಇಂತವರೊಬ್ಬರು ನಮಗೆ ಸಿಕ್ಕಿಲ್ಲವಲ್ಲಾ ಎಂದು ತುಂಬಾ ನೊಂದುಕೊಂಡು ಸತ್ಯ ಹೇಳುತ್ತಿರುವ ಪ್ರಾಮಾಣಿಕತೆ ಇತ್ತು.

“ಅಷ್ಟಿಲ್ಲದೇ ಅವರು ಹದಿನೈದು ಸಲ ಬಜೆಟ್ ಮಂಡಿಸ್ತಿದ್ರಾ ಸಾ….” ನನ್ನ ಗೆಳೆಯ ಟಿಪಿಕಲ್ ಕಾಂಗ್ರೆಸಿಗನ ಥರ ರಾಗ ಎಳೆದ.

“ಥೂ.. ಏನ್ರೀ ಅದು ಹದಿನೈದು ಸಲ, ಹದಿನಾಲ್ಕು ಸಲ ಅಂತ ಲೆಕ್ಕ ಇಟ್ಕೊಂಡು.. ನೋಡ್ರಿ ನನ್ ಪ್ರಕಾರ ಒಂದು ಸಲ ಬಜೆಟ್ ಮಂಡಿಸೋದ್ರಲ್ಲೂ, ಹದಿನೈದು, ಇಪ್ಪತ್ತೈದು ಸಲ ಬಜೆಟ್ ಮಂಡಿಸೋದ್ರಲ್ಲೂ ಏನೂ ವ್ಯತ್ಯಾಸ ಇಲ್ಲ. ಆದ್ರೆ ಹಾಗೆ ನೀವು ಮಂಡಿಸಿದ ಬಜೆಟ್ ನಲ್ಲಿ ಜನಕ್ಕೆ ಏನು ಕೊಡ್ತೀರಿ, ಎಷ್ಟು ಕಾಲ ಜನ ಅದನ್ನ ನೆನಪಿನಲ್ಲಿ ಇಟ್ಕೋತಾರೆ ಅನ್ನೋದು ಮುಖ್ಯ ಕಣ್ರಿ. ನನಿಗೇನೊ ಸಿದ್ರಾಮಯ್ಯ ಹದಿನೈದು ಸಲ ಬಜೆಟ್ ಮಂಡಿಸಿದಾರೆ ಅನ್ನೋದರಲ್ಲಿ ಆ ಹದಿನೈದು ಅನ್ನೋದು ಗ್ರೇಟ್ ಆಗಿ ಕಾಣಲ್ಲಪ್ಪ. ಆದ್ರೆ ಆ ಬಜೆಟ್ಗಳಲ್ಲಿ ಜನರ ಪರವಾಗಿ ಅವ್ರು ಯೋಜನೆಗಳನ್ನ ರೂಪಿಸ್ತಾರಲ್ಲ ಅವು ಕಣ್ರಿ ಇಂಟರೆಸ್ಟಿಂಗ್ ಅಂದ್ರೆ. ಇವತ್ತು ನೀವು ಏನೆ ಹೇಳಿ, ಬಡವ್ರು, ಮಧ್ಯಮ ವರ್ಗದವರು, ಜಾತಿ ಮರೆತು ಸಿದ್ದರಾಮಯ್ಯನವರನ್ನ ಸೆಲಬ್ರೇಟ್ ಮಾಡ್ತಾ ಇದಾರಲ್ಲ, ಅಂತಹ ಸೆಲಬ್ರೇಷನ್ ನ ನಾನು ಇದುವರೆಗೂ ಯಾವ ರಾಜಕಾರಣಿಗೂ ನೋಡಿಲ್ಲ.” ಈ ಮಾತುಗಳನ್ನಾಡಿದ ಆತ ಮೊದಲ ಸಲ ನನ್ನ ಕಣ್ಣಿಗೆ ಪತ್ರಕರ್ತನಂತೆ ಕಾಣತೊಡಗಿದ್ದ.

“ಆದ್ರು ಸರ್, ಅಂತ ಸಿದ್ದರಾಮಯ್ಯನವ್ರ ಬಗ್ಗೆ ನೀವು ಟೀವಿ ಚಾನೆಲ್ ನೋರು ಎಷ್ಟೆಲ್ಲ ಕೆಟ್ಟದಾಗಿ ಪ್ರೊಜೆಕ್ಟ್ ಮಾಡ್ತೀರಿ. ಅವರ ಸರ್ಕಾರದ ಕಾಲು ಎಳೆಯೋದಕ್ಕೇ ಕಾಯ್ತಾ ಇರ್‍ತೀರಲ್ಲವಾ ಸರ್” ನನ್ನ ಗೆಳೆಯ ನಾನೂ ನಿರೀಕ್ಷೆ ಮಾಡದಿದ್ದ ವೇಗದಲ್ಲಿ ಒಂದು ಗೂಗ್ಲಿ ಎಸೆದ.

“ರೀ ನಾವು ಪತ್ರಕರ್ತರು ಕಣ್ರೀ. ಅಧಿಕಾರದಲ್ಲಿ ಇರೋರನ್ನ ಟೀಕೆ ಮಾಡೋದು, ವಿಮರ್ಶೆ ಮಾಡೋದೆ ನಮ್ಮ ಕೆಲಸ. ಅದನ್ನೆಲ್ಲ ನೀವು ಹಿಂಗೆ ಮಿಸ್ ಇಂಟರ್ ಪ್ರೆಟ್ ಮಾಡಬಾರದು” ಸರಾಗವಾಗಿ ಉತ್ತರ ಕೊಟ್ಟರೂ, ಹೀಗೆ ಹೇಳುವಾಗ ಅವನ ಮುಖದಲ್ಲಿ ಅಪರಾಧಿ ಭಾವ ಸುಳಿದುಹೋದದ್ದು ಸ್ಪಷ್ಟವಾಗಿ ಗೋಚರಿಸಿತು. ನನ್ನ ಗೆಳೆಯನಂತೂ ಆ ಉತ್ತರ ಕೇಳಿ ಜೋರಾಗಿ ಗೊಳ್ಳನೆ ನಕ್ಕ. ಅದು ಆ ವ್ಯಕ್ತಿಗೆ ಮತ್ತಷ್ಟು ಇರಿಸು ಮುರಿಸು ಉಂಟುಮಾಡಿತು. ಸಾವರಿಸಿಕೊಂಡು ಮುಗುಳ್ನಕ್ಕು ವಿಷಯವನ್ನು ಬೇರೆಡೆ ತಿರುಗಿಸಿದ.

ಹತ್ತು ವರ್ಷದಿಂದ ಅಧಿಕಾರದಲ್ಲಿರುವ ಮೋದಿಯವರನ್ನೂ ನೀವು ಇದೇ ವೃತ್ತಿಧರ್ಮಕ್ಕೆ ಬದ್ಧರಾಗಿ ಟೀಕಿಸಿದ್ದೀರಾ, ವಿಮರ್ಶಿಸಿದ್ದೀರಾ ಎಂಬುದು ನನ್ನ ಗೆಳೆಯನ ನಗುವಿನ ತಾತ್ಪರ್ಯವಾಗಿತ್ತು. ನನಗದು ಚೆನ್ನಾಗಿ ಅರ್ಥವಾಗಿತ್ತು. ಆ ವ್ಯಕ್ತಿಗೆ ಇನ್ನೂ ಚೆನ್ನಾಗಿ ಅರ್ಥವಾಗಿತ್ತು.

ಮಾತುಕತೆ ಮುಗಿಸಿ ಅಲ್ಲಿಂದ ಹೊರಬಂದೆವು. ಇಷ್ಟೆಲ್ಲ ಬರೆದವನಿಗೆ ಆ ವ್ಯಕ್ತಿಯ ಹೆಸರು ಬರೆಯುವುದು ದೊಡ್ಡ ಸಂಗತಿಯಲ್ಲ. ಆದರೆ ಬಹಿರಂಗಗೊಳಿಸದಿರಲು ನನ್ನ ಬಳಿ ಎರಡು ಕಾರಣಗಳಿವೆ. ಮೊದಲನೆಯದು, ತನ್ನ ಇಷ್ಟು ವರ್ಷಗಳ ಟೀವಿ ಶೋಗಳಲ್ಲಿ ಯಾವತ್ತೂ ಹೇಳದ ಸತ್ಯವಾದ ಮಾತೊಂದನ್ನು ನಮ್ಮ ಮುಂದೆ ವಿಶ್ವಾಸವಿಟ್ಟು ಆಫ್ ದಿ ರೆಕಾರ್ಡ್ ರೀತಿ ಹೇಳಿಕೊಂಡಿದ್ದಾನೆ. ಅಂತಹ ವಿಶ್ವಾಸಕ್ಕೆ ನನ್ನಿಂದ ದ್ರೋಹವಾಗುವುದು ನನಗಿಷ್ಟವಿಲ್ಲ. ಎರಡನೆಯದು, ನನಗೆ ಆ ವ್ಯಕ್ತಿ ಹೇಳಿದ ಅಷ್ಟೂ ಮಾತುಗಳು ಕೇವಲ ಆತನೊಬ್ಬನ ಮಾತುಗಳಾಗಿರದೆ, ಬಹುತೇಕ ನಮ್ಮ ಎಲ್ಲಾ ಟೀವಿಕರ್ತರ ಆಂತರ್ಯದ ಧ್ವನಿಯಂತೆ ಭಾಸವಾಗುತ್ತಿವೆ. ತಮ್ಮೊಳಗಿನ ಜಾತೀವಾದಕ್ಕೋ, ಸೈದ್ಧಾಂತಿಕ ಕಾರಣಕ್ಕೋ, ಹಣಕ್ಕೋ ಅಥವಾ ಒತ್ತಡಕ್ಕೋ ಟೀವಿ ಪರದೆಯ ಮೇಲೆ ಸಿದ್ದರಾಮಯ್ಯನವರ ಕುರಿತು ವಿಷ ಕಾರಿಕೊಳ್ಳುವ ಇಂತಹವರಿಗೆ ಒಳಗಿಂದೊಳಗೆ ಸತ್ಯ ಏನೆಂಬುದು ಅರ್ಥವಾಗಿರುತ್ತದೆ. ಅವರ ಜನಪ್ರಿಯತೆಯ ಆಳ ಮನದಟ್ಟಾಗಿರುತ್ತೆ. ಎಷ್ಟೇ ಆಗಲಿ ಅವರು ಹೆಚ್ಚೆಚ್ಚು ಜನರೊಟ್ಟಿಗೆ ಬೆರೆಯುವ ಪತ್ರಕರ್ತರಲ್ಲವೇ! ಆದರೆ ಮೇಲೆ ಉಲ್ಲೇಖಿಸಿದ ಕಾರಣಗಳಿಗಾಗಿ, ಆ ಸತ್ಯವನ್ನು ಹೇಳಲಾಗದೆ ಪರದೆ ಮೇಲೆ ಹಾಗೆ ಅರಚಾಡುತ್ತಾರಷ್ಟೆ ಅನಿಸಿತು. ಆ ವ್ಯಕ್ತಿಯ ಮಾತು ಅವರೆಲ್ಲರ ಧ್ವನಿಯಾಗಲಿ ಎಂಬ ಕಾರಣಕ್ಕೆ ಆತನ ಹೆಸರನ್ನು ಇಲ್ಲಿ ಬಹಿರಂಗಗೊಳಿಸುತ್ತಿಲ್ಲ.

ಆತನ ಕಚೇರಿಯಿಂದ ಹೊರಬರುವಾಗ “ನೋಡ್ರೀ ಮಾಚಯ್ಯ.. ಸಿದ್ರಾಮಯ್ಯನವರ ಬಗ್ಗೆ ಇಷ್ಟೆಲ್ಲ ಒಳ್ಳೆ ಅಭಿಪ್ರಾಯ ಇದ್ರೂ, ಅವರೊಬ್ಬ ಕೆಳಜಾತಿಯವ್ರು ಅನ್ನೋ ಕಾರಣಕ್ಕೆ ಈ ಮೇಲ್ಜಾತಿ ಜನ ಟೀವಿ ಮೂಲಕ ಎಷ್ಟೆಲ್ಲ ಸುಳ್ಳುಸುಳ್ಳು ವಿಷ ಕಾರ್‍ತಾರೆ” ಎಂದ ನನ್ನ ಗೆಳೆಯನ ಮಾತು ನನಗೂ ಸತ್ಯ ಅನ್ನಿಸಿತು. ಅಂದಹಾಗೆ, ನನ್ನನ್ನು ಆತನಿಗೆ ಪರಿಚಯಿಸುವಾಗ ನನ್ನ ಗೆಳೆಯ ‘ಬಿಇಎಲ್ ನ ರಿಟೈರ್‍ಡ್ ಎಂಪ್ಲಾಯಿ’ ಅಂತ ಹೇಳಿದ್ದ. ಅದಕ್ಕೇ ನನ್ನೆದುರಿಗೆ ಆತ ಅಷ್ಟೆಲ್ಲ ಮುಕ್ತವಾಗಿ ಮಾತಾಡಿದ್ದು ಅನ್ನಿಸುತ್ತೆ. ಅಪ್ಪಿತಪ್ಪಿ, ಇವ್ರೂ ಪತ್ರಕರ್ತ, ಬರವಣಿಗೆ ಗೊತ್ತು ಅಂದಿದ್ದ್ರೆ ಅದನ್ನೆಲ್ಲ ಆತನೆಲ್ಲಿ ಮಾತಾಡ್ತಿದ್ದ!?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!