Thursday, September 19, 2024

ಪ್ರಾಯೋಗಿಕ ಆವೃತ್ತಿ

ಮನುಷ್ಯ : ಪ್ರಕೃತಿಯ ಪ್ರಮಾದ

ಭಾಗ 01

ಮಾನವತೆ ಎಂಬ ಕಪಟತನ

ಯೋಗೇಶ್ ಮಾಸ್ಟರ್. ಸಾಮಾಜಿಕ ಚಿಂತಕರು.

“ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ” ಎಂದು ಪುರಂದರ ದಾಸರು ತಮ್ಮ ಕೀರ್ತನೆಯಲ್ಲಿ ಹೇಳಿದಾಗ, ಆ ಸಂದರ್ಭ ಹೇಗಿತ್ತೋ, ಅದನ್ನು ಹೇಳಿದ್ದು ಯಾರಿಗೋ ಗೊತ್ತಿಲ್ಲ. ಆದರೆ ಅದು ಸರ್ವಕಾಲಿಕ ಸತ್ಯವಲ್ಲ, ಇನ್ನೂ ಬೇಕಾದರೆ ಸರ್ವಕಾಲಿನ ಸುಳ್ಳು ಅಂತಾನೇ ತಿಳಿಯಿರಿ. ಇಂತಹ ಸಾಂದರ್ಭಿಕವಾದ ಹೇಳಿಕೆಗಳು, ಸೂಕ್ತಿಗಳು, ಸುಭಾಷಿತಗಳು, ಮಹಾತ್ಮರ ವಾಣಿಗಳು ಯಾವುದೋ ಒಂದು ಸಂದರ್ಭದಲ್ಲಿ ನಿಜ ಅಂತ ಅನ್ನಿಸತ್ತೆ, ನಿಂತು ಹೋಗಿರುವ ಗಡಿಯಾರ ದಿನದಲ್ಲಿ ಎರಡು ಹೊತ್ತು ಸರಿಯಾದ ಸಮಯ ತೋರಿಸತ್ತೆ ಅನ್ನುವ ಹಾಗೆ.

ಇಷ್ಟು ತಿಳಿದುಬಿಡೋಣ. ಇಡೀ ಪ್ರಕೃತಿ ಅಥವಾ ಅದರ ನೆಲೆಮೂಲವಾದ ಭೂಮಿಯ ಕಡೆಯಿಂದ ಈ ಮನುಷ್ಯನ ಬಗ್ಗೆ ಯಾವ ವಿಶೇಷತೆಯೂ ಇಲ್ಲ. ಯಾವ ರೀತಿಯಲ್ಲೂ ಭೂಮಿಯ ಜೈವಿಕ ಪರಿಸರದ ದೃಷ್ಟಿಯಲ್ಲಿ ಮನುಷ್ಯ ಶ್ರೇಷ್ಟನೂ ಅಲ್ಲ, ಅವನ ಜನ್ಮ ದೊಡ್ಡದೂ ಅಲ್ಲ. ಆದರೆ ಅವನು ಅಂದುಕೊಂಡಿದ್ದಾನೆ ತನ್ನ ಜನ್ಮ ದೊಡ್ಡದು ಅಂತ, ಈ ದಾಸರು ಅಂದುಕೊಂಡ ಹಾಗೆ.

ಮನುಷ್ಯನಾದವನು ಅಂದುಕೊಂಡಿರುವುದು – ಇದೇ ವಾಸ್ತವ. ಮನುಷ್ಯ ತನ್ನ ಬಗ್ಗೆ, ಇತರರ ಬಗ್ಗೆ, ವಸ್ತುಗಳ ಬಗ್ಗೆ, ಏನೇನೋ ಅಂದುಕೊಳ್ತಾನೆ. ಈ ಅಂದುಕೊಂಡಿರುವುದನ್ನು ಸಮರ್ಥಿಸಲು, ವಿವರಿಸಲು, ವಿವೇಚಿಸಲು, ವಿಶ್ಲೇಷಿಸಲು ಅವನಿಗೆ ಆಗುತ್ತದೆ. ಹೀಗೆ ಆಗಲು ಕಾರಣ ಅವನ ಮನಸ್ಸು. ಮನಸ್ಸೆಂಬುದು ಜೈವಿಕ ಜಗತ್ತಿನ ಇತರ ಜೀವಿಗಳಲ್ಲಿಯೂ ಇವೆ. ಆ ಪ್ರಾಣಿಗಳಲ್ಲಿರುವ ಮನಸ್ಸು ಸಹಜವಾದ ಪ್ರವೃತ್ತಿಯ ಆಧಾರದಲ್ಲಿ ಇರುತ್ತದೆ. ಆದರೆ ಇವನದು ಕೊಂಚ ವಿಶೇಷವೇನೆಂದರೆ ಇವನಿಗೆ ಆಲೋಚಿಸಲು ಸಾಧ್ಯ, ವಿವೇಚಿಸಲು ಸಾಧ್ಯ, ದಾಖಲಿಸಲು ಸಾಧ್ಯ, ಅದನ್ನು ಬೇರೆ ಬೇರೆ ರೂಪದಲ್ಲಿ ಪ್ರಚಾರ ಮಾಡಲು ಸಾಧ್ಯ. ಮನಸ್ಸಿನ ಈ ಅನೇಕ ಸಾಧ್ಯತೆಗಳ ಜೊತೆಗೆ ಅವನ ದೇಹದ ಮತ್ತು ಮೆದುಳಿನ ನೈಸರ್ಗಿಕ ರಚನೆಯೂ ಕೂಡಾ ಅವನಿಗೆ ವಿಶೇಷತೆಯನ್ನು ಕೊಟ್ಟಿವೆ.

ಇದೇ ಪ್ರಕೃತಿಯು ತನಗೆ ತಾನೇ ಮಾಡಿಕೊಂಡಿರುವ ಎಡವಟ್ಟು. ಮನುಷ್ಯ ಎಂಬುದು ಪ್ರಕೃತಿ ತನ್ನ ಸೃಷ್ಟಿಗಳಲ್ಲಿ ಮಾಡಿಕೊಂಡಿರುವ ಮಹಾ ಪ್ರಮಾದ. ಕಪಟತನ, ವಂಚನೆ, ಮೋಸ, ಕುಟಿಲತೆ, ನೀಚತನ, ಅವಿಶ್ವಾಸ, ದ್ರೋಹ, ಸ್ವಾರ್ಥ, ಅಪ್ರಮಾಣಿಕತೆ; ಈ ಬಗೆಯ ಪದಗಳ ಅರ್ಥ ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ಮನುಷ್ಯ ತನ್ನನ್ನು ತಾನು ವಿವರಿಸಿಕೊಳ್ಳಲು ಇರುವ ಪದಗಳಿವು. ಆದರೆ ತಮಾಷೆ ಎಂದರೆ ಇದನ್ನು ತನ್ನ ಹೊರತು ಇತರರಿಗೆ ಮಾತ್ರ ಬಳಸಲು ಇಷ್ಟಪಡುತ್ತಾನೆ. ಅಲ್ಲೂ ಕಪಟತನ, ಅಲ್ಲೂ ವಂಚನೆ. ಆ ಎಲ್ಲಾ ಪದಗಳ ವಿರುದ್ಧ ಪದಗಳಿಂದ ತನ್ನನ್ನು ವಿವರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತಾನು ಅದಕ್ಕೆ ಅರ್ಹನು ಹೌದೋ ಅಲ್ಲವೋ, ತನ್ನಲ್ಲಿ ಆ ಗುಣಗಳು ಇರುತ್ತವೋ ಇಲ್ಲವೋ; ಆದರೆ ತನ್ನಲ್ಲಿರುವುದೇ ವಿಶ್ವಾಸ, ಪ್ರಾಮಾಣಿಕತೆಯೇ ಮೊದಲಾದ ಸದ್ಗುಣಗಳು ಎಂದು ಅಂದುಕೊಳ್ಳುತ್ತಾನೆ. ಅಂದುಕೊಳ್ಳುವುದರಲ್ಲಿ ಅವನಿಗೆ ವಿಶೇಷ ಪರಿಣಿತಿ ಇದೆಯಲ್ಲ!

ಮಾನವ ಜನ್ಮ ದೊಡ್ಡದು ಎಂದು ಅಂದುಕೊಳ್ಳುವುದು ಅವನ ಅಹಂಕಾರ. ಇತರೆಲ್ಲಾ ಜೀವಿಗಳ ಜನ್ಮಕ್ಕಿಂತ ತನ್ನ ಜನ್ಮ ದೊಡ್ದದೆಂದು ಅಂದುಕೊಳ್ಳುವುದು ಏಕೆಂದರೆ ತನಗೆ ಅಂದುಕೊಳ್ಳಲು ಆಗುತ್ತದೆ ಎಂದಷ್ಟೇ. ಜಗತ್ತಿನ ಬೇರೆಲ್ಲಾ ಜೀವರಾಶಿಗಳಲ್ಲಿ ತನ್ನದೇ ಜೀವಜಾತಿಯದನ್ನು ಅತ್ಯಂತ ಎಂದರೆ, ಊಹಿಸಲೂ ಅಸಾಧ್ಯವಾಗಿರುವಷ್ಟು ಹತ್ಯೆ ಮಾಡಿರುವುದು ಮನುಷ್ಯ ಮಾತ್ರವೇ. ಅವನು ಏನೇನೆಲ್ಲಾ ಅಭಿವೃದ್ಧಿ, ವಿಕಾಸ ಎಂದೆಲ್ಲಾ ಬೊಟ್ಟು ಮಾಡಿ ತೋರಿಸುತ್ತಾನೋ ಅದು ಅವನದೇ ಜೈವಿಕ ನೆಲೆಗೆ ಏನೂ ಪ್ರಯೋಜನವಿಲ್ಲ. ಅವನ ಹಿತಕಷ್ಟೇ ಸೀಮಿತ. ಮನುಷ್ಯನೇಕೆ ಅಷ್ಟು ಸ್ವಾರ್ಥಿಯೂ ಮತ್ತು ಕಪಟಿಯೂ ಆದ ಎಂದು ಅವನಿಗೇ ಗೊತ್ತಿಲ್ಲ. ಏಕೆಂದರೆ ಅದನ್ನು ಅವನು ತನ್ನ ಸಹಜ ನಡವಳಿಕೆಯನ್ನಾಗಿ ಮಾಡಿಕೊಂಡಿದ್ದಾನೆ.

ಮಾನವತೆ ಎಂಬುದೊಂದಿದೆಯಲ್ಲಾ ಅದಂತೂ ಮನುಷ್ಯನ ಅತ್ಯಂತ ಹೀನವಾದ ಮತ್ತು ಕಪಟತನದ ಮುಖವಾಡ. ಮಾನವತೆ ಎಂಬುದೊಂದು ‘ತನ್ನಲ್ಲಿ ಸಹಜವಾಗಿರುವ ನೈಸರ್ಗಿಕ ಪಶು ಪ್ರವೃತ್ತಿಯಿಂದ ತನ್ನನ್ನು ಹೊರತುಪಡಿಸಿಕೊಳ್ಳಲು’ ಮತ್ತು ತನ್ನದೇ ಜೀವಜಾತಿ ಅಥವಾ ಪ್ರಬೇಧದಲ್ಲಿ ಸಂಘರ್ಷಗಳಾಗಿ ತಾನು ನಾಶವಾಗದಿರಲು ಮಾಡಿಕೊಂಡ ಒಂದು ಪರಿಕಲ್ಪನೆ ಅಥವಾ ಐಡಿಯಾ. ಅದನ್ನು ಒಡಂಬಡಿಕೆಯನ್ನಾಗಿ ಮಾಡಿಕೊಳ್ಳಬೇಕೆಂಬುದು ಅವನ ಆಸೆ. ಅದಕ್ಕೆ ಬೇಕಾದಷ್ಟು ಮೌಲ್ಯಗಳನ್ನು, ಗುಣ ವಿಶೇಷಗಳನ್ನು ಆರೋಪಿಸಿ, ಮಾನವತೆಯನ್ನು ಮೆರೆಯುತ್ತಾನೆ.

ನೆನಪಿರಲಿ, ಮಾನವತೆಯೂ ಕೂಡಾ ಅವನಿಗೆ ಸಹಜವಾದ ಒಡಂಬಡಿಕೆಯ ನೇಮವಾಗಿರುವುದಿಲ್ಲ. ಮೆರೆಯಲು, ತನ್ನನ್ನು ತಾನು ಶ್ರೇಷ್ಟನೆಂದು, ಒಳ್ಳೆಯವನೆಂದು ತೋರಲು ಮಾಡುವ ವಿಶೇಷ ಪ್ರದರ್ಶನ. ಮನುಷ್ಯತ್ವ ಅಥವಾ ಮಾನವತೆ ಎಂಬುದನ್ನು ತಿಳಿಯುತ್ತಾನೆ. ಆದರೆ ಅದನ್ನು ಪ್ರದರ್ಶನಕ್ಕೆ ಮೀಸಲಿಟ್ಟುಕೊಳ್ಳುತ್ತಾನೆ. ತನ್ನ ಅಂತರಂಗದಲ್ಲಿ ಅದನ್ನು ಹೊಂದಿರುವುದಿಲ್ಲ. ಅಯ್ಯೋ, ಇಂತ ಕಪಟತನವನ್ನು ಸಾಮಾನ್ಯೀಕರಿಸಬೇಡಿ. ಎಲ್ಲರೂ ಹಾಗಿರಲ್ಲ ಅಂತ ಇಂತಹ ಕಪಟತನಕ್ಕೆ ಹೊರತಾದ ಜನರನ್ನು ಬೊಟ್ಟು ಮಾಡಿ ತೋರಿಸಕ್ಕೆ ಬರಬೇಡಿ. ಎಕ್ಸೆಪ್ಶನಲ್ ಕೇಸುಗಳೆಲ್ಲಾ ಸಾಮಾನ್ಯ ಗುಣಲಕ್ಷಣಗಳಲ್ಲ ಎಂಬುದನ್ನು ನೆನಪಿಡಿ.

ನೇರವಾಗಿಯಾಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ನೀವು ಹೆಚ್ಚು ಹೆಚ್ಚು ಜನರ ಸಂಪರ್ಕಕ್ಕೆ ಹೋಗುತ್ತಾ, ನಿಮ್ಮ ದೃಷ್ಟಿ ಹೆಚ್ಚು ಹೆಚ್ಚು ಪಾರದರ್ಶಕವಾಗುತ್ತಿದ್ದಂತೆ, ನೀವು ಪೂರ್ವಾಗ್ರಹ ಪೀಡಿತರಲ್ಲದೇ ಹೋದ ಪಕ್ಷದಲ್ಲಿ ಮನುಷ್ಯ ಎಷ್ಟು ಸ್ವಾರ್ಥಿ, ಕಪಟಿ, ವಂಚಕ ಎಂದು ತಿಳಿಯುತ್ತಾ ಹೋಗುತ್ತದೆ. ನಿಮ್ಮದೇ ಜೊತೆಗಿನ ವೈಯಕ್ತಿಕ ಸಂಬಂಧಗಳನ್ನು, ಕುಟುಂಬದ ಸದಸ್ಯರನ್ನು, ಸಾಮಾಜಿಕವಾಗಿರುವ ಸಹ ಜೀವಿಗಳನ್ನು ಅನುದ್ದೇಶವಿಲ್ಲದೇ, ಪೂರ್ವಾಗ್ರಹಗಳಿಲ್ಲದೇ ಸಾಕ್ಷೀಕರಿಸುತ್ತಾ ಗಮನಿಸಿದ್ದಲ್ಲಿ ಮನುಷ್ಯರ ಸ್ವಾರ್ಥಪರತೆ ಮತ್ತು ಕಪಟತನಗಳು ತಿಳಿಯುತ್ತಾ ಬರುತ್ತದೆ. ಆಗ ನೀವು ನೆಮ್ಮದಿಯಾಗಿರಬೇಕೆಂದರೆ ಕ್ಷಮಿಸಿಬಿಡುವುದೋ ಅಥವಾ ಮನುಷ್ಯರೇ ಹೀಗೆ ಎಂದು ಒಪ್ಪಿಕೊಂಡುಬಿಡುವುದೋ ಅನಿವಾರ್ಯವಾಗುತ್ತದೆ.

ಆದರೆ ಕಪಟತನಕ್ಕೆ, ಸುಳ್ಳುಗಾರಿಕೆಗೆ, ಸ್ವಾರ್ಥಕ್ಕೆ ಕಾರಣಗಳೇನು? ಸಿದ್ಧಾಂತವಾದಿಗಳು, ಸಮಾಜ ಸುಧಾರಕರು, ಧರ್ಮ ಸಂಸ್ಥಾಪಕರು ಎಡವಿದ್ದೆಲ್ಲಿ? ಧಾರ್ಮಿಕತೆಯ ಸಂಪ್ರದಾಯಿಕ ಕೂಪದಲ್ಲಿ ಮುಳುಗೇಳುತ್ತಿರುವವರ ಕತೆಯೇನು? ಇದಕ್ಕೆ ಪರಿಹಾರಗಳೇನಾರ ಇವೆಯೇ? ಮುಂದೆ ನೋಡೋಣ.

(ಮುಂದುವರಿಯುವುದು)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!