Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಕೃತರ ನಡುವೆ ಪ್ರಬುದ್ಧರು, ಇದೇ ನಮ್ಮ ಸಮಾಜ…..

ವಿವೇಕಾನಂದ ಎಚ್.ಕೆ

” ಮೊಲೆ ಮುಡಿ ಬಂದರೆ ಹೆಣ್ಣೆಂಬರು,
ಗಡ್ಡ ಮೀಸೆ ಬಂದರೆ ಗಂಡೆಂಬರು,
ನಡುವೆ ಸುಳಿವ ಆತ್ಮನು ಗಂಡು ಅಲ್ಲ ಹೆಣ್ಣು ಅಲ್ಲ ಕಾಣ ರಾಮನಾಥ…..”

ಜೇಡರ ದಾಸಿಮಯ್ಯ…….

ಕೋಲಾರ ಜಿಲ್ಲೆಯ ಶಿಕ್ಷಕನೊಬ್ಬ ಅಲ್ಲಿನ ಮಹಿಳಾ ಹಾಸ್ಟೆಲ್ ಮತ್ತು ಇತರ ಕಡೆ ವಿದ್ಯಾರ್ಥಿನಿಯರು ಸ್ನಾನ ಮಾಡುವ ಸುಮಾರು 5000 ನಗ್ನ ದೃಶ್ಯಗಳನ್ನು ತನ್ನ ಮೊಬೈಲ್ ಅಥವಾ ಹಿಡನ್ ಕ್ಯಾಮರಾದಲ್ಲಿ ಚಿತ್ರೀಕರಿಸಿ ಸಂಗ್ರಹಿಸಿಕೊಂಡಿದ್ದಾನೆ ಎಂಬ ಸುದ್ದಿಯ ಜೊತೆಗೆ ಆ ಹುಡುಗಿಯರು ತುಂಬಾ ಗಾಬರಿಗೆ ಒಳಗಾಗಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿದೆ. ಹಾಗೆಯೇ ಕೆಲವು ವರ್ಷಗಳ ಹಿಂದೆ ಚಂಧೀಗಡದಲ್ಲಿ ವ್ಯಕ್ತಿಯೊಬ್ಬ ಇದೇ ರೀತಿ ಮಾಡಿ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ. ಉಡುಪಿಯ ಶಾಲೆಯಲ್ಲಿ ಸಹ ಒಂದು ಘಟನೆ ರಾಷ್ಟ್ರಾವ್ಯಾಪಿ ಸುದ್ದಿ ಮಾಡಿತ್ತು…..

ಅದು ನಿಜವೋ ಸುಳ್ಳೋ ಎಂಬುದು ಮುಖ್ಯವಲ್ಲ. ಏಕೆಂದರೆ ಈ ರೀತಿಯ ಉದ್ದೇಶ ಪೂರ್ವಕವಾಗಿ ಹಿಡನ್ ಕ್ಯಾಮರಾ ಬಳಸಿ ಮಹಿಳೆಯರ ಖಾಸಗಿ ಕ್ಷಣಗಳನ್ನು ಮತ್ತು ಹೆಣ್ಣು ಗಂಡಿನ ಮಿಲನವನ್ನು ಸಾಕಷ್ಟು ಮಾಡಲಾಗುತ್ತಿದೆ ಮತ್ತು ಮುಂದೆಯೂ ಮಾಡಲಾಗುತ್ತದೆ. ತಂತ್ರಜ್ಞಾನದ ಈ ಯುಗದಲ್ಲಿ ಇದನ್ನು ತಡೆಯುವುದು ತುಂಬಾ ಕಷ್ಟ ಅಥವಾ ಅಸಾಧ್ಯ. ಏಕೆಂದರೆ ಬಹುಶಃ 145 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಸುಮಾರು 100 ಕೋಟಿ ಜನರ ಬಳಿ ವಿಡಿಯೋ ಚಿತ್ರೀಕರಣ ಮಾಡಬಹುದಾದ ತಂತ್ರಜ್ಞಾನವಿದೆ. ಅದರಲ್ಲಿ ಶೇಕಡಾ .00000001% ವಿಕೃತ ವ್ಯಕ್ತಿಗಳಿದ್ದರು ಸಾಕು ಲಕ್ಷಾಂತರ ಈ ರೀತಿಯ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಬಹುದು…..

ಪ್ರತಿ ಕ್ಷಣವೂ, ಪ್ರತಿ ಕದಲುವಿಕೆಯನ್ನು, ಪ್ರತಿ ಖಾಸಗಿ ಕ್ಷಣಗಳನ್ನು ನಾವು ಎಚ್ಚರಿಕೆ ಅಥವಾ ಭಯದಿಂದ ಕಳೆಯುವುದು ಸಾಧ್ಯವೂ ಇಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ. ಏಕೆಂದರೆ ಅದು ಒಂದು ಅಕ್ರಮ ಅಥವಾ ಅನೈತಿಕ ಅಥವಾ ಕಾನೂನು ಬಾಹಿರ ಅಥವಾ ಅಶ್ಲೀಲ ಅಲ್ಲವೇ ಅಲ್ಲ…..

ಸ್ನಾನ ಮಾಡುವುದು, ಶೌಚ ಮಾಡುವುದು, ಮೈಥುನ, ಇಷ್ಟಪಟ್ಟವರೊಂದಿಗೆ ಲೈಂಗಿಕ ಕ್ರಿಯೆ ಎಲ್ಲವೂ ಸಹಜ ಸ್ವಾಭಾವಿಕ ಮತ್ತು ಸೃಷ್ಟಿಯ ಉಗಮದಿಂದಲೂ ಅಸ್ತಿತ್ವದಲ್ಲಿದೆ….

ಮೂಲತಃ ಪ್ರಕೃತಿಯೇ ಬೆತ್ತಲು ಮತ್ತು ಅದೇ ಸಹಜ ಸೌಂದರ್ಯ. ಎಲ್ಲಾ ಜೀವಿಗಳು ಸಹ ಬೆತ್ತಲೇ ಮತ್ತು ಹುಟ್ಟಿನಿಂದ ಮನುಷ್ಯ ಪ್ರಾಣಿ ಸಹ. ಆದರೆ ಎಲ್ಲೋ ನಾಗರಿಕತೆ ಎಂಬ ಭ್ರಮೆ ಬೆಳೆದಂತೆ ಅಥವಾ ಸ್ವಚ್ಚತೆಯ ಕಾರಣಕ್ಕಾಗಿ ಅಥವಾ ರಕ್ಷಣೆಯ ವಿಧಾನವಾಗಿ ಅತ್ಯಂತ ತೆಳುವಾದ ತುಂಡು ಬಟ್ಟೆಗಳು ಮೈ ಮುಚ್ಚತೊಡಗಿರಬೇಕು. ಕೊನೆಗೆ ಅದು ಗಾಳಿ, ನೀರು, ಆಹಾರದ ನಂತರದ ಬದುಕಿನ ಅತ್ಯಂತ ಅನಿವಾರ್ಯ ಅವಶ್ಯಕತೆಯಾಗಿ ಬೆಳವಣಿಗೆ ಹೊಂದಿದೆ. ಈಗ ಟೆಕ್ಸ್ ಟೈಲ್ ಟೆಕ್ನಾಲಜಿ ಮತ್ತು ಫ್ಯಾಷನ್ ಡಿಸೈನಿಂಗ್ ಒಂದು ಬೃಹತ್ ಉದ್ಯಮವಾಗಿ ಬೆಳವಣಿಗೆ ಹೊಂದಿದೆ…..

ಸಾಮಾನ್ಯ ಅರಿವಿನ ಎಲ್ಲರಿಗೂ ತಿಳಿದಿದೆ, ಬಟ್ಟೆಗಳ ಹಿಂದಿನ ಅಂಗಾಗಗಳ ಬಗ್ಗೆ. ಅದನ್ನು ಯಾರೋ ಹುಚ್ಚರು ಅಥವಾ ವಿಕೃತರು ಅಥವಾ ಕ್ರಿಮಿನಲ್ ಗಳು ‌ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರೆ ನಾವು ಮಾಡಬಹುದಾದದ್ದಾದರೂ ಏನು ಒಂದು ಪೋಲೀಸ್ ಕಂಪ್ಲೇಂಟ್ ಹೊರತುಪಡಿಸಿ…..

ಬೆತ್ತಲೇ ದೇಹದಲ್ಲಿ ‌ಯಾವುದೇ ವಿಶೇಷತೆ ಇಲ್ಲ. ನಮ್ಮ ‌ತಾಯಿ, ತಂಗಿ, ಅಕ್ಕ, ಅಜ್ಜಿ, ಹೆಂಡತಿ, ಅತ್ತಿಗೆ, ಸೊಸೆ, ಮಗಳು, ನಾದಿನಿ ಎಲ್ಲರೂ ಮತ್ತು ಎಲ್ಲರ ಬಟ್ಟೆಗಳ ಹಿಂದಿನ ‌ದೇಹ ಒಂದೇ. ಅದೇ ಮೂಳೆ, ಮಾಂಸದ ತಡಿಕೆ. ಅದನ್ನು ಹೊರತುಪಡಿಸಿ ಮತ್ತೇನೂ ಇಲ್ಲ. ಒಂದು ವೇಳೆ ಯಾರಾದರೂ ‌ಕೊಳಕು ಮನಸ್ಸಿನವರು ಅದನ್ನು ಚಿತ್ರೀಕರಿಸಿದರೆ ಅದು ಚಿತ್ರೀಕರಿಸಿದವರ ವಿಕೃತ ಮನಸ್ಸು ಮತ್ತು ಅಪರಾಧವೇ ಹೊರತು ಆ ಹೆಣ್ಣು ಮಕ್ಕಳದ್ದಲ್ಲ……

ಅಂತಹ ಸಂದರ್ಭದಲ್ಲಿ ಇಡೀ ಸಮಾಜ ಇದೊಂದು ಅಶ್ಲೀಲ, ಆಗಬಾರದ್ದು ಆಗಿ ಹೋಯಿತು ಎಂದು ಬೆತ್ತಲಾದವರನ್ನು ನೋಡದೆ ಅದನ್ನು ಸಹಜವಾಗಿ ನಿರ್ಲಕ್ಷಿಸಿ, ತಿರಸ್ಕರಿಸಿ ಮುಂದೆ ಹೋಗಬೇಕು. ಬೆತ್ತಲೇ ದೇಹದಲ್ಲಿ ಯಾವುದೇ ವಿಶೇಷತೆಯೂ ಇಲ್ಲ, ಅಶ್ಲೀಲವೂ ಇಲ್ಲ, ಕಣ್ಣು, ಕಿವಿ, ಮೂಗು, ಬಾಯಿ, ಯೋನಿ, ಶಿಶ್ನ, ಚರ್ಮಗಳು ಒಂದು ಜೀವ ಕೋಶಗಳ ರಾಶಿ ಮಾತ್ರ……

ನಮ್ಮ ಹೆಣ್ಣು ಮಕ್ಕಳು ನಮ್ಮದೇ ದೇಹದ ಮುಂದುವರಿದ ಇನ್ನೊಂದು ಭಾಗ ಮಾತ್ರ. ಬದುಕಲು ಗಾಳಿ, ನೀರು, ಆಹಾರ ಸೇವಿಸಲು ಇರುವ ರಂಧ್ರಗಳಂತೆ ಸಂತತಿಯ ಮುಂದುವರಿಕೆಗೆ ಕೆಲವು ಅಂಗಗಳಿವೆ ಅಷ್ಟೇ. ಹುಚ್ಚ ಅಥವಾ ಹುಚ್ಚಿ ಅದನ್ನು ಚಿತ್ರೀಕರಿಸಿದರೆ ಅದು ಹುಚ್ಚರ ಸಮಸ್ಯೆ. ನಾವ್ಯಾಕೇ ತಲೆಕೆಡಿಸಿಕೊಳ್ಳಬೇಕು…..

ಕೋಲಾರ ಅಥವಾ ಚಂಡೀಗಢ ಅಥವಾ ಉಡುಪಿ ರೀತಿಯ ಘಟನೆಗಳು ನಾಳೆ ನಮ್ಮ ನಡುವೆಯೂ ನಡೆಯಬಹುದು. ಆದ್ದರಿಂದ ಅದರ ಬಗ್ಗೆ ಒಂದು ಜಾಗೃತಿ ಮತ್ತು ಎಚ್ಚರಿಕೆ ಇರಲಿ. ಆದರೆ ಅದೇ ಸಮಯದಲ್ಲಿ ವಿಕೃತರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಪರಿಹಾರವೆಂದರೆ ಪ್ರಬುದ್ಧರ ಸಂಖ್ಯೆಯನ್ನು ಹೆಚ್ಚು ಮಾಡುವುದು. ಆಗ ಈ ರೀತಿಯ ಕೊಳಕರಿಗೆ ಅವಕಾಶವೇ ಇರುವುದಿಲ್ಲ. ಇದ್ದರೂ ಅವರನ್ನು ಹುಚ್ಚರೆಂದೇ ಪರಿಗಣಿಸಬೇಕು…..

12 ನೆಯ ಶತಮಾನದಲ್ಲಿಯೇ ವಚನಕಾರ ದೇವರ ದಾಸಿಮಯ್ಯ ಹೆಣ್ಣು ಗಂಡಿನ ಸಹಜತೆಯ ಬಗ್ಗೆ ಅಷ್ಟೊಂದು ಆಳವಾಗಿ, ಸಹಜವಾಗಿ, ಪ್ರಕೃತಿಯ ಶಿಶುಗಳ ಬಗ್ಗೆ ವರ್ಣಿಸಿರುವಾಗ ಈ ಆಧುನಿಕ ಕಾಲದಲ್ಲಿ ನಮ್ಮ ಮಡಿವಂತಿಕೆ ಒಂದು ಮೂರ್ಖತನ ಎನಿಸುವುದಿಲ್ಲವೇ…..

ಕೊನೆಯದಾಗಿ
ನಮ್ಮ ದೇಹದ ಯಾವುದೇ ಅಂಗಗಳು ಗುಪ್ತವಲ್ಲ.
ಅದರ ಚಟುವಟಿಕೆಗಳು ಅಶ್ಲೀಲವಲ್ಲ, ಸಹಜ ಸ್ವಾಭಾವಿಕ…..

ಆದ್ದರಿಂದ ಕೆಲವು ವಿಕೃತರ ಕ್ರಿಮಿನಲ್ ಚಟುವಟಿಕೆಗಳನ್ನು ಪೋಲೀಸರ ವಶಕ್ಕೆ ನೀಡಿ ನಾವು ನಮ್ಮ ನಮ್ಮ ಪ್ರಬುದ್ಧ ಕಾಯಕದಲ್ಲಿ ತೊಡಗಿಸಿಕೊಳ್ಳೋಣ. ಹುಚ್ಚರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!