Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ನೆಲದಲ್ಲಿ ಕಳೆಗುಂದಿತೇ ಕಾವೇರಿ ಹೋರಾಟ…?

ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದ್ದು, ಅದರಂತೆ ಸರ್ಕಾರ ನೀರು ಹರಿಸುತ್ತಿದೆ. ಕಳೆದ ಮಂಗಳವಾರದಿಂದ 15 ದಿನಗಳ ಕಾಲ ನಿತ್ಯ 5000 ಕ್ಯೂಸೆಕ್ (ಅಂದಾಜು ಅರ್ಧ ಟಿಎಂಸಿ ಅಡಿ) ನೀರು ತಮಿಳುನಾಡಿಗೆ ಹರಿದು ಹೋಗಲಿದೆ. ಒಟ್ಟಾರೆ 7 ಟಿಎಂಸಿಗೂ ಅಧಿಕ ನೀರು ತಮಿಳುನಾಡಿಗೆ ಹರಿಯಲಿದೆ. ಅಲ್ಲಿಗೆ 101 ಅಡಿ ಇರುವ ಕನ್ನಂಬಾಡಿ ಜಲಾಶಯ ಕೆಲವೇ ದಿನಗಳಲ್ಲಿ 90 ಅಡಿಗೆ ಕುಸಿಯಲಿದೆ. ಪರಿಸ್ಥಿತಿ ಈ ರೀತಿ ಗಂಭೀರವಾಗಿದ್ದರೂ ಕೂಡ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಕಿಚ್ಚು ದೊಡ್ಡ ಮಟ್ಟದಲ್ಲಿ ಎದ್ದಿಲ್ಲ.

ಈ ಹಿಂದೆ ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಾಗಲೆಲ್ಲ ಜಿಲ್ಲೆಯಲ್ಲಿ ಕಾವೇರಿ ಹೋರಾಟ ಭುಗಿಲೇಳುತ್ತಿತ್ತು. ಜಿ.ಮಾದೇಗೌಡರ ನೇತೃತ್ವದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೀಡಿದ ಕರೆಗೆ ಜನರು ಪಕ್ಷಾತೀತವಾಗಿ ಸ್ಪಂದಿಸಿ ಹೋರಾಟಕ್ಕೆ ಧುಮುಕುತ್ತಿದ್ದರು. ವಿವಿಧ ಜನಪರ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗುತ್ತಿದ್ದವು. ಆದರೆ ಅವರು ನಿಧನರಾಗಿ ಎರಡು ವರ್ಷ ಕಳೆದಿದ್ದು, ಅವರ ನಿಧನದೊಂದಿಗೆ ಕಾವೇರಿ ಹೋರಾಟವು ಕಳೆ ಗುಂದಿದೆ ಎಂಬ ಭಾವನೆ ಜಿಲ್ಲೆಯ ಜನರ ಮನದಲ್ಲಿ ದಟ್ಟವಾಗಿದೆ. ಮಳೆ ಕೊರತೆಯ ನಡುವೆಯೂ ಇದುವರೆಗೆ ತಮಿಳುನಾಡಿಗೆ 12ರಿಂದ 13 ಟಿಎಂಸಿ ನೀರು ಹರಿದು ಹೋಗಿದೆ. ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಎದುರು ಹಾಕಿಕೊಂಡು ಬೈಸಿ ಕೊಳ್ಳಲು ನಾವು ಸಿದ್ಧರಿಲ್ಲ ಎಂದು ಜಲ ಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಒಂದು ವೇಳೆ ಜಿ.ಮಾದೇಗೌಡರು ಬದುಕಿದ್ದರೆ ಡಿ.ಕೆ. ಶಿವಕುಮಾರ್ ಅವರಿಗೆ ಸರಿಯಾಗಿ ತಿರುಗೇಟು ನೀಡುತ್ತಿದ್ದರು.

nudikarnataka.com
ಜಿ.ಮಾದೇಗೌಡರಿಲ್ಲದ ಪ್ರಸ್ತುತ ಕಾವೇರಿ ಹೋರಾಟ

ಈ ಹಿಂದೆ ಹಲವು ಮುಖ್ಯಮಂತ್ರಿಗಳು ತಮಿಳುನಾಡಿಗೆ ನೀರು ಹರಿಸಿದಾಗ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ನೀರು ಹರಿಸಿದರೆ ರಕ್ತ ಕುಡಿಯುವೆ,ರಾಜೀನಾಮೆ ಕೊಟ್ಟು ನಮ್ಮೊಡನೆ ಬಂದು ಕುಳಿತುಕೊಳ್ಳಿ ಎಂದೆಲ್ಲಾ ಮಾದೇಗೌಡರು ಅಬ್ಬರಿಸುತ್ತಿದ್ದರು.ಈ ಹಿಂದೆ ಎಸ್‌. ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬಂದು ಕುಳಿತುಕೋ ಎಂದು ಗದರಿದ್ದರು.

ಆದರೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಯಲ್ಲಿರುವ ಸದಸ್ಯರಲ್ಲಿ ಪ್ರಮುಖರು ಕಾಂಗ್ರೆಸ್ ಪಕ್ಷದಲ್ಲಿರುವ ಕಾರಣಕ್ಕೆ ಜಿ. ಮಾದೇಗೌಡರಂತೆ ಸರ್ಕಾರದ ವಿರುದ್ಧ ಗುಡುಗುವ ಚೈತನ್ಯ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿ ಕೆ ಆರ್‌ಎಸ್‌ 113 ಅಡಿಗೆ ಬಂದು ನಿಂತ ನಂತರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಮುಂದಿನ ಹಂಗಾಮಿನವರೆಗೂ ಭತ್ತದ ನಾಟಿ ಬೇಡ ಎಂದು ಹೇಳಿಕೆ ನೀಡಿದರು‌.ಆದರೆ ಸಚಿವರ ಹೇಳಿಕೆಯನ್ನು ಜಿಲ್ಲೆಯ ಹೋರಾಟಗಾರರು ಗಟ್ಟಿ ದನಿಯಲ್ಲಿ ಖಂಡಿಸದೆ ಮೌನ ವಹಿಸಿದರು.ಇದುವರೆಗೂ ಕಾವೇರಿ ಹೋರಾಟದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯೇ ಶಕ್ತಿಯಾಗಿತ್ತು. ಆದರೆ ಸಮಿತಿಯಲ್ಲಿ ಕೆಲ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾದ್ದರಿಂದ,ಕಾವೇರಿ ನೀರು ತಮಿಳುನಾಡಿಗೆ ಹರಿಸಿದರೂ ದೊಡ್ಡ ಮಟ್ಟದಲ್ಲಿ ತೀವ್ರವಾಗಿ ಖಂಡಿಸದೆ,ಒಂದು ಹೇಳಿಕೆ ನೀಡಿ ಸುಮ್ಮನಾದರು ಎಂಬುದು ಸಮಿತಿಯಲ್ಲಿರುವ ಇತರ ಸದಸ್ಯರ ನೋವಿನ ಮಾತು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೆ.ಆರ್.ಎಸ್ ನಲ್ಲಿ ಕಾವೇರಿ ಹೋರಾಟ

ವಾರದ ಹಿಂದಷ್ಟೇ ಬೆಂಗಳೂರಿನ ಕೆಲವು ಸಂಘಟನೆಗಳ ಮುಖಂಡರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ,ಕನ್ನಂಬಾಡಿ ಜಲಾಶಯಕ್ಕೆ ಮುತ್ತಿಗೆ ಹಾಕಿ ಬಂಧನಕ್ಕೊಳಗಾಗಿದ್ದರು.ಇದೊಂದು ನಾಟಕೀಯ ಪ್ರತಿಭಟನೆ ಎಂಬಂತೆ ಬಿಂಬಿತವಾಯಿತೆನ್ನುವುದು ಮಂಡ್ಯದ ಕೆಲ ಸಂಘಟನೆಗಳ ಮುಖಂಡರ ಅಸಮಾಧಾನದ ಮಾತು.ಇನ್ನೂ ರೈತಸಂಘಟನೆ ಒಡೆದು ಹಲವು ಭಾಗಗಳಾಗಿದ್ದು,ಬಿಡಿ ಬಿಡಿಯಾಗಿ ಹೋರಾಟ ನಡೆಸುತ್ತಿದ್ದು,ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ.ಈ ಹಿಂದೆ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯನವರು ದೊಡ್ಡ ಸಂಖ್ಯೆಯಲ್ಲಿ ರೈತರನ್ನು ಒಗ್ಗೂಡಿಸಿ ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ಸವಾಲು ಹಾಕುತ್ತಿದ್ದರು.ಆದರೆ ಇಂದು ಕಾಂಗ್ರೆಸ್ ಪಕ್ಷದ ಸಹಕಾರದಿಂದಲೇ ಗೆದ್ದು ಬಂದಿರುವ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ದ್ವನಿಯಲ್ಲಿ ಮಾತನಾಡುವುದನ್ನು ಕಳೆದು ಕೊಂಡಿದ್ದಾರೆ.ರೈತಸಂಘ ಕೂಡ ಕನ್ನಂಬಾಡಿ ಅಣೆಕಟ್ಟೆಯ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ನೀರು ಮಾತ್ರ ತಮಿಳುನಾಡಿಗೆ ಹರಿಯುತ್ತಲೇ ಇದೆ.

ಜಿ.ಮಾದೇಗೌಡರ ನಿಧನ,ಜಿಲ್ಲಾ ಹಿತರಕ್ಷಣಾ ಸಮಿತಿಯ ಸದಸ್ಯರ ಕಾಂಗ್ರೆಸ್ ಹಿನ್ನಲೆ,ಸಂಘಟನೆಗಳ ಸದಸ್ಯರಲ್ಲಿ ಹೋರಾಟದ ಕಿಚ್ಚು ಇಲ್ಲದಿರುವುದು.ಇವೇ ಹಲವಾರು ಕಾರಣಗಳಿಂದ ಕಾವೇರಿ ಹೋರಾಟ ಕಳೆಗುಂದಿದೆ ಎಂಬ ಮಾತು ಜಿಲ್ಲೆಯಾದ್ಯಂತ ಜೋರಾಗಿಯೇ ಕೇಳಿ ಬರುತ್ತಿದೆ.

ಇಂದಿನಿಂದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸದಸ್ಯರು ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಇಂದು ನಡೆದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿದ್ದಾರೆ. ಆದರೆ ಈ ಪ್ರತಿಭಟನೆ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!