Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಶ್ರಮಿಕ ನಿವಾಸಿಗಳ ಸಮಸ್ಯೆಗಳ ಕುರಿತು ತ್ವರಿತ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಡ್ಯನಗರ ಶ್ರಮಿಕ (ಸ್ಲಂ) ನಿವಾಸಿಗಳ ಸಮಸ್ಯೆಗಳನ್ನು ಬಗೆ ಹರಿಸಲು ಅಧಿಕಾರಿಗಳು ಬದ್ದತೆಯಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ಶ್ರಮಿಕ ಜನರ ಭೂಮಿ ವಸತಿ ಹಕ್ಕುಪತ್ರಗಳ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿThe problem of industrious residents ಮಾತನಾಡಿದ ಅವರು, ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ,  ತಾವು ಮಾಡಿರುವ ಅದೇಶಗಳನ್ನು ಕಾರ್ಯರೂಪಕ್ಕೆ ತನ್ನಿ ಎಂದು ಎಚ್ಚರಿಕೆ ನೀಡಿದರು.

ಮಂಡ್ಯ ಲ್ಯಾಂಡ್ ಅರ್ಮಿ ಶ್ರಮಿಕನಗರವನ್ನು ಸ್ಲಂ ಎಂದು ಘೋಷಣೆ ಮಾಡಲು ಸರ್ಕಾರಿ ಮಾಲಿಕತ್ವ ಅಥವಾ ಖಾಸಗಿ ಮಾಲಿಕತ್ವ ಒಡತನದಲ್ಲಿದ್ದೀಯ ಎಂದು ದಾಖಲೆಗಳನ್ನು ಕೂಡಲೇ ಒದಗಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಾಳಪ್ಪ ಬಡಾವಣೆ ಸರ್ಕಾರದ ಮಾಲಿಕತ್ವದಲ್ಲಿದ್ದು, ಕೆಲವು ಇಲಾಖೆಗಳಿಗೆ ಜಾಗ ಮಂಜೂರಾತಿ ಆಗಿರುವ ವಿವರವನ್ನು ಪಡೆದು ಮಂಜೂರಾತಿ ಹಾಗಿರುವ ಜಾಗವನ್ನ ರದ್ದು ಪಡಿಸಿ ಸ್ಲಂ ಬೋರ್ಡ್ ಅವರಿಗೆ ಹಸ್ತಾಂತರ ಮಾಡಿ ಹಕ್ಕುಪತ್ರ ನೀಡಲು ತಕ್ಷಣವೇ ಕ್ರಮ ವಹಿಸುವಂತೆ ತಹಶಿಲ್ದಾರ್ ಅವರಿಗೆ ಅದೇಶ ನೀಡಿದರು.

ಮಂಡ್ಯ ಗುರುಮಠ ಸ್ಲಂ 2.5 ಎಕರೆ ಘೋಷಿತ ಕೊಳಚೆ ಪ್ರದೇಶದಲ್ಲಿ ಜನರು ವಾಸವಿದ್ದು ಈ ಜಾಗವು ಸರ್ಕಾರಿ ಕಟ್ಟೆ ಎಂದು ಇರುವುದರಿಂದ ಈ ಜಾಗವು ಈ ಸಂದರ್ಭದಲ್ಲಿ ಸರ್ಕಾರಿ ಕಟ್ಟೆಯಾಗಿ ಇಲ್ಲದಿರುವ ಕಾರಣ ಇದನ್ನು ಜನವಸತಿ ಪ್ರದೇಶವೆಂದು ಮಾಡಿ, ಕಟ್ಟೆ ಎಂದು ಇರುವುದನ್ನು ರದ್ದು ಪಡಿಸಿ ಸ್ಲಂ ಬೋರ್ಡ್ ಗೆ ಹಸ್ತಾಂತರ ಮಾಡಲು ಇವತ್ತೆ ಕ್ರಮ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಜನರಿಗೆ ಹಕ್ಕುಪತ್ರ ನಿಡಲು ಸ್ಲಂ ಬೊರ್ಡ್ ಮತ್ತು ತಹಶಿಲ್ದಾರ್ ರವರಿಗೆ ಇವತ್ತೆ ಈ ಕೆಲಸ ಮಾಡಲು ಸೂಚಿಸಿದ್ದರು

ನ್ಯೂ ತಮಿಳು ಕಾಲೊನಿಯಲ್ಲಿ ಹಕ್ಕುಪತ್ರಗಳು ಹಂಚಿಕೆ ಮಾಡಲು ರೆಡಿ ಇದ್ದು ಶಾಸಕರು ದಿನಾಂಕ ನಿಗಧಿ ಮಾಡಿದರೆ ಹಕ್ಕುಪತ್ರ ನೀಡುತ್ತೇವೆಂದು ಸ್ಲಂ ಬೋರ್ಡ್‌ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ  ಜಿಲ್ಲಾಧಿಕಾರಿಗಳು, ಶಾಸಕರ ಬಳಿ ನಾನೆ ಖುದ್ದು ಮಾತನಾಡಿ ಸಚಿವರ ದಿನಾಂಕ ನಿಗಧಿಪಡಿಸಿ ಚುನಾವಣಾ ನೀತಿ ಸಂಹಿತೆ  ಜಾರಿಯಾಗುವ ಮೊದಲೇ ಹಕ್ಕು ಪತ್ರ ನೀಡುವ ವ್ಯವಸ್ಥೆ ಮಾಡುತ್ತೇನೆಂದು ತಿಳಿಸಿದರು.

ಇಂದಿರಾ ಬಡಾವಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲು 4 ಎಕರೆ ಜಾಗವನ್ನು ತುರ್ತಾಗಿ ಹುಡುಕಲು ಅಧಿಕಾರಿಗಳಿಗೆ ಸೂಚಿಸಿದರು. ಕಾಳಿಕಾಂಭ ಸ್ಲಂ ನಲ್ಲಿ ಅಕ್ರಮ ಸಮುದಾಯ ಭವನ ನಿರ್ಮಾಣ ಹೇಗೆ ಆಗಿದೆ, ಈ ಜಾಗದ ಮಾಲಿಕತ್ವ ಮೂಲ ಯಾರು ಮತ್ತು ಕಟ್ಟಡ ಕಟ್ಟಲು ಅನುಮತಿ ನೀಡಿರುವ ಬಗ್ಗೆ ಸಂಪೂರ್ಣ ದಾಖಲೆಗಳನ್ನು ನಗರಸಭೆ ಅಯುಕ್ತರಿಗೆ ನೀಡುವಂತೆ ಸೂಚಿಸಿದರು.

ಗಾಡಿ ಕಾರ್ಖಾನೆ ಶ್ರಮಿಕ ನಗರ ಜಾಗವನ್ನು ನಗರಸಭೆಗೆ ಹಸ್ತಾಂತರ ಮಾಡಲು ಸ್ಲಂ ಬೋರ್ಡ್ ಗೆ ಸೂಚನೆ ನೀಡಿದ್ದು, 12 ನಿವೇಶನಗಳನ್ನು ಅರ್ಹ ಪಲನುಭವಿಗಳಿಗೆ ಗುರುತಿಸಿ ಹಂಚಿಕೆ ಮಾಡಿ ಎಂದು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ಸ್ಲಾಟರ್ ಹೌಸ್ ಈ ಜಾಗವು ಹಲವು ವರ್ಷಗಳಿಂದ ಗೊಂದಲದಲ್ಲಿದ್ದು, ಖಾಸಗಿ ಮಾಲಿಕತ್ವದಲ್ಲಿ ಅಥವಾ ಸರ್ಕಾರದ ಮಾಲಿಕತ್ವದಲ್ಲಿ 5 ಕುಟುಂಬಗಳು ವಾಸವಿದೆಯೇ ಸರ್ವೆ ಮಾಡಿ ನಂತರ 5 ಕುಟುಂಬಗಳಿಗೆ ಸರ್ಕಾರದ ಜಾಗವಾದರೆ ಅಲ್ಲೇ ಹಕ್ಕುಪತ್ರ ನೀಡುವುದು, ಇಲ್ಲವಾದರೆ ಗಾಡಿ ಕಾರ್ಖಾನೆ ಶ್ರಮಿಕ ನಗರದಲ್ಲಿ ನೀಡುವಂತೆ ತಿಳಿಸಿದರು.

ಕುರುಬರ ಹಾಸ್ಟೆಲ್ ವಿನಾಯಕ ಬಡಾವಣೆಯ ರೈಲ್ವೆ ಹಳಿ ಪಕ್ಕ ಇರುವ 21 ಪೌರ ಕಾರ್ಮಿಕರ ಕುಟುಂಬಗಳಿಗೆ ಮತ್ತು ಸಿಹಿನಿರು ಕೊಳದ ಹತ್ತಿರವಿರುವ 12 ಕುಟುಂಬಗಳಿಗೂ ಬೇರೆ ಕಡೆ ಜಾಗ ಗುರುತಿಸುವಂತೆ ತಿಳಿಸಿದ್ದಾರೆ. ಬೇರೆ ಕಡೇ ಒಂದು ಎಕರೆ ಜಾಗವಿದೆ ಎಂದು ಗ್ರಾಮ ಲೆಕ್ಕಿಗರೂ ತಿಳಿಸಿದ್ದು, ಪರಿಶೀಲನೆ ಮಾಡಿ ಜಾಗವನ್ನು ಕಾಯ್ದಿರಿಸುವಂತೆ ತಿಳಿಸಿದರು.

ಮದ್ದೂರು ತಮಿಳು ಕಾಲೋನಿಯ 2.5 ಎಕರೆ ಜಾಗವನ್ನು ಉಪವಿಭಾಗಾಧಿಕಾರಿ, ಸರ್ಕಾರಕ್ಕೆ ಹಸ್ತಾಂತರ ಮಾಡುತ್ತೇನೆಂದು ತಿಳಿಸಿದರು, ಅದಕ್ಕೆ ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹಲವು ವರ್ಷಗಳಿಂದ ಬಡಜನರು ಸ್ವಂತ ಜಾಗವಿಲ್ಲದೇ ಕಠಿಣ ಪರಿಸ್ಥಿತಿಯಲ್ಲಿ ಇರುವುದರಿಂದ ಈ ಜಾಗವನ್ನು ವಶಕ್ಕೆ ಪಡೆದು, ಶ್ರಮಿಕರಿಗೆ ಮೀಸಲು ಇಡುತ್ತೇವೆಂಬ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದರು.

ಮಂಡ್ಯ ಮಿಮ್ಸ್ ಸಮೀಪದ ತಮಿಳು ಕಾಲೋನಿ ಅಕ್ರಮ ಒತ್ತುವರಿಯ ಜಾಗವನ್ನು ಜನರ ಮನವೊಲಿಸಿ ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯ ಪಡೆದು ನಂತರ ಅವರನ್ನು ಹೊಸದಾಗಿ ಕಟ್ಟಿರುವ ಮನೆಗಳಿಗೆ ಹಸ್ತಾಂತರ ಮಾಡೋಣ, ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ತಿಳಿಸಿದರು.

ಹೊನ್ನಯ್ಯ ಬಡಾವಣೆ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನಗರಸಭೆ ವತಿಯಿಂದ 1994ರಲ್ಲೇ  ನೀಡಿದ್ದು.  ಅವರಿಗೆ ನಗರಸಭೆಯಿಂದ ಖಾತೆ ಮಾಡಿಕೊಡಲು ಮತ್ತು ಮುಂದಿನ ಕೆಲವೇ ದಿನಗಳಲ್ಲಿ ಒಳ ಚರಂಡಿ ವ್ಯವಸ್ಥೆಯನ್ನು ಮಾಡಿಕೊಡಲು ಸ್ಲಂ ಬೋರ್ಡ್ ಮತ್ತು ನಗರಸಭೆ ಅಯುಕ್ತರಿಗೆ ತಿಳಿಸಿದರು.

ಶ್ರಮಿಕ ನಗರಗಳಲ್ಲಿ ಹೊಸ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು 20 ಎಕರೆ ಜಾಗವನ್ನು ಮಂಡ್ಯ ತಾಲೂಕಿನಿಂದ 5ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಗುರುತಿಸಲು ಸೂಚನೆ ನೀಡಿದ್ದು, ಇದರ ಪ್ರಕ್ರಿಯೆಯನ್ನು ಇಂದಿನಿಂದಲೇ ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಂಡ್ಯ ತಹಶಿಲ್ದಾರ್, ನಗರ ಸಭೆ ಆಯುಕ್ತರು, ಸ್ಲಂ ಬೋರ್ಡ್ ಅಧಿಕಾರಿಗಳು ಸೇರಿದಂತೆ ಕರ್ನಾಟಕ ಜನಶಕ್ತಿಯ ಸಿದ್ದರಾಜು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!