Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೋರಾಟ ತೀವ್ರಗೊಳಿಸಲು ರೈತ ಹಿತರಕ್ಷಣಾ ಸಮಿತಿ ನಿರ್ಧಾರ- ಸಿ.ಎಸ್.ಪುಟ್ಟರಾಜು

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯವನ್ನು ಖಂಡಿಸಿ ಮಂಡ್ಯ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಹೋರಾಟ ತೀವ್ರಗೊಳಿಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರ್ಣಯ ಕೈಗೊಂಡಿದೆ.

ಈ ಕುರಿತು ಮಂಡ್ಯದಲ್ಲಿ ನಡೆಯುತ್ತಿರುವ ನಿರಂತರ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ಕಾವೇರಿ ನದಿ ನೀರು ಪ್ರಾಧಿಕಾರದ ತೀರ್ಪು ಕಾವೇರಿ ನದಿ ಪಾತ್ರದ ರೈತರಿಗೆ ಮರಣಶಾಸನವಾಗಿದೆ. ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ, ಇದನ್ನು ಖಂಡಿಸಿ ಎಲ್ಲಾ ತಾಲ್ಲೂಕಿಗಳಲ್ಲಿ ಹಿತರಕ್ಷಣಾ ಸಮಿತಿಗಳನ್ನು ರಚಿಸಿ, ಶಾಸಕರು ಹಾಗೂ ಮಾಜಿ ಶಾಸಕರ ನೇತೃತ್ವದಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸಲು ಸಮಿತಿ ನಿರ್ಧರಿಸಿದೆ ಎಂದರು.

ಪ್ರಾಧಿಕಾರದ ತೀರ್ಪು ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವನ್ನು ಅಳಿಸಿ ಹಾಕುವಂತಿದೆ. ನಮಗೆ ಕುಡಿಯಲು ನೀರೇ ಇಲ್ಲದಾಗ, ನೆರೆ ರಾಜ್ಯಕ್ಕೆ ಹೇಗೆ ನೀರು ಬಿಡಲು ಸಾಧ್ಯ ? ಈ ಆದೇಶ ಧಿಕ್ಕರಿಸಿ ರಾಜ್ಯ ಸರ್ಕಾರ ನಿಲುವು ತಾಳಬೇಕು. ನಾವು ಎಂದಿಗೂ ರಾಜ್ಯ ಸರ್ಕಾರದ ಜೊತೆ ಇರುತ್ತೇವೆ ಎಂದು ಹೇಳಿದರು.

ಚುನಾವಣೆಗೆ ಹೋದರೆ ಕಾವೇರಿ ಆರ್ಶೀವಾದ ಬೇಕೇ ಬೇಕು 

ಕಾವೇರಿ ಮಾತೆಯ ಆಶೀರ್ವಾದ ಇಲ್ಲದಿದ್ದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗದು, ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ನೆರವಿಗೆ ಧಾವಿಸಬೇಕು ಎಂದು ಧನಗೂರು ಮಠದ ಷಡಕ್ಷರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಜಿಲ್ಲಾ ರೈತ ಹಿತರಕ್ಷಣ ಸಮಿತಿಯ ನಿರಂತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನೆಚ್ಚರಿಕೆ ವಹಿಸದೆ ಕಡೆಗಣಿಸಿದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ, ಅಧಿಕಾರದ ಹುಮ್ಮಸ್ಸಿನಲ್ಲಿರುವ ಅವರಿಗೆ ಕಾವೇರಿ ಮಾತೆಯ ಆಶೀರ್ವಾದ ಬೇಕೇ ಬೇಕಾಗುತ್ತದೆ. ಹಾಗಾಗಿ ರೈತರ ಹಿತ ಕಾಯಲು ದೃಢ ನಿರ್ಧಾರ ಮಾಡಬೇಕೆಂದರು.

ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸುಗ್ರೀವಾಜ್ಞೆ ಜಾರಿಗೆ ತಂದು ರೈತರ ಕಾಯಲು ಮುಂದಾಗಿದ್ದರು, ಈಗಲೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ನಿರ್ಧಾರಕ್ಕೆ ಮುಂದಾಗಬೇಕು, ಕೇಂದ್ರದ ಬಳಿಗೆ ತುರ್ತಾಗಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯಬೇಕು ಎಂದರು.

ಲಿಂಗಪಟ್ಟಣದ ಓಂಕಾರೇಶ್ವರ ಸ್ವಾಮಿ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಡೆಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆ ರಾಜ್ಯದ ಹಿತ ಕಾಯಲು ಮುಂದಾಗಿರುವುದು ಸರಿಯಲ್ಲ, ಕಾವೇರಿ ಉಳಿವಿಗಾಗಿ ಕರುನಾಡು ಮಿಡಿಯುತ್ತಿದೆ. ಕದ್ದು ಮುಚ್ಚಿ ನೀರು ಬಿಡುವ ಮೂಲಕ ಜಲಾಶಯ ಬರಿದು ಮಾಡಬೇಡಿ, ದೃಢ ನಿರ್ಧಾರದ ಮೂಲಕ ನೀರು ಉಳಿಸಲು ಮುಂಡಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತರಕ್ಷಣಾ ಸಮಿತಿಯ ಮುಖಂಡರಾದ ಸುನಂದ ಜಯರಾಂ, ,ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಸಿದ್ದರಾಮಯ್ಯ ಗೌಡ,ಕನ್ನಡ ಸೇನೆ ಮಂಜುನಾಥ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!