Thursday, September 19, 2024

ಪ್ರಾಯೋಗಿಕ ಆವೃತ್ತಿ

ತೇಜಸ್ವಿ ಸೂರ್ಯ ಸಂಸದನಾಗಿರುವುರಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ : ಪ್ರಸನ್ನ ಎನ್. ಗೌಡ ತಿರುಗೇಟು

ರೈತರ ಸಾಲಮನ್ನಾದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿರುವ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸರ್ವೋದಯ ಕರ್ನಾಟಕ ಪಕ್ಷದ ಮುಖಂಡ ಪ್ರಸನ್ನ ಎನ್. ಗೌಡ, ಸಾಲಮನ್ನಾದಿಂದ ಉಪಯೋಗವಿಲ್ಲ ಎನ್ನುವುದಾದರೂ ತೇಜಸ್ವಿ ಸೂರ್ಯ ಸಂಸದನಾಗಿರುವುರಿಂದಲೂ ದೇಶಕ್ಕೆ ಯಾವುದೇ ಉಪಯೋಗವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯ ರೈತರ ಬಗ್ಗೆ ಮಾತನಾಡುವುದು, ವಿಮಾನದ ತುರ್ತು ಬಾಗಿಲು ತೆರೆದಂತಲ್ಲ. ಕರೋನಾ ಸಂದರ್ಭದಲ್ಲಿ ನೀವು ಹಾಕಿರುವ ಲಕ್ಷಾಂತರ ಕೋಟಿ ಬಂಡವಾಳ ಮಕಾಡೆ ಮಲಗಿದ್ದಾಗ, ಇಡೀ ದೇಶದಲ್ಲಿ ಕೃಷಿ ಚಟುವಟಿಕೆ ಮಾತ್ರ ನಡೆಯುತ್ತಿದ್ದು ಎಂಬ ಕನಿಷ್ಠ ಜ್ಞಾನವು ನಿಮಗಿಲ್ಲ. ನಿಮಗೆ ರೈತರ ಕಷ್ಟ ಸುಖದ ಅರಿವಿಲ್ಲ, ನಿಮ್ಮ ಎದೆಯಲ್ಲಿ ಪ್ರೀತಿ ಎಂಬ ಎರಡಕ್ಷರ ಇದ್ದಿದ್ರೆ,ಒಲವಿದ್ದಿದ್ದರೆ  ನೀವು ಇಂತಹ ಮಾತನ್ನಾಡುತ್ತಿರಲಿಲ್ಲ ಎಂದು ಖಂಡಿಸಿದರು.

ರೈತರ ಸಂಕಷ್ಟಗಳ ಬಗ್ಗೆ ನಿಮಗೆ ಅರಿವಿದೆಯೇ ?

ನಮ್ಮದು ಹಳ್ಳಿಗಳು ಪ್ರಧಾನವಾಗಿರುವ ರಾಷ್ಟ್ರ, ಬಹುತೇಕ ಹಳ್ಳಿಗಳಿಂದ ಕೂಡಿರುವ ನಮ್ಮ ದೇಶದಲ್ಲಿ ಬಹುತೇಕ ಆರ್ಥಿಕತೆ ನಿಂತಿರುವುದು ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಮೇಲೆ ಎಂಬುದು ನಿಮಗೆ ತಿಳಿದಿಲ್ಲವೇ ? ಕೃಷಿಯಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಸರಮಾಲೆ ಬಗ್ಗೆ ನಿಮಗೆ ಅರಿವಿದೆಯೇ ? ಈ ಬಾರಿಯ ಬಜೆಟ್ ನಲ್ಲಿ ನಿಮ್ಮದೇ ಮನಸ್ಥಿತಿ ಹೊಂದಿರುವ ಕೇಂದ್ರ ಸರ್ಕಾರವು ರೈತರಿಗೆ ಸಿಗಬೇಕಾದ ಪಾಲನ್ನು ಕಡಿತಗಳಿಸಿ ಮೊದಲೇ ಸಂಕಷ್ಟದಲ್ಲಿರುವ ರೈತರ ಮೇಲೆ ಬರೆ ಎಳೆ ಎಳೆದಿದೆ. ರೈತರು ಯಾವತ್ತು ಸರ್ಕಾರಕ್ಕೆ ಬಾಕಿದಾರರಲ್ಲ, ಸರ್ಕಾರವೇ ರೈತರಿಗೆ ಬಾಕಿದಾರ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಲಿ

ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೃಷಿ ಕ್ಷೇತ್ರಕ್ಕೆ 20 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಹೇಳಿಗೊಂಡಿದ್ದಾರೆ. ಆದರೆ ಒಟ್ಟು ಕೇಂದ್ರದ ಬಜೆಟ್ ಗಾತ್ರವೇ 43 ಲಕ್ಷ ಕೋಟಿ ರೂ.ಗಳು. ಹೀಗಿರುವಾಗ 20 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲು ಹೇಗೆ ಸಾಧ್ಯ ? ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಸರ್ವೋದಯ ಕರ್ನಾಟಕ ಪಕ್ಷದ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಒತ್ತಾಯಿಸಿದರು.

ಸಾವಿರಾರು ಕೋಟಿ ರೂ. ಹೊತ್ತುಕೊಂಡು ಹೋದವರ ಬಗ್ಗೆ ಏಕೆ ಮಾತನಾಡುತ್ತಿಲ್ಲ

ದೇಶದಲ್ಲಿ ರೈತರು ಬೆಳೆದ ಬೆಲೆಗಳಿಗೆ ವೈಜ್ಞಾನಿಕ ಬೆಲೆ ನೀಡಿದ್ದರೆ ರೈತರಿಗೆ ಸಾಲಮನ್ನಾದ ಅವಶ್ಯಕೆ ಇರಲಿಲ್ಲ, ನಿಮ್ಮ ಸರ್ಕಾರ ವೈಜ್ಞಾನಿಕ ಬೆಲೆ ನೀಡದ ಕಾರಣ ನಾವು ಸಾಲಮನ್ನಾ ಸೇರಿದಂತೆ ಇತರೆ ಸವಲತ್ತುಗಳನ್ನು ಕೇಳುತಿದ್ದೇವೆ. ವಿಜಯ ಮಲ್ಯ, ನೀರವ್ ಮೋದಿ ಅಂತಹವರು ಸಾವಿರಾರು ಕೋಟಿಗಳನ್ನು ವಂಚಿಸಿ ದೇಶವನ್ನು ಬಿಟ್ಟು ಓಡಿ ಹೋದಾಗ ನೀವೇನು ಮಾಡುತ್ತಿದ್ದೀರಿ ? ಮೊದಲು ಅದರ ಬಗ್ಗೆ ಮಾತನಾಡಿ. ಅದಾನಿ, ಅಂಬಾನಿಗಳು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಮೊದಲು ಆ ವಿಚಾರಗಳ ಬಗ್ಗೆ ಮಾತನಾಡಿ, ಅದನ್ನು ಬಿಟ್ಟು ರೈತರ ಬಗ್ಗೆ ಉಡಾಫಯಿಂದ ಮಾತನಾಡಿದರೆ ಸರಿಯಾದ ಬುದ್ದಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಕತ್ತಿದ್ದರೆ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಿ

ನೀವು ಪ್ರತಿನಿಧಿಸುತ್ತಿರುವ ಕೇಂದ್ರ ಸರ್ಕಾರವು ರೈತರಿಗಾಗಿ ಮೀಸಲಿಟ್ಟ ಹಣದ ಬಗ್ಗೆ ಮೊದಲು ಶ್ವೇತಪತ್ರ ಹೊರಡಿಸಿ. ನಿಮಗೆ ತಾಕತ್ತಿದ್ದರೆ ಮೊದಲು ರಾಜ್ಯದಲ್ಲಿ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಿ, ದೇಶದಾದ್ಯಂತ ಕಬ್ಬು ಬೆಳೆಗೆ ಸರಿಯಾದ ಎಸ್ ಆರ್ ಪಿ ನಿಗದಿಪಡಿಸಿ ಸಂಕಷ್ಟದಲ್ಲಿರುವ ರೈತರಿಗೆ ಮೊದಲು ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಿ, ಕಾಲಕಾಲಕ್ಕೆ, ಕೃಷಿ ಉಪಕರಣಗಳು ಹಾಗೂ ರಸಗೊಬ್ಬರಗಳ ಬೆಲೆ ದ್ವಿಗುಣ ಗೊಳ್ಳುತ್ತಿರುವಂತೆ, ರೈತರ ಆದಾಯವು ದ್ವಿಗುಣಗೊಳ್ಳುವಂತೆ ನಿಮ್ಮ ಡಬಲ್ ಇಂಜಿನ್ ಸರ್ಕಾರವನ್ನು ಒತ್ತಾಯಿಸಿ, ಈ ಎಲ್ಲಾ ಸೌಕರ್ಯಗಳು ರೈತರಿಗೆ ಸಿಕ್ಕ ಮೇಲೆ ಸಾಲಮನ್ನಾ ನಿಲ್ಲಿಸುವ ಮಾತುಗಳನ್ನಾಡಿ ಎಂದು ಅವರು ತಿರುಗೇಟು ನೀಡಿದರು.

ಕ್ಷಮೆಯಾಚಿಸಲು ಆಗ್ರಹ 

ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತೇಜಸ್ವಿ ಸೂರ್ಯ ಮೊದಲು ಈ ದೇಶದ ರೈತರ ಕ್ಷಮೆಯಾಚಿಸಬೇಕು. ಇನ್ನೆರಡು ದಿನಗಳಲ್ಲಿ ಅವರು ಕ್ಷಮೆ ಕೇಳದಿದ್ದರೆ, ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಗೋಷ್ಠಿಯಲ್ಲಿ ರೈತಮುಖಂಡರಾದ ಜಗದೀಶ್, ರಮೇಶ್, ನಾಗಣ್ಣ, ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!