Thursday, September 19, 2024

ಪ್ರಾಯೋಗಿಕ ಆವೃತ್ತಿ

KRS ತುಂಬಿ ಹರಿಯುತ್ತಿದ್ದರೂ ಮಳವಳ್ಳಿ ಭಾಗದ ನಾಲೆಗಳಿಗೆ ನೀರಿಲ್ಲ : ರೈತರ ಪ್ರತಿಭಟನೆ

ಕೃಷ್ಣರಾಜ ಸಾಗರ ಅಣೆಕಟ್ಟೆ ತುಂಬಿ ಹೆಚ್ಚುವರಿ ನೀರನ್ನು ಹೊರಕ್ಕೆ ಹರಿಸುತ್ತಿದ್ದರೂ, ಇಲ್ಲಿರ ರೈತರ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ, ಇದಕ್ಕೆ ಅಧಿಕಾರಿಗಳ ಹೊಣೆಗೇಡಿತನ ಹಾಗೂ ಜನಪ್ರತಿನಿಧಿಗಳ ಬೇಜವಬ್ದಾರಿತನ ಕಾರಣವಾಗಿದೆ ಎಂದು ಆರೋಪಿಸಿ ಕಾಗೇಪುರದ ಕಾವೇರಿ ನೀರಾವರಿ ನಿಗಮದ ಕಛೇರಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಮಾತನಾಡಿ, ಮಳವಳ್ಳಿ ತಾಲೂಕಿನ ರೈತರ ಬೆಳೆಗಳಿಗೆ ಮತ್ತು ಕೆರೆಕಟ್ಟೆಗಳಿಗೆ ನೀರು ಬಿಡಬೇಕು.  ‘ಸಮುದ್ರದ ನಂಟಿದೆ, ಆದರೂ ಉಪ್ಪಿಗೆ ಬರ’ ಅನ್ನೊ ಗಾದೆಯಂತೆ ಕಬಿನಿ, ಹಾರಂಗಿ, ಹೇಮಾವತಿ ನದಿಗಳು ಉಕ್ಕಿಹರಿದು, ಕೆ ಆರ್ ಎಸ್ ಅಣೆಕಟ್ಟೆ ಭರ್ತಿಯಾಗಿದೆ. ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ನದಿ ಪಾತ್ರದ ಹಳ್ಳಿಗಳು ಬೆಳೆಗಳು ಜಲಾವೃತಗೊಂಡು ನಾಗರಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಮಳವಳ್ಳಿ ತಾಲ್ಲೂಕಿನ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಬಿಡುವ ವಿಚಾರದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಜವಾಬ್ದಾರಿತನವನ್ನು ತೋರಿದ್ದಾರೆ ಎಂದು ದೂರಿದರು.

ಕೆ ಆರ್ ಎಸ್ ನಲ್ಲಿ 80 ರಿಂದ 90 ಅಡಿ ನೀರು ತುಂಬಿದಾಗಲೇ ಬೆಳೆಗಳಿಗೆ ಮತ್ತು ಕೆರೆಕಟ್ಟೆಗಳಿಗೆ ನೀರು ಬಿಟ್ಟಿದ್ದರೆ ಇಷ್ಟೊಂದು ಪ್ರವಾಹ ಉಕ್ಕಿ ಮೆಟ್ಟೂರು ಅಣೆಕಟ್ಟೆಗೆ ನೀರು ಹೋಗಬೇಕಾದ ಅಗತ್ಯ ಇರಲಿಲ್ಲ. ಆದರೆ ಇವರ ಅವೈಜ್ಞಾನಿಕ ನೀತಿಯಿಂದಾಗಿ ಒಂದೆಡೆ ಕೆರೆಕಟ್ಟೆಗಳಿಗೂ ನೀರಿಲ್ಲ, ರೈತರ ಬೆಳೆಗಳಿಗೂ ನೀರಿಲ್ಲ. ಸರಿಯಾದ ಸಮಯಕ್ಕೆ ಭತ್ತದ ಒಟ್ಟಲು ಹಾಕಲು ನೀರಿಲ್ಲದ ಕಾರಣ ಭತ್ತದ ನಾಟಿ ಮಾಡಲು ವ್ಯತ್ಯಾಸವಾಗಿ ಭತ್ತದ ಇಳುವರಿಯ ಕೊರತೆ ಯಾಗುತ್ತದೆ ಎಂದರು.

ತಮಿಳು ನಾಡಿಗೆ ವಿನಾಕಾರಣ ನೀರು ಹರಿದು ಹೋಗುತ್ತಿದೆ, ತಕ್ಷಣ ಈ ದಿನದಿಂದಲೇ ಕಾಲುವೆಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಕಿರಿಯ ಅಭಿಯಂತರರು ಮತ್ತು ಸವಡೆಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿತ್ತಿಲ್ಲ, ಹಿಂದೆ ನಾಲೆಗಳ ಮೇಲೆ ಹಗಲು ರಾತ್ರಿ ಗಸ್ತು ತಿರುಗುತ್ತಿದ್ದರೂ ಈಗ ಯಾರು ಸಹ ನಾಲೆ ಮೇಲೆ ಬರುತ್ತಿಲ್ಲ, ಕಾಲುವೆಗಳ ಒತ್ತುವರಿಯಾಗಲಿ ತುಬು ಒಡೆದು ಹೋಗಿದ್ದರೂ ನೋಡುವುದಿಲ್ಲ ಎಂದು ಆರೋಪಿಸಿದರು.

ಸಹಾಯಕ ಕಾರ್ಯಪಾಲಕ ಅಭಿಯಂತರ ಭರತೇಶ್ ಮಾತನಾಡಿ, ಈ ದಿನವೇ ಕಾಲುವೆಗಳಿಗೆ ನೀರು ಬಿಡುವ ಭರವಸೆಯನ್ನು ನೀಡಿದರು, ಕಿರಿಯ ಅಭಿಯಂತರಾದ ಗೋವರ್ಧನ್ ಸಹ ಉಪಸ್ಥಿತರಿದ್ದರು

ಪ್ರತಿಭಟನೆಯಲ್ಲಿ ಗುಳಗಟ್ಟ, ನೆಲಮಾಕನಹಳ್ಳಿ, ಹೊಂಬೆಗೌಡನದೊಡ್ಡಿ, ಕಂದೇಗಾಲ, ಅಂಚೇದೊಡ್ಡಿ ತಮ್ಮಡಹಳ್ಳಿ, ನೆಲ್ಲೂರು, ತಳಗವಾದಿ, ಕೋರೆಗಾಲ, ಮಾದಳ್ಳಿ ರೈತರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಪ್ರಗತಿಪರ ರೈತ ಎಮ್ ವಿ ಕೃಷ್ಣ, ಸತೀಶ್, ವಿಜೇಂದ್ರ, ಹೇಮಂತ್, ನಾಗೇಂದ್ರ, ಬೋರೇಗೌಡ, ಕೃಷ್ಣೇಗೌಡ, ಮರಿಲಿಂಗೇಗೌಡ, ಸುಬ್ಬೆಗೌಡ, ಚೆನ್ನಿಗರಾಮ, ಆನಂದ್, ಪ್ರಸನ್ನ, ಪ್ರಶಾಂತ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!