Thursday, September 19, 2024

ಪ್ರಾಯೋಗಿಕ ಆವೃತ್ತಿ

ಟಿಪ್ಪು ಮತ್ತು ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ನಡುವೆ ಉಂಟು ಒಂದು ರೋಚಕ ನಂಟು! ನಿಮಗಿದು ಗೊತ್ತುಂಟಾ?

✍️ ಮಾಚಯ್ಯ ಎಂ, ಹಿಪ್ಪರಗಿ

ಬರಹ ಶುರು ಮಾಡುವುದಕ್ಕೂ ಮೊದಲು ಒಂದು ಪ್ರಶ್ನೆ. ಮುಸ್ಲಿಂ ಸಮುದಾಯದಲ್ಲಿ ಹೈದರ್, ಹುಸೇನ್, ಮಹಮದ್, ಇಸ್ಮತ್, ವಸೀಮ್, ನಯೀಮ್, ಅಹಮದ್, ಬಶೀರ್, ಖಾದರ್ ಅನ್ನೋ ಹೆಸರುಗಳನ್ನು ಸಾಮಾನ್ಯವಾಗಿ ಕೇಳ್ತೀವಿ. ಆದರೆ ಅಷ್ಟೇ ಸಾಮಾನ್ಯವಾಗಿ ಟಿಪ್ಪೂ ಅಂತ ಹೆಸರಿಟ್ಟುಕೊಂಡವರನ್ನು ಗಮನಿಸಿದ್ದೀರಿ? ತುಂಬಾ ವಿರಳ. ಅದರಲ್ಲೂ ಟಿಪ್ಪೂ ಸುಲ್ತಾನನಿಗೆ ಪೂರ್ವದಲ್ಲಿ ಹುಡುಕಿದರೆ ಅಂತ ಹೆಸರಿನ ಯಾರನ್ನೂ ಕಾಣಸಿಗುವುದಿಲ್ಲ. ಟಿಪ್ಪೂ ಕಾಲಾನಂತರದಲ್ಲಿ ಆತನ ಮೇಲಿನ ಅಭಿಮಾನದಿಂದಲೋ, ಅನುಕರಣೆಗೋಸ್ಕರವೋ ಆ ಹೆಸರು ಇಟ್ಟುಕೊಂಡಿದ್ದರೂ, ಅವರ ಸಂಖ್ಯೆಯೂ ಕಮ್ಮಿ!

ಹಾಗಾದರೆ ಟಿಪ್ಪೂಗೆ ಟಿಪ್ಪೂ ಎಂಬ ಹೆಸರು ಎಲ್ಲಿಂದ ಬಂತು?

ಬಹಳ ಜನಕ್ಕೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಟಿಪ್ಪೂವಿನ ಪೂರ್ಣ ಹೆಸರು ನಸೀಬ್-ಉದ್-ದೌಲ್ಹಾ ಮಿರ್ ಫತೇಹ್ ಅಲಿ ಬಹದ್ದೂರ್ ಟಿಪ್ಪೂ. ಈ ಹೆಸರಿನಲ್ಲಿ ಟಿಪ್ಪೂ ಎಂಬ ಹೆಸರು ಬಂದು ಸೇರಿದ್ದರ ಹಿಂದೆ ಒಂದು ಜನಪದೀಯ ಕಥೆ ಇದೆ. ಈಗ ನಾವೆಲ್ಲ ಕೋಮುವಾದದ ಕಾಲಘಟ್ಟದಲ್ಲಿ ಜೀವಿಸುತ್ತಿರೋದರಿಂದ ಹಿಂದೂ-ಮುಸ್ಲಿಂ ಎಂಬ ಕಚ್ಚಾಟ ಸಹಜವೇನೊ ಎನ್ನುವಂತಾಗಿದ್ದೇವೆ. ಆದರೆ ಆಗಿನ ಕಾಲದಲ್ಲಿ ಈ ಥರ ಇರಲಿಲ್ಲ. ಹಿಂದೂಗಳು ಮುಸ್ಲಿಂ ದರ್ಗಾಗಳಿಗೆ ನಡೆದುಕೊಳ್ಳುವುದು, ತಾಯಿತ ಅಂತ್ರ ಕಟ್ಟಿಸುವುದು; ಮುಸ್ಲೀಮರೂ ಹಿಂದೂ ದೇವರುಗಳಿಗೆ ಹರಕೆ ಹೊರುವುದು ಸಾಮಾನ್ಯವಾಗಿತ್ತು.

ಟಿಪ್ಪು ಹುಟ್ಟಿ ಆಗಿನ್ನೂ ಸ್ವಲ್ಪ ದಿನಗಳಾಗಿದ್ದವು. ರಾಜ್ಯ ವಿಸ್ತರಣೆಯ ಕಾರಣಕ್ಕೆ ಹೈದರ್ ಅಲಿ ಚಿತ್ರದುರ್ಗದ ಮೇಲೆ ದಂಡೆತ್ತಿ ಬಂದಿದ್ದ. ಅಲ್ಲೇ ಆಸುಪಾಸಿನಲ್ಲಿ ಬಿಡಾರ ಹೂಡಿದ್ದ. ಆಗ ಶ್ರೀರಂಗಪಟ್ಟಣದಿಂದ ಬಂದ ವರ್ತಮಾನವೊಂದು ಅವನ ಕಿವಿಗೆ ತಲುಪುತ್ತೆ. ಏನೆಂದರೆ ತನ್ನ ಮಗ ವಿಪರೀತ ಕಾಯಿಲೆಯಿಂದ ಬಳಲುತ್ತಿದ್ದು, ಉಳಿಯುವ ಸಾಧ್ಯತೆಯೇ ಕಮ್ಮಿ ಎನ್ನುವ ದುರ್ವಾರ್ತೆ ಅದು. ಅಷ್ಟು ದೊಡ್ಡ ಸೈನ್ಯವನ್ನು ಮುನ್ನಡೆಸುವ ಹೊಣೆ ಹೊತ್ತವನಾಗಿ ಯುದ್ಧ ಭೂಮಿಯಿಂದ ರಾಜಧಾನಿಗೆ ತೆರಳುವುದು ರಾಜನಾಗಿ ಅವನಿಗೆ ಸರಿ ಕಾಣುವುದಿಲ್ಲ. ಆದರೆ ತಂದೆ ಹೃದಯ ಕೇಳಬೇಕಲ್ಲ. ಆಗ ತಾವು ಬೀಡುಬಿಟ್ಟಿದ್ದ ಜಾಗದ ಪಕ್ಕದಲ್ಲೇ ಇದ್ದ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿಯ ಪವಾಡದ ಬಗ್ಗೆ ಅವನಿಗೆ ತಿಳಿಯುತ್ತೆ. ಅಲ್ಲಿಗೆ ತೆರಳುವ ಹೈದರ್ ಅಲಿ, ’ತನ್ನ ಮಗನನ್ನು ಸಾವಿನಿಂದ ಪಾರು ಮಾಡಿದರೆ, ಅವನಿಗೆ ನಿನ್ನ ಹೆಸರನ್ನೇ ಇಡುತ್ತೇನೆ’ ಎಂದು ಹರಕೆ ಕಟ್ಟುತ್ತಾನೆ. ಅದೃಷ್ಟವಶಾತ್ ಮಗ ಚೇತರಿಸಿಕೊಳ್ಳುತ್ತಾನೆ.

ಯುದ್ಧ ಕಾರ್ಯ ಮುಗಿಸಿ ವಾಪಾಸು ರಾಜಧಾನಿಗೆ ಬರುವ ಹೈದರ್ ಅಲಿ, ನಾಯಕನಹಟ್ಟಿಯ ಸ್ವಾಮಿಗೆ ಹರಕೆ ಹೊತ್ತಂತೆ ತನ್ನ ಮಗನ ಹೆಸರಿನ ಕೊನೆಯಲ್ಲಿ ತಿಪ್ಪೇಸ್ವಾಮಿಯ ಮೊದಲಾರ್ಧದ ಹೆಸರಾದ ‘ತಿಪ್ಪೇ’ಯನ್ನು ಸೇರಿಸುತ್ತಾನೆ. ಕಾಲಾನುಕ್ರಮದಲ್ಲಿ ‘ತಿಪ್ಪೇ’ ಎನ್ನುವುದು ’ಟಿಪ್ಪೂ ಆಗಿ ರೂಪಾಂತರವಾಯಿತು ಅನ್ನೋದು ಈ ಜನಪದೀಯ ಕಥೆಯ ಸಾರಾಂಶ. (ಈ ಬರಹವನ್ನು ಓದಿದ ನಂತರ, ಅಕಸ್ಮಾತ್ ಟಿಪ್ಪೂ ಸುಲ್ತಾನನ್ನು ತಿಪ್ಪೇ ಸುಲ್ತಾನ ಅಂತ ಲೇವಡಿ ಮಾಡಿದರೆ, ಅದು ನಾಯಕನಹಟ್ಟಿಯ ತಿಪ್ಪೇಸ್ವಾಮಿಗೆ ಮಾಡಿದ ಲೇವಡಿಯಾಗಿ, ಆ ಸ್ವಾಮಿಯೇ ಅವರಿಗೆ ತಕ್ಕ ಶಾಸ್ತಿ ಮಾಡುತ್ತಾನೆ ಅಂದುಕೊಂಡುಬಿಡೋಣ….

ಮೊದಲೇ ಹೇಳಿದಂತೆ ಇದು ಜನಪದೀಯ ಕಥನವಾಗಿರೋದ್ರಿಂದ ಇದಕ್ಕೆ ಯಾವುದೇ ಚಾರಿತ್ರಿಕ ಪುರಾವೆಗಳಿಲ್ಲ. ಆದರೆ, ತಳೆಬುಡವಿಲ್ಲದ ಉರೀಗೌಡ, ನಂಜೇಗೌಡ ಎಂಬ ಕಪೋಲಕಲ್ಪಿತ ಸುಳ್ಳುಗಳಿಗಿಂತ; ಟಿಪ್ಪೂ ಹುಟ್ಟಿದ ಕಾಲಘಟ್ಟ, ಹೈದರ್ ಅಲಿ ಚಿತ್ರದುರ್ಗದ ಮೇಲೆ ದಾಳಿ ಮಾಡಿದ ಸಂದರ್ಭ, ಮುಸ್ಲಿಂ ಸಮುದಾಯದಲ್ಲಿ ಟಿಪ್ಪೂ ಎಂಬ ಹೆಸರು ಇವತ್ತಿಗೂ ಸಹಜವಲ್ಲದೆ ಇರುವ ವಸ್ತುಸ್ಥಿತಿಗಳನ್ನು ತಾಳೆಹಾಕಿ ನೋಡಿದಾಗ, ಈ ಜನಪದೀಯ ಕಥೆ ಅಡ್ಡಂಡನ ’ನಾಟ್ಕ’ಕ್ಕಿಂತ ಹೆಚ್ಚು ಸತ್ಯ-ಸನಿಹವೆನಿಸುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!