Thursday, September 19, 2024

ಪ್ರಾಯೋಗಿಕ ಆವೃತ್ತಿ

ಟ್ಯೂಷನ್ ಕೇಂದ್ರಗಳನ್ನು ನಿಯಂತ್ರಿಸಲು ಮಹಿಳಾ ಕಾಂಗ್ರೆಸ್ ಒತ್ತಾಯ

ಮಂಡ್ಯ ಜಿಲ್ಲೆಯಾದ್ಯಂತ ನಾಯಿಕೊಡೆಯಂತೆ ತಲೆ ಎತ್ತಿರುವ ಟ್ಯೂಷನ್ ಕೇಂದ್ರಗಳನ್ನು ನಿಯಂತ್ರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳವಳ್ಳಿ ಪಟ್ಟಣದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಟ್ಯೂಷನ್ ಗಳ ಮೇಲೆ ಸರ್ಕಾರದ ಯಾವುದೇ ಹಿಡಿತ ಇಲ್ಲದಿರುವುದೇ ಕಾರಣವಾಗಿದೆ ಎಂದು ಆರೋಪಿಸಿದರು.

ಈಗಿನ ಪರಿಸ್ಥಿತಿಯಲ್ಲಿ ಯಾರು ಬೇಕಾದರೂ ಬೋರ್ಡ್ ಹಾಕಿಕೊಂಡು ಟ್ಯೂಷನ್ ನಡೆಸಬಹುದಾಗಿದೆ, ಆದ್ದರಿಂದ ಟ್ಯೂಷನ್ ಗಳನ್ನು ನಿಯಮ ಬದ್ದವಾಗಿ ನಡೆಸಲು ಕಾನೂನು ರೂಪಿಸಬೇಕು. ಇಲ್ಲವಾದಲ್ಲಿ ಮಕ್ಕಳ ಮಾನ ಮತ್ತು ಪ್ರಾಣಕ್ಕೆ ಯಾವುದೇ ರಕ್ಷಣೆ ಇರುವುದಿಲ್ಲ ಎಂದು ಹೇಳಿದರು.

ಉಗ್ರ ಶಿಕ್ಷೆ ನೀಡಲು ಆಗ್ರಹ 

ಮಳವಳ್ಳಿ ಪಟ್ಟಣದಲ್ಲಿ ಸುಮಾರು 10 ವರ್ಷ ವಯಸ್ಸಿನ ಹೆಣ್ಣು ಮಗು ಟ್ಯೂಷನ್‌ಗೆಂದು ತೆರಳಿದಾಗ  ಟ್ಯೂಷನ್ ಶಿಕ್ಷಕನೇ ಅತ್ಯಾಚಾರ ಹಾಗೂ ಕೊಲೆಯಂತಹ ನೀಚ ಕೃತ್ಯಕ್ಕೆ ಆ ಮಗುವನ್ನು ಬಳಸಿಕೊಂಡು ನಂತರ ಆ ಮಗುವನ್ನು ಕೊಲೆ ಮಾಡಿರುವುದು ಮಾನವ ಸಮಾಜ ತಲೆತಗ್ಗಿಸುವ ಕೆಲಸವಾಗಿದೆ. ಈ ಆರೋಪಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಪೊಲೀಸ್ ಕಾರ್ಯಚರಣೆಯಿಂದಾಗಿ ಆರೋಪಿ ಬಂಧಿತನಾಗಿದ್ದು, ಈತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಗರಿಷ್ಟ ಶಿಕ್ಷೆಯನ್ನು ನೀಡುವವರೆಗೂ ಸರ್ಕಾರ ನಿಗಾ ವಹಿಸಬೇಕು, ಇಂತಹ ಅಮಾನವೀಯ ಕೃತ್ಯಗಳು ಮಾನವ ಸಮಾಜವೇ ತಲೆ ತಗ್ಗಿಸುವಂತಹ ಹೇಯ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ನೀಡುವ ಶಿಕ್ಷೆ ಗರಿಷ್ಟ ಮಟ್ಟದಲ್ಲಿ ಇರಬೇಕು ಎಂದು ಆಗ್ರಹಿಸಿದರು.

ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಈಗಾಗಲೇ ಸಂತ್ರಸ್ತ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ನೈತಿಕ ಬೆಂಬಲವನ್ನು ಮತ್ತು ಸಾಂತ್ವನವನ್ನು ಹೇಳಿದ್ದೇವೆ ಎಂದರು.

ಎನ್ ಕೌಂಟರ್ ಗೆ ಆದೇಶಿಸಿ

ಮುಗ್ಧ ಬಾಲಕಿಯರ ತಮ್ಮ ಲೈಂಗಿಕ ತೃಷೆಗೆ ಬಳಸಿಕೊಳ್ಳುವವರನ್ನು ಎನ್ ಕೌಂಟರ್ ಮಾಡಲು ಸರ್ಕಾರ ಆದೇಶ ಹೊರಡಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ಒತ್ತಾಯಿಸಿದರು.

ಇಂತಹ ಕೃತ್ಯ ನಡೆಸುವವರನ್ನು ಸ್ಥಳದಲ್ಲೆ ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತರಬೇಕು, ಇದರಿಂದಲಾದರೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಬಹುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಬೇಲೂರು ಗ್ರಾ.ಪಂ.ಸದಸ್ಯ ಸುವರ್ಣವತಿ, ಮಹಿಳಾ ಮುಖಂಡರಾದ ಗೀತಾ, ಪವಿತ್ರ, ಶಕುಂತಲಾ, ಹೀನಾ, ಮಂಗಳಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!