Friday, September 20, 2024

ಪ್ರಾಯೋಗಿಕ ಆವೃತ್ತಿ

ಅನೈತಿಕ ಪೊಲೀಸ್ ಗಿರಿ| ಮೂವರು ಬಜರಂಗದಳ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್

ಅನ್ಯ ಧರ್ಮಿಯರನ್ನು ಗುರಿಯಾಗಿಸಿಕೊಂಡು ಅನೈತಿಕ ಪೊಲೀಸ್ ಗಿರಿ ಹಾಗೂ ಪದೇ ಪದೇ ಮತೀಯ ಗೂಂಡಾಗಿರಿ ಪ್ರಕರಣಗಳಲ್ಲಿ ಭಾಗಿಯಾದ ಬಜರಂಗದಳದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯ ಪ್ರಶಾಂತ್ ಶಕ್ತಿನಗರ ಎಂಬ ಕಾರ್ಯಕರ್ತರನ್ನು ಗಡಿಪಾರು ಮಾಡಲು ಮಂಗಳೂರು ಪೊಲೀಸರು ನಿರ್ಧರಿಸಿದ್ದು, ನೋಟಿಸ್ ಜಾರಿಮಾಡಿದ್ದಾರೆ.

ಮಂಗಳೂರಿನಲ್ಲಿ ಸುಲ್ತಾನ್ ಜ್ಯುವೆಲರಿಯ ಕಾರ್ಯಕ್ರಮ ಮತ್ತು ಮರೊಳಿ ಹೋಳಿ ಆಚರಣೆ ವೇಳೆ ಈ ಬಜರಂಗದ ಕಾರ್ಯಕರ್ತರು ದಾಳಿ ನಡೆಸಿ, ದಾಂಧಲೆ ನಡೆಸಿದ್ದರು. ಹಾಗಾಗಿ ಪದೇ ಪದೇ ಕಾನೂನು ಕೈಗೆತ್ತಿಕೊಳ್ಳುತ್ತಿರುವುದನ್ನು ಉಲ್ಲೇಖಸಿರುವ ಪೊಲೀಸರು ನಿಮ್ಮನ್ನು ಏಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟಿ ಜಾರಿ ಮಾಡಿದ್ದಾರೆ.

ಹೆಚ್ಚು ಜನರಿಗೆ ನೋಟೀಸ್

ಈ ಕುರಿತು ಮಾತನಾಡಿರುವ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್, “ನಮ್ಮ ನಗರದಲ್ಲಿ ಪದೇ ಪದೇ ಅಪರಾಧಗಳಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮತೀಯ ಗೂಂಡಾಗಿರಿ ಸೇರಿದಂತೆ ಮತ್ತೆ ಮತ್ತೆ ಕ್ರೈಂ ಮಾಡಿದವರ ಮೇಲೆ ಕ್ರಮ ಜರುಗಿಸುತ್ತಿದ್ದೇವೆ. ಅವರು ನಮಗೆ ಆರೋಪಿಗಳಷ್ಟೇ, ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡ. ಮೂವರು ಮಾತ್ರ ಅಲ್ಲ, ಅದಕ್ಕೂ ಹೆಚ್ಚು ಜನರಿಗೆ ನೋಟೀಸ್ ಮಾಡಲಾಗಿದೆ” ಎಂದಿದ್ದಾರೆ.

ರೌಡಿ ಶೀಟ್ ತೆರೆಯುತ್ತೇವೆ

ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಮೂವರ ಮೇಲೆ ಠಾಣೆಯಿಂದ ಪ್ರಸ್ತಾವನೆ ಬಂದಿದೆ. ನಿರಂತರ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಗುರುತಿಸಿದ್ದೇವೆ. ಅವರನ್ನು ಒಂದು ವರ್ಷ ಗಡಿಪಾರು ಮಾಡಲು ಠಾಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಹೀಗಾಗಿ ಅವರಿಗೆ ನೋಟಿಸ್ ಕಳಿಸಿದ್ದೇವೆ. ಗಡಿಪಾರು ಪ್ರಕ್ರಿಯೆ ಆರಂಭವಾಗಿದ್ದು ರೌಡಿ ಶೀಟ್ ತೆರೆಯೋದು ಅಥವಾ ಗೂಂಡಾ ಕಾಯ್ದೆ ಹಾಕುವ ಕೆಲಸವೂ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಮತೀಯ ಗೂಂಡಾಗಿರಿ ಪ್ರಕರಣಗಳನ್ನು ಸಮರ್ಥಿಸಿಕೊಂಡಿದ್ದರು. ಆನಂತರ ಕರಾವಳಿಯಲ್ಲಿ ಸಾಲು ಸಾಲು ಮತೀಯ ಗೂಂಡಾಗಿರಿ ಪ್ರಕರಣಗಳು ದಾಖಲಾಗಿದ್ದವು. ಬೊಮ್ಮಾಯಿ ಹೇಳಿಕೆಯಯನ್ನು ಖಂಡಿಸಿದ್ದ ಕಾಂಗ್ರೆಸ್, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನೈತಿಕ ಪೊಲೀಸ್ ಗಿರಿ ಮಟ್ಟ ಹಾಕುವುದಾಗಿ ಘೋಷಿಸಿತ್ತು.

ಅಂತೆಯೇ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಿದ ನಂತರ ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭ ಮಾಡಿದೆ. ಸಿಸಿಬಿ ವಿಭಾಗದ ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದು, ಸಿಎಸ್​ವಿ ಇನ್ಸ್​ಪೆಕ್ಟರ್ ಸೇರಿದಂತೆ ಐವರು ಸಿಬ್ಬಂದಿಯೊಂದಿಗೆ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾಚರಣೆ ನಡೆಸಲಿದೆ ಎಂದು ಕುಲದೀಪ್ ಕುಮಾರ್​ ಜೈನ್ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!