Monday, May 6, 2024

ಪ್ರಾಯೋಗಿಕ ಆವೃತ್ತಿ

ಪಿಚ್ಚರ್ ಅಭಿ ಬಾಕೀ ಹೈ : ಬಿಜೆಪಿ ಪಾಲಿಗೆ ಇವರಾಗಲಿದ್ದಾರಾ ಆಪದ್ಭಾಂಧವರು!?

✍️ ಮಾಚಯ್ಯ ಎಂ ಹಿಪ್ಪರಗಿ

ಚುನಾವಣೆಗೆ ಹೆಚ್ಚೆಂದರೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ. ಇತ್ತ ಕಾಂಗ್ರೆಸ್, ಪ್ರಜಾಧ್ವನಿ ಯಾತ್ರೆಯ ಮೂಲಕ ಇಡೀ ರಾಜ್ಯವನ್ನು ಸುತ್ತಿ ತನ್ನ ‘ಗ್ಯಾರಂಟಿ ಕಾರ್ಡ್’ ಭರವಸೆಗಳಿಗೆ ಪ್ರಚಾರ ಕೊಟ್ಟು, ಬಿಜೆಪಿಯ ದುರಾಡಳಿತವನ್ನು ಭರ್ಜರಿಯಾಗಿ ಬಯಲು ಮಾಡುತ್ತಿದ್ದರೆ, ಅತ್ತ ರಾಜ್ಯ ಬಿಜೆಪಿ ಪಾಳೆಯದಲ್ಲಿ ಅದ್ಯಾಕೋ ಹುರುಪು ಕಂಡುಬರುತ್ತಿಲ್ಲ. ನೆಪಕ್ಕೆಂಬಂತೆ ನಡೆಸಲಾಗುತ್ತಿರುವ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗಳು ಸಹಾ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಚುನಾವಣಾ ನೀತಿಸಂಹಿತೆ ಘೋಷಣೆಯಾದರೆ ಮಾಡಲು ಸಾಧ್ಯವಾಗದ ಉದ್ಘಾಟನೆ, ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆಯಂತಹ ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಪದೇಪದೇ ಬಂದುಹೋಗುತ್ತಿರೋದು ಬಿಟ್ಟರೆ, ರಾಜ್ಯ ಬಿಜೆಪಿಯ ಮಟ್ಟಿಗಂತೂ ಚುನಾವಣೆಯ ಲವಲವಿಕೆ ಕಾಣುತ್ತಿಲ್ಲ.

ಈಗಾಗಲೇ ಸೋಲನ್ನು ಒಪ್ಪಿಕೊಂಡಿರುವ ಬಿಜೆಪಿ ಶತಾಯಗತಾಯ 75-80 ಸ್ಥಾನಗಳಲ್ಲಾದರೂ ಗೆದ್ದು, ಆಪರೇಷನ್‌ನ ಆಸೆಯನ್ನು ಜೀವಂತವಿರಿಸಿಕೊಳ್ಳುವ ಯತ್ನದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕಾಗಿ ನೆಕ್-ಟು-ನೆಕ್ ಪೈಪೋಟಿಯಿರುವ 25 ಕ್ಷೇತ್ರಗಳ ಮೇಲೆ ಬಿಜೆಪಿ ತನ್ನ ಗಮನ ಕೇಂದ್ರೀಕರಿಸಿ ತಂತ್ರಗಾರಿಕೆ ಶುರು ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಅದನ್ನಾದರೂ ಸಾಧಿಸುವ ಉತ್ಸಾಹ ರಾಜ್ಯ ನಾಯಕರಲ್ಲಿ ಗೋಚರಿಸದಿರುವುದು ಅಚ್ಚರಿ ಮೂಡಿಸಿದೆ. ಸಿಎಂ ಬೊಮ್ಮಾಯಿ ಸುಸ್ತಾದವರಂತೆ ಕಾಣಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲರಿಗೆ ಕಾರ್ಯಕರ್ತರ ನಡುವೆಯೇ ಕಿಮ್ಮತ್ತಿಲ್ಲ. ಅವರ ಭಾಷಣದ ಅರ್ಧದಲ್ಲೇ ಬೇಸತ್ತು, ಊಟದ ಹಾಲ್ ಕಡೆ ಹೊರಟ ಕಾರ್ಯಕರ್ತರನ್ನು ಕುಳಿತು ಭಾಷಣ ಕೇಳುವಂತೆ ಗೋಗರೆಯುವ ಪರಿಸ್ಥಿತಿ ಇದೆ.

ಇದನ್ನೂ ಓದಿ : ನೀನಿವತ್ತು ತುಂಬಾ ಸಣ್ಣವನಾದೆ….

ಸಿ.ಟಿ.ರವಿ, ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಮೇಲೆ ಪ್ರಭಾವ ಬೀರುವ ಯತ್ನಗಳೂ ಕೈಗೂಡುತ್ತಿಲ್ಲ. ವಯಸ್ಸಿನ ನೆಪ ಹೇಳಿ ಸಿಎಂ ಕುರ್ಚಿಯಿಂದ ಕೆಳಗಿಳಿಸಲ್ಪಟ್ಟ ಯಡಿಯೂರಪ್ಪನವರು ಈಗ ಅದೇ ಕಾರಣ ಕೊಟ್ಟು, ಸಕ್ರಿಯವಾಗಿ ಓಡಾಡುತ್ತಿಲ್ಲ. ಕಾಂಟ್ರ್ಯಾಕ್ಟರ್ ಆತ್ಮಹತ್ಯೆ ಕೇಸಿನಲ್ಲಿ ಬಿ ರಿಪೋರ್ಟ್ ಸಿಕ್ಕರೂ ಮತ್ತೆ ತನ್ನನ್ನು ಮಂತ್ರಿ ಮಾಡಲಿಲ್ಲ ಅಂತ ಈಶ್ವರಪ್ಪ ಮುನಿಸಿಕೊಂಡಿದ್ದಾರೆ. ಸಿಎಂ ಆಗಬಹುದೆಂಬ ಆಸೆಯಿಂದ ಪ್ರಹ್ಲಾದ್ ಜೋಷಿ ತಕ್ಕಮಟ್ಟಿಗೆ ಓಡಾಡುತ್ತಿದ್ದಾರಾದರೂ, ಜನರನ್ನು ಸೆಳೆಯುವ ಮಾಸ್ ಲೀಡರಿಕೆ ಅವರಿಗಿಲ್ಲ.

ಹಾಗಾದರೆ, ಅಂದುಕೊಂಡ ಟಾರ್ಗೆಟ್ ತಲುಪುವುದಾದರೂ ಹೇಗೆ? ಅದಕ್ಕೆ ಬಿಜೆಪಿ ಹೈಕಮಾಂಡ್ ಹೊಸ ದಾರಿ ಹುಡುಕಿರುವ ಸುದ್ದಿಗಳು ಕೇಳಿಬರುತ್ತಿವೆ. ಸಿನಿಮಾ ತಾರೆಯರು!

ಹೌದು, ಸಾಲುಸಾಲು ಹಗರಣ, 40% ಕಮೀಷನ್ ಆರೋಪ, ಅಧಿಕಾರ ವೈಫಲ್ಯದಿಂದ ಜನರ ನಡುವೆ ವರ್ಚಸ್ಸು ಕಳೆದುಕೊಂಡಿರುವ ರಾಜ್ಯ ಬಿಜೆಪಿ ನಾಯಕರಿಗಿಂತ, ಜನರ ನಡುವೆ ಜನಪ್ರಿಯತೆ ಗಳಿಸಿರುವ ಸಿನಿಮಾ ತಾರೆಯರನ್ನು ಮುಂದಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಚುನಾವಣೆ ನಡೆಸಲಿದೆಯಂತೆ. ಹಾಗೆ ನೋಡಿದರೆ, ಚುನಾವಣಾ ಪ್ರಚಾರಕ್ಕೂ ಸಿನಿಮಾ ತಾರೆಯರಿಗೂ ನಂಟು ಹೊಸದೇನಲ್ಲ. ಆತ್ಮೀಯತೆಯ ಕಾರಣಕ್ಕೋ ಅಥವಾ ಇನ್ನಾವುದೆ ಮರ್ಜಿಗೋ ಕೆಲ ರಾಜಕಾರಣಿಗಳ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ, ನಟ-ನಟಿಯರು ಮತ ಯಾಚನೆ ಮಾಡಿದ ಸಾಕಷ್ಟು ನಿದರ್ಶನಗಳಿವೆ. ಆದರೆ ಸಿನಿಮಾ ತಾರೆಯರು, ಅಂತಹ ಪ್ರಚಾರದಲ್ಲಿ ಆಕರ್ಷಣೆಯ ಕೇಂದ್ರವಾಗಿ ಮಾತ್ರ ಭಾಗವಹಿಸುತ್ತಿದ್ದರೇ ವಿನಾಃ ತಳಮಟ್ಟದ ರಾಜಕೀಯ ತಂತ್ರಗಾರಿಕೆಯಲ್ಲಿ ಭಾಗವಹಿಸಿದ್ದು ತುಂಬಾ ಕಡಿಮೆ. ಒಂದೊಮ್ಮೆ ಚುನಾವಣೆಗೆ ಸ್ಪರ್ಧಿಸಿದರೂ, ಪಕ್ಷದ ರಾಜಕೀಯ ಸಿದ್ಧಾಂತಕ್ಕೆ ಬದ್ಧರಾಗುವುದಕ್ಕಿಂತ ಹೆಚ್ಚಾಗಿ ತಮ್ಮ ತಾರಾ ವರ್ಚಸ್ಸಿನ ಮೇಲೆ ರಾಜಕಾರಣ ಮಾಡುವ, ಹಾಗೂ ಯಾರನ್ನೂ ಮುಖಾಮುಖಿ ಎದುರುಹಾಕಿಕೊಳ್ಳದೆ ನಾಜೂಕು ರಾಜಕಾರಣ ಮಾಡಿಕೊಂಡು ಎಲ್ಲಾ ಪಾರ್ಟಿಯಲ್ಲೂ ಹಿತೈಷಿಗಳನ್ನು ಸಂಪಾದಿಸಿರುವ ತಾರಾ-ರಾಜಕಾರಣಿಗಳೇ ಹೆಚ್ಚು. ಹಾಗೆ ನೋಡಿದರೆ, ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡ ಸಿನಿಮಾ ತಾರೆಯರು ಕೊಂಚ ತಮ್ಮ ಪಕ್ಷದ ಸೈದ್ಧಾಂತಿಕ ಕೋಮುವಾದಕ್ಕೆ ದನಿಯಾಗುತ್ತಾ ಬಂದಿದ್ದಾರೆ.

‘ಆದರೆ ಈ ಸಲ ಬಿಜೆಪಿ ಕೈಹಾಕಿರುವುದು ಅಂತಹ ಪ್ರಚಾರದ ಸಿನಿಮಾ ತಂತ್ರಗಾರಿಕೆಗಲ್ಲ, ಬದಲಿಗೆ ಸಿನಿಮಾ ತಾರೆಯರನ್ನು ಸೈದ್ಧಾಂತಿಕವಾಗಿ ಕೋಮುವಾದದ ಬ್ರ್ಯಾಂಡ್ ಅಂಬಾಸಿಡರ್‌ಗಳಂತೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಕೊನೇ ಕ್ಷಣದಲ್ಲಿ ಇವರನ್ನು ಪರೋಕ್ಷ ರಾಜಕಾರಣದ ಅಖಾಡಕ್ಕಿಳಿಸಿ, ಅವರ ಮೂಲಕ ಕಾಂಗ್ರೆಸ್‌ಗೆ ಶಾಕ್ ಕೊಡುವುದು ಯೋಜನೆಯ ಭಾಗ’.

ಈಗಾಗಲೇ ‘ಹಿಂದಿ ಗುಲಾಮರ ಪಕ್ಷ ’ಕನ್ನಡದ್ರೋಹಿಗಳ ಪಕ್ಷ, ’ಕರ್ನಾಟಕದ ಸಾರ್ವಜನಿಕ ಉದ್ಯಮಗಳನ್ನು ಗುಜರಾತ್ ಮಾರ್ವಾಡಿಗಳಿಗೆ ಗಿರವಿ ಇಟ್ಟ ಪಕ್ಷ’ ಎಂಬ ಮೂದಲಿಕೆಗೆ ತುತ್ತಾಗಿರುವ ಬಿಜೆಪಿಗೆ, ಈ ಸಿನಿಮಾ ತಾರೆಯರು ಪ್ರಾದೇಶಿಕ ಅಸ್ಮಿತೆಯನ್ನು ಮರಳಿ ದಕ್ಕಿಸಿಕೊಡಲಿದ್ದಾರೆ ಎಂಬ ವಿಶ್ವಾಸ ಬಿಜೆಪಿ ಹೈಕಮಾಂಡ್‌ಗೆ ಇದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ, ಏರ್ ಶೋನಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿಯವರು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಯಶ್, ರಿಷಬ್ ಶೆಟ್ಟಿ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿಯವರು, ಯೂಟ್ಯೂಬರ್ ಶ್ರದ್ಧಾ ಮೊದಲಾದವರನ್ನು ರಾಜಭವನಕ್ಕೆ ಕರೆಸಿಕೊಂಡು ಭೇಟಿ ಮಾಡಿರೋದು!. ಇವರಲ್ಲದೇ, ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಮುಂತಾದವರನ್ನೂ ಮೋದಿ ಭೇಟಿಯಾಗಿದ್ದಾರೆ. ಇವರನ್ನೆಲ್ಲ ಬಿಜೆಪಿ ಗುರುತಿಸಿರೋದು ‘‘ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಷರ್” ಎಂಬ ಹೆಸರಿನಲ್ಲಿ.

ಈ ಬಗ್ಗೆ ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಅಕೌಂಟಿನಲ್ಲಿ ‘ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಕರ್ನಾಟಕ ಚಿತ್ರರಂಗದ ಪ್ರಮುಖರನ್ನು ಭೇಟಿಯಾದರು. ಸಂಸ್ಕೃತಿ, ನವ ಭಾರತ ಮತ್ತು ಕರ್ನಾಟಕದ ಪ್ರಗತಿಗೆ ಅವರು ನೀಡಬಹುದಾದ ಕೊಡುಗೆಗಳ ಕುರಿತು ಚರ್ಚಿಸಿದರು’ ಎಂದು ಹೇಳಿಕೊಂಡಿದೆ. ಎಲೆಕ್ಷನ್ ಎದುರಿಸುವಲ್ಲಿ ಬಿಜೆಪಿ ಅನುಸರಿಸುವ ತಂತ್ರಗಾರಿಕೆಯನ್ನು ಅರ್ಥ ಮಾಡಿಕೊಂಡ ಎಂತವರಿಗೇ ಆದರೂ, ಸದ್ಯದ ಪರಿಸ್ಥಿತಿಯಲ್ಲಿ ಅಪಾರ ಅಭಿಮಾನಿ ಬಳಗ ಮತ್ತು ಪ್ರಭಾವ ಹೊಂದಿರುವ ಸಿನಿಮಾ ತಾರೆಯರನ್ನು ಕೇವಲ ಸಂಸ್ಕೃತಿ ಚರ್ಚೆಗೆ ಮಾತ್ರ ಆಹ್ವಾನಿಸಲಾಗಿತ್ತು ಎಂಬುದನ್ನು ನಂಬಲು ಸಾಧ್ಯವಿಲ್ಲ.

ಹಾಗೆ ನೋಡಿದರೆ, ಎಲೆಕ್ಷನ್‌ಗೆ ಬಿಜೆಪಿ ಪಕ್ಷ ಸಿನಿಮಾ ಗಿಮಿಕ್ ಬಳಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2019ರ ಪಾರ್ಲಿಮೆಂಟ್ ಚುನಾವಣೆ ಹೊಸ್ತಿಲಿನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿಕೊಟ್ಟ ಮೋದಿಯವರ ‘ಎ-ಪೊಲಿಟಿಕಲ್ ಸಂದರ್ಶನ’ವಿರಬಹುದು, ವಿವೇಕ್ ಒಬೆರಾಯ್ ನಟನೆಯ ‘ಮೋದಿ’ ಬಯೋಪಿಕ್ ಸಿನಿಮಾ ಇರಬಹುದು ಅಥವಾ ಪ್ರೊಪೊಗ್ಯಾಂಡಾ ಆಧಾರಿತ ಉರಿ: ಸರ್ಜಿಕಲ್ ಸ್ಟ್ರೈಕ್, ಕಾಶ್ಮೀರ್ ಫೈಲ್ಸ್ ಮೊದಲಾದ ಸಿನಿಮಾಗಳಿರಬಹುದು; ಕಂಗನಾ ರಾಣವತ್ ಎಂಬ ನಟಿಯ ಬಲಪಂಥೀಯ ವಾದದ ಅತಿರೇಕಗಳಿರಬಹುದು; ಮುಸ್ಲಿಂ ನಟರ ಸಿನಿಮಾಗಳ ವಿರುದ್ಧದ ಬಾಯ್ಕಾಟ್ ಅಭಿಯಾನಗಳಿರಬಹುದು ಇವೆಲ್ಲವೂ ಸಿನಿಮಾ ಕ್ಷೇತ್ರವನ್ನೂ ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಾ ಬಂದಿರುವುದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ. ಅಷ್ಟೇ ಯಾಕೆ, ಭೋಜ್‌ಪುರಿ ಸಿನಿಮಾ ರಂಗದ ಖ್ಯಾತ ನಟ ಮನೋಜ್ ತಿವಾರಿಯನ್ನು ಕೆಲ ದಿನಗಳ ಹಿಂದಿನವರೆಗೆ ದೆಹಲಿ ಬಿಜೆಪಿ ಅಧ್ಯಕ್ಷನನ್ನಾಗಿ ನೇಮಕ ಮಾಡಿಕೊಂಡಿತ್ತು, ಆತನನ್ನೇ ದೆಹಲಿ ಸಿಎಂ ಅಭ್ಯರ್ಥಿ ಎಂಬಂತೆ ಬಿಂಬಿಸಲಾಗಿತ್ತು.

ತಮಿಳುನಾಡಿನಲ್ಲೂ ಅದು ನಟ ರಜನೀಕಾಂತ್‌ರನ್ನು ಮುಂದಿಟ್ಟುಕೊಂಡು ರಾಜಕಾರಣದ ತಂತ್ರ ಹೆಣೆಯಲು ನೋಡಿತ್ತು. ರಜನಿ ಕೂಡಾ ಸ್ವತಂತ್ರ ಪಕ್ಷ ಹುಟ್ಟುಹಾಕುವ ಘೋಷಣೆ ಮಾಡಿದ್ದರು. ಮನುವಾದದ ಕಾರಣಕ್ಕೆ ತನಗೆ ಒಲಿಯಲಾರದ ದ್ರಾವಿಡ ಮತಗಳನ್ನು ರಜನೀಕಾಂತರ ಪ್ರಾದೇಶಿಕ ಪಕ್ಷದ ಮೂಲಕ ಗಿಟ್ಟಿಸಿಕೊಂಡು, ಅವರ ಬೆಂಬಲದಲ್ಲಿ ಪೆರಿಯಾರ್ ನಾಡಿನಲ್ಲಿ ಕೋಮುವಾದದ ಆಟ ನಡೆಸುವುದು ಬಿಜೆಪಿಯ ಯೋಜನೆಯಾಗಿತ್ತು.* ಆದರೆ, ಭಾಷೆ ಮತ್ತು ದ್ರಾವಿಡ ಅಸ್ಮಿತೆಯ ವಿಚಾರದಲ್ಲಿ ತಮಿಳರನ್ನು ಯಾಮಾರಿಸುವುದು ಅಷ್ಟು ಸುಲಭವಲ್ಲ. ಅದು ರಜನೀಕಾಂತ್‌ರಿಗೂ ಮನದಟ್ಟಾಗಿ ಕೊನೇ ಕ್ಷಣದಲ್ಲಿ ಕಿಡ್ನಿ ಸಮಸ್ಯೆಯನ್ನು ಮುಂದೆಮಾಡಿ, ರಾಜಕಾರಣದಿಂದ ದೂರ ಉಳಿದರು. ಹಾಗೊಮ್ಮೆ ಅವರು ರಾಜಕಾರಣಕ್ಕೆ ಇಳಿದಿದ್ದರೂ, ಅಲ್ಲಿ ಮನುವಾದಕ್ಕೆ ಪ್ರಬಲ ಎದುರಾಳಿಯಾಗಿ ನಿಂತಿರುವ ಕಮಲ್‌ಹಸನ್ ಅವರು ಸಾಂಸ್ಕೃತಿಕ ಪೈಪೋಟಿ ಕೊಡಲಿದ್ದರು.

ಆದರೆ ಕರ್ನಾಟಕ ಸಿನಿರಂಗದ ಸದ್ಯದ ಸೈದ್ಧಾಂತಿಕ ಹಿನ್ನೆಲೆಯನ್ನು ನೋಡಿದರೆ, ಈ ನೆಲದ ಬಹುತ್ವ ಮತ್ತು ಸಹಬಾಳ್ವೆಯ ಪರಂಪರೆಗೆ ಗಟ್ಟಿ ಧನಿಯಾಗಿ ನಿಂತು, ಸವಾಲು ಎಸೆಯುವ ಯಾವ ನಟರೂ ಕಣ್ಣಿಗೆ ಕಾಣುತ್ತಿಲ್ಲ. ಇದ್ದುದರಲ್ಲಿ ರಾಜ್‌ಕುಮಾರ್ ಕಾಲದವರೆಗೆ ಅವರ ಕುಟುಂಬ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರೂ, ಸಾಂಸ್ಕೃತಿಕ ರಾಜಕಾರಣದ ಶೂದ್ರತ್ವದ ಪ್ರತಿನಿಧಿಯಂತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರಚುರ ಪಡಿಸುವಂತೆ ನಡೆದುಕೊಂಡು ಬಂದಿದ್ದರಿಂದ, ಆ ಗುಣಗಳು ಕೋಮುವಾದದ ಬೆಳವಣಿಗೆಗೆ ಅಡ್ಡಿ ಮಾಡುತ್ತಾ ಬಂದಿದ್ದವು. ಅದೇ ಕಾರಣಕ್ಕೆ, ಕೋಮುವಾದಿಗಳಿಗೆ ಇವತ್ತಿಗೂ ರಾಜ್ ಕುಟುಂಬದ ಮೇಲೆ ಅಷ್ಟಾಗಿ ಒಲವಿಲ್ಲ. ಪುನೀತ್ ರಾಜ್‌ಕುಮಾರ್ ಅವರು ನಿಧನರಾದಾಗ, ಅವರನ್ನು ಹಿಂದೆ ಮೋದಿಯವರೇ ಬಿಜೆಪಿ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದ, ಅದನ್ನು ಅವರು ನಯವಾಗಿ ತಿರಸ್ಕರಿಸಿದ್ದ ಸುದ್ದಿ ಸಾಕಷ್ಟು ಸದ್ದು ಮಾಡಿದ್ದನ್ನು ಮರೆಯಲಾಗದು.

ಇಂಥಾ ಹಿನ್ನೆಲೆಯಿರುವ ಬಿಜೆಪಿ, ಈಗಿನ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದ (ಮುಖ್ಯವಾಗಿ ಸಿನಿಮಾರಂಗದಲ್ಲಿ) ಸೈದ್ಧಾಂತಿಕ ಸಡಿಲಿಕೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಮುಂದಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಹಾಗಾಗಿ ಮೋದಿ ಮತ್ತು ಕನ್ನಡ ಚಿತ್ರರಂಗದ ‘ಜನಪ್ರಿಯ’ ನಟರ ಭೇಟಿ ತುಂಬಾ ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ. ಅಲ್ಲದೇ, ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಕಣ್ಮರೆಯಾಗಿದ್ದ ಸ್ಟಾರ್‌ವಾರ್ ಕಾಯಿಲೆ ಅದ್ಯಾಕೋ ಮತ್ತೆ ಹೊಗೆಯಾಡಲಾರಂಭಿಸಿದೆ. ಇತ್ತೀಚೆಗೆ, ದಿವಂಗತ ಪುನೀತ್ ರಾಜ್‌ಕುಮಾರ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಭುಗಿಲೆದ್ದ ಆರೋಪ-ಪ್ರತ್ಯಾರೋಪಗಳು ಕೆಲಕಾಲ ರಾಜಕಾರಣದ ಕೆಸರೆರಚಾಟವನ್ನೂ ಮಸುಕಾಗುವಂತೆ ಮಾಡಿತ್ತು. ಎಲ್ಲಿ ಬಾಂಧವ್ಯಗಳು ಸಡಿಲಗೊಂಡು, ಅಪನಂಬುಗೆಗಳು ಕದಲಾಡುತ್ತಿರುತ್ತವೋ ಅಂತಹ ನೆಲ ಯಾವತ್ತಿದ್ದರೂ ಕೋಮುವಾದಕ್ಕೆ ಹೇಳಿ ಮಾಡಿಸಿದ ಜಾಗ. ಹಿರಿಯರ ಮಾರ್ಗದರ್ಶನದ ಕೊರತೆಯೊಂದಿಗೆ ಹೆಚ್ಚೂಕಮ್ಮಿ ಅನಾಥವಾಗಿರುವ ಕನ್ನಡ ಸಿನಿಮಾ ರಂಗದೊಳಗಿನ ಪ್ರಕ್ಷುಬ್ಧತೆಯನ್ನು ತನಗೆ ಪೂರಕವಾಗಿ ಬಳಸಿಕೊಳ್ಳಲು ಬಿಜೆಪಿ ಯೋಜಿಸಿದ್ದರೆ, ಅದರಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ. ಹಾಗಂತ ಅವತ್ತು ಪ್ರಧಾನಿಯವರನ್ನು ಭೇಟಿಯಾದ ಸಿನಿಮಾ ತಾರೆಯರೆಲ್ಲರೂ, ಬಿಜೆಪಿಗೆ ಸಹಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗದು. ಕೆಲವರು, ಪ್ರಧಾನಿಯವರ ಆಹ್ವಾನವನ್ನು ನಿರಕಾರಿಸಲಾಗದೆ ಹೋಗಿ ಬಂದಿರಬಹುದು. ಆದರೆ ಈ ಪ್ರಯತ್ನದಲ್ಲಿ ಬಿಜೆಪಿಗೆ ಗಣನೀಯ ಮುನ್ನಡೆ ಲಭಿಸಿದೆ ಎನ್ನಲಾಗುತ್ತಿದೆ.

ಈಗಾಗಲೇ ಅದರ ಕುರುಹುಗಳೂ ಗೋಚರಿಸುತ್ತಿವೆ. *ಕರಾವಳಿಯ ಕಾಂಗ್ರೆಸ್ ನಾಯಕನೊಬ್ಬ ಉಡುಪಿ ಮಠದ ಜಾಗದ ಕುರಿತಂತೆ ನೀಡಿದ ಯಡವಟ್ಟು ಹೇಳಿಕೆಗೆ ವಿರುದ್ಧವಾಗಿ ಸಿನಿಮಾ ನಟ ರಕ್ಷಿತ್ ಶೆಟ್ಟಿ ಭಾವನಾತ್ಮಕತೆಯ ಸೋಗಿನಲ್ಲಿ ಅಖಾಡಕ್ಕಿಳಿದಿದ್ದಾರೆ. ಇನ್ನು, ವೈಯಕ್ತಿಕ ವರ್ಚಸ್ಸಿನ ಆಯಾಮದಿಂದ ನೋಡಿದಾಗ ದಿವಂಗತ ಅಂಬರೀಷ್ ಅವರ ಧರ್ಮಪತ್ನಿ ಸುಮಲತಾ ಅವರು ಬಿಜೆಪಿ ಸೇರಿದ್ದರಿಂದ ಪಕ್ಷಕ್ಕೆ ಎಷ್ಟರಮಟ್ಟಿಗೆ ಅನುಕೂಲವೋ ಗೊತ್ತಿಲ್ಲ. ಆದರೆ, ಸಿನಿಮಾರಂಗವನ್ನು ಸನಿಹ ಮಾಡಿಕೊಳ್ಳುವಲ್ಲಿ ಅಂಬರೀಷ್ ಅವರ ಛಾಯೆ ಸುಮಲತಾ ಮೂಲಕ ಬಿಜೆಪಿಗೆ ನೆರವಾಗಲಿರುವುದನ್ನು ಮಾತ್ರ ತಳ್ಳಿಹಾಕಲಾಗದು.* ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪ್ರಭಾವಿ ಕುಟುಂಬದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರ ಗೆಲುವಿನಲ್ಲಿ ‘ಜೋಡೆತ್ತು’ ಖ್ಯಾತಿಯೊಂದಿಗೆ ಅಖಾಡಕ್ಕಿಳಿದಿದ್ದ ನಟ ಯಶ್ ಮತ್ತು ದರ್ಶನ್ ಅವರ ಪಾತ್ರವನ್ನು ಮರೆಯಲಾಗದು.

ಸಾರಾಂಶದಲ್ಲಿ ಹೇಳುವುದಾದರೆ, ಈ ಸಲ ಕನ್ನಡ ಸಿನಿಮಾ ನಟನಟಿಯರನ್ನು ಹಿಂದಿನಂತೆ ಕೇವಲ ಆಕರ್ಷಣೆಯ ಬೊಂಬೆಗಳಂತೆ ಮಾತ್ರವಲ್ಲದೆ, ಸೈದ್ಧಾಂತಿಕ ಲೌಡ್‌ಸ್ಪೀಕರ್‌ಗಳಾಗಿಯೂ ಬಳಸಿ, ಕಾಂಗ್ರೆಸ್‌ಗೆ ಕೊನೇ ಕ್ಷಣದಲ್ಲಿ ಅಡಕತ್ತರಿಯ ಸನ್ನಿವೇಶ ಸೃಷ್ಟಿಸುವ ಯೋಜನೆ ಬಿಜೆಪಿಯಲ್ಲಿ ತಯಾರಾಗಿದೆ. ಇತ್ತೀಚೆಗೆ ಖ್ಯಾತಿಯ ಉತ್ತುಂಗಕ್ಕೇರುತ್ತಿರುವ ಹೊಸ ತಲೆಮಾರಿನ ತಾರೆಯರಲ್ಲೂ, ಕೋಮುವಾದದತ್ತ ಒಲವು ಹೆಚ್ಚಿರುವುದು ಬಿಜೆಪಿಯ ಈ ಯತ್ನಕ್ಕೆ ಅನುಕೂಲವಾಗಲಿದೆ ಎನ್ನಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!