Friday, September 20, 2024

ಪ್ರಾಯೋಗಿಕ ಆವೃತ್ತಿ

ವೀರಶೈವ ಜಂಗಮರ ಹೋರಾಟಕ್ಕೆ ಶಾಸಕರ ಬೆಂಬಲ: ದಲಿತ ಸಂಘಟನೆಗಳ ವಿರೋಧ


  • ಶಾಸಕರ ನೀತಿ ಖಂಡಿಸಿ ಹುಮನಾಬಾದ್ ಪಟ್ಟಣ ಬಂದ್‌ ಯಶಸ್ವಿ 
  • ಶಾಸಕರ ಶಿಫಾರಸ್ಸು ತಿರಸ್ಕರಿಸುವಂತೆ ದಲಿತ ಸಂಘಟನೆಗಳಿಂದ ಒತ್ತಾಯ

ವೀರಶೈವ-ಲಿಂಗಾಯತ ಜಂಗಮರನ್ನು ಎಸ್‌ಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಬೆಂಬಲಿಸಿ ಹುಮನಾಬಾದ್ ಶಾಸಕ ರಾಜಶೇಖರ ಬಿ ಪಾಟೀಲ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ ಪಾಟೀಲ್ ಮತ್ತು ಭೀಮರಾವ ಬಿ ಪಾಟೀಲ ಸರ್ಕಾರಕ್ಕೆ ಪತ್ರ ಬರೆದಿರುವ ನಡೆ ಖಂಡಿಸಿ ಬೀದರ್ ಜಿಲ್ಲೆಯಲ್ಲಿ ದಲಿತ ಹೋರಾಟ ಕ್ರಿಯಾ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು.

ಹುಮನಾಬಾದ್ ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ  ಬೃಹತ್ ಮೆರವಣಿಗೆ ನಡೆಸಿ ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ್ ಕೋಲಾರ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ಮೂವರು ಶಾಸಕರ ದಲಿತ ವಿರೋದಿ ನೀತಿ ಖಂಡಿಸಿ ಹುಮನಾಬಾದ್ ತಾಲೂಕು ಬಂದ್‌ ಗೆ ಕರೆ ನೀಡಲಾಗಿತ್ತು. ಬಂದ್ ಯಶಸ್ವಿಯಾಯಿತು. ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಜನ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. 

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಅಂಕುಶ್ ಗೋಖಲೆ, “ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಮತ್ತು ಅವರ ಸಹೋದರರು ಸೇರಿ ರಾಜ್ಯದ 85ಕ್ಕೂ ಹೆಚ್ಚಿನ ಶಾಸಕರು ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯವಾಗಿದೆ” ಎಂದು ಅಕ್ರೋಶ ವ್ಯಕ್ತಪಡಿಸಿದರು.

“ಎಸ್‌ಸಿ ಮತ್ತು ಎ‌ಸ್‌ಟಿ ಮೀಸಲಾತಿ ಹೆಚ್ಚಳ ಸೇರಿದಂತೆ ದಲಿತರ ಯಾವುದೇ ಬೇಡಿಕೆಗಳಿಗೆ ಸ್ಪಂದಿಸದ ಶಾಸಕರು ವೀರಶೈವ ಜಂಗಮರನ್ನು ಬೆಂಬಲಿಸಿ ದಲಿತ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಪತ್ರ ಹಿಂಪಡೆಯಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಿ ಪಾಠ ಕಲಿಸುತ್ತೇವೆ” ಎಂದು ಎಚ್ಚರಿಸಿದರು.

“ವೀರಶೈವ ಜಂಗಮರಿಗೆ ಮತ್ತು ಬೇಡ ಜಂಗಮರು ಬೇರೆ ಬೇರೆ. ಹೀಗಿದ್ದೂ ನಿಜವಾಗಿ ಪರಿಶಿಷ್ಟ ಬೇಡ ಜಂಗಮರಿಗೆ ಸಿಗಬೇಕಾಗಿರುವ ಮೀಸಲಾತಿಯನ್ನು ಪ್ರಬಲ ಸಮುದಾಯದವರು ಕಬಳಿಸಲು ಹೊರಟಿರುವುದು ಸಂವಿಧಾನಕ್ಕೆ ಮಾಡುವ ದ್ರೋಹವಾಗಿದೆ” ಎಂದರು. 

ಹಕ್ಕೊತ್ತಾಯಗಳು

ವೀರಶೈವ ಜಂಗಮರನ್ನು ಬೆಂಬಲಿಸಿ ಶಾಸಕರು ಮತ್ತು ಸಚಿವರ ಶಿಫಾರಸ್ಸನ್ನು ತಿರಸ್ಕರಿಸಬೇಕು
ನಿವೃತ್ತ ನ್ಯಾ. ನಾಗಮೋಹನ ದಾಸ್ ವರದಿಯನ್ನು ಅನುಷ್ಠಾನಗೊಳಿಸಬೇಕು 
ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು
ನಕಲಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು
ದಲಿತರ ಮೀಸಲಾತಿಗೆ ಕಬಳಿಕೆ ಮಾಡುವವರ ವಿರುದ್ಧ ಎಸ್‌ಸಿಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು

ಪ್ರತಿಭಟನೆಯಲ್ಲಿ ಬ್ಯಾಂಕ್ ರೆಡ್ಡಿ, ವಿಠ್ಠಲದಾಸ ಪ್ಯಾಗೆ, ಗೌತಮ್ ಸಾಗರ, ಶಿವಪುತ್ರ ಮಾಳಗೆ ಮಹೇಶ್ ಗೊರನಾಳಕರ್, ಲಕ್ಷ್ಮೀಪುತ್ರ ಮಾಳಗೆ, ರಾಜದೀಪ ಜಾಬಾ, ಪ್ರಭು ಮಾಳೆ, ರವಿ ನಿಜಾಂಪೂರ್, ಯಾಸಿನ್ ಅಲಿ, ಜಮೀಲ್ ಖಾನ್, ರೇಷ್ಮಾ ಹಂಸರಾಜ, ಗಜೇಂದ್ರ ಕನಕಟ್ಟೆಕರ್, ಚೇತನ್ ಗೋಖಲೆ, ಅನಿಲ್ ದೊಡ್ಡಿ, ಪ್ರದೀಪ್ ನಾಟೆಕರ್, ಪರಮೇಶ್ವರ್ ಆರ್ಯ, ಚೇತನ್ ಕಾಡೆ, ಗೌತಮ್ ಚವ್ಹಾಣ ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!