Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಲ್ಕಿಸ್ ಬಾನು ತೀರ್ಪು| ಎಲ್ಲಾ ಮಹಿಳೆಯರ ಗೆಲುವು ಎಂದ ಕುಸ್ತಿಪಟು ವಿನೇಶ್ ಫೋಗಟ್

2002ರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ 14 ಮಂದಿಯ ಕೊಲೆ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್‌ ಸರಕಾರದ ಆದೇಶನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿತ್ತು. ಈ ತೀರ್ಪಿನ ಬಗ್ಗೆ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ರತಿಕ್ರಿಯಿಸಿದ್ದು, ಇದು ನಮ್ಮೆಲ್ಲಾ ಮಹಿಳೆಯರ ಗೆಲುವು ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಕುಸ್ತಿಪಟು ವಿನೇಶ್ ಫೋಗಟ್, ಬಿಲ್ಕಿಸ್ ಜೀ, ಇದು ನಮ್ಮೆಲ್ಲ ಮಹಿಳೆಯರ ಗೆಲುವು. ನೀವು ಸುದೀರ್ಘ ಹೋರಾಟ ನಡೆಸಿದ್ದೀರಿ. ನಿಮ್ಮ ಪ್ರಯಾಣವನ್ನು ನೋಡಿ ನಾವು ಧೈರ್ಯವನ್ನು ತೆಗೆದುಕೊಳ್ಳುತ್ತೇವೆ ಎಂದು ಫೋಗಟ್ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಮತ್ತು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಳೆದ ವರ್ಷ  ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಯಲ್ಲಿ ವಿನೇಶ್ ಫೋಗಟ್ ಕೂಡ ಸೇರಿದ್ದಾರೆ. ಫೋಗಟ್ ಅವರು ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು, ಹಾಗೆಯೇ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಅನೇಕ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಸರನ್ನು ಗಳಿಸಿದ್ದಾರೆ.

ಲೈಂಗಿಕ ಕಿರುಕುಳದ ಆರೋಪಿ, ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ)ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್‌ ಸಿಂಗ್‌ನ್ನು ಕುಸ್ತಿ ಫೆಡರೇಶನ್‌ ಮುಖ್ಯಸ್ಥನಾಗಿ ಆಯ್ಕೆ ವಿರುದ್ಧದ ಪ್ರತಿಭಟನೆಯ ಭಾಗವಾಗಿ ತನ್ನ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಕುಸ್ತಿಪಟು ವಿನೇಶ್ ಫೋಗಟ್ ಘೋಷಿಸಿದ್ದರು. ಬಳಿಕ ವಿನೇಶ್ ಫೋಗಟ್‌ ಡಿ.30ರಂದು ತಮ್ಮ ಅತ್ಯುನ್ನತ ಪ್ರಶಸ್ತಿಗಳನ್ನು ನವದೆಹಲಿಯ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ತೆರಳಿದ್ದರು.

2002ರ ಗುಜರಾತ್ ಗಲಭೆಯ ಸಮಯದಲ್ಲಿ ಬಿಲ್ಕಿಸ್‌ ಬಾನು ಅವರನ್ನು ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಕುಟುಂಬದ 14 ಮಂದಿ ಸದಸ್ಯರನ್ನು ಕೊಲೆ ಮಾಡಲಾಗಿತ್ತು. ಸಾಮೂಹಿಕ ಅತ್ಯಾಚಾರ ಮತ್ತು ಸಾಮೂಹಿಕ ಹತ್ಯೆಯ ಅಪರಾಧ ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದ ಹನ್ನೊಂದು ಜನರನ್ನು 2022ರಲ್ಲಿ ಗುಜರಾತ್ ಸರ್ಕಾರವು ಕ್ಷಮಾಧಾನ ನೀಡಿ ಬಿಡುಗಡೆ ಮಾಡಿತ್ತು. ಆದರೆ ಸುಪ್ರೀಂಕೋರ್ಟ್ ಸೋಮವಾರ ಗುಜರಾತ್‌ ಸರಕಾರದ ಆದೇಶವನ್ನು ರದ್ದುಗೊಳಿಸಿ ಅಪರಾಧಿಗಳಿಗೆ ಮತ್ತೆ ಕೋರ್ಟ್‌ಗೆ ಶರಣಾಗುವಂತೆ ಆದೇಶಿಸಿದೆ.

ಈ ತೀರ್ಪಿನ ಬಗ್ಗೆ ತಮ್ಮ ವಕೀಲೆ ಶೋಭಾ ಗುಪ್ತಾ ಮೂಲಕ ಬಿಲ್ಕಿಸ್ ಬಾನು ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಇಂದು ನನಗೆ ನಿಜವಾಗಿಯೂ ಹೊಸ ವರ್ಷ, ಸುಪ್ರೀಂಕೋರ್ಟ್ ತೀರ್ಪಿಗೆ ಧನ್ಯವಾದಗಳು. ನಾನು ಸಮಾಧಾನದಿಂದ ಕಣ್ಣೀರು ಹಾಕಿದೆ. ಒಂದೂವರೆ ವರ್ಷದಲ್ಲಿ ನಾನು ಮೊದಲ ಬಾರಿಗೆ ನಗುತ್ತಿದ್ದೇನೆ. ನಾನು ನನ್ನ ಮಕ್ಕಳನ್ನು ತಬ್ಬಿಕೊಂಡಿದ್ದೇನೆ. ನನ್ನ ಎದೆಯಿಂದ ಪರ್ವತದ ಗಾತ್ರದ ಕಲ್ಲು ಎತ್ತಲ್ಪಟ್ಟಂತೆ ಭಾಸವಾಗುತ್ತಿದೆ. ನಾನು ಈಗ ಮತ್ತೆ ಉಸಿರಾಡುತ್ತೇನೆ. ಇದು ನ್ಯಾಯ ಅನ್ನಿಸುತ್ತದೆ. ನನಗೆ, ನನ್ನ ಮಕ್ಕಳು ಮತ್ತು ಎಲ್ಲಾ ಮಹಿಳೆಯರಿಗೆ ಈ ನ್ಯಾಯ ನೀಡಿದ್ದಕ್ಕಾಗಿ ಭಾರತದ ಗೌರವಾನ್ವಿತ ಸುಪ್ರೀಂಕೋರ್ಟ್‌ಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದರು.

ಕಳೆದ 20 ವರ್ಷಗಳಿಂದ ನನಗೆ ಬೆಂಬಲವನ್ನು ನೀಡಿದ್ದಕ್ಕಾಗಿ ಮತ್ತು ನನ್ನ ಪರವಾಗಿ ನಿಂತಿದ್ದಕ್ಕಾಗಿ ನನ್ನ ಕುಟುಂಬ, ಸ್ನೇಹಿತರು ಮತ್ತು ವಕೀಲರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಮೊದಲೇ ಹೇಳಿದ್ದೇನೆ ಮತ್ತು ನಾನು ಇಂದು ಮತ್ತೆ ಹೇಳುತ್ತೇನೆ, ನನ್ನಂತಹ ಮಹಿಳೆಯ ಪ್ರಯಾಣ ಎಂದಿಗೂ ಏಕಾಂಗಿಯಾಗಿ ಸಾಧ್ಯವಿಲ್ಲ. ನನ್ನ ಪಕ್ಕದಲ್ಲಿ ನನ್ನ ಪತಿ ಮತ್ತು ಮಕ್ಕಳಿದ್ದಾರೆ. ದ್ವೇಷದ ಸಮಯದಲ್ಲಿ ನನಗೆ ತುಂಬಾ ಪ್ರೀತಿಯನ್ನು ನೀಡಿದ ನನ್ನ ಸ್ನೇಹಿತರಿದ್ದಾರೆ. ಪ್ರತಿ ಕಷ್ಟದ ಸಮಯದಲ್ಲಿ ನನ್ನ ಕೈಯನ್ನು ಹಿಡಿದಿದ್ದಾರೆ. ನನ್ನ ವಕೀಲರದ್ದು ಅಸಾಧಾರಣ ವ್ಯಕ್ತಿತ್ವ, ವಕೀಲೆ ಶೋಭಾ ಗುಪ್ತಾ ಅವರು 20 ವರ್ಷಗಳಿಂದ ನನ್ನೊಂದಿಗೆ ಅಚಲವಾಗಿ ನಿಂತುಕೊಂಡಿದ್ದಾರೆ ಮತ್ತು ನ್ಯಾಯದ ಹೋರಾಟದಲ್ಲಿ ಭರವಸೆ ಕಳೆದುಕೊಳ್ಳಲು ನನಗೆ ಎಂದಿಗೂ ಅವಕಾಶ ನೀಡಲಿಲ್ಲ ಎಂದು ಅವರು ಹೇಳಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!