Friday, September 20, 2024

ಪ್ರಾಯೋಗಿಕ ಆವೃತ್ತಿ

ಮತಗಳು ಮಾರಾಟಕ್ಕಿಲ್ಲ, ಕೆಲಸ ಮಾಡಿ ತೋರಿಸಿ, ಮತ ಪಡೆದುಕೊಳ್ಳಿ : ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಘೋಷಣೆ

ಬಡಜನರ ಮತಗಳು ಮಾರಾಟಕ್ಕಿಲ್ಲ, ಈ ಬಾರಿ ಹಣ, ಸಾರಾಯಿ, ಹೆಂಡಕ್ಕೆ ಮತ ನೀಡುವುದಿಲ್ಲ, ಸುಳ್ಳು ಆಶ್ವಾಸನೆಗಳನ್ನು ನೀಡದಿರಿ, ಪೊಳ್ಳು ಭರವಸೆಗಳು ಸಾಕು, ನಮ್ಮಗಳ ಮತ ಮಾರಾಟಕ್ಕಿಲ್ಲ, ಕೆಲಸ ಮಾಡಿ ತೋರಿಸಿ, ಮತ ಪಡೆದುಕೊಳ್ಳಿ ಎಂದು ಮಂಡ್ಯ ಜಿಲ್ಲೆಯ ಶ್ರಮಿಕ ನಗರಗಳ (ಸ್ಲಂಗಳ ) ಒಕ್ಕೂಟ, ಕರ್ನಾಟಕ ಶಕ್ತಿ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಗಳು ಘೋಷಣೆ ಮಾಡಿವೆ.

ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಸುಮಾರು 55 ಶ್ರಮಿಕ (ಸ್ಲಂ) ನಗರಗಳಿದ್ದು, ಇಲ್ಲಿ ನಾನಾ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಇಲ್ಲಿಯವರೆಗೆ ಗೆದ್ದು ಬಂದ ಜನಪ್ರತಿನಿಧಿಗಳು ಪ್ರಾಮಾಣಿಕವಾದ ಕೆಲಸ ಮಾಡಿಲ್ಲ, ಆದ್ದರಿಂದ ಈ ಬಾರಿ ಎಲ್ಲಾ ಶ್ರಮಿಕ ನಗರಗಳಲ್ಲಿ ಹಣ ಹೆಂಡ ಹಂಚುವವರಿಗೆ ಪ್ರವೇಶವಿಲ್ಲ, ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಬ್ಯಾನರ್ ಗಳನ್ನು ಅಳವಡಿಸಲಾಗುವುದು ಎಂದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರಿಗೆ ತಕ್ಷಣೆ ಶಾಶ್ವತ ಭೂಮಿ ಹಕ್ಕು ಮತ್ತು ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ಬಡವರ ಭೂಮಿ ಮತ್ತು ವಸತಿ ಹಕ್ಕಿನ ಸಮಸ್ಯೆ ತೀವ್ರವಾಗಿದೆ, ಈ ಬಗ್ಗೆ ಸುಮಾರು ವರ್ಷಗಳಿಂದ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹೋರಾಟ ನಡೆಸುತ್ತಲೇ ಬಂದಿದೆ. ಆದರೂ ಸಮಸ್ಯೆಗಳೂ ಇನ್ನೂ ಜೀವಂತವಾಗಿವೆ ಎಂದರು.

ದಶಕಗಳಿಂದ ವಂಚಿಸುತ್ತಾ ಬಂದಿದ್ದಾರೆ

ಮಂಡ್ಯದ ಶಾಸಕರು, ಲೋಕಸಭಾ ಸದಸ್ಯರು ಹಾಗೂ ಉಸ್ತುವಾರಿ ಸಚಿವರು ಕೂಡ ಶ್ರಮಿಕ ವರ್ಗದ ಜನರಿಗೆ ಹಲವು ಭರವಸೆಯ ಮಾತುಗಳನ್ನಾಡಿ ಸಮಸ್ಯೆಗಳನ್ನು ಬಗೆ ಹರಿಸುತ್ತೇವೆಂದು ಆಶ್ವಾಸನೆಯನ್ನು ನೀಡುತ್ತಾ, ಹಲವು ದಶಕಗಳಿಂದ ವಂಚಿಸುತ್ತಾ ಬಂದಿದ್ದಾರೆಂದು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ  ಕಿಡಿಕಾರಿದರು.

ಇಂದಿಗೂ ಭೂಮಿ, ವಸತಿ, ಹಕ್ಕುಪತ್ರದ ಸಮಸ್ಯೆಗಳು ಇದ್ದು, ಶ್ರಮಿಕ ವರ್ಗದ ಜನರು ಮೋಸ, ವಂಚನೆಗೆ ಒಳಗಾಗಿದ್ದಾರೆ.  ಈ ಬಾರಿಯ ಚುನಾವಣೆಗೆ ರಾಜಕಾರಣಿಗಳು ಕೂಡ ಸುಳ್ಳು ಆಶ್ವಾಸನಗಳ ಪ್ರಣಾಳಿಕೆಯನ್ನು ನಮ್ಮಗಳ ಮುಂದಿಟ್ಟುಕೊಂಡು ಬಡವರ ಮನೆಯ ಬಾಗಿಲಿಗೆ ಬರುತ್ತಿದ್ದಾರೆ. ಆದರೆ ಹತ್ತಾರು ವರ್ಷಗಳಿಂದ ಭರವಸೆಯ ಮಾತುಗಳು ಹಾಗೆಯೇ ಉಳಿದುಕೊಂಡಿವೆ. ಈ ಬಾರಿ ಹುಸಿ ಭರವಸೆಗಳಿಗೆ, ಹಣ, ಹೆಂಡ, ಸಾರಾತಿ, ಬಿರಿಯಾನಿಗೆ ಶ್ರಮಿಕ ವರ್ಗದ ಮತಗಳು ಮಾರಾಟವಿಲ್ಲ ಎಂಬ ಖಡಕ್ ಸಂದೇಶವನ್ನು ರಾಜಕಾರಣಿಗಳಿಗೆ ನೀಡುತ್ತಿದ್ದೇವೆ ಎಂದರು.

ಸಂವಿಧಾನದ ಆಶಯದಂತೆ ಎಲ್ಲಾ ವರ್ಗದ ಶೋಷಿತ ಜನರಿಗೆ ಸಂವಿಧಾನಬದ್ಧ ಹಕ್ಕುಗಳನ್ನು ಕಲ್ಪಿಸಿದರೆ ಮಾತ್ರ ಅಂತಹ ಒಳ್ಳೆಯ ಅಭ್ಯರ್ಥಿಗಳಿಗೆ ನಮ್ಮ ಶ್ರಮಿಕ ವರ್ಗದ ಮತ ನೀಡುತ್ತೇವೆ. ಆದುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಬಡಜನರು ಬೂತ್‌ಗಳ ಮಟ್ಟದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡದೇ ಸರ್ಕಾರದ ವಿರುದ್ಧ ಹಾಗೂ ಜನಪ್ರತಿನಿಧಿಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.

ಎಲ್ಲಾ ಪಕ್ಷದ ಅಭ್ಯರ್ಥಿಗಳನ್ನು ಆಹ್ವಾನಿಸಿ ಸಂವಾದ 

ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳನ್ನು ಆಹ್ವಾನಿಸಿ ಈ ಸಂಬಂಧ ಸಂವಾದ ನಡೆಸಲು ಮುಂದಾಗುತ್ತೇವೆ. ಶ್ರಮಿಕ ವರ್ಗದ ಜನರಿಗೆ ಇಂದಿನ ರಾಜಕಾರಣಿಗಳು ನೇರವಾದ ಉತ್ತರ ನೀಡಬೇಕಾಗಿದೆ. ಇಷ್ಟು ವರ್ಷಗಳಲ್ಲಿ ಬಡ ಸ್ಲಂ ನಿವಾಸಿಗಳಿಗೆ ಹಾಲಿ ಮಾಡಿರುವ ಕೆಲಸಗಳ ಪಟ್ಟಿ, ವಿವರ ಕೊಡಿ ಹಾಗೂ ಮುಂದೆ ಮಾಡುವ ಕೆಲಸಗಳ ಬಗ್ಗೆ ಖಾತ್ರಿ ಪಡಿಸಿಕೊಟ್ಟು, ಆ ನಂತರ ಬಡ ಸ್ಲಂ ನಿವಾಸಿಗಳ ಮತಗಳನ್ನ ಕೇಳಿ ಎಂದು ಪ್ರಶ್ನಿಸುತ್ತೇವೆಂದು ಹೇಳಿದರು.

ಗೋಷ್ಠಿಯಲ್ಲಿ ಮಹಿಳಾ ಮುನ್ನಡೆಯ ಶಿಲ್ಪ, ಒಕ್ಕೂಟದ ಚಂದ್ರಶೇಖರ್, ಮುರುಘಾ, ಮೆಂಗಮ್ಮ, ಪ್ರಕಾಶ್ ಮತ್ತು ಚಂದ್ರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!