Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿರ್ವಹಣೆ ಕೊರತೆಯಿಂದ ನೀರಿನ ಸಮಸ್ಯೆ ಉದ್ಭವ : ಅನ್ನದಾನಿ

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಉದ್ಬವವಾಗಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.

ಮಳವಳ್ಳಿ ತಾಲ್ಲೂಕಿನ ತಳಗವಾದಿ, ಕಿರುಗಾವಲು, ಹೂವಿನಕೊಪ್ಪಲು, ರಾಗಿಬೊಮ್ಮನಹಳ್ಳಿ, ಮಾರೇಹಳ್ಳಿ, ಹೊಸಹಳ್ಳಿ, ಕಂದೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ-ಕಟ್ಟೆಗಳು ಹಾಗೂ ನಾಲೆಗಳನ್ನು ವೀಕ್ಷಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ 15 ದಿನದೊಳಗೆ ಭತ್ತದ ನಾಟಿಯಾಗದಿದ್ದರೆ ಸಮರ್ಪಕವಾಗಿ ಬೆಳೆ ಬರುವುದಿಲ್ಲ, ಹೀಗಾಗಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಗಗನಚುಕ್ಕಿ ಜಲಪಾತೋತ್ಸವಕ್ಕೆ ವಿರೋಧ ವ್ಯಕ್ತಪಡಿಸುವ ಹಾಗೂ ಮುಖ್ಯಮಂತ್ರಿಗಳಿಗೆ ಕಪ್ಪುಪಟ್ಟಿ ತೋರಿಸುತ್ತೇವೆ ಎಂಬ ಹೇಳಿಕೆ ನೀಡಿದ ಮೇಲೆ ಈಗ ತರಾತುರಿಯಲ್ಲಿ ಸ್ಪಲ್ಪ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಆದರೂ ಸಹ ಕೆರೆ ಕಟ್ಟೆಗಳಿಗೆ ನೀರಿಲ್ಲ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ ಶೇ.30ರಷ್ಟು ಮಾತ್ರ ಭತ್ತದ ನಾಟಿಯಾಗಿದ್ದು, ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನಲೆಯಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆ ಕೊಳವೆ ಬಾವಿ ಹೊಂದಿರುವ ಶೇ.30ರಿಂದ 35ರಷ್ಟು ರೈತರು ಮಾತ್ರ ನಾಟಿ ಮಾಡಿದ್ದು, ಇನ್ನುಳಿದ ರೈತರು ನಾಲೆಗಳ ನೀರನ್ನೇ ಅವಲಂಬಿಸಿದ್ದಾರೆ ಎಂದರು.

ವಾಸ್ತವವಾಗಿ ನಾಲೆಗಳಲ್ಲಿ ನೀರಲ್ಲದೇ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ನಾಲೆಗಳಲ್ಲಿ ಗಿಡಗಂಟಿಗಳನ್ನು ತೆಗೆಯುವುದು ಹಾಗೂ ಸರಿಯಾದ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಯಾವುದೇ ಎಂಜಿನಿಯರ್ ಗಳ ನಾಲೆಗಳ ಮೇಲೆ ಬರುವುದಿಲ್ಲ, ಎಲ್ಲರೂ ಬೆಂಗಳೂರು ಮತ್ತು ಮೈಸೂರಿನಲ್ಲಿ ವಾಸವಿದ್ದು, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಿಂದ ರೈತ ಪರ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಜಲಾಶಯ ತುಂಬಿ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದ್ದರೂ ಸಹ ತಾಲ್ಲೂಕಿನ ನಾಲೆಗಳಿಗೆ ನೀರು ಬಂದಿಲ್ಲ, ಈ ಬಗ್ಗೆ ಇಲ್ಲಿನ ರೈತರು ಪ್ರಶ್ನೆ ಮಾಡಿದರೆ ಶಾಸಕರು ಹಾಗೂ ಎಂಜಿನಿಯರ್ ಗಳು ಉಡಾಫೆ ಉತ್ತರ ನೀಡುತ್ತಾರೆ. ಹೀಗಾಗಿ ರೈತರ ಸಮಸ್ಯೆಗಳ ಅಲಿಸಲು ಎಲ್ಲೆಡೆ ಪ್ರವಾಸ ಮಾಡುತ್ತಿರುವೆ. ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!