Friday, September 20, 2024

ಪ್ರಾಯೋಗಿಕ ಆವೃತ್ತಿ

ಮೋದಿ ಆಡಳಿತಕ್ಕೆ ದಿಲ್ಲಿ ಸಿಎಂ ಕೇಜ್ರಿವಾಲ್ ಟಾರ್ಗೆಟ್ ಆಗಿದ್ದೇಕೆ….? ಕಾರಣಗಳೇನು….?

ಹಲವಾರು ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು ಪ್ರಕರಣಗಳನ್ನು ದಾಖಲಿಸಿವೆ. ತನಿಖೆಗಳನ್ನು ನಡೆಸುತ್ತಿವೆ. ವಿಚಾರಣೆಗೆ ಒಳಪಡಿಸುತ್ತಿವೆ. ಇಂತಹ ಸಮಯದಲ್ಲಿ, ಅದರಲ್ಲೂ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಗುರಿಯಾಗಿದ್ದೇಕೆ? ಇದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದ 10 ಕಾರಣಗಳು ಇಲ್ಲಿವೆ, ನಿಮ್ಮ ಓದಿಗಾಗಿ…

ಮೊದಲನೆಯದಾಗಿ, ಸತತ ಎರಡು ಅವಧಿಯ ಆಡಳಿತದ ನಂತರವೂ, ಕಾಂಗ್ರೆಸ್ ವಿರುದ್ಧ ಕಣಕ್ಕಿಳಿದರೆ ಬಿಜೆಪಿ ಅಜೇಯವಾಗಬಹುದು ಎಂಬುದು ಗೋಚರಿಸುತ್ತಿದೆ. ಹೀಗಾಗಿ, ಮೋದಿ ಪಡೆ ಪ್ರಾದೇಶಿಕ ಪಕ್ಷಗಳ ವಿರುದ್ಧ ಹೋರಾಟಕ್ಕೆ ಇಳಿದಿದೆ. ಅದಾಗ್ಯೂ, ಈ 10 ವರ್ಷಗಳ ಅವಧಿಯಲ್ಲಿ ಬಿಜೆಪಿ ಜೊತೆಗಿದ್ದ ಕೆಲವು ಪ್ರಾದೇಶಿಕ ಪಕ್ಷಗಳು ಬಿಜೆಪಿ ಸಖ್ಯ ತೊರೆದಿವೆ. ಆದರೂ, ಸಖ್ಯ ತೊರೆದಿದ್ದ ಜೆಡಿಯು ಮಾತ್ರ ಮರಳಿ ಎನ್‌ಡಿಎ ಸೇರಿದೆ. ಇನ್ನು, ಕೆಲವು ಪಕ್ಷಗಳು ಬಿಜೆಪಿಯನ್ನು ಗಂಭೀರವಾಗಿ ಎದುರು ಹಾಕಿಕೊಳ್ಳದೆ, ಸುರಕ್ಷಿತ ರಾಜಕೀಯ ಮಾಡುತ್ತಿವೆ. ಜೆಡಿಎಸ್‌ ರೀತಿಯ ಪಕ್ಷಗಳು ಬಿಜೆಪಿ ಎದುರು ಮಂಡಿ ಊರಿದಂತೆ ಕಾಣಿಸುತ್ತಿದೆ.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕೇಜ್ರಿವಾಲ್ ಅವರ ಎಎಪಿ (ಆಮ್ ಆದ್ಮಿ ಪಕ್ಷ) ಬಿಜೆಪಿಯೊಂದಿಗೆ ಯಾವುದೇ ರಾಜಕೀಯ ವ್ಯವಹಾರ ನಡೆಸಲು ನಿರಾಕರಿಸಿದೆ. ದೆಹಲಿಯಲ್ಲಿ ಬಿಜೆಪಿ ವಿರುದ್ಧ ಗೆದ್ದಿರುವ ಎಎಪಿ, ಸೀಮಿತ ಯಶಸ್ಸು ಕಂಡಿದ್ದರೂ, ರಾಷ್ಟ್ರವ್ಯಾಪಿ ಬಿಜೆಪಿಗೆ ಎದುರಾಳಿಯಾಗಿ ಹೊರಹೊಮ್ಮಲು ಯತ್ನಿಸುತ್ತಿದೆ. 2024ರ ನಂತರದ ಚುನಾವಣೆಯ ಬಳಿಕ, ಎಎಪಿಯು ಸಂಭಾವ್ಯ ಪ್ರತಿಸ್ಪರ್ಧಿಯಾಗಲಿದೆ ಎಂಬುದನ್ನು ಬಿಜೆಪಿ ನೋಡುತ್ತಿದೆ.

ಸಾಮಾನ್ಯವಾಗಿ, ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್‌ನ ಮಣಿದಂತೆ ಬಿಜೆಪಿ ಮತ್ತದರ ಮಿತ್ರಪಕ್ಷಗಳು ಅಥವಾ ಸಂಭಾವ್ಯ ಮಿತ್ರಪಕ್ಷಗಳು ಲಾಭ ಪಡೆಯುತ್ತವೆ. ಉದಾಹರಣೆಗೆ, ಆಂಧ್ರಪ್ರದೇಶದಲ್ಲಿ ಟಿಡಿಪಿ ಅಥವಾ ವೈಎಸ್‌ಆರ್‌ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷಗಳು ಲಾಭ ಪಡೆದರೆ, ಪಶ್ಚಿಮ ಬಂಗಾಳ, ತ್ರಿಪುರಾ ಮುಂತಾದ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಕುಸಿತದಿಂದ ಬಿಜೆಪಿಗೆ ಲಾಭವಾಗಿದೆ.

ಆದರೆ, ದೆಹಲಿಯಲ್ಲಿ ಕಾಂಗ್ರೆಸ್‌ನಿಂದ ತೆರವಾದ ಜಾಗವನ್ನು ಬಿಜೆಪಿಗೆ ಅವಕಾಶ ನೀಡದಂತೆ ಎಎಪಿ ಆಕ್ರಮಿಸಿಕೊಂಡಿದೆ. ಅದೇ ರೀತಿ, ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ(ಎಸ್‌ಎಡಿ)ದ ನಿರಂತರ ಹೋರಾಟದ ನಡುವೆಯು ಪಂಜಾಬ್‌ನಲ್ಲಿ ಕಾಂಗ್ರೆಸ್‌ಅನ್ನು ಮಣಿಸಿ ಎಎಪಿ ಸರ್ಕಾರ ರಚಿಸಿತು. ಇನ್ನು, ಮೋದಿ ಅಲೆಯ ಏರಿಳಿತವನ್ನು ಎದುರಿಸುವಲ್ಲಿ ಕಾಂಗ್ರೆಸ್‌ ವಿಫಲವಾದಂತೆ, ಗುಜರಾತ್ ಮತ್ತು ಗೋವಾದಂತಹ ರಾಜ್ಯಗಳಿಗೆ ಎಎಪಿ ನುಗ್ಗುತ್ತಿದೆ.

ಹೀಗಾಗಿ, ಕೇಜ್ರಿವಾಲ್ ನೇತೃತ್ವದ ಪಕ್ಷವು ನಾನಾ ರಾಜ್ಯಗಳಲ್ಲಿ ತನ್ನ ಚುನಾವಣಾ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂದು ಬಿಜೆಪಿ ನಂಬಿದೆ.

ಎರಡನೆಯದಾಗಿ, ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಬಿಜೆಪಿ ಭದ್ರವಾದ ಹಿಡಿತ ಸಾಧಿಸಿದೆ. 2019ರಿಂದ, ಉತ್ತರ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿದೆ. ಬಿಜು ಜನತಾ ದಳ (ಬಿಜೆಡಿ) ಸೇರಿದಂತೆ ಕೆಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಆದರೆ, ದಕ್ಷಿಣ ಭಾರತವು ರಾಜಕೀಯವಾಗಿ ಬಿಜೆಪಿಗೆ ಕಷ್ಟಕರವಾಗಿ ಉಳಿದಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದಕ್ಷಿಣ ಭಾರತದಲ್ಲಿ ಪ್ರಾಬಲ್ಯ ಹೊಂದಿವೆ. ಇತ್ತೀಚಿನ ರಾಜ್ಯ ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ ಭಾರೀ ಗೆಲುವು ಸಾಧಿಸಿದೆ. ಅದರ ಮಿತ್ರಪಕ್ಷಗಳೂ ದಕ್ಷಿಣದಲ್ಲಿ ಅಧಿಕಾರದಲ್ಲಿವೆ. ಸದ್ಯಕ್ಕೆ ಬಿಜೆಪಿಗೆ ಉತ್ತರ ಭಾರತವೇ ಗಟ್ಟಿ ನೆಲೆಯಾಗಿದೆ. ಅದರೆ, ಇಲ್ಲಿಯೂ ಎಎಪಿ ಭಾರೀ ಸವಾಲು ಹಾಕುತ್ತಾ ಮುನ್ನುಗ್ಗುತ್ತಿದೆ. ತನ್ನ ತವರು ನೆಲದಲ್ಲಿಯೇ ಇಂತಹ ಸವಾಲನ್ನು ಬಿಜೆಪಿ ಸಹಿಸುವುದಿಲ್ಲ.

ಮೂರನೆಯದಾಗಿ, ಬಿಜೆಪಿಯು ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ಹಿಂದು ವಿರೋಧಿ ಎಂದು ಬಣ್ಣಿಸುವ ಮೂಲಕ ಹಿಂದು ಮತಗಳನ್ನು ಕ್ರೋಡೀಕರಿಸುತ್ತದೆ. ಕೆಲವು ವಿರೋಧ ಪಕ್ಷಗಳು ತಮ್ಮದೇ ಅದ ರೀತಿಯಲ್ಲಿ ಈ ಕೋಮು ವಿಷಯದ ಮೇಲೆ ಬಿಜೆಪಿಗೆ ರಾಜಕೀಯ ಅಸ್ತ್ರಗಳನ್ನು ನೀಡುತ್ತಲೇ ಇವೆ. ಉದಾಹರಣೆಗೆ, ಸನಾತನ ಧರ್ಮದ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಬಿಜೆಪಿ ‘ಇಂಡಿಯಾ’ ಕೂಟದ ವಿರುದ್ಧ ಕೋಮು ರಾಜಕೀಯಕ್ಕೆ ಬಳಸಿಕೊಂಡಿತು.

ಆದರೆ, ನಾನು ಹನುಮಂತನ ಭಕ್ತನೆಂದು ಹೇಳಿಕೊಂಡ ಕೇಜ್ರಿವಾಲ್ ದೆಹಲಿಯಿಂದ ಅಯೋಧ್ಯೆಗೆ ಉಚಿತ ಯಾತ್ರೆಗಳನ್ನು ನೀಡಿ, ಹಿಂದು ಮತದಾರರ ಮನ ಸೆಳೆದುಕೊಂಡರು. ಅಲ್ಲದೆ, ಕೆಲವೊಮ್ಮೆ ಸುರಕ್ಷಿತ ಆಟವಾಡುವ ಕೇಜ್ರಿವಾಲ್, ಸಿಎಎ ವಿರೋಧಿ ಹೋರಾಟ ಮತ್ತು ದೆಹಲಿ ಗಲಭೆಗಳ ಸಮಯದಲ್ಲಿ ಅಂತರ ಕಾಯ್ದುಕೊಂಡರು. ಇಂತಹ ಕಾರಣಗಳಿಂದಾಗಿ, ಕೇಜ್ರಿವಾಲ್ ವಿರುದ್ಧ ಬಿಜೆಪಿ ಹಿಂದು ವಿರೋಧ ಎಂದಾಗಲೀ, ಅಲ್ಪಸಂಖ್ಯಾತರ ಓಲೈಕೆಗಾರ ಎಂದಾಗಲೀ ಆರೋಪ ಮಾಡಲು ಸಾಧ್ಯವಾಗುತ್ತಿಲ್ಲ. ಕೇಜ್ರಿವಾಲ್ ರಾಜಕಾರಣ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ನಾಲ್ಕನೆಯದಾಗಿ, ಬಿಜೆಪಿಯು ಪ್ರತಿಪಕ್ಷಗಳನ್ನು, ಅಂದರೆ ಕಾಂಗ್ರೆಸ್ ಅಥವಾ ಪ್ರಾದೇಶಿಕ ಪಕ್ಷಗಳನ್ನು ಭ್ರಷ್ಟರೆಂದು ಕರೆಯುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಭ್ರಷ್ಟಾಚಾರದ ವಿರುದ್ಧದ ಚಳವಳಿಯಿಂದಲೇ ಎಎಪಿ ಮತ್ತು ಕೇಜ್ರಿವಾಲ್ ರಾಜಕೀಯಕ್ಕೆ ಬಂದಿದ್ದು. ವಾಸ್ತವದಲ್ಲಿ, ಯುಪಿಎ-2ರ ವಿರುದ್ಧದ ಅದೇ ಚಳವಳಿಯೇ ಮೋದಿ ಅಧಿಕಾರಕ್ಕೆ ಬರಲು ನೆರವಾಯಿತು.

ಆದ್ದರಿಂದ, ದೇಶಾದ್ಯಂತ ಭ್ರಷ್ಟ ಆಡಳಿತಗಳ ವಿರುದ್ಧ ಹೋರಾಡುತ್ತಿರುವ ಏಕೈಕ ಪಕ್ಷ ಎಂಬ ನರೇಟಿವ್ ಕಟ್ಟುತ್ತಿರುವ ಬಿಜೆಪಿ, ಕೇಜ್ರಿವಾಲ್‌ ಅವರನ್ನು ಭ್ರಷ್ಟನೆಂದು ಬಣ್ಣಿಸಬೇಕೆಂದು ಬಯಸುತ್ತಿದೆ. ಆದರೆ, ಇದೂವರೆಗೆ ಅದು ಸಾಧ್ಯವಾಗಿಲ್ಲ.

ಐದನೆಯದಾಗಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ವಿರುದ್ಧ ಸಾಮಾನ್ಯವಾಗಿ ಬಿಜೆಪಿ ಬಳಸುವ ‘ವಂಶಾಡಳಿತ ರಾಜಕಾರಣ’ವನ್ನು ಕೇಜ್ರಿವಾಲ್ ವಿರುದ್ಧ ಬಳಸಲು ಬಿಜೆಪಿಗೆ ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷವು ಹಲವಾರು ನಾಗರಿಕ ಸಮಾಜ ಸಂಸ್ಥೆಗಳು ಒಗ್ಗೂಡಿದ್ದರಿಂದ ರೂಪುಗೊಂಡ ಚಳವಳಿಯಿಂದ ಹುಟ್ಟಿದ ಪಕ್ಷವಾಗಿದೆ. ಎಎಪಿ ನಾಯಕತ್ವದಲ್ಲಿ ಸದ್ಯಕ್ಕೆ ವಂಶಾಡಳಿತದ ಲಕ್ಷಣ ಇನ್ನೂ ಗೋಚರಿಸಿಲ್ಲ. ಹೀಗಾಗಿ, ಬಿಜೆಪಿಗೆ ಈ ಅವಕಾಶವೂ ಇಲ್ಲ.

ಆರನೆಯದಾಗಿ, ಭಾರತದ ವೈವಿಧ್ಯಮಯ ರಾಜಕೀಯ ಭೂದೃಶ್ಯದಲ್ಲಿ ಹಿಂದುತ್ವವೊಂದೇ ಸಾಕಾಗುವುದಿಲ್ಲ ಎಂಬುದು ಬಿಜೆಪಿಗೆ ಚೆನ್ನಾಗಿ ತಿಳಿದಿದೆ. ವಾಸ್ತವವಾಗಿ, 2014ರಲ್ಲಿ ಮೋದಿಯವರ ಘೋಷಣೆಯು ಗುಜರಾತ್ ಮಾದರಿಯ ಅಭಿವೃದ್ಧಿಯಾಗಿತ್ತು. ಅದನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಮರೆತಿದೆ. ಆದಾಗ್ಯೂ, ಕಾಂಗ್ರೆಸ್ ವಿರುದ್ಧದ ನಿರೂಪಣೆಯಲ್ಲಿ ಬಿಜೆಪಿ ಶುದ್ಧ ರಾಜಕೀಯ ಮತ್ತು ಉತ್ತಮ ಆಡಳಿತ ಎಂಬ ನಿರೂಪಣೆಯನ್ನು ಇನ್ನೂ ಹೇಳುತ್ತಲೇ ಇದೆ.

ಆದರೆ, ತಾವೇ ಶುದ್ಧ ರಾಜಕೀಯ ಮತ್ತು ಉತ್ತಮ ಆಡಳಿತ ನೀಡುತ್ತಿರುವ ಪಕ್ಷವೆಂದು ಎಎಪಿ ಹೇಳಿಕೊಂಡಿದೆ. ದೆಹಲಿಯ ಅಭಿವೃದ್ಧಿ ಮಾದರಿಯ ಸುತ್ತಲೇ ತನ್ನ ಪ್ರಚಾರವನ್ನು ಮಾಡಿ ಪಂಜಾಬ್‌ನಲ್ಲಿ ಎಎಪಿ ಅಧಿಕಾರವನ್ನು ಪಡೆದಿದೆ. ಅದೇ ನಿರೂಪಣೆಯಲ್ಲಿಯೇ ಬೇರೆಡೆಯೂ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೆಹಲಿಯ ದಾಖಲೆಯು ಗುಜರಾತ್ ಮಾದರಿಯ ಪ್ರಚಾರಕ್ಕಿಂತಲೂ ಹೆಚ್ಚು ವಿಶ್ವಾಸಾರ್ಹವಾಗಿದೆ.

ಏಳನೆಯದಾಗಿ, ರಾಷ್ಟ್ರವನ್ನು ಯಾರು ಮುನ್ನಡೆಸುತ್ತಾರೆ ಎಂಬ ವಿಷಯದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಬಿಜೆಪಿ ಗಟ್ಟಿಧ್ವನಿಯಲ್ಲಿ ಮೋದಿ ಎಂದು ಹೇಳುತ್ತದೆ. ಮೋದಿ ಎಂಬ ಬ್ರಾಂಡ್‌ ಚುನಾವಣಾ ಪ್ರಚಾರದ ಐಕಾನ್ ಆಗಿದೆ. ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಗಾಂಧಿಯವರ ಇಮೇಜ್ ಹೆಚ್ಚಿದೆಯಾದರೂ, ಕಾಂಗ್ರೆಸ್‌ ಹಲವೆಡೆ ಕಳಪೆ ಪ್ರದರ್ಶನ ನೀಡಿದೆ. ಹಲವಾರು ಪ್ರಾದೇಶಿಕ ನಾಯಕರು ಮೋದಿಯವರನ್ನು ಮೀರಿಸಬಹುದು. ಆದರೆ, ಅವರ ವ್ಯಾಪ್ತಿ ಅವರವರ ರಾಜ್ಯಗಳಿಗೆ ಸೀಮಿತವಾಗಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತೆಲಂಗಾಣದಲ್ಲಿ ಕೆಸಿಆರ್‌ ಹಾಗೂ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅಂತಹ ಐಕಾನ್‌ಗಳಾಗಿದ್ದಾರೆ. ಆದರೆ, ಅವರು ರಾಷ್ಟ್ರೀಯ ಮಟ್ಟದಲ್ಲಿ ನಾಯಕರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಕೇಜ್ರಿವಾಲ್‌ ಅಂತಹ ಐಕಾನ್ ಆಗಬಲ್ಲವರಾಗಿದ್ದು, ಮೋದಿಗೆ ಸವಾಲಾಗಿ ಉಳಿದಿದ್ದಾರೆ.

ಎಂಟನೆಯದಾಗಿ, ಮೋದಿಯವರ ಯಶಸ್ಸು ಸಾಮಾಜಿಕ ಮಾಧ್ಯಮದಲ್ಲಿನ ಪ್ರಭಾವದ ಜೊತೆಗೆ ಗುರುತಿಸಿಕೊಂಡಿದೆ. ಈ ವೇದಿಕೆಯು ಹೊಸ, ಯುವ ಹಾಗೂ ಅರಾಜಕೀಯ ಮತದಾರರನ್ನು ತಮ್ಮತ್ತ ಸೆಳೆಯಲು ಬಿಜೆಪಿ-ಮೋದಿಗೆ ಸಹಾಯ ಮಾಡಿದೆ. ಕಾಂಗ್ರೆಸ್ ನಾಯಕರಾಗಲೀ ಅಥವಾ ಇತರ ಯಾವುದೇ ಪ್ರಾದೇಶಿಕ ನಾಯಕರಾಗಲೀ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಸೆಡ್ಡು ಹೊಡೆದು, ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಕೇಜ್ರಿವಾಲ್ ಮತ್ತು ಎಎಪಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಬೆಂಬಲ ಪಡೆಯುತ್ತಿದೆ.

ಒಂಬತ್ತನೆಯದಾಗಿ, ಪ್ರಧಾನಿ ಮೋದಿಯವರು ತಮ್ಮ ಪ್ರಮುಖ ಯೋಜನೆಗಳ ಜನಪ್ರಿಯತೆಯನ್ನು ಬಳಸಿಕೊಂಡು ಬೆಂಬಲ ಗಳಿಸುತ್ತಾರೆ. ಬಿಜೆಪಿಯು ಲಾಭ ರಾಜಕಾರಣವನ್ನು ಸಾಂಸ್ಥಿಕಗೊಳಿಸಿಕೊಂಡಿದೆ. ಫಲಾನುಭವಿಗಳನ್ನು ವೋಟ್ ಬ್ಯಾಂಕ್‌ಗಳಾಗಿ ಪರಿವರ್ತಿಸಿಕೊಂಡಿದೆ. ಇಲ್ಲಿಯೂ ಕೇಜ್ರಿವಾಲ್ ಪೈಪೋಟಿ ನೀಡುತ್ತಿದ್ದಾರೆ. ಉಚಿತ ಯೋಜನೆಗಳನ್ನು ಮೋದಿ ಲೇವಡಿ ಮಾಡುತ್ತಾರೆ. ಆದರೆ, ಕುಡಿಯುವ ನೀರು, ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಸಾರಿಗೆ ಯೋಜನೆಯು ಕೇಜ್ರಿವಾಲ್ ಕುರಿತು ಭಾರಿ ಜನಪ್ರಿಯತೆ ಬೆಳೆದಿದೆ.

10ನೆಯದಾಗಿ, ಬಿಜೆಪಿ ಮತ್ತು ಎಎಪಿ ವಿದ್ಯಾವಂತ ವರ್ಗ ಮತ್ತು ದುಡಿಯುವ ವರ್ಗವನ್ನು ತಮ್ಮ ಮತದಾರರಾಗಿ ಮಾಡಿಕೊಂಡಿವೆ. ಈ ಸಾಂಪ್ರದಾಯಿಕ ಮತದಾರರ ಬೆಂಬಲ ನೆಲೆಗಳಲ್ಲಿ ಕೇಜ್ರಿವಾಲ್ ಅವರು ಬಿಜೆಪಿಗೆ ಸಂಭಾವ್ಯ ಸವಾಲಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 370ನೇ ವಿಧಿ, ಸರ್ಜಿಕಲ್ ಸ್ಟ್ರೈಕ್, ರಾಮಮಂದಿರ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಏಕರೂಪ ನಾಗರಿಕ ಸಂಹಿತೆಯಂತಹ ಹಲವಾರು ಸೈದ್ಧಾಂತಿಕ-ಪೈಶಾಚಿಕ ವಿಚಾರಗಳಲ್ಲಿ ಎಎಪಿ ಮೌನ ಮತ್ತು ಸಮ್ಮತಿಯ ಜೊತೆಗೆ ತನ್ನ ವಿರುದ್ಧದ ಪ್ರಚಾರಕ್ಕೆ ಬಿಜೆಪಿಗೆ ಎಎಪಿ ಅವಕಾಶ ಕೊಟ್ಟಿಲ್ಲ. ಆ ಮೂಲಕ ತನ್ನನ್ನು ದೇಶವಿರೋಧಿ ಎಂದು ಕರೆಯುವಲ್ಲಿ ಬಿಜೆಪಿಯನ್ನು ನಿಶ್ಯಸ್ತ್ರಗೊಳಿಸಿದ್ದಾರೆ.

ದೆಹಲಿಯಲ್ಲಿ ತೀವ್ರ ಪೈಪೋಟಿಯ ನಡುವೆಯೂ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರುತ್ತಿರುವುದು ಬಿಜೆಪಿಗೆ ಸಂಕಷ್ಟ ತಂದಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿರುವ ಬಿಜೆಪಿ, ಕೆಳದ ಲೋಕಸಭಾ ಚುನಾವಣೆಯಲ್ಲಿ ಎಲ್ಲ 7 ಸ್ಥಾನಗಳನ್ನು ಗೆದ್ದಿತ್ತು.

ಆದರೆ, ಈ ಬಾರಿ ಆ ಗೆಲುವು ಸುಲಭವಾಗಿಲ್ಲ. ಈ ನಡುವೆ, ದೆಹಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುವುದು, ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಹೆಚ್ಚಿಸುವುದು ಮತ್ತು ಈಗ ಕೇಜ್ರಿವಾಲ್‌ ಬಂಧನವು ಭಾರತೀಯ ರಾಜಕೀಯದಲ್ಲಿ ಕೇಜ್ರಿವಾಲ್ ಅವರ ಪ್ರಯೋಗವನ್ನು ತಡೆಯುವ ಬಿಜೆಪಿ ತಂತ್ರದ ಭಾಗವಾಗಿದೆ. ಆದರೆ, ದೆಹಲಿ ಅಬಕಾರಿ ಹಗರಣದ ದೋಷಗಳ ಹೊರತಾಗಿಯೂ ಎಎಪಿ ನೆಲೆ ಗಟ್ಟಿಯಾಗಿದೆ.

– ಸೋಮಶೇಖರ್ ಚಲ್ಯ
ಮಾಹಿತಿ ಮೂಲ: ದಿ ಕ್ವಿಂಟ್‌

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!