Saturday, May 18, 2024

ಪ್ರಾಯೋಗಿಕ ಆವೃತ್ತಿ

ಮುಸ್ಲಿಂರ ಬಗೆಗಿನ ಬಿಜೆಪಿಯ ದ್ವೇಷದ ರಾಜಕೀಯ ನನ್ನ ಸೋಲಿಗೆ ಕಾರಣ – ರವೀಂದ್ರ ಶ್ರೀಕಂಠಯ್ಯ

ರಾಜ್ಯದ ಕೋಮುವಾದಿ ಬಿಜೆಪಿ ಪಕ್ಷದ ಕೆಟ್ಟ ಆಡಳಿತ ಹಾಗೂ ಮುಸ್ಲಿಂ ಸಮುದಾಯದ ಮೇಲಿನ ದ್ವೇಷ ನನ್ನ ಸೋಲಿಗೆ ಕಾರಣ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಜೆಡಿಎಸ್ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷ ಕೈ ಬಿಟ್ಟಿರಲಿಲ್ಲ‌. ಆದರೆ ಬಿಜೆಪಿ ಸರ್ಕಾರ ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಮುಸ್ಲಿಮರ ವಿರುದ್ಧ ದ್ವೇಷ ರಾಜಕೀಯ ಮಾಡಿದ್ದು ಜೆಡಿಎಸ್ ಅಭ್ಯರ್ಥಿಗಳಿಗೆ ಮುಳುವಾಯಿತು, ಮುಸಲ್ಮಾನರು ಸ್ವಲ್ಪವೂ ಯೋಚಿಸದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಮುಂದಾಗಿದ್ದು ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.

ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಕುರುಬ ಸಮುದಾಯದ 25,000 ಮತದಾರರಿದ್ದು, ಸಿದ್ದರಾಮಯ್ಯನವರು ಇದು ನನ್ನ ಕಡೆ ಚುನಾವಣೆ ಎಂದು ಹೇಳಿದ್ದು, ತಮ್ಮ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂಬ ಭಾವನೆಯಿಂದ ಕುರುಬ ಹಾಗೂ ಮುಸಲ್ಮಾನ ಸಮುದಾಯದವರು ಒಂದು ಗೂಡಿದ ಪರಿಣಾಮ ನನಗೆ ಸೋಲುಂಟಾಯಿತು ಎಂದು ವಿವರಿಸಿದರು.

ನಾನು ನೊಂದ ಜನರಿಗೆ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ. ಎಂದಿಗೂ ಕಾಲಹರಣ ಮಾಡಿಲ್ಲ. ಕೆಲವರಿಗೆ ನನ್ನಿಂದ ಮುಜುಗರ ಆಗಿರುವುದಕ್ಕೆ ಕ್ಷಮೆಯಾಚಿಸುತ್ತೇನೆ. 36 ಹಳ್ಳಿಗಳಿಗೆ ನದಿ ನೀರು ನೀಡಲು ಪ್ರಯತ್ನ ಮಾಡಿದ್ದೇನೆ. ಇದನ್ನು ಜನರು ಅರ್ಥ ಮಾಡಿಕೊಳ್ಳಲಿಲ್ಲ. ನನಗೆ ರಾಜಕೀಯ ಏರಿಳಿತಗಳಿಂದ ಸೋಲಾಗಲಿಲ್ಲ, ಬಿಜೆಪಿಯ ದುರಾಡಳಿತ, ಮುಸ್ಲಿಮರನ್ನು ಉಸಿರಾಡಲು ಆಗದ ಸ್ಥಿತಿಗೆ ದೂಡಿದ್ದಕ್ಕೆ ನಾವು ಬಲಿಯಾಗ ಬೇಕಾಯಿತು. ಹಿಜಾಬ್ ವಿವಾದ ಆರಂಭವಾದ ಮೂರು ದಿನಗಳವರೆಗೆ ಕಾಂಗ್ರೆಸ್ ನಾಯಕರು ಮಾತನಾಡಲಿಲ್ಲ‌. ನಾನು ಎಚ್.ಡಿ. ಕುಮಾರಸ್ವಾಮಿ ಅವರು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದೆವು. ಸರ್ವರೂ ಶಾಂತಿ ಸಹಬಾಳ್ವೆಯಿಂದ ಬಾಳ್ವೆ ಮಾಡಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ ಬಿಜೆಪಿ ಸರ್ಕಾರ ದ್ವೇಷದ ರಾಜಕೀಯ ಮಾಡಿದ್ದರಿಂದ ಮುಸ್ಲಿಮರು ಒಂದುಗೂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ, ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂದರು.

ಒಳ್ಳೆಯ ಕೆಲಸಕ್ಕೆ ನಾವು ಕೂಡ ಸಾಥ್ ನೀಡುತ್ತೇವೆ
ಶ್ರೀ ರಂಗಪಟ್ಟಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಳ್ಳೆಯ ಕೆಲಸಕ್ಕೆ ನಾವು ಕೂಡ ಸಾಥ್ ನೀಡುತ್ತೇವೆ. ಕೆಟ್ಟ,ದ್ವೇಷದ ಕೆಲಸ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ .ನನ್ನ ಜೀವ ಇರುವವರೆಗೂ ನಾನು ಜನರ ಪರವಾಗಿ ಇರುತ್ತೇನೆ. ಚುನಾವಣೆಗಳಿಗೂ ಸ್ಪರ್ಧೆ ಮಾಡುತ್ತೇನೆ. ನನ್ನ ಯೋಗ್ಯತೆ ಮೇಲೆ ಅಧಿಕಾರ ಬರುವ ದಿನಗಳವರೆಗೂ ಕಾಯುತ್ತೇನೆ. ಕಾರ್ಯಕರ್ತರು ನನ್ನ ಮೇಲೆ ಇಷ್ಟೊಂದು ಪ್ರೀತಿ, ವಿಶ್ವಾಸ ಇಟ್ಟಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಪಕ್ಷದ ಕಾರ್ಯಕರ್ತರ ಜೊತೆ ನಾನಿರುತ್ತೇನೆ ನೀವೆಲ್ಲ ಧೈರ್ಯವಾಗಿರಬೇಕು ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಪೈಲ್ವಾನ್ ಮುಕುಂದ ಮಾತನಾಡಿ, ಕ್ಷೇತ್ರದ ಜನ ಜೆಡಿಎಸ್ ಅಭ್ಯರ್ಥಿಗೆ ಅರವತ್ತು ಸಾವಿರ ಮತಗಳನ್ನು ನೀಡಿದ್ದಾರೆ.ರವೀಂದ್ರ ಶ್ರೀಕಂಠಯ್ಯನವರು ಒಳ್ಳೆಯ ಎತ್ತು, ಕಳ್ಳೆತ್ತಲ್ಲ. ಆದರೆ ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಗಳು ಸುನಾಮಿಯಂತೆ ಅಪ್ಪಳಿಸಿ ಯುದ್ಧದಲ್ಲಿ ನಮಗೆ ಸೋಲು ಉಂಟಾಗಿದೆ. ಕ್ಷೇತ್ರದ ಜನರಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ರವೀಂದ್ರ ಶ್ರೀಕಂಠಯ್ಯನವರು ಸೋಲಿಸಿದ್ದು ತಪ್ಪೆಂದು ಕೆಲವೇ ದಿನಗಳಲ್ಲಿ ತಿಳಿಯಲಿದೆ ಎಂದರು.

ಜೆಡಿಎಸ್ ಕಾರ್ಯಕರ್ತ ಡಾ. ಆದರ್ಶ್ ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಸೋಲಿಗೆ ಧೃತಿಗೆಡಬಾರದು. ಜೆಡಿಎಸ್ ಪಕ್ಷ ನೆಲಕಚ್ಚಿಲ್ಲ. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ದೇವೇಗೌಡರು ಪ್ರೇರಕರಾಗಿದ್ದಾರೆ. ಮಂಡ್ಯ ಜನತೆ ಜೆಡಿಎಸ್ ಪಕ್ಷ ಉಳಿಸುವ ವಿಶ್ವಾಸವಿದೆ. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಮುಂದಾಗಬೇಕು ಎಂದರು. ಮುಖಂಡರಾದ ಪ್ರಕಾಶ್, ಟಿ.ಡಿ.ಬಸವರಾಜು ಮತ್ತಿತರರು ಮಾತನಾಡಿದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!