Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಮೀಸಲಾತಿ ಮಸೂದೆ: ಕಾನೂನಾತ್ಮಕ ಮಹಿಳಾ ಸಮಾನತೆಯತ್ತ ಮತ್ತೊಂದು ಹೆಜ್ಜೆ….

✍️ ವಿವೇಕಾನಂದ ಎಚ್.ಕೆ 

12 ನೆಯ ಶತಮಾನದಲ್ಲಿ ಕರ್ನಾಟಕದ ವಚನಕಾರರ ಅನುಭವ ಮಂಟಪದ ಲಿಂಗ ಸಮಾನತೆ ಆಧಾರಿತ ಪ್ರಜಾಪ್ರಭುತ್ವದಾಶಯದ ಮುಂದುವರಿದ ಭಾಗ…..

ಈ ಮಸೂದೆಯ ಎರಡು ಮುಖಗಳು……

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿ ಜಾರಿಯಾದರೆ ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು….

ಸುಮಾರು ‌40 ವರ್ಷಗಳಿಂದ ತೂಗುಯ್ಯಾಲೆಯಲ್ಲಿದ್ದ ಈ ಮಸೂದೆ ಈಗ ಜಾರಿಯಾಗುವ ಹಂತದಲ್ಲಿದೆ. ಇಷ್ಟು ಮಹತ್ವದ ಮಸೂದೆಯ ಪರಿಣಾಮ ತುಂಬಾ ತೀವ್ರಗತಿಯಲ್ಲಿರುತ್ತದೆ. ಭಾರತದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಮಹಿಳೆಯರೇ ಇರುವುದರಿಂದ ಇದು ಅವರ ಮೇಲೆ ಪ್ರಭಾವ ಬೀರುತ್ತದೆ. ಆದರೆ ಇದರ ಸಂಪೂರ್ಣ ಪರಿಣಾಮ ಮತ್ತು ಫಲಿತಾಂಶ ಖಚಿತವಾಗಿ ವಿಮರ್ಶೆಗೆ ಸಿಗಲು ಕನಿಷ್ಠ 15/20 ವರ್ಷಗಳು ಬೇಕಾಗುತ್ತದೆ. ಆ ನಂತರವೇ ಇದು ಬೀರಿದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳು ಸಾಮಾನ್ಯ ಜನರಿಗೂ ಗೋಚರಿಸುತ್ತದೆ……

ಈಗ ಹಿಂದಿನ ಅನುಭವದ ಆಧಾರದ ಮೇಲೆ ಮುಂದಿನ ಭವಿಷ್ಯವನ್ನು ಸಮಾಜಶಾಸ್ತ್ರೀಯ ಆಧಾರದ ಮೇಲೆ ಒಂದು ಅಂದಾಜು – ಊಹೆ – ಕಲ್ಪನೆ – ಸಾಂದರ್ಭಿಕ ಸನ್ನಿವೇಶಗಳು ಮತ್ತು ಅರಿವಿನ ಅಭಿಪ್ರಾಯ ವ್ಯಕ್ತಪಡಿಸಬಹುದು……

ಕರ್ನಾಟಕದ ವಿಧಾನಸಭೆಯ ಈಗಿನ ಶಾಸಕರ ಸಂಖ್ಯೆ 224.
ಅದರಲ್ಲಿ 10 ಜನ ಮಾತ್ರ ಮಹಿಳಾ ಶಾಸಕರು. ಈ ಮಸೂದೆ ಜಾರಿಯಾದರೆ ಕಡ್ಡಾಯವಾಗಿ ಮಹಿಳಾ ಶಾಸಕಿಯರ ಸಂಖ್ಯೆ ಸುಮಾರು 70 ಆಗುತ್ತದೆ….

ಭಾರತದ ಲೋಕಸಭೆಯ ಸಂಸದರ ಸಂಖ್ಯೆ 543.
ಈಗಿನ ಮಹಿಳಾ ಸದಸ್ಯರ ಸಂಖ್ಯೆ 78.
ಮಸೂದೆ ಜಾರಿಯಾದರೆ ಮಹಿಳಾ ಸಂಸದರ ಸಂಖ್ಯೆ ಸುಮಾರು 180 ಆಗುತ್ತದೆ……

ಇದು ಬಹುತೇಕ ಎಲ್ಲಾ ಚುನಾವಣಾ ಜನಪ್ರತಿನಿಧಿಗಳ ಆಯ್ಕೆಗೂ ಅನ್ವಯ.

ಒಂದು ದೊಡ್ಡ ಮಟ್ಟದ ಬದಲಾವಣೆ ಮಾತ್ರ ನಿಶ್ಚಿತ. ಅದರ ದಿಕ್ಕು ಮಾತ್ರ ಕಾದು ನೋಡಬೇಕಿದೆ….

ಭಾರತದ ಇತಿಹಾಸದಲ್ಲಿ ಜಾಗತೀಕರಣದ ನಂತರ ಅತ್ಯಂತ ಹೆಚ್ಚು ಲಾಭ ಪಡೆದು ಶಿಕ್ಷಣ ಉದ್ಯೋಗದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿ ಸಾಕಷ್ಟು ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧ್ಯವಾಯಿತು. ಶಾಲೆ ಬಸ್ಸು ರೈಲು ಹೋಟೆಲ್ ಥಿಯೇಟರ್ ಕಚೇರಿ ಮಾಧ್ಯಮ ಪಾರ್ಕ್ ಪ್ರವಾಸ ಸ್ಥಳಗಳು ಹೀಗೆ ಎಲ್ಲಾ ಕಡೆ ಪುರುಷರಷ್ಟೇ ಮಹಿಳೆಯರನ್ನು ನೇರವಾಗಿ ಕಾಣುವಂತಾಯಿತು. ವರದಕ್ಷಿಣೆ ಎಂಬ ಪೆಡಂಭೂತ ಸಾಕಷ್ಟು ಕಡಿಮೆಯಾಯಿತು. ಸಾಹಿತ್ಯ ಸಿನಿಮಾ ಧಾರವಾಹಿ ನಾಟಕ ಮುಂತಾದ ಮನರಂಜನಾ ಉದ್ಯಮದಲ್ಲಿ ಮಹಿಳೆಯರು ಪುರುಷರ ಮೇಲೆ ಮಾಡುವ ದೌರ್ಜನ್ಯವೇ ಹಾಸ್ಯದ ವಸ್ತುವಾಯಿತು. ಈಗ ಇದು ಇನ್ನೆಷ್ಟು ಮುಂದುವರಿಯಬಹುದು ಊಹಿಸಿ…….

ಈಗ ರಾಜಕೀಯವಾಗಿ ಮಹಿಳೆಯರಿಗೆ ಬಹುದೊಡ್ಡ ಬಾಗಿಲು ತೆರೆಯುತ್ತಿದೆ. ಪ್ರತ್ಯಕ್ಷವಾಗಿ ಸಾವಿರಾರು ಮಹಿಳೆಯರಿಗೆ ಅವಕಾಶ ಸಿಕ್ಕರೆ ಪರೋಕ್ಷವಾಗಿ ಅವರ ಬೆಂಬಲಿಗರಾಗಿ ಮತ್ತು ಆಕಾಂಕ್ಷಿಗಳಾಗಿ ಲಕ್ಷ – ಕೋಟಿ ಮಹಿಳೆಯರು ಈ ಕ್ಷೇತ್ರಕ್ಕೆ ಬರುತ್ತಾರೆ….

ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವವರು ಸ್ವಾವಲಂಬನೆಯನ್ನು ಮೀರಿ ಬಹು ಬೇಡಿಕೆಯ ವ್ಯಕ್ತಿಗಳಾಗಿ ಮಾರ್ಪಡುತ್ತಾರೆ. ಮುಕ್ತ ಸ್ಪರ್ಧೆ ಏರ್ಪಡುತ್ತದೆ…..

ಒಟ್ಟಿನಲ್ಲಿ ಮುಂದಿನ ದಿನಗಳು ಭಾರತದಲ್ಲಿ ಮಹಿಳಾ ಆಡಳಿತದ ಕೇಂದ್ರವಾಗುತ್ತದೆ. ಅದಕ್ಕೆ ಭಾರತದ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು…..

ಬಾಲ್ಯ ವಿವಾಹ, ಸತಿ ಸಹಗಮನ, ವರದಕ್ಷಿಣೆ, ದೇವದಾಸಿ, ವೇಶ್ಯಾವಟಿಕೆ, ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ಅಮಾನುಷ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದಲೂ ನಲುಗಿ ಶೋಷಣೆಗೆ ಒಳಗಾಗುತ್ತಿದ್ದವರು ಒಂದು ರೀತಿಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುಬಹುದು……

ತಾಯಿ ಸತ್ತಮೇಲೆ ತವರಿಗೆ ಎಂದು ಹೋಗಬಾರದವ್ವ, ಬಡತನದ ಮನೆಯೊಳಗೆ ಹೆಣ್ಣು ಹುಟ್ಟಬಾರದವ್ವ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಈ ರೀತಿಯ ಜಾನಪದ ಹಾಡುಗಳು ಇನ್ನು ಮುಂದೆ ಸೃಷ್ಟಿಯಾಗಲಾರವು ಎಂದು ಭಾವಿಸೋಣ…..

ಹಾಗೆಂದು ಇದರಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಭಾವಿಸಬೇಡಿ. ಇದರ ದುಷ್ಪರಿಣಾಮಗಳು ಸಹ ಅಷ್ಟೇ ತೀವ್ರ ಪ್ರತಿಕ್ರಿಯಾ ರೂಪದಲ್ಲಿ ಪ್ರಕಟಗೊಳ್ಳುತ್ತವೆ…..

ಮುಖ್ಯವಾಗಿ ಭಾರತ ಪಾಶ್ಚಾತ್ಯ ಸಂಸ್ಕೃತಿಯಂತೆ ನಾಗರಿಕ ಸಮಾಜವಲ್ಲ. ಇಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮೇಲುಗೈ ಸಾಧಿಸಿದ ಸಾಂಸ್ಕೃತಿಕ ಸಮಾಜ. ಇಲ್ಲಿ ಮಹಿಳೆಯರು ಬಹಳಷ್ಟು ಶತಮಾನಗಳು ಬಹುತೇಕ ಗುಲಾಮರಂತೆ, ಜೀತದಾಳುಗಳಂತೆಯೇ ಬದುಕುತ್ತಿದ್ದರು. ಸ್ವಾತಂತ್ರ್ಯ ನಂತರ ಸಂವಿಧಾನಾತ್ಮಕ ಹಕ್ಕುಗಳಿಂದಾಗಿ ಎರಡನೇ ದರ್ಜೆಯ ಪ್ರಜೆಗಳಾಗಿ ಪರಿವರ್ತನೆ ಹೊಂದಿದರು. ಈಗ ಸಮಾನತೆಯ ಹಂತಕ್ಕೆ ತಲುಪಿದ್ದಾರೆ. ಮುಂದೆ ಪ್ರಬಲ ಶಕ್ತಿಯಾಗಬಹುದು. ಅದನ್ನು ಪುರುಷ ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುದು ಒಂದು ಸವಾಲು….

ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಕೌಟುಂಬಿಕ ವ್ಯವಸ್ಥೆ, ಮಕ್ಕಳ ಪಾಲನೆ ಪೋಷಣೆ, ಪೋಷಕರ ವೃದ್ಧಾಪ್ಯ, ವಿಚ್ಛೇದಿತರ ಏಕಾಂತ, ಆರೋಗ್ಯ, ಅಪಘಾತಗಳ ಪರಿಣಾಮ ಹೀಗೆ ಎಲ್ಲದರ ಮೂಲಾಧಾರವಾಗಿದ್ದ ಮಹಿಳೆ ಈಗ ಮತ್ತಷ್ಟು ವೇಗವಾಗಿ ಹೊರ ಪ್ರಪಂಚಕ್ಕೆ ಬಂದಾಗ ಆಗುವ ಪರಿಣಾಮಗಳನ್ನು ಈ ಸಮಾಜ ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಮಕ್ಕಳ ಆರೈಕೆಗೆ ಸ್ವಲ್ಪ ತೊಂದರೆ ಆಗುವುದು ನಿಶ್ಚಿತ. ಪಾಶ್ಚಿಮಾತ್ಯರಲ್ಲಿ ಸಂಬಂಧಗಳ ನಿರ್ವಹಣೆ ಮತ್ತು ಒಟ್ಟು ಸಮಾಜದ ಪ್ರತಿಕ್ರಿಯೆ ಮಹಿಳಾ ಉದ್ಯೋಗಕ್ಕೆ ಪೂರಕವಾಗಿದೆ. ಇಲ್ಲಿ ಇನ್ನೂ ಆ ಹಂತ ತಲುಪಿಲ್ಲದ ಕಾರಣ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು…..

ರಾಜಕೀಯ ಆಡಳಿತಕ್ಕೆ ಗುಣಮಟ್ಟದ ಮಹಿಳೆಯರು ಪ್ರವೇಶಿಸಿದರೆ ಸಹನೀಯ. ಪುರುಷರಂತೆ ಅಷ್ಟೇನು ಗುಣಮಟ್ಟವಿಲ್ಲದ ಕೇವಲ ಜಾತಿ ಧರ್ಮ ಹಣಬಲ ತೋಳ್ಬಲ ಭಂಡತನ ವಾಕ್ಚಾತುರ್ಯವನ್ನೇ ಬಂಡವಾಳ ಮಾಡಿಕೊಂಡ ಮಹಿಳೆಯರು ಹೆಚ್ಚಾಗಿ ಪ್ರವೇಶಿಸಿದರೆ ಪರಿಣಾಮ ತುಂಬಾ ಕೆಟ್ಟದಾಗಬಹುದು. ಭಾರತೀಯ ಸಮಾಜದಲ್ಲಿ ಮೇಲ್ನೋಟಕ್ಕಾದರೂ ಇದ್ದ ಮಹಿಳೆಯರ ಮೇಲಿನ ಪೂಜನೀಯ ಭಾವನೆ ಕಡಿಮೆಯಾಗಬಹುದು ಧಾರವಾಹಿಗಳ ವಿಲನ್ ಪಾತ್ರಗಳಂತೆ….

Vivekananda H K ಪ್ರಬುದ್ದ ಮನಸ್ಸು ಪ್ರಬುದ್ದ ಸಮಾಜ, [9/20/2023 6:02 AM]
ಅಕಾಡೆಮಿಕ್ ಶಿಕ್ಷಣಕ್ಕೆ ಹೊರತಾದ ಭಾರತದ ಇತಿಹಾಸ, ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ನಂಬಿಕೆ ಮುಂತಾದ ವಿಷಯಗಳಲ್ಲಿ ಹೆಚ್ಚಿನ ಸಾಮಾನ್ಯ ಮಹಿಳೆಯರ ಅಧ್ಯಯನ ಮತ್ತು ಚಿಂತನೆ ಕಡಿಮೆ ಇದೆ. ಅದನ್ನು ಹೆಚ್ಚು ಮಾಡಿದರೆ ಮಾತ್ರ ಪ್ರಗತಿಪರ ರಾಜಕೀಯ ಪ್ರವೇಶ ಉತ್ತಮ ಪರಿಣಾಮ ಬೀರುತ್ತದೆ. ಇಲ್ಲದಿದ್ದರೆ ಮಹಿಳೆಯರ ಸಾಂಪ್ರದಾಯಿಕ ಚಿಂತನಾಶೈಲಿ ರಾಜಕೀಯ ಭ್ರಷ್ಟಾಚಾರವನ್ನು ಹೆಚ್ಚು ಮಾಡಬಹುದು. ಸದ್ಯಕ್ಕೆ ಆ ಗುಣಮಟ್ಟದ ಸಾಮಾನ್ಯ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ವಾದ ಮಾಡಲಿಕ್ಕಾಗಿ ಈ ಅಭಿಪ್ರಾಯ ತಪ್ಪು. ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜ್ಞಾನ ಉಳ್ಳವರು ಎಂದು ಹೇಳಬಹುದು. ಕೆಲವು ಉದಾಹರಣೆ ಕೊಡಬಹುದು. ಆದರೆ ವಾಸ್ತವದಲ್ಲಿ ಅದು ನನ್ನ ಅನುಭವಕ್ಕೆ ಬಂದಿಲ್ಲ…..

ಬದಲಾವಣೆ ಜಗದ ನಿಯಮ. ಅದನ್ನು ಒಪ್ಪಿಕೊಳ್ಳಬೇಕು ಮತ್ತು ಸ್ವೀಕರಿಸಬೇಕು. ‌ಆದರೆ ಆ ಬದಲಾವಣೆ ಪ್ರಗತಿಪರವಾಗಿರಬೇಕು, ಜೀವಪರವಾಗಿರಬೇಕು ಮತ್ತು ಮಾನವ ಬದುಕಿನ ಗುಣಮಟ್ಟ ಹೆಚ್ಚಿಸುವಂತಿರಬೇಕು. ಇಲ್ಲದಿದ್ದರೆ ಬದಲಾವಣೆಗಳು ಸಮಾಜವನ್ನು ಮತ್ತಷ್ಟು ಅದೋಗತಿಗೆ ತೆಗೆದುಕೊಂಡು ಹೋಗಬಹುದು. ಮಹಿಳಾ ಮೀಸಲಾತಿ ಮಸೂದೆ ನಮ್ಮ ದೇಶದ ಸುಸ್ಥಿರ ಅಭಿವೃದ್ಧಿಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿ. ಭಾರತೀಯ ಮತ್ತು ಮಾನವೀಯ ಮೌಲ್ಯಗಳು ವಿಶ್ವಕ್ಕೆ ಮಾದರಿಯಾಗಲಿ, ಮಹಿಳಾ ರಾಜಕೀಯ ನೇತಾರರು ದಕ್ಷ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತಾ…….

ಎಲ್ಲಾ ಭಾರತೀಯ ಮಹಿಳೆಯರಿಗೆ ತುಂಬು ಹೃದಯದಿಂದ ಅಭಿನಂದನೆಗಳು. ‌ಈ ಮಸೂದೆಗೆ ನಮ್ಮ ಮನಃಪೂರ್ವಕ ಬೆಂಬಲವಿದೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!