Friday, September 20, 2024

ಪ್ರಾಯೋಗಿಕ ಆವೃತ್ತಿ

ಮಾಧ್ಯಮಗಳ ಗೆಳೆಯರ ಗಮನಕ್ಕೆ….. ನಾಚಿಕೆಯಿಂದ ತಲೆ ತಗ್ಗಿಸಿ ನಿಮ್ಮ ವೀರಾವೇಷದ ಬರಹಗಳಿಗೆ….

✍️ ವಿವೇಕಾನಂದ ಎಚ್.ಕೆ.

ಮಾಧ್ಯಮಗಳ ಗೆಳೆಯರ ಗಮನಕ್ಕೆ…….

ನಾಚಿಕೆಯಿಂದ ತಲೆ ತಗ್ಗಿಸಿ ನಿಮ್ಮ ವೀರಾವೇಷದ ಬರಹಗಳಿಗೆ – ನಿರೂಪಣೆಗಳಿಗೆ ಕ್ಷಮೆ ಕೇಳಿ ಭಾರತೀಯ ಸುದ್ದಿ ಮಾಧ್ಯಮಗಳ ಮಿತ್ರರೇ………

ಖಾಸಗಿ ಸಂಸ್ಥೆಯೊಂದು ನಡೆಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ‌ ಭಾರತ ನಿರಂತರ ಕುಸಿತ ಕಂಡು 180 ರಾಷ್ಟ್ರಗಳಲ್ಲಿ 161 ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ಆಫ್ಘಾನಿಸ್ತಾನಕ್ಕಿಂತಲೂ ಕೆಳಗಿದೆ. ಚೀನಾ ಸಹಜವಾಗಿ 179 ನೇ ಸ್ಥಾನದಲ್ಲಿದೆ. ಕಾರಣ ಅದು ಕಮ್ಯುನಿಸ್ಟ್ ರಾಷ್ಟ್ರ. ಅಲ್ಲಿ ಆರ್ಥಿಕ ಸ್ವಾತಂತ್ರ್ಯ ಹೊರತುಪಡಿಸಿ ಎಲ್ಲಾ ಸ್ವಾತಂತ್ರ್ಯಗಳು ದುಬಾರಿ. ಆ ವಿಷಯದಲ್ಲಿ ಚೀನಾ ನಮಗೆ ಸ್ಪರ್ಧಿಯೇ ಅಲ್ಲ. ಏಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ….

ಸಾಮಾನ್ಯ ಜನರಿಗೆ ಪ್ರತಿನಿತ್ಯ ಸುದ್ದಿಗಳ ಜೊತೆಗೆ ಎಷ್ಟೋ ಬುದ್ದಿವಾದ ಮಾತುಗಳನ್ನು ಹೇಳುವ ದೊಡ್ಡ ಗಂಟಲಿನ, ಜೋರು ಮಾತಿನ ಪತ್ರಿಕಾ ಮಿತ್ರರೇ ನಿಮಗಾಗುತ್ತಿರುವ ಅನ್ಯಾಯದ ವಿರುದ್ಧ ಎಂದಾದರೂ ಒಮ್ಮೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ – ಪ್ರದರ್ಶನ – ಹೋರಾಟ ಮಾಡಿದ್ದೀರ ? ಅದಕ್ಕೆ ಕಾರಣರಾದವರನ್ನು ಪ್ರಶ್ನಿಸಿದ್ದೀರಾ ? ಅವರನ್ನು ‌ಸಾಂಕೇತಿಕವಾಗಿಯಾದರೂ ನಿಷೇಧಿಸಿದ್ದೀರಾ ?…

ಶೇಮ್ ಶೇಮ್ ಆನ್ ಯು…

ಸಾಮಾನ್ಯ ಪ್ರಜೆಗಳಿಗಿಂತ ವಿಶೇಷ ಸ್ವಾತಂತ್ರ್ಯ ಮತ್ತು ಅಧಿಕಾರ ಪಡೆದೂ, ನಿಮ್ಮ ಕರ್ತವ್ಯ ಮತ್ತು ವೃತ್ತಿ ಧರ್ಮ ಅದೇ ಆಗಿದ್ದರೂ ಅದನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಅಥವಾ ಮಾರಾಟವಾಗಿದ್ದೀರಿ.‌ ನಿಮಗೆ ಒಂದು ಚೂರು ಮನಃಸಾಕ್ಷಿಯೂ ಉಳಿದಿಲ್ಲವೇ ?

ನಿಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳುವ ಯೋಗ್ಯತೆ ಮತ್ತು ಸಾಮರ್ಥ್ಯವೇ ನಿಮಗಿಲ್ಲದಿರುವಾಗ ಇನ್ನು ಪ್ರಜಾಪ್ರಭುತ್ವದ, ಇಲ್ಲಿರುವ ಜನತೆಯ ಸ್ವಾತಂತ್ರ್ಯ ಹೇಗೆ ಉಳಿಸುವಿರಿ‌ ? ಸಂವಿಧಾನದ ನಾಲ್ಕನೆಯ ಅಂಗ ಎಂಬ ಅನಧಿಕೃತ ಪಟ್ಟಕ್ಕೆ ನೀವು ಯೋಗ್ಯರೆ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ…..

ಕಾವಲು ನಾಯಿಯಂತಿರಬೇಕಾದ ನೀವು ಸಾಕು ನಾಯಿಗಳಂತಾಗಿರುವುದೇ ನಿಮ್ಮ ಸಾಧನೆ,

ವಿರೋಧವೇ ನಿಮ್ಮ ಪ್ರಮುಖ ಅಸ್ತ್ರವಾಗಿರಬೇಕಾದ ಜಾಗದಲ್ಲಿ ಹೊಗಳು ಭಟರಾಗಿ ರೂಪಾಂತರ ಹೊಂದಿರುವುದೇ ನಿಮ್ಮ ಸಾಧನೆ….

ಕಾರ್ಪೊರೇಟ್ ಸಂಸ್ಥೆಗಳ ಜೊತೆ ಸೇರಿ ಚುನಾವಣಾ ಸಮೀಕ್ಷೆಗಳನ್ನು ನಡೆಸುವುದೇ ನಿಮ್ಮ ಸಾಧನೆ….

ರಿಯಲ್ ಎಸ್ಟೇಟ್ ಎಕ್ಸ್ ಪೋ, ಆಹಾರದ ಎಕ್ಸ್ ಫೋ, ಫರ್ನೀಚರ್ ಎಕ್ಸ್ ಫೋ, ಟ್ರಾವೆಲ್ ಎಕ್ಸ್ ಫೋ ಹೀಗೆ ಪ್ರದರ್ಶನ ಮತ್ತು ಮಾರಾಟದ ಅಂಗಡಿಗಳ ವ್ಯವಹಾರ ಮಾಡುವುದೇ ನಿಮ್ಮ ಸಾಧನೆ….

ಜನರಲ್ಲಿ ಇರಬಹುದಾದ ವೈಚಾರಿಕ ಪ್ರಜ್ಞೆಯನ್ನು ಅಳಿಸಿ ಮೌಡ್ಯತೆಯನ್ನು ಬೆಳೆಸುವುದೇ ನಿಮ್ಮ ‌ಸಾಧನೆ….

ಸಿನಿಮಾ ನಟ ನಟಿಯರನ್ನು ದೈವಿಕ ಶಕ್ತಿಗಳಂತೆ, ಅತಿಮಾನುಷ ವ್ಯಕ್ತಿಗಳಂತೆ ಚಿತ್ರಿಸಿ ಜನರಲ್ಲಿ ಭ್ರಮೆಗಳನ್ನು ಸೃಷ್ಟಿಸುವುದೇ ನಿಮ್ಮ ಸಾಧನೆ….

ಇನ್ನಾದರೂ ಎಚ್ಚೆತ್ತುಕೊಳ್ಳಿ,World press freedom
ನಿಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಿ.
ವ್ಯಕ್ತಿ ಎಷ್ಟೇ ದೊಡ್ಡವನಾದರು, ಜನಪ್ರಿಯನಾದರು ಸತ್ಯ ಮತ್ತು ವಾಸ್ತವವನ್ನು ಅರಿತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿ,……

ಧರ್ಮೋ ರಕ್ಷತಿ ರಕ್ಷಿತಃ
ವೃಕ್ಷೋ ರಕ್ಷತಿ ರಕ್ಷಿತಃ
ಸಂವಿಧಾನೋ ರಕ್ಷತಿ ರಕ್ಷಿತಃ
ಸ್ವಾತಂತ್ರ್ಯೋ ರಕ್ಷತಿ ರಕ್ಷಿತಃ….
ಎಂಬುದನ್ನು ಮರೆಯದಿರಿ…..

ಮುಂದಿನ ವರ್ಷ ಯಾವ ಸಂಸ್ಥೆಗಳೇ ಆಗಲಿ ಈ ರೀತಿಯ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದ ಬಗ್ಗೆ ಸಂಶೋಧನಾ ವರದಿ ಪ್ರಕಟಿಸುವಾಗ ಭಾರತ ಕನಿಷ್ಟ ನೂರರ ಒಳಗೆ ಮತ್ತು ನಂತರದ ವರ್ಷ ಐವತ್ತರ ಒಳಗೆ ಇರುವಂತ ವಾತಾವರಣ ಸೃಷ್ಟಿಮಾಡಿಕೊಳ್ಳಿ.

ಈಗಿನ ವಾತಾವರಣದಲ್ಲಿ ಇದು ಒಂದು ದೊಡ್ಡ ಸವಾಲು ನಿಜ. ಆದರೆ ಅದು ಅಸಾಧ್ಯವಲ್ಲ. ಪತ್ರಿಕಾ ಸ್ವಾತಂತ್ರ್ಯ ಒಂದು ದೈತ್ಯ ಶಕ್ತಿ ಎಂಬುದನ್ನು ಮರೆಯದಿರಿ..

ಹಾಗೆಯೇ ಆಡಳಿತ ವ್ಯವಸ್ಥೆ ಸಹ ಅರ್ಥಮಾಡಿಕೊಳ್ಳಬೇಕು. ಅಭಿವೃದ್ಧಿ ಎಂದರೆ ಅದು ಸುಸ್ಥಿರ ಮತ್ತು ಸರ್ವತೋಮುಖವಾಗಿರಬೇಕು. ಕೇವಲ ಅಸಮಾನತೆಯ ಆರ್ಥಿಕ ಅಭಿವೃದ್ಧಿ ಮಾತ್ರ ಬೆಳವಣಿಗೆಯಲ್ಲ. ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಯೂ ಸಹ ದೇಶದ ಅಭಿವೃದ್ಧಿಯ ಒಂದು ಭಾಗ. ಆ ಸ್ವಾತಂತ್ರ್ಯ ಇಲ್ಲದ ಅಭಿವೃದ್ಧಿ ಆತ್ಮವಿಲ್ಲದ ದೇಹದಂತೆ.

ಮುಕ್ತ ಮಾಧ್ಯಮ ಸ್ವಾತಂತ್ರ್ಯ ಉಳಿಯಲಿ – ಪ್ರಜಾಪ್ರಭುತ್ವ ಬೆಳೆಯಲಿ – ಪಕ್ಷಪಾತಿ ಮತ್ತು ಸಂಕುಚಿತ ಮನೋಭಾವದ ಪತ್ರಕರ್ತರು – ವರದಿಗಾರರು ತೊಲಗಲಿ – ಭಾರತದ ಘನತೆ ಹೆಚ್ಚಿಲಿ………

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!