Saturday, May 18, 2024

ಪ್ರಾಯೋಗಿಕ ಆವೃತ್ತಿ

8 ತಿಂಗಳಲ್ಲಿ ಮಂಡ್ಯ ಜಿಲ್ಲೆಗೆ ₹1,000 ಕೋಟಿ ಅನುದಾನ ಬಂದಿದೆ : ಚಲುವರಾಯಸ್ವಾಮಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಳೆದ 8 ತಿಂಗಳಿಂದ ಮಂಡ್ಯ ಜಿಲ್ಲೆಗೆ ಗ್ಯಾರಂಟಿ ಯೋಜನೆಯ ಜೊತೆಗೆ ಲೋಕೋಪಯೋಗಿ, ನೀರಾವರಿ ಸೇರಿದಂತೆ ಇನ್ನಿತರೆ ಇಲಾಖೆಗಳ ಮೂಲಕ ಅಭಿವೃದ್ಧಿಗಾಗಿ 1,000 ಕೋಟಿ ರೂ ಅನುದಾನ  ಬಂದಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಮದ್ದೂರು ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಗ್ಯಾರಂಟಿ ಸಮಾವೇಶ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಮಾಚ್೯ ಅಂತ್ಯದವರೆಗೆ 56 ಸಾವಿರ ಕೋಟಿ ರೂ ಅನುದಾನವನ್ನು ಸಾರ್ವಜನಿಕರಿಗೆ ನೀಡಲಿದೆ. ಮುಂದಿನ ಒಂದು ವರ್ಷಕ್ಕೆ 69 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ ಎಂದು ವಿವರಿಸಿದರು.

ಮದ್ದೂರು ತಾಲ್ಲೂಕಿನ ಶಾಸಕರು ತಾಲ್ಲೂಕಿನ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ ಹಿನ್ನಲೆಯಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ 50 ರಿಂದ 60 ಕೋಟಿ, ನೀರಾವರಿ ಇಲಾಖೆಗೆ 250 ಕೋಟಿ ರೂ ಅನುದಾನ ನೀಡಲಾಗಿದೆ ಎಂದರು.

ಮದ್ದೂರು ತಾಲ್ಲೂಕಿನಲ್ಲಿ ಅನ್ನ ಭಾಗ್ಯ ಯೋಜನೆಯಡಿ- 73,000, ಗೃಹ ಲಕ್ಷ್ಮಿ – 74000 ಹಾಗೂ ಗೃಹ ಜ್ಯೋತಿ ಯೋಜನೆಯಡಿ 71000 ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಯುವ ನಿಧಿ ಯೋಜನೆಗೆ ಹೆಚ್ಚಿನ ಫಲಾನುಭವಿಗಳು ಹೆಸರು ನೊಂದಾಯಿಸಿಕೊಳ್ಳಿ ಎಂದರು.

ಸ್ವಾತಂತ್ರ ಬಂದ ನಂತರ ಮೊದಲ ಬಾರಿಗೆ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಗ್ಯಾರಂಟಿಗಳನ್ನು ಸೇರಿಸಿ ಸರ್ಕಾರ ಆಸ್ತಿತ್ವಕ್ಕೆ ಬಂದ ತಕ್ಷಣ ಮೊದಲನೇ ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಿ, ನಂತರ ಹಂತ ಹಂತವಾಗಿ 5 ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಯಿತು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಕೋಟ್೯ಗಳಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಳಿಸಲಾಗುತ್ತಿದೆ ಎಂದರು.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೆಚ್ಚು ಅಪಘಾತ ಮತ್ತು ಸಾವು ಉಂಟಾಗುತ್ತಿತ್ತು, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಹಲವಾರು ಸಭೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ಜವಾಬ್ದಾರಿ ವಹಿಸಿ ಇಂದು ಅಪಘಾತ ಹಾಗೂ ಸಾವಿನ ಪ್ರಮಾಣ ಕಡಿಮೆ ಮಾಡಲಾಗಿದೆ ಎಂದರು.

ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ – ಕೆ.ಎಂ.ಉದಯ್

ಮದ್ದೂರು ತಾಲ್ಲೂಕಿನ ಅಭಿವೃದ್ದಿ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 275 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿದ್ದು, ಬಹಳ ಚುರುಕಿನಿಂದ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಎಂದು ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಎಂ. ಉದಯ್ ತಿಳಿಸಿದರು.

ಸಣ್ಣ ನೀರಾವರಿ ಹಾಗೂ ವಿವಿಧ ನೀರಾವರಿ ಇಲಾಖೆಗಳು ಸೇರಿ 200 ಕೋಟಿ ಮೊತ್ತವನ್ನು ಮದ್ದೂರು ತಾಲ್ಲೂಕಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ರಸ್ತೆಗಳು ಹಾಗೂ ಚರಂಡಿಗಳ ಅಭಿವೃದ್ಧಿಗಾಗಿ ಬೇಡಿಕೆ ಇಡಲಾಯಿತು. ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ 25 ಕೋಟಿ ರೂ ಅನುದಾನ ನೀಡಿದೆ. ಮದ್ದೂರು ತಾಲ್ಲೂಕಿನ ಅಭಿವೃದ್ದಿಗೂ ಸಹ 25 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ ಎಂದರು.

ಪಿ. ಡಬ್ಲ್ಯೂ. ಡಿ. ರಸ್ತೆಗಳ ಅಭಿವೃದ್ದಿಗೆ 30 ಕೋಟಿ ಹಣವನ್ನು ರಾಜ್ಯ ಸರ್ಕಾರ ನೀಡಿದೆ. ಮುಂದಿನ ದಿನಗಳಲ್ಲೂ ಕೂಡ ತಾಲ್ಲೂಕು ಹಂತ ಹಂತವಾಗಿ ಅಭಿವೃದ್ದಿಯಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!