Tuesday, May 14, 2024

ಪ್ರಾಯೋಗಿಕ ಆವೃತ್ತಿ

11 ದಿನದಲ್ಲಿ 13,560 ಕಿ.ಮೀ ಕ್ರಮಿಸಿದ ಪುಟ್ಟ ಹಕ್ಕಿಯ ನಾನ್ ಸ್ಟಾಪ್ ಪ್ರಯಾಣ

ಪುಟ್ಟ ಹಕ್ಕಿಯೊಂದು ಕೇವಲ 11 ದಿನದಲ್ಲಿ 13,560 ಕಿ.ಮೀ.(8435 ಮೈಲಿ)ಕ್ರಮಿಸಿದೆ ಎಂದರೆ ಅದು ಅಚ್ಚರಿಯ ಸಂಗತಿಯೇ ಸರಿ.

ಪ್ರಪಂಚದ ಗಮನ ಸೆಳೆದ ಆ ಪುಟ್ಟ ಹಕ್ಕಿ ಹೆಸರು ಬಾರ್-ಟೈಲ್ಡ್ ಗೋಡ್ವಿಟ್.

ಈ ಅತಿ ಪುಟ್ಟ ಹಕ್ಕಿಯ ಬಗ್ಗೆ ಒಂದು ಸಣ್ಣ ಸುದ್ದಿಯೂ ಆಗಲಿಲ್ಲ. ಆಗಬೇಕಿತ್ತು, ಆಗಲಿಲ್ಲ. ಏಕೆಂದರೆ ನಮ್ಮ ಮಾಧ್ಯಮಗಳಿಗೆ ರಾಜಕಾರಣ, ಸಿನಿಮಾ, ಧರ್ಮ, ಹಿಂಸೆ ಸುದ್ದಿ ಬಿತ್ತಿ ಬೆಳೆ ತೆಗೆಯುವ ಕೆಲಸ ತುಂಬಾ. ಇರಲಿ,
ನವ ಮಾಧ್ಯಮಗಳ ಮೂಲೆಯಲ್ಲಿ ಈ ಅದ್ಭುತ ಸುದ್ದಿ ಸಿಕ್ಕಿತು. ಅದೊಂದು ಪುಟ್ಟ ಹಕ್ಕಿಯ ಸುದೀರ್ಘ ಪಯಣ.

ಪಕ್ಷಿಗಳ ಜೀವನವೇ ವಿಸ್ಮಯ. ರೋಮಾಂಚನ. ಅದರಲ್ಲೂ ಹಕ್ಕಿಗಳ ವಲಸೆ ಕಥೆ ಎಂದೆಂದಿಗೂ ರೋಚಕ, ರೋಮಾಂಚಕ.

ಎಲ್ಲಿಯ ಸೈಬೀರಿಯಾ ಎಲ್ಲಿಯ ಭಾರತದ ಪಶ್ಚಿಮ ಘಟ್ಟ.ಇಂತಹ ಪಶ್ಚಿಮ ಘಟ್ಟಗಳಲ್ಲಿ ಗೂಡು ಕಟ್ಟಿ ಒಂದು ಋತು ಕಳೆಯಲು ಬರುತ್ತೆ ಎಂದರೆ ಇದು ಮಹಾ ವಲಸೆಯ ಸಣ್ಣ ಪಕ್ಷಿ ಎನ್ನಬಹುದು.

ಎರಡು ವರ್ಷಗಳ ಹಿಂದೆ ಕೀನ್ಯಾದಿಂದ ಒಂದು ವಾರದಲ್ಲಿ 6,300 ಕಿ.ಮೀ ಕ್ರಮಿಸಿ ಒನೊನ್ ಕೋಗಿಲೆ ಭಾರತಕ್ಕೆ ಬಂದಿತ್ತು. ಈಗ ಇಂಥದ್ದೇ ಸುದ್ದಿ ಆಸ್ಟ್ರೇಲಿಯಾದಿಂದ ಬಂದಿದೆ.

ವಿಶ್ವ ದಾಖಲೆ ಪ್ರಯಾಣ

ಬಾರ್-ಟೈಲ್ಡ್ ಗೋಡ್ವಿಟ್ ಹಕ್ಕಿಗಳು ವಲಸೆಗೆ ಹೆಸರುವಾಸಿ. ಉತ್ತರ ಧ್ರುವ-ದಕ್ಷಿಣ ಧ್ರುವ ನಡುವೆ ಈ ಹಕ್ಕಿಗಳು ಆಹಾರ,ವಿಹಾರಕ್ಕಾಗಿ ಹಾರಾಡುವುದುಂಟು.

ವಿಜ್ಞಾನಿಗಳು 5ಜಿ ಉಪಗ್ರಹ ಟ್ಯಾಗ್ ಅನ್ನು ಈ ಹಕ್ಕಿಯ ಬೆನ್ನ ಹಿಂಬದಿಗೆ ಅಳವಡಿಸಿ, ಹಕ್ಕಿಯ ಪ್ರಯಾಣದ ಅಂಕಿ ಅಂಶ ಕಲೆ ಹಾಕುತ್ತಾರೆ.

ಅಕ್ಟೋಬರ್ ನಲ್ಲಿ ವಲಸೆ ಅಧ್ಯಯನಕ್ಕಾಗಿ ವಿಜ್ಞಾನಿಗಳು ಕೇವಲ ಐದು ತಿಂಗಳ ಪ್ರಾಯದ, 400 ಗ್ರಾಂ ತೂಕದ ಬಾರ್-ಟೈಲ್ಡ್-ಗೋಡ್ವಿಟ್ ಹಕ್ಕಿಯೊಂದಕ್ಕೆ 5G ಸಾಟಲೈಟ್ ಟ್ಯಾಂಗಿಂಗ್ ಮಾಡಿದ್ದಾರೆ. ಆಮೇಲೆ ಅದು ಎಲ್ಲಿಗೆ ಹೋಗುತ್ತದೆ,ಏನು ಮಾಡುತ್ತದೆ ಎಂದು ಹಾರಾಟವನ್ನು ಮಾನಿಟರ್ ಮಾಡಿದ್ದಾರೆ.

ಗಾಡ್ ವಿಟ್ Limosa lapponica (ಸ್ಯಾಟಲೈಟ್ ಟ್ಯಾಗ್ ಸಂಖ್ಯೆ 234684) (ಕರ್ನಾಟಕದಲ್ಲಿ ಪಟ್ಟೆಬಾಲದ ಹಿನ್ನೀರ ಗೊರವಹಕ್ಕಿ ಎಂದು ಕರೆಯಲಾಗುತ್ತದೆ) ಮ್ಯಾರಥಾನ್ ಪ್ರಯಾಣವನ್ನು ಅಕ್ಟೋಬರ್ 13ರಂದು ಅಲಾಸ್ಕಾದಿಂದ ಆರಂಭಿಸಿ, ಎಲ್ಲೂ ವಿಶ್ರಮಿಸದೆ ಆಹಾರ, ನೀರು ಸೇವಿಸದೆ ಸಮುದ್ರ, ಸಾಗರಗಳ ಮೇಲೆ ಹಾರುತ್ತಾ ಅವಿರತವಾಗಿ 11 ದಿನಗಳು ಹಾಗೂ ಒಂದು ಗಂಟೆಗಳ ಪ್ರಯಾಣ ಸಾಧಿಸಿ, ಆಸ್ಟ್ರೇಲಿಯಾದ ಈಶಾನ್ಯ ತಾಸ್ಮೇನಿಯಾಕ್ಕೆ ಬಂದಿದೆ ಎಂದು ಉಪಗ್ರಹ ಅಂಕಿ ಅಂಶ ತಿಳಿಸಿದೆ.

ಉಫ್…ಅಬ್ಬಾ
ಎಂತಹ ಪ್ರಯಾಣ…
ಯಾವ ವಿಮಾನ, ಯಾವ ಜಿಪಿಎಸ್, ಯಾವ ಲೆಕ್ಕ?
ಬಾರ್-ಟೈಲ್ಡ್ ಗೋಡ್ವಿಟ್ ಎಮಬ ಪುಟ್ಟ ಹಕ್ಕಿಯ ದೊಡ್ಡ ಪ್ರಯಾಣಕ್ಕೆ ಹ್ಯಾಟ್ಸಾಫ್….

ಸಂಗ್ರಹ: ಗೋಪಾಲಕೃಷ್ಣ ಕುಂಟಿನಿ ಮತ್ತು ಇತರ ಮೂಲಗಳು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!