Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ಆಚರಣೆಗೆ ಆದೇಶ:ಸಿಎಂ

ಮೂರು ಪವಿತ್ರ ನದಿಗಳಾದ ಕಾವೇರಿ,ಲಕ್ಷ್ಮಣತೀರ್ಥ,ಹೇಮಾವತಿ ಸಂಗಮವಾದ ಪುಣ್ಯಸ್ಥಳ ತ್ರಿವೇಣಿ ಸಂಗಮದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಮಹಾ ಕುಂಭಮೇಳ ನಿಗದಿತವಾಗಿ ನಡೆಯಬೇಕು ಎಂಬುದಕ್ಕೆ ಸರ್ಕಾರಿ ಆದೇಶ ಹೊರಡಿಸುವುದಾಗಿ ಸಿಎಂ ಬಸವರಾಜ ಬೊಮ್ಮಯಿ ತಿಳಿಸಿದರು.

ಕೆ.ಆರ್.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ವರ್ಷ ಹಲವಾರು ಪೂಜ್ಯ ಸ್ವಾಮೀಜಿಗಳು, ಸಾಧು,ಸಂತರಿಂದ ಕುಂಭಮೇಳ ಯಶಸ್ವಿಯಾಗಿ ನಡೆದಿದೆ.ಮುಂದೆ ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಸಲು ಅಧಿಕೃತ ಸರ್ಕಾರಿ ಆದೇಶ ಹೊರಡಿಸುತ್ತೇನೆ ಎಂದರು.

2.30 ಕೋಟಿ ಪರಿಹಾರ
ಕರ್ನಾಟಕದ ಉದ್ದಗಲಕ್ಕೂ ಮಳೆಯಾಗುತ್ತಿದೆ. ಕೆರೆಕಟ್ಟೆಗಳು ತುಂಬಿವೆ.ಆದರೆ ಕೆಲವು ಕಡೆ ಪ್ರವಾಹ ಆಗಿದೆ. ಜನವಸತಿಗೆ ತೊಂದರೆಯಾಗಿದ್ದು, ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿದ್ದೇನೆ.ಮಂಡ್ಯಕ್ಕೆ ಸಂಬಂಧಿಸಿದಂತೆ ವೀಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಬೆಳೆ ನಾಶಕ್ಕೆ 2.30 ಕೋಟಿ ರೈತರಿಗೆ ಪರಿಹಾರವನ್ನು ಒದಗಿಸಲಾಗಿದೆ. ಅದರ ಜೊತೆಗೆ ಇಬ್ಬರು ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಿದ್ದೇನೆ ಎಂದು ತಿಳಿಸಿದರು.

ಬಿದ್ದುಹೋಗಿದ್ದ 304 ಮನೆಗಳಿಗೆ 100ಕ್ಕೆ 100 ಪರಿಹಾರ ನೀಡಲಾಗಿದೆ. ಮತ್ತೆ ಒಂದು ವಾರದಿಂದ ಆಗುತ್ತಿರುವ ಮಳೆಗೆ ಕೂಡಲೇ ಬೆಳೆ ನಾಶ, ಮನೆಗಳಿಗೆ ಸಂಬಂಧಿಸಿದಂತೆ ವರದಿ ನೀಡಿದರೆ ಕೂಡಲೇ ಪರಿಹಾರ ನೀಡಲಾಗುವುದು ಎಂದರು.

ಬೆಳೆ ಪರಿಹಾರವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಒಣಬೇಸಾಯಕ್ಕೆ 13600ರೂ., ನೀರಾವರಿಗೆ 25 ಸಾವಿರ ಪರಿಹಾರ ನೀಡುತ್ತಿದ್ದೇವೆ. ತೋಟಗಳಿಗೆ ಕೇಂದ್ರ 18 ಸಾವಿರ ರೂ.ಗಳನ್ನು ನೀಡಿದರೆ ರಾಜ್ಯ ಸರ್ಕಾರ 28 ಸಾವಿರ ರೂ.ಗಳನ್ನು ನೀಡುತ್ತಿದೆ . ಮನೆಗಳಿಗೆ ಕೇಂದ್ರ ಸರ್ಕಾರ 95 ಸಾವಿರ ರೂ. ನೀಡುತ್ತದೆ. ನಾವು ಪೂರ್ಣ ಬಿದ್ದಿರುವ ಮನೆಗಳಿಗೆ 5 ಲಕ್ಷ, ಭಾಗಶಃ ಹಾಳಾಗಿರುವ ಮನೆಗಳಿಗೆ 3 ಲಕ್ಷ, ಹಾಗೂ ಸ್ವಲ್ಪ ಹಾಳಾಗಿರುವ ಮನೆಗಳಿಗೆ 50 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಹೀಗೆ ಕಷ್ಟದಲ್ಲಿರುವ ಜನರಿಗೆ ನೆರ ವಾಗುತ್ತಿದ್ದೇವೆ ಎಂದರು.

ರಾಷ್ಟ್ರೀಯ ಹೆದ್ದಾರಿ: ಶೀಘ್ರ ಕ್ರಮ
ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಇದೇ ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಬೆಂಗಳೂರು- ಮೈಸೂರಿ ಹೆದ್ದಾರಿಯಲ್ಲಿ ಪದೇ ಪದೇ ನೀರು ನಿಂತು ತೊಂದರೆಯಾಗುತ್ತಿದ್ದು, ಇದರಲ್ಲಿ ವಿನ್ಯಾಸದ ಸಮಸ್ಯೆಯೋ ಅಥವಾ ನಿರ್ವಹಣೆಯ ಸಮಸ್ಯೆಯೋ ಎಂದು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ನೀರು ಬರದಂತೆ ವಿಶೇಷ ವ್ಯವಸ್ಥೆ ಮಾಡುತ್ತೇನೆ ಎಂದರು.

ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠ ಶ್ರೀ ಶಿವಾನಂದಪುರಿ ಸ್ವಾಮೀಜಿ, ಸಚಿವರಾದ ಡಾ.ನಾರಾಯಣಗೌಡ, ಕೆ.ಗೋಪಾಲಯ್ಯ, ಬಿ.ಸಿ ನಾಗೇಶ್,ಬಿ.ಎ ಬಸವರಾಜ,ಸಂಸದೆ ಸುಮಲತಾ ಅಂಬರೀಶ್, ಶಾಸಕರುಗಳಾದ ಸಿ.ಟಿ ರವಿ, ಸಿ.ಎಸ್ ನಿರಂಜನ್ ಕುಮಾರ್, ಬಿ. ಹರ್ಷ ವರ್ಧನ್, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಸಿಇಒ ಶಾಂತ ಎಲ್. ಹುಲ್ಮನಿ,ಎಸ್ಪಿ ಎನ್.ಯತೀಶ್, ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!