Friday, September 20, 2024

ಪ್ರಾಯೋಗಿಕ ಆವೃತ್ತಿ

ಕಳೆಗಟ್ಟಿದ ಸಂಕ್ರಾಂತಿ : ಕಿಚ್ಚು ಹಾಯಿಸಿ ಸಂಭ್ರಮಿಸಿದ ಜನತೆ

ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಇಂದು ಎಲ್ಲೆಡೆ ಸಂಭ್ರಮ-ಸಂತೋಷದಿಂದ ಆಚರಿಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ 2020 ,2021 ರಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ಇರಲಿಲ್ಲ. ಎರಡು ವರ್ಷ ಕಿಚ್ಚು ಹಾಯಿಸಲು ಅವಕಾಶವೇ ಇರಲಿಲ್ಲ. 2022ರಲ್ಲಿ ಸಂಕ್ರಾಂತಿ ಹಬ್ಬ ನಡೆದರೂ ಅಷ್ಟೇನೂ ಕಳೆಗಟ್ಟಿರಲಿಲ್ಲ.

ಆದರೆ 2023, ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಈ ಬಾರಿ ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಯಿತು. ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದೂಟ ಮಾಡಿ ಸಂತೋಷ ಪಟ್ಟರೆ, ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳು ಹೊಸ ಬಟ್ಟೆ ಹಾಕಿಕೊಂಡು ಎಳ್ಳು ಬೀರಿ ಸಂಭ್ರಮಪಟ್ಟರು. ಯುವಜನತೆ, ರೈತಾಪಿ ವರ್ಗ ತಮ್ಮ ಜಾನುವಾರುಗಳಿಗೆ ಸಿಂಗರಿಸಿ, ಕಿಚ್ಚು ಹಾಯಿಸಿ ಸಂತಸ ವ್ಯಕ್ತಪಡಿಸಿದರು.

ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದ ನಡುವೆ ಸಂಕ್ರಾಂತಿ ಕಿಚ್ಚು ಹಾಯಿಸಲಾಯಿತು. ರೈತರು ತಮ್ಮ ಜಾನುವಾರುಗಳೊಂದಿಗೆ ಕಿಚ್ಚು ಹಾಯ್ದರೆ, ಯುವಕರು ಗೂಳಿಗಳು, ಎತ್ತುಗಳೊಂದಿಗೆ ಕಿಚ್ಚು ಹಾಯ್ದು ಸಂಭ್ರಮದಿಂದ ಕುಣಿದಾಡಿದರು.

ಜೆ.ದೇವಯ್ಯ ಬಳಗ ಹಾಗೂ ಸುಭಾಷ್ ಯುವಕರ ಬಳಗದ ವತಿಯಿಂದ ಸಂಕ್ರಾಂತಿ ಸಂಭ್ರಮ ಅದ್ದೂರಿಯಾಗಿ ಸರ್.ಎಂ.ವಿ.ಕ್ರೀಡಾಂಗಣದಲ್ಲಿ ನಡೆಯಿತು.ಕ್ರೀಡಾಂಗಣ ಜನರಿಂದು ತುಂಬಿತ್ತು. ಕಳೆದ ಮೂರು ವರ್ಷಗಳಿಂದ ಕಳೆಗುಂದಿದ್ದ ಸಂಕ್ರಾಂತಿ ಸಂಭ್ರಮ ಈ ಬಾರಿ ಕಳೆಗಟ್ಟಿತು.ಕಿಚ್ಚು ಹಾಯುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಜನತೆ ಹೋ ಎಂದು ಉದ್ಘಾರ ತೆಗೆದು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಮೊದಲ ಬಾರಿ ಕಿಚ್ಚು ಹಾಯಿಸಲು ಜಾನುವಾರುಗಳೊಂದಿಗೆ ಬಂದ ಯುವಕರು ಸಾಕಷ್ಟು ಖುಷಿಪಟ್ಟರು.

ಕೆಲವು ಕಡೆ ಯುವಕರು ಡಿಜೆ ಸೌಂಡ್ಸ್ ಹಾಕಿಕೊಂಡು ಎತ್ತುಗಳನ್ನು ಮೆರವಣಿಗೆ ಮಾಡುವ ಜೊತೆಗೆ ತಾವು ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

ಯುವ ಕಾಂಗ್ರೆಸ್ ಮುಖಂಡ ಎಂ.ಎಸ್. ಚಿದಂಬರ್ ಮಾತನಾಡಿ, ಈ ಬಾರಿ ಸಂಕ್ರಾಂತಿ ಹಬ್ಬ ಬಹಳ ಸಂಭ್ರಮದಿಂದ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಜೆ.ದೇವಯ್ಯ ಟ್ರಸ್ಟ್ ವತಿಯಿಂದ ಧನ್ಯವಾದ ಅರ್ಪಿಸುತ್ತೇನೆ ಎಂದರು.

ನಗರದ ಹೊಸಹಳ್ಳಿ ಹಾಗೂ ಕಲ್ಲಹಳ್ಳಿಯಲ್ಲಿ ಸಾವಿರಾರು ಜನರು ಕಿಚ್ಚು ಹಾಯಿಸುವ ದೃಶ್ಯವನ್ನು ಕಣ್ತುಂಬಿ ಕೊಂಡರು.ಹೊಸಹಳ್ಳಿಯಲ್ಲ ಕಿಚ್ಚು ಹಾಯಿಸುವ ಸಂದರ್ಭದಲ್ಲಿ ಹಲವರು ಗಾಯಗೊಂಡ ಘಟನೆ ಕೂಡ ನಡೆದಿದೆ. ಒಟ್ಟಾರೆ ಈ ಬಾರಿಯ ಸಂಕ್ರಾಂತಿ ಹಬ್ಬ ಕಳೆಗಟ್ಟಿದ್ದು ಸಂತಸ ತಂದಿತು.

ಗಾಯಗೊಂಡ ಹಲವರು 

ಮಂಡ್ಯನಗರದ ಹೊಸಹಳ್ಳಿಯಲ್ಲಿ ದನಗಳನ್ನು ಕಿಚ್ಚು ಹಾಯಿಸುವ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ. ಕಿಚ್ಚು ಹಾದು ನುಗ್ಗಿಬರುತ್ತಿದ್ದ ದನಕ್ಕೆ ಅಡ್ಡವಾಗಿ ಸಿಕ್ಕ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ಇನ್ನಿಬ್ಬರು ವ್ಯಕ್ತಿಗಳು ಬೆಂಕಿ ಜ್ವಾಲೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದು, ಒಬ್ಬರನ್ನು ಮೈಸೂರಿಗೆ ಮತ್ತೊಬ್ಬರನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!