Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯವನ್ನು ಶಿಕ್ಷಣ ಕಾಶಿಯನ್ನಾಗಿಸುವುದು ನನ್ನ ಮೊದಲ ಆದ್ಯತೆ – ಗಣಿಗ ರವಿಕುಮಾರ್

ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಸಾವಿರ ಎಕರೆ ಜಮೀನನ್ನು ಖರೀದಿ ಮಾಡಿ ದೇಶದ ಎಲ್ಲಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮಂಡ್ಯಕ್ಕೆ ಕರೆತಂದು ಮಂಡ್ಯವನ್ನು ಶಿಕ್ಷಣ ಕಾಶಿಯನ್ನಾಗಿಸುವುದು ನನ್ನ ಗುರಿಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗಣಿಗ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಮಂಡ್ಯದ ಅಭಿವೃದ್ದಿಯ ಮುಂದಿನ ಯೋಜನೆಗಳ ಬಗ್ಗೆ ಹಲವು ಅಂಶಗಳನ್ನು ಹಂಚಿಕೊಂಡರು.

ಹೊಸದಾಗಿ ಮಂಡ್ಯವನ್ನು ನಿರ್ಮಾಣ ಮಾಡುತ್ತೇನೆ, ಮಂಡ್ಯದ ಎಲ್ಲಾ ಸರ್ಕಲ್ ಹಾಗೂ ಫುಟ್ ಪಾತ್ ಗಳನ್ನು ಬದಲಾವಣೆ ಮಾಡಬೇಕಾಗಿದೆ. ಹೊಸ ರಸ್ತೆಗಳನ್ನು ನಿರ್ಮಾಣ ಮಾಡಬೇಕಾಗಿದೆ. ಮಂಡ್ಯನಗರದ ಸಮೀಪದಲ್ಲಿರುವ ಕೋಣನಹಳ್ಳಿ ಕೆರೆ – ತಾವರೆಗೆರೆ ಕೆರೆಗಳನ್ನು ಅಭಿವೃದ್ದಿಪಡಿಸಿ ಮಕ್ಕಳ ಮನೋರಂಜನಾ ತಾಣವನ್ನಾಗಿ ನಿರ್ಮಿಸುವುದು ನನ್ನ ಕನಸಾಗಿದೆ ಎಂದರು.

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವುದು, ಬಸರಾಳು ಸಮೀಪ ಕೈಗಾರಿಕಾ ವಲಯ ಸ್ಥಾಪಿಸುವುದು, ಕಂದಾಯ ಇಲಾಖೆಗೆ ಸೇರಿರುವ ಕೆರೆಗೋಡು ಸರ್ವೆ ನಂ 90ರಲ್ಲಿನ ಸಮಸ್ಯೆಯನ್ನು ಬಗೆರಿಸುವುದು. ಕೆರಗೋಡು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ನಿರ್ಮಿಸುವುದು. ಮಂಡ್ಯ ನಗರಕ್ಕೆ 24 ಗಂಟೆಗಳ ನೀರು ಸರಬರಾಜು ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು ನನ್ನ ಗುರಿಯಾಗಿದೆ ಎಂದರು.

ಮಂಡ್ಯದಲ್ಲಿ ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ಆಸ್ಪತ್ರೆ ಸ್ಥಾಪನೆ, ಮಂಡ್ಯ ನಗರದ ಎಲ್ಲಾ ಸ್ಲಂಗಳ ಸಮಸ್ಯೆ ಬಗೆಹರಿಸಿ ಎಲ್ಲರಿಗೂ ಹಕ್ಕುಪತ್ರ ದೊರಕಿಸಿಕೊಡುವುದು. ಬಸರಾಳು ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯಲು ಕಾವೇರಿ ನೀರನ್ನು ಒದಗಿಸುವುದು ನನ್ನ ಕನಸಾಗಿದೆ ಎಂದು ಹೇಳಿಕೊಂಡರು.

ಕಾಂಗ್ರೆಸ್ ಸೇರ್ಪಡೆ 
ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ತೊರೆದು ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ನಗರಸಭಾ ಮಾಜಿ ಉಪಾಧ್ಯಕ್ಷೆ ಇಂದಿರಾ ಸತೀಶ್ ಬಾಬು, ಮಾಜಿ ಸದಸ್ಯ ಕೆ.ಸಿ.ರವೀಂದ್ರ, ಮುಖಂಡರಾದ ಮಹೇಶ್ ಕೃಷ್ಣ ಹಾಗೂ ನಾಗರತ್ನ ಅವರು ರವಿಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!