Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ವಿಚಾರದಲ್ಲಿ ರಾಜ್ಯವು ಸಮರ್ಥ ವಾದ ಮಂಡಿಸಬೇಕಿದೆ: ಡಾ.ತಲಕಾಡು ಚಿಕ್ಕರಂಗೇಗೌಡ

ತಮಿಳುನಾಡು ಸರ್ಕಾರ ಸಾಕಷ್ಟು ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಕೇಂದ್ರ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಕರ್ನಾಟಕ ಸಮರ್ಥ ವಾದ ಮಂಡಿಸುವ ಮೂಲಕ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕಿದೆ ಎಂದು ಇತಿಹಾಸ ತಜ್ಞ, ಸಂಶೋಧಕ ಡಾ. ತಲಕಾಡು ಚಿಕ್ಕ ರಂಗೇಗೌಡ ತಿಳಿಸಿದರು.

ಮಂಡ್ಯದ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಮಿಳುನಾಡು ಕೇಂದ್ರ ಸರ್ಕಾರ, ನ್ಯಾಯಾಂಗ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದೆ ಎಂದು ಹೇಳಿದರು.

ಕಾವೇರಿ ಕರ್ನಾಟಕದ ಹಕ್ಕು, ಆದರೆ ಕಾವೇರಿ ನದಿ ನೀರಿನ ಹೆಚ್ಚು ಪಾಲನ್ನು ತಮಿಳುನಾಡು ಪಡೆಯುತ್ತಿದೆ. ತಮಿಳುನಾಡು ಐದು ಮೂಲಗಳಿಂದ ನೀರು ಪಡೆಯುತ್ತದೆ. ಕರ್ನಾಟಕದಿಂದ, ಆಂಧ್ರದ ದಕ್ಷಿಣ ಭಾಗದಿಂದ,ಕೇರಳದಿಂದ,ನೈಸರ್ಗಿಕ ಮೂಲದಿಂದ ಹಾಗೂ ಅಂತರ್ಜಲದ ಮೂಲಕ ನೀರು ಪಡೆಯುತ್ತದೆ. ಆದರೆ ನ್ಯಾಯಾಧೀಕರಣದ ಸಂದರ್ಭದಲ್ಲಿ ಈ ಮೂಲಗಳ ಬಗ್ಗೆ ವೈಜ್ಞಾನಿಕ ವಾದ ಮಂಡನೆ ನಡೆದಿಲ್ಲ ಎಂದರು.

ಹಣ ಖರ್ಚು ಮಾಡದೆ ನೀರು

ಪಶ್ಚಿಮ ಘಟ್ಟಗಳು ಇರುವುದರಿಂದ ಸಾಕಷ್ಟು ಮಳೆಯಾಗುತ್ತಿದೆ. ಪಶ್ಚಿಮ ಘಟ್ಟಗಳ ನಿರ್ವಹಣೆಗಾಗಿ ಮಹಾರಾಷ್ಟ್ರ, ಕೇರಳ, ಹಾಗೂ ಕರ್ನಾಟಕ ಸರ್ಕಾರಗಳು ತಮ್ಮ ಬೊಕ್ಕಸದಿಂದ ಅರಣ್ಯ ಇಲಾಖೆಯ ಮೂಲಕ ಕೋಟ್ಯಾಂತರ ಹಣವನ್ನು ಖರ್ಚು ಮಾಡುತ್ತವೆ. ಈ ಭಾಗದಲ್ಲಿ ಒಂದು ಎಕರೆ ಜಮೀನು ಒತ್ತುವರಿ ಮಾಡಿದರೂ ಜೈಲಿಗೆ ಹಾಕಲಾಗುತ್ತದೆ. ಆದರೆ ತಮಿಳುನಾಡು ಪಶ್ಚಿಮ ಘಟ್ಟಗಳಿಗೆ ಯಾವುದೇ ಹಣವನ್ನು ಖರ್ಚು ಮಾಡುವುದಿಲ್ಲ. ಅಲ್ಲದೇ ತನ್ನ ವ್ಯವಸಾಯ ಜಮೀನಿನ ವಿಸ್ತರಣೆ ಮಾಡುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಸಾಕಷ್ಟು ಮಳೆ ಬೀಳುವುದರಿಂದ ನೀರಿನ ಸಮಸ್ಯೆ ಇಲ್ಲ, ಕೇರಳದಲ್ಲಿ ಕೃಷಿ ಜಮೀನು ಕಡಿಮೆ ಇರುವುದರಿಂದ ಅಲ್ಲಿಗೂ ನೀರಿನ ಅವಶ್ಯಕತೆ ಇಲ್ಲ. ಆದರೆ ಕರ್ನಾಟಕದ ಹಳೆ ಮೈಸೂರು ಭಾಗದಲ್ಲಿ ಜಮೀನು ಹೆಚ್ಚಿದ್ದು, ನೀರಿನ ಅವಶ್ಯಕತೆ ಹೆಚ್ಚಾಗಿದೆ. ಆದರೆ ಪಶ್ಚಿಮ ಘಟ್ಟ ನಿರ್ವಣೆಗೆ ಸಾಕಷ್ಟು ಖರ್ಚು ಮಾಡುವ ಕರ್ನಾಟಕ ಯಾವುದೇ ಖರ್ಚು ಮಾಡದ ತಮಿಳುನಾಡಿಗೆ ಹೆಚ್ಚು ನೀರು ಹರಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮಿಳುನಾಡು ಸರ್ಕಾರ ಹೇಳುವ ಸುಳ್ಳು ಮಾಹಿತಿಗಳನ್ನು ಪರಿಗಣಿಸಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ.ನ್ಯಾಯ ನೀಡುವ ಸಂದರ್ಭದಲ್ಲಿ ಕರ್ನಾಟಕ ಜಲಾನಯನ ವ್ಯಾಪ್ತಿಯಲ್ಲಿ ಇರುವ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಎಷ್ಟು? ತಮಿಳುನಾಡಿನ ಜಲಾಶಯಗಳಲ್ಲಿ ಎಷ್ಟು ನೀರಿದೆ? ಅವರ ಐದು ಜಲ ಮೂಲಗಳು ಏನು? ಅಲ್ಲಿಯ ಬೆಳೆ ಪರಿಸ್ಥಿತಿ ಏನು? ಪಶ್ಚಿಮ ಘಟ್ಟಕ್ಕೆ ತಮಿಳುನಾಡಿನ ಕೊಡುಗೆ ಏನು? ಕಾವೇರಿ ನದಿ ನೀರಿಗೆ ಎಷ್ಟು ಖರ್ಚು ಮಾಡುತ್ತಿದೆ ಎಂಬ ಬಗ್ಗೆ ವೈಜ್ಞಾನಿಕ ವಾದವನ್ನು ಪರಿಗಣನೆಗೆ ತೆಗೆದುಕೊಂಡು ತೀರ್ಪು ನೀಡಬೇಕು. ಸರ್ಕಾರ ಸರ್ವ ಪಕ್ಷಗಳ, ರಾಜಕಾರಣಿಗಳ ಸಲಹೆ ಸೂಚನೆ ಪಡೆಯುವುದನ್ನು ಬಿಟ್ಟು ನೀರಾವರಿ ತಜ್ಞರು, ರೈತರು ಹಾಗೂ ಫಲಾನುಭವಿಗಳ ಸಲಹೆ ಸೂಚನೆ ಪಡೆದುಕೊಳ್ಳಬೇಕು ಎಂದರು.

ಸುಳ್ಳು ಮಾಹಿತಿ ತಮಿಳುನಾಡು ಸರ್ಕಾರ ತಮ್ಮಲ್ಲಿನ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಮತ್ತೊಂದು ಜಲಾಶಯ ನಿರ್ಮಿಸಿಕೊಳ್ಳಬಹುದು. ಆದರೆ ತಮಿಳುನಾಡು ಸರ್ಕಾರ ನ್ಯಾಯಾಂಗ ವ್ಯವಸ್ಥೆಗೆ ಸುಳ್ಳು ಮಾಹಿತಿಯನ್ನೇ ನೀಡಿದೆ. ನಮ್ಮ ನೆಲಗಟ್ಟಿ ಇಲ್ಲ, ಐದು ಅಡಿ ತೋಡಿದರೆ ನೀರು ಬರುತ್ತದೆ. ಹಾಗಾಗಿ ಜಲಾಶಯ ನಿರ್ಮಾಣ ಸಾಧ್ಯವಿಲ್ಲ ಎಂದು ಸುಳ್ಳು ಮಾಹಿತಿ ನೀಡಿದೆ. ಐದು ಅಡಿ ತೋಡಿದರೆ ನೀರು ಬರುವ ಹಾಗಿದ್ದರೆ ಚೆನ್ನೈ, ಕಾಂಚಿಪುರಂ, ತಂಜಾವೂರು ಇಲ್ಲೆಲ್ಲಾ ಬಹುಮಹಡಿ ಕಟ್ಟಡಗಳನ್ನು ಕಟ್ಟಿಲ್ಲವೇ? ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದಾಗ ಕುಸಿಯದ ನೆಲ ಅಣೆಕಟ್ಟು ಕಟ್ಟುವಾಗ ಕುಸಿಯುತ್ತಾ ಎಂಬ ಪ್ರಶ್ನೆಯನ್ನು ಕರ್ನಾಟಕ ಪರ ವಾದಿಸುತ್ತಿರುವವರು ಮಾಡಬೇಕಿದೆ ಎಂದರು.

ಡಿಕೆಶಿ ಹೇಳಿಕೆಗೆ ಖಂಡನೆ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ಇಡೀ ದಕ್ಷಿಣ ಭಾರತಕ್ಕೆ ಸೇರಿದ್ದು ಎಂದಿದ್ದಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಕಾವೇರಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗೆ ಮಾತ್ರ ಸಂಬಂಧಿಸಿದ್ದು. ಆಂಧ್ರಪ್ರದೇಶ, ತೆಲಂಗಾಣ, ಗೋವಾ ಈ ರಾಜ್ಯಗಳಿಗೆ ಸಂಬಂಧವಿಲ್ಲ ಎಂದರು.

ಡಿ.ಕೆ. ಶಿವಕುಮಾರ್ ಅವರು ಯಾವ ಉದ್ದೇಶದಿಂದ ಈ ಮಾತನ್ನು ಹೇಳಿದರೋ ಗೊತ್ತಿಲ್ಲ. ಆದರೆ ಈ ಬಗ್ಗೆ ಇತಿಹಾಸ ತಜ್ಞರನ್ನು ಕೇಳಿ ಹೇಳಬೇಕು. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಕಾವೇರಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆದರೆ ಇವರೆಲ್ಲರಿಗೂ ಬೆಂಗಳೂರಿಗೆ ಬರುವಾಗ ಉತ್ತರ ಕರ್ನಾಟಕದಿಂದಲೇ ನೀರನ್ನು ತನ್ನಿ ಎಂದು ಹೇಳಬೇಕಾಗುತ್ತದೆ. ಬೆಂಗಳೂರಿನಲ್ಲಿ ಭಾರತದ ಸಮಸ್ತ ಭಾಗಗಳಿಂದಲೂ ಬಂದು ಜನರು ವಾಸಿಸುತ್ತಿದ್ದಾರೆ. ಹಾಗಾಗಿ ಎಲ್ಲರೂ ಕಾವೇರಿ ಹೋರಾಟದಲ್ಲಿ ಕೈಜೋಡಿಸಬೇಕು ಎಂದರು.

ಸಿದ್ದರಾಮಯ್ಯ ಗಟ್ಟಿತನ ತೋರಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಾನು ಕನ್ನಡಿಗರ ಪರವಾಗಿ ಇರುತ್ತೇನೆ ಎಂದು ಹೇಳಿ, ನನ್ನ ಮುಖ್ಯಮಂತ್ರಿ ಪದವಿ ಹೋದರು ಪರವಾಗಿಲ್ಲ ಎಂದು ಕಾವೇರಿ ನೀರು ಹರಿಸಲಿಲ್ಲ. ಅದೇ ರೀತಿ ಸಿಎಂ ಸಿದ್ದರಾಮಯ್ಯನವರು ಗಟ್ಟಿತನ ತೋರಿ ತಮಿಳುನಾಡಿಗೆ ಕಾವೇರಿ ನೀರು ಹರಿಸದಿದ್ದರೆ ಬಂಗಾರಪ್ಪನವರ ರೀತಿ ಇತಿಹಾಸದಲ್ಲಿ ದಾಖಲಾಗುತ್ತಿರಿ. ಅದರಂತೆ ಈ ಕ್ಷಣವೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!