Thursday, September 19, 2024

ಪ್ರಾಯೋಗಿಕ ಆವೃತ್ತಿ

ರೂಪಕ -ಪ್ರತಿಮೆಗಳಿದ್ದರೆ ಮಾತ್ರ ಕಾವ್ಯ ಸಾಧ್ಯ

ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕಾವ್ಯದಲ್ಲಿ ಮಣ್ಣಿನ ವಾಸನೆ ಇರಬೇಕು. ಹಾಗೆಯೇ ರೂಪಕ ಮತ್ತು ಪ್ರತಿಮೆಗಳಿದ್ದರೆ ಮಾತ್ರ ಕಾವ್ಯ ಸಾಧ್ಯ ಎಂದು ಖ್ಯಾತ ಸಾಹಿತಿ ಸಿ.ಪಿ. ಕೃಷ್ಣಕುಮಾರ್(ಸಿಪಿಕೆ)ಅಭಿಪ್ರಾಯ ಪಟ್ಟರು.

ಮಂಡ್ಯ ನಗರದ ಗಾಂಧಿ ಭವನದಲ್ಲಿ ಪ್ರಜಾವಾಣಿ ವರದಿಗಾರ ಗಣಂಗೂರು ನಂಜೇಗೌಡ ಅವರ ಕಂದನೂರಿನ ಹಾಡು ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಗಣಗೂರು ನಂಜೇಗೌಡ ಅವರ ಕಾವ್ಯದಲ್ಲಿ ಮಣ್ಣಿನ ವಾಸನೆ ಇದೆ, ರೂಪಕ ಮತ್ತು ಪ್ರತಿಮೆಗಳನ್ನು ಸಾಕಷ್ಟು ಗುರುತಿಸಬಹುದು. ಹಾಗೆಯೇ ದಲಿತ ಮತ್ತು ಬಂಡಾಯಗಳ ಸಾರವನ್ನು ಹೀರಿ ಕಂದನೂರಿನ ಹಾಡು ಕೊಟ್ಟಿದ್ದಾರೆ. ಅವರು ಇನ್ನೂ ಉತ್ತಮವಾದ ಕವಿತೆಗಳನ್ನು ರಚನೆ ಮಾಡಲಿ. ಪರಿಪೂರ್ಣವಾದ ಕಾವ್ಯ ಕೊಡಲು ಮುಂದಾಗಲಿ ಎಂದು ಶುಭ ಹಾರೈಸಿದರು.

ಕುವೆಂಪು ಅವರು ಕಾವ್ಯದಲ್ಲಿ ಮಣ್ಣಿನ ವಾಸನೆ ಇರಬೇಕೆಂದು ಹೇಳುತ್ತಿದ್ದರು.ಇಂದು ಕೆಳವರ್ಗದ, ಶೂದ್ರರ, ಗ್ರಾಮೀಣರ ಕಾವ್ಯದಲ್ಲಿ ಮಣ್ಣಿನ ವಾಸನೆ ಕಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ.

ಗಣಂಗೂರು ನಂಜೇಗೌಡರವರ ಕಾವ್ಯದಲ್ಲೂ ಹಾಸ್ಯ ವಿಡಂಬನೆ ಹಾಗೂ ವ್ಯವಸ್ಥೆಯ ವಿರುದ್ಧದ ವಸ್ತುವನ್ನು ಒಳಗೊಂಡಿದೆ.ನವೋದಯ, ನವ್ಯ, ದಲಿತ, ಬಂಡಾಯ ಸಾಹಿತ್ಯವಿದ್ದು, ಬಂಡಾಯದ ಕವಿತೆ ಎಂದು ಕರೆಯಬಹುದು ಎಂದರು.

ನಾನು ಕಂದನೂರಿನ ಹಾಡು ಕವನ ಸಂಕಲನಕ್ಕೆ ಬಹಳ ಹಿಂದೆಯೇ ಮುನ್ನುಡಿ ಬರೆದಿದ್ದೆ. ಆದರೆ ಈಗ ಕೃತಿ ಹೊರಬಂದಿದೆ. ನಮ್ಮ ಬದುಕಿನಲ್ಲಿ ಕಾವ್ಯ ಎನ್ನುವುದು ಬಹಳ ಮುಖ್ಯ. ಕಾವ್ಯದಲ್ಲಿ ಆಧ್ಯಾತ್ಮದ ಗುಣಗಳಿವೆ. ಅದೇ ಗುಣಲಕ್ಷಣಗಳು ಕಂದನೂರಿನ ಹಾಡು ಕವನ ಸಂಕಲನದಲ್ಲಿ ಇದೆ. ಕಾವ್ಯ ನಮ್ಮನ್ನು ಬದುಕಿಸುವ ಜೀವದವ್ಯ. ಕಾವೇರಿ ತೀರದಲ್ಲಿ ಎಂಬ ಪುಸ್ತಕ ಬರೆದಿದ್ದಾರೆ. ಅವರ ಕಾವ್ಯದಲ್ಲಿ ಸಾಹಿತ್ಯಿಕ ಬರವಣಿಗೆಯ ಜೊತೆಗೆ ಸಾಂಸ್ಕೃತಿಕ ಬರವಣಿಗೆಯು ಇದ್ದು, ದಟ್ಟವಾದ ಚಾರಿತ್ರಿಕ ಪ್ರಜ್ಞೆ, ಜಾನಪಧ ಮನೋಧರ್ಮ, ಜನತಾ ದೃಷ್ಟಿ,ಪ್ರಜಾ ತಾಂತ್ರಿಕತೆ ಅವರ ಕಾವ್ಯದ ಪ್ರಮುಖ ಚಹರೆಗಳಾಗಿದೆ ಎಂದರು.

ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಸಾಹಿತಿ ತೈಲೂರು ವೆಂಕಟಕೃಷ್ಣ, ಗಣಗೂರು ನಂಜೇಗೌಡರದ್ದು ಬಹುಮುಖ ಪ್ರತಿಭೆ. ಶ್ರೀರಂಗಪಟ್ಟಣದ ಕೋಟೆ ಕೊತ್ತಲುಗಳ, ಶಾಸನಗಳ ಸಂಗ್ರಹದ ಹಾಗೂ ಸಂರಕ್ಷಣೆ ಬಗ್ಗೆ ಹಲವಾರು ವರದಿಗಳನ್ನು ಬರೆದಿದ್ದಾರೆ.

ನಂಜೇಗೌಡರು ಕೃಷಿಯ ಬಗ್ಗೆ ಅಲ್ಲಿರುವ ಬವಣೆಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಕಾವೇರಿ ತೀರದಲ್ಲಿ, ಕಂದನೂರಿನ ಹಾಡಿನಲ್ಲಿ ಕೃಷಿಯ ಬಗ್ಗೆ ಹಾಗೂ ಅಲ್ಲಿರುವ ಬವಣೆಗಳ ಬಗ್ಗೆ ಬರೆದಿದ್ದಾರೆ. ಅವರು ಜನರಿಗೆ ಅನುಕೂಲವಾಗುವ ಹಾಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಬರೆಯಲಿ.

ಇಂದು ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಜಾಗತೀಕರಣದ ಸಂದರ್ಭದಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಇದ್ದು ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ.ಆದರೆ ಅಮೇರಿಕಾದಲ್ಲಿರುವ ಸ್ನೇಹಿತರೊಬ್ಬರು ನಾವು ಮೊಬೈಲ್ ಬಿಟ್ಟು ಗ್ರಂಥಾಲಯಕ್ಕೆ ಹೋಗುತ್ತಿದ್ದೇವೆ ಎಂದು ತಿಳಿಸಿದರು. ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡದೆ ಪುಸ್ತಕ ಕೊಟ್ಟರೆ ಅವರು ಕೂಡ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.

ಪ್ರಜಾವಾಣಿ ಜಿಲ್ಲಾ ವರದಿಗಾರ ಎನ್. ಯೋಗೇಶ್ ಕಂದನೂರಿನ ಹಾಡು ಕವನ ಸಂಕಲನದ ಬಗ್ಗೆ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ್ ಗೌಡ, ಯುವ ಬರಹಗಾರ ಸತೀಶ್ ಜವರೇಗೌಡ,ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಸಿ. ಮಂಜುನಾಥ್,ಚಿಕ್ಕ ಹಾರೋಹಳ್ಳಿ ಪುಟ್ಟಸ್ವಾಮಿ, ಗಣಂಗೂರು ನಂಜೇಗೌಡ ಉಪಸ್ಥಿತರಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!