Thursday, October 10, 2024

ಪ್ರಾಯೋಗಿಕ ಆವೃತ್ತಿ

ಆದಿಚುಂಚನಗಿರಿ ಮಠದಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ

ಗುರು ಸ್ಥಾನದಲ್ಲಿದ್ದು ಕರುನಾಡಿಗೆ ಮಾರ್ಗದರ್ಶನ ಮಾಡುತ್ತಿರುವ ಆದಿಚುಂಚನಗಿರಿ ಮಠವು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಬಣ್ಣಿಸಿದರು.

ಶ್ರೀಮಠದಲ್ಲಿ ಇಂದು ಏರ್ಪಡಿಸಿದ್ದ ಗುರುಪೌರ್ಣಿಮೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದಲ್ಲಿ ಗುರುಗಳಿಗೆ ಅತ್ಯಂತ ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಶ್ರೀಸಾಮಾನ್ಯರು ಮತ್ತು ಭಕ್ತಾದಿಗಳ ಬದುಕನ್ನು ಹಸನಾಗಿಸುವ ಅವರ ಚೈತನ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಮಠದ ಗುರು ಪರಂಪರೆಯು ನೂರಾರು ವರ್ಷಗಳಿಂದ ಸಮುದಾಯದ ಮತ್ತು ಭಕ್ತಾದಿಗಳ ಹಿತವನ್ನು ತಾಯಿಯಂತೆ ಕಾಯುತ್ತಿದೆ. ಗುರುಗಳ ಮಾರ್ಗದರ್ಶನದಲ್ಲಿ ಸಮಾಜವು ಭರವಸೆಯ ಬೆಳಕನ್ನು ಕಾಣುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಮಠವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಮೂಲಕ ಅವರನ್ನು ಗುರುತಿಸಿದೆ. ದೀರ್ಘ ಸಮಾಲೋಚನೆ ಬಳಿಕ ಜಾರಿಯಾಗುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಯುವಜನರ ಪರಿಪೂರ್ಣ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಹೆದ್ದಾರಿಯಾಗಲಿದೆ ವಿವರಿಸಿದರು.

ಯುವಜನರಿಗೆ ಪೂರ್ಣ ಪ್ರಮಾಣದಲ್ಲಿ ಉದ್ಯೋಗ ಸಿಗುವಂತೆ ಮಾಡಬೇಕು ಎನ್ನುವುದು ಎನ್ಇಪಿ ಗುರಿಯಾಗಿದೆ. ಇದಕ್ಕೆ ತಕ್ಕಂತೆ ಪಠ್ಯಗಳನ್ನು ರೂಪಿಸಲಾಗಿದೆ. ಹಿಂದಿನ ಸರಕಾರಗಳು ಶಿಕ್ಷಣ ವ್ಯವಸ್ಥೆಯ ಮೌಲ್ಯಮಾಪನ ನಡೆಸದೆ ಇದ್ದುದರಿಂದ ನಮ್ಮಲ್ಲಿ ಕಂದಕ ಸೃಷ್ಟಿಯಾಯಿತು ಎಂದು ಅವರು ಹೇಳಿದರು.

ಇಂದು ಎಲ್ಲ ಕ್ಷೇತ್ರಗಳಲ್ಲೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನಡೆಯುತ್ತಿದೆ. ನಮ್ಮ ಮಕ್ಕಳು ಕೂಡ ಇದನ್ನು ಎದುರಿಸಲು ಸಮರ್ಥರಾಗಿರಬೇಕು. ಹೀಗಾಗಿಯೇ ಸರಕಾರವು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪೂರೈಸುತ್ತಿದೆ ಎಂದು ಅವರು ವಿವರಿಸಿದರು.

ದೇಶೀಯ ಮಾದರಿಯ ಕಲಿಕೆ ಮತ್ತು ಸಮಾಜಕ್ಕೆ ಉಪಯುಕ್ತವಾದ ದೃಷ್ಟಿಕೋನ ಬೆಳೆಸುವುದು ಎನ್ಇಪಿ ಗುರಿಗಳಲ್ಲಿ ಒಂದಾಗಿದೆ. ಇದಕ್ಕೆ ತಕ್ಕಂತೆ ರಾಜ್ಯವು ಅತ್ಯುತ್ತಮ ಅವಕಾಶಗಳ ತಾಣವಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪ್ರಸನ್ನಾನಂದನಾಥ ಸ್ವಾಮೀಜಿ, ಸಚಿವ ಗೋಪಾಲಯ್ಯ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!