Saturday, May 18, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ಸಾಹಿತ್ಯ ಲೋಕಕ್ಕೆ ಭದ್ರ ಬುನಾದಿ ಹಾಕಿದ್ದು ಆದಿಕವಿ ಪಂಪ

ಕನ್ನಡ ಸಾಹಿತ್ಯ ಲೋಕಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಆದಿಕವಿ ಪಂಪನಿಗೆ ಸಲ್ಲುತ್ತದೆ ಎಂದು ನಾಡೋಜ ಡಾ. ಹಂ.ಪ.ನಾಗರಾಜಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ವಿಶ್ವವಿದ್ಯಾಲಯದ ಎ.ವಿ.ಆರ್ ಸಭಾಂಗಣದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗ, ಮಂಡ್ಯದ ದಿಗಂಬರ ಜೈನ ಸಮಾಜ, ಹಲಗೂರಿನ ಅನಿಕೇತನ ಪ್ರತಿಷ್ಠಾನ (ರಿ) ಹಾಗೂ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ “ಪಂಪನ ಕಾವ್ಯಗಳ ಪ್ರಸ್ತುತತೆ : ಪಂಪನ ಸಾಹಿತ್ಯ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ” ಉದ್ಘಾಟಿಸಿ ಅವರು ಮಾತನಾಡಿದರು.

ಪಂಪ ಸಾಮಾನ್ಯ ಕವಿಗಳನ್ನು ಆಶ್ರಯಿಸಿ ಕಥಾ ವಸ್ತುವನ್ನು ತರಲಿಲ್ಲ. ಸಂಸ್ಕೃತದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದು ಮಹಾನ್ ಕವಿಯಾದ. ಜಿನಸೇನಾಚಾರ್ಯರ ಪೂರ್ವ ಪುರಾಣ ಆಶ್ರಯಿಸಿ ಕನ್ನಡದ ಆದಿಪುರಾಣವನ್ನು ರಚಿಸಿದನು. ಹಾಗೆಯೇ ವ್ಯಾಸ ಭಾರತ ಕಥಾ ವಸ್ತುವನ್ನು ಆಶ್ರಯಿಸಿ ಕನ್ನಡದಲ್ಲಿ ವಿಕ್ರಮಾರ್ಜುನ ವಿಜಯಂ ಕೃತಿಯನ್ನು ರಚಿಸಿದನು. ಸಂಸ್ಕೃತದಲ್ಲಿ ಲಕ್ಷ ಶ್ಲೋಕ ಪ್ರಮಾಣದ ಬೃಹತ್ ಕೃತಿಯನ್ನು ಕನ್ನಡ ಭಾಷೆಯಲ್ಲಿ ತರುವ ಮೊಟ್ಟಮೊದಲ ಪ್ರಯತ್ನವನ್ನು ಪಂಪ ಮಾಡಿದ್ದಾನೆ. ಅಲ್ಲದೆ ಬೃಹತ್ ಕೃತಿಯನ್ನು ಸಂಕ್ಷೇಪಗೊಳಿಸಿ ಕನ್ನಡದಲ್ಲಿ ಸಮಗ್ರವಾಗಿ ಬರೆದ ಕೀರ್ತಿಯು ಪಂಪನಿಗೆ ಸಲ್ಲುತ್ತದೆ ಎಂದರು.

ಮಾರ್ಗ ಮತ್ತು ದೇಸಿ ಎರಡನ್ನು ಸಮನ್ವಯಗೊಳಿಸಿ ಕೃತಿಗಳನ್ನು ರಚಿಸಿದನು ಪಂಪ. ಕಾವ್ಯದ ಚೆಲುವನ್ನು ನೋಡಬೇಕಾದರೆ ಪಂಪನ ಕಾವ್ಯಗಳನ್ನು ಓದಬೇಕು. ಕಾವ್ಯಗಳನ್ನು ಓದಬೇಕಾದರೆ ಮೊದಲು ಸಹೃದಯರಾಗಬೇಕು. ಕಾವ್ಯದ ವರ್ಣನೆಗಳನ್ನು ಸ್ವೀಕರಿಸುವ ಗುಣವನ್ನು ಪಡೆದುಕೊಳ್ಳಬೇಕು. ಕವಿಯ ಭಾವನೆಗಳಿಗೆ ಓದುಗರು ಸ್ಪಂದಿಸುವಂತಾಗಬೇಕು. ಕಾವ್ಯಕ್ಕೆ ಪ್ರತಿಸ್ಪಂದನೆ ಕೊಡುವ ಹೃದಯ ಸಂಸ್ಕಾರ ರೂಢಿಸಿಕೊಳ್ಳಬೇಕು. ಕಾವ್ಯದ ವರ್ಣನೆಗೆ ನಮ್ಮ ಹೃದಯವೆಲ್ಲ ಮಿಡಿಯುವಂತಾಗಬೇಕು ಎಂದು ಸಲಹೆ ನೀಡಿದರು.

ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಜು ಗುಂಡಾಪುರ ಅವರು ಮಾತನಾಡಿ, ಪಂಪನ ಕಾವ್ಯಗಳು ಸರ್ವಕಾಲಕ್ಕೂ ಶಾಶ್ವತವಾಗಿವೆ. ಇಂದಿನವರೆಗೂ ಅನೇಕ ಕೃತಿಗಳಿಗೆ ಆಕರವಾಗಿವೆ. ಪ್ರತಿನಾಯಕನ ಒಳ್ಳೆಯ ಗುಣಗಳನ್ನು, ಒಳ್ಳೆ ಪಾತ್ರದ ಕೆಟ್ಟ ಗುಣಗಳನ್ನು ಮುಲಾಜಿಗೆ ಒಳಗಾಗದೆ ಪಂಪ ಹೇಳಿದ್ದಾನೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅವರು ಸಮಾರೋಪ ಭಾಷಣ ಮಾಡುತ್ತಾ ಪಂಪನ ಕಾವ್ಯಗಳು ಇಂದಿಗೂ ಪ್ರಸ್ತುತವಾಗಿವೆ. ದ್ವೇಷ ಯಾವಾಗ ಹುಟ್ಟುತ್ತೆ ಅಂದೇ ಆಯುಧಗಳನ್ನು ಮಸೆದುಕೊಂಡಿರುತ್ತೇವೆ. ಇಂದು ಅಣ್ಣ-ತಮ್ಮಂದಿರ ನಡುವೆ, ಅತ್ತೆ-ಸೊಸೆ ನಡುವೆ, ರಾಜಕಾರಣಿಗಳ ನಡುವೆ, ದೇಶಗಳ ನಡುವೆ, ಧರ್ಮಗಳ ನಡುವೆ ಯುದ್ಧ ನಡೆಯುತ್ತಿದೆ. ಯುದ್ಧ ನಡೆಯಬಾರದು ಎಂದರೆ ದ್ವೇಷ ಹುಟ್ಟಬಾರದು. ಅದರ ಬದಲು ಪ್ರೀತಿ, ವಿಶ್ವಾಸ ಬೆಳೆಯಬೇಕು. ಅದನ್ನು ತಿಳಿಸಿದ ಪಂಪನ ಕಾವ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಅವರು ಪಂಪನ ಆದಿಪುರಾಣ ಹಾಗೂ ಮಹಾರಾಣಿ ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮೈಸೂರು ಕೃಷ್ಣಮೂರ್ತಿ ಅವರು ವಿಕ್ರಮಾರ್ಜುನ ವಿಜಯಂ ಕೃತಿಯ ಕುರಿತು ಉಪನ್ಯಾಸ ನೀಡಿದರು.

ಉಪನ್ಯಾಸಕ ದಿಲೀಪ್ ಕುಮಾರ್ ಪಂಪನ ಕಾವ್ಯಗಳ ವಿಮರ್ಶೆ ಮಾಡಿದರು.

ಕುಲಪತಿ ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಕುಲ ಸಚಿವ ನಾಗರಾಜು.ಜಿ.ಚೊಳ್ಳಿ, ಪ್ರಾಂಶುಪಾಲ ಡಾ.ರವಿ ಬಿ.ಸಿ, ನಿರ್ದೇಶಕರಾದ ಸ್ವರ್ಣ.ಬಿ, ನಿವೃತ್ತ ಪ್ರಾಧ್ಯಾಪಕ ಎಸ್.ಪಾಪಣ್ಣ, ದಿಗಂಬರ ಜೈನ ಸಮಾಜದ ಅಧ್ಯಕ್ಷ ಶಾಂತಿಪ್ರಸಾದ್, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಸಹ ಪ್ರಾಧ್ಯಾಪಕ ಜಿ.ಶಿವಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್. ಸಿ ಕೃಷ್ಣೇಗೌಡ ಕೀಲಾರ, ಅನಿಕೇತನ ಪ್ರತಿಷ್ಠಾನದ ಅಧ್ಯಕ್ಷ ಡಿ. ಉಮೇಶ್ ದಡಮಹಳ್ಳಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!