Saturday, May 18, 2024

ಪ್ರಾಯೋಗಿಕ ಆವೃತ್ತಿ

ಎಲ್ಲರೂ ಸಮಾನವಾಗಿ ಜೀವಿಸಲು ಅವಕಾಶ ನೀಡಿದ ಸಂವಿಧಾನ : ಆರ್.ಅಶೋಕ್

ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಪ್ರತಿಯೊಬ್ಬರಿಗೂ ಆರು ಮೂಲಭೂತ ಹಕ್ಕುಗಳು ಲಭ್ಯವಾಗಿವೆ. ಸ್ವತಂತ್ರರಾಗಿ ಹಾಗೂ ಸಮಾನರಾಗಿ ಸಮಾಜದಲ್ಲಿ ಜೀವಿಸಲು ಅವಕಾಶ ನೀಡಿರುವ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ವಂದನೆಗಳನ್ನು ಅರ್ಪಿಸುತ್ತೇನೆ ಎಂದು ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ ಹೇಳಿದರು.

ಮಂಡ್ಯ ಜಿಲ್ಲಾಡಳಿತದ ವತಿಯಿಂದ ಗುರುವಾರ ಮಂಡ್ಯದಲ್ಲಿ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯಡಿ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದು ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ಸಾಗುತ್ತಿರುವ ನಮ್ಮ ರಾಜ್ಯದ ಸಾಧನೆ ಇಂದು ದೇಶದ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಬಾಳುತ್ತೇವೆ, ರಾಷ್ಟ್ರದ ಸಾರ್ವಭೌಮತೆಯನ್ನು ಗೌರವಿಸಿ, ಅದನ್ನು ಎತ್ತಿಹಿಡಿಯುತ್ತೇವೆ. ನಮ್ಮದೇ-ದೇಶ, ನಮ್ಮದೇ-ಸಂವಿಧಾನ, ನಮ್ಮದೇ- ಆಡಳಿತ, ನಾವು ಸ್ವತಂತ್ರರಾಗಿ ಬದುಕುತ್ತೇವೆ ಎನ್ನುವ ಶಪಥವನ್ನು ಸಮಸ್ತ ಭಾರತೀಯರೂ ಕೈಗೊಂಡ ದಿನವೇ ನಮ್ಮ ಗಣರಾಜ್ಯ ದಿನ. ಹೀಗಾಗಿ, ಈ ದಿನ ನಮಗೆ ಅತ್ಯಂತ ಪವಿತ್ರ ದಿನವಾಗಿದೆ ಎಂದರು.

ವಿನೂತನ ಕಾರ್ಯಕ್ರಮಗಳ ಜಾರಿ

ಕಂದಾಯ ಇಲಾಖೆಯು ರೈತ ಪರವಾಗಿ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ (ಬಗರ್‌ಹುಕುಂ) ರೈತರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತಿರುವುದನ್ನು ತಪ್ಪಿಸುವುದಕ್ಕಾಗಿ ಕರ್ನಾಟಕ ಭೂಕಬಳಿಕೆ ನಿಷೇಧ ಅಧಿನಿಯಮ 2011ಕ್ಕೆ ತಿದ್ದುಪಡಿ ತರಲಾಗಿದೆ.

2005ನೇ ಇಸವಿಯ ಪೂರ್ವದಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಾಫಿ ಬೆಳೆಯುತ್ತಿದ್ದ ರೈತರಿಗೆ 25 ಎಕರೆವರೆಗಿನ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.

ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಮಾಡಲು ಮಾಸ್ಟರ್ ಪ್ಲಾನ್ ಆಧಾರಿತ ಭೂಪರಿವರ್ತನೆಯನ್ನು 07 ದಿನಗಳಿಗೆ ಇಳಿಸಲು ಕ್ರಮವಹಿಸಲಾಗಿದೆ. “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಎಂಬ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದಡಿ ಈವರೆಗೆ ಸುಮಾರು 4,29,790 ಫಲಾನುಭವಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯ ವಿತರಿಸಲಾಗಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ 147 ದಾಖಲೆರಹಿತ ಜನವಸತಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 139 ಕಂದಾಯ ಗ್ರಾಮಗಳನ್ನು ರಚಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಹಾಗೂ 112 ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 744 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

29 ತಂಡಗಳಿಂದ ಪಥಸಂಚಲನ

ಗಣರಾಜ್ಯೋತ್ಸವದ ಅಂಗವಾಗಿ ಇಂದು ನಡೆದ ಪಥಸಂಚಲನದಲ್ಲಿ 29 ತಂಡಗಳು ಪಥಸಂಚಲನ ನಡೆಸಿದವು. ಜಿಲ್ಲಾ ಶಸಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರೀಕ ಪೊಲೀಸ್ ಪಡೆ, ಗೃಹ ರಕ್ಷಕ ದಳ, ಅಬಕಾರಿ ದಳ,
ಮಂಡ್ಯ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಘಟಕ, ಮಂಡ್ಯ ವಿಶ್ವವಿದ್ಯಾಲಯ ಬಾಲಕಿಯ ವಿಭಾಗ, ಲಕ್ಷ್ಮೀ ಜನಾರ್ಧನ ಶಾಲೆ, ಅನಿಕೇತನ ಪ್ರೌಢಶಾಲೆ, ಲಕ್ಷ್ಮೀ ಜನಾರ್ಧನ ಶಾಲೆ, ಕಾರ್ಮೆಲ್ ಕಾನ್ವೆಂಟ್, ಅದರ್ಶ್ ಪ್ರೌಢಶಾಲೆ, ಪಿ.ಇ.ಎಸ್ ಪ್ರೌಢಶಾಲೆ, ಸದ್ವಿದ್ಯ ಪ್ರೌಢಶಾಲೆ, ಮಾಂಡವ್ಯ ಆಂಗ್ಲ ಮಾಧ್ಯಮ ಶಾಲೆ, ಪಿ.ಇ.ಎಸ್ ಮಹಿಳಾ ಕಾಲೇಜು, ಮೌಲಾನ್ ಅಜಾದ್ ಮಾಡೆಲ್ ಶಾಲೆ, ಕಾಳೇಗೌಡ ಪ್ರೌಢಶಾಲೆ, ಸೇಂಟ್ ಜೋಸೆಫ್ ಪ್ರೌಢಶಾಲೆ, ಗೌಸಿಯಾ ಪ್ರೌಢಶಾಲೆ, ರೋಟರಿ ಪ್ರೌಢಶಾಲೆ, ಅಭಿನವ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ವಿಮಲ ಹಿರಿಯ ಪ್ರಾಥಮಿಕ ಶಾಲೆ, ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು.

ಸೇವಾ ಸಿಂಧು ಯೋಜನೆಯಡಿ ಗ್ರಾಮ ಓನ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಭಿಷೇಕ್ ಗೌಡ, ಗಿರೀಶ್ ಎಸ್.ಡಿ, ರಾಮಚಂದ್ರ ಕೆ.ಎಮ್, ತಾಲ್ಲೂಕು ಮಟ್ಟದಲ್ಲಿ ಅಜಯ್ ಹೆಚ್.ಟಿ, ಮದನ್ ಕುಮಾರ್ ಹೆಚ್ ಹಾಗೂ ಶೃತಿ ಎಂ.ಎಸ್ ಅವರನ್ನು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದರು.

2022ರಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಉದಯ್ ಕುಮಾರ್ ಎಂ.ಸ್, ತರುಣ್ ಗೌಡ ಕೆ.ಎಲ್, ಹೇಮ ಎಂ.ಎಸ್, ಮಯೂರ್ ಗೌಡ ಯು.ಎಸ್, ದೀಪಿಕಾ, ಮಾನ್ಯ ಶ್ರೀ ಎಸ್.ವೈ, ಹರ್ಷಿತ, ಮಾನಸ ಕೆ.ಜೆ, ಅಲ್ಮ ನೂರಾಯಿನ್ ಅವರಿಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಲ್ಯಾಪ್‌ಟಾಪ್ ನೀಡಿ ಗೌರವಿಸಿದರು.

ಪಥಸಂಚಲನ ವಿಜೇತ ತಂಡಗಳು 

ಇಲಾಖೆ ವಿಭಾಗ 

ನಾಗರೀಕ‌ ಪೊಲೀಸ್ ತಂಡ (ಪುರುಷ), ಜಿಲ್ಲಾ ಗೃಹ ರಕ್ಷಕ ದಳ (ಮಹಿಳಾ), ಅಬಕಾರಿ ಇಲಾಖೆ.

ಸ್ಕೌಟ್ಸ್  ಮತ್ತು ಗೈಡ್ಸ್ ವಿಭಾಗ

ಪಿ.ಇ.ಎಸ್ ಕಾಲೇಜು, ಲಕ್ಷ್ಮಿ ಜನರ್ಧಾನ ಶಾಲೆ, ಅನಿಕೇತನ ಶಾಲೆ

ಪ್ರೌಢಶಾಲಾ ವಿಭಾಗ

ಕಾರ್ಮಲ್ ಶಾಲೆ, ಸೆಂಟ್ ಜೋಸೆಫ್ ಶಾಲೆ, ಆದರ್ಶ ಶಾಲೆ

ಪ್ರಾಥಮಿಕ ಶಾಲಾ ವಿಭಾಗ

ಅಭಿನವ ಭಾರತಿ ಶಾಲೆ, ಕಾರ್ಮಲ್ ಶಾಲೆ, ವಿಮಲ ಶಾಲೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!