Wednesday, May 15, 2024

ಪ್ರಾಯೋಗಿಕ ಆವೃತ್ತಿ

ಜನತಾದರ್ಶನದಲ್ಲಿ ಸ್ವೀಕೃತ ಅರ್ಜಿಗಳು ಒಂದು ತಿಂಗಳಲ್ಲಿ ವಿಲೇವಾರಿ: ಚಲುವರಾಯಸ್ವಾಮಿ

ಜನತಾ ದರ್ಶನದಲ್ಲಿ ಸ್ವೀಕಾರವಾಗುವ ಕುಂದು ಕೊರತೆ ಅರ್ಜಿಗಳೊಂದಿಗೆ ಸೂಕ್ತ ದಾಖಲಾತಿ ಲಗತ್ತಿಸಿ ಸಾರ್ವಜನಿಕರು ಸಲ್ಲಿಸಿದರೆ ಒಂದು ತಿಂಗಳೊಳಗಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಮದ್ದೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜನತಾ ದರ್ಶನ ನಡೆಸಿದ ಸಂದರ್ಭದಲ್ಲಿ ಮರಳಿಗ ಗ್ರಾಮದ ಜನತಾ ದರ್ಶನದಲ್ಲಿ ಮಾತನಾಡಿದರು. ಲೋಕಸಭಾ ಚುನಾವಣೆ ನಡೆಯುವ ಹಿನ್ನಲೆ ಈ ಬಾರಿ ಸ್ವೀಕಾರವಾಗುವ ಅರ್ಜಿ ವಿಲೇವಾರಿ ತಡವಾಗಬಹುದು. ಚುನಾವಣೆಯ ನಂತರ ಜನತಾ ದರ್ಶನ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು ಎಂದರು.

5047 ಕುಟುಂಬಗಳಿಗೆ ಗ್ಯಾರಂಟಿ ಯೋಜನೆ

ಗ್ರಾಮ ಪಂಚಾಯಿತಿಯ 5047 ಕುಟುಂಬಗಳು ಒಂದಲ್ಲ ಒಂದು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿ ಕುಟುಂಬಕ್ಕೆ ಪ್ರತಿ ಮಾಹೆ ಗ್ಯಾರಂಟಿ ಯೋಜನೆಗಳ ಮೂಲಕ ಕನಿಷ್ಠ 5 ರಿಂದ 6 ಸಾವಿರ ರೂ ಗಳ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಜನಸಾಮಾನ್ಯರನ್ನು ಸಬಲೀಕರಣಗೊಳಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ಚಾಲನೆಯನ್ನು ನೀಡಲಾಗಿದ್ದು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸವನ್ನು ಮಾಡುತ್ತಿದೆ. ಸ್ತ್ರೀಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಲಾ 2000 ರೂನಂತೆ ಗೃಹ ಲಕ್ಷ್ಮಿ ಯೋಜನೆಯಡಿ ನೀಡಲಾಗುತ್ತಿದೆ‌. ಗ್ರಾಮದಲ್ಲಿ ಒಟ್ಟು 1880 ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಒಟ್ಟು 2492 ಬಿಪಿಎಲ್ ಕಾರ್ಡನ್ನು ಹೊಂದಿರುವಂತಹ ಕುಟುಂಬಗಳಿಗೆ ತಲಾ 5 ಕೆಜಿ ಅಕ್ಕಿ ಹಾಗೂ 5 ಕೆ ಜಿ ಅಕ್ಕಿಯನ್ನು ನಗದು ರೂಪದಲ್ಲಿ ಒಟ್ಟು 10 ಕೆಜಿ ಅಕ್ಕಿಯನ್ನು ನೀಡುತ್ತಿದ್ದೇವೆ. ಗೃಹಜ್ಯೋತಿ ಯೋಜನೆಯಲ್ಲಿ ಒಟ್ಟು 1300 ಕುಟುಂಬಗಳಿಗೆ ಉಚಿತ ವಿದ್ಯುತ್ ಅನ್ನು ನೀಡುತ್ತಿದ್ದು, ಎಲ್ಲಾ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪ್ರಯಾಣಿಸುವಂತೆ ಮಾಡಿದ್ದೇವೆ. ಜನವರಿ ತಿಂಗಳಿನಿಂದ ಯುವನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಒಟ್ಟು ಐದು ಯೋಜನೆಗಳನ್ನು ನಮ್ಮ ಸರ್ಕಾರ ಚಾಲನೆ ನೀಡಿ ಜನರಿಗೆ ಅರ್ಪಣೆ ಮಾಡಿದೆ ಎಂದರು

ಮಂಡ್ಯ ಜಿಲ್ಲೆಯಲ್ಲಿ ಬರ ಉಂಟಾಗಿರುವುದರಿಂದ ಪ್ರತಿ ರೈತರಿಗೆ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರವಾಗಿ 2000 ರೂ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ‌. ಬೆಳೆ ವಿಮೆ ಪಡೆದಿರುವ ರೈತರಿಗೆ ಬೆಳೆ ನಷ್ಠದ ಹಿನ್ನಲೆ ಈಗಾಗಲೇ 600 ಕೋಟಿ ರೂ ನೀಡಲಾಗಿದೆ. ಉಳಿದ ರೈತರಿಗೆ 800 ಕೋಟಿ ರೂ ಅನುದಾನ ಮಾರ್ಚ್ ತಿಂಗಳೊಳಗೆ ನೀಡಲಾಗುವುದು ಒಟ್ಟಾರೆ ರೈತರು 140 ಕೋಟಿ ರೂ ಪಾವತಿ ಮಾಡಿ ಬೆಳೆ ವಿಮೆ ಪಡೆದಿದ್ದು, 1,400 ಕೋಟಿ ಹಣವನ್ನು ಕೃಷಿ ಇಲಾಖೆಯಿಂದ ಮಾರ್ಚ್ ತಿಂಗಳೊಳಗಾಗಿ ರೈತರಿಗೆ ನೀಡಲಾಗುವುದು. ವಿಧವಾ ಪಿಂಚಣಿ, ಅಂಗವಿಕಲರ ಪಿಂಚಣಿ ಜೊತೆಗೆ ಸರ್ಕಾರದಿಂದ ನೀಡುವ ಯಾವುದೇ ಸೌಲಭ್ಯವನ್ನು ಇದುವರೆಗೂ ನಿಲ್ಲಿಸಿಲ್ಲ ಎಂದರು.

ಮರಳಿಗ ಗ್ರಾಮ ಪಂಚಾಯಿತಿಯ ಮಹಿಳೆಯರಿಗೆ 2 ಕೋಟಿ ರೂ ಹಣವನ್ನು ಬಡ್ಡಿ ರಹಿತ ಸಾಲವನ್ನು ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಬರಗಾಲ ಬಂದಿದ್ದರೂ ಸಹ ಜನರಿಗೆ ಯಾವುದೇ ತೊಂದರೆಯಾಗದಂತೆ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ದೊಡ್ಡ ಪ್ರಮಾಣದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಕಾಲುವೆಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ ಚಾಲನೆಯಾಗುತ್ತಿದೆ. ಮುಂದಿನ ಎರಡು ಮೂರು ವರ್ಷದೊಳಗೆ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರವು ಎಲ್ಲಾ ರೈತರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಶಕ್ತಿ ಮೀರಿ ಸಹಕರಿಸಿದೆ. ಜೊತೆಗೆ ಡಿಸಿ ಕಚೇರಿ, ತಹಶಿಲ್ದಾರರ ಕಚೇರಿ ಹಾಗೂ ಪಂಚಾಯಿತಿಗಳಲ್ಲಿ ಜನಸಾಮಾನ್ಯರು ಅಲೆಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗಿ ಗೌಡ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಸೋಮಶೇಖರ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!