Tuesday, May 21, 2024

ಪ್ರಾಯೋಗಿಕ ಆವೃತ್ತಿ

ವಿಧಾನಸಭೆ ಪ್ರವೇಶಕ್ಕೆ ವಿನಾಯಕನ ಮೊರೆ ಹೋದ ನಾಯಕರು..!

ಈ ಬಾರಿಯ ಗಣೇಶ ಮಹೋತ್ಸವಕ್ಕೆ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಸಮಾಜ ಸೇವಕರು ಎಂಟ್ರಿಯಾಗಿದ್ದರಿಂದ ಗಣೇಶ ಹಬ್ಬದ ಸಂಭ್ರಮ ಮತ್ತಷ್ಟು ಮುಗಿಲು ಮುಟ್ಟಿದೆ.ಹಲವು ಕ್ಷೇತ್ರಗಳಲ್ಲಿ ರಾಜಕೀಯ ನಾಯಕರು ವಿಧಾನಸಭೆ ಪ್ರವೇಶಕ್ಕೆ ವಿನಾಯಕನ ಮೊರೆಹೋಗಿರುವುದು ಈ ಬಾರಿಯ ವಿಶೇಷ.

ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆದಿರಲಿಲ್ಲ. ಆದರೆ ಈ ಬಾರಿ ಸರ್ಕಾರ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಯಾವುದೇ ನಿರ್ಬಂಧ ವಿಧಿಸದೆ ಇರುವುದರಿಂದ ಗಣೇಶೋತ್ಸವ ಅದ್ದೂರಿಯಾಗಿ, ಸಂಭ್ರಮದಿಂದ ನೆರವೇರಿದೆ.

ಉಚಿತ ಗಣೇಶ ಮೂರ್ತಿ ವಿತರಣೆ

ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಾಗಿರುವ ಕದಲೂರು ಉದಯ್,ಎಸ್.ಪಿ.ಸ್ವಾಮಿ,ಡಾ.ಇಂದ್ರೇಶ್, ಇಂಡುವಾಳು ಸಚ್ಚಿದಾನಂದ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಇದೇ ಮೊದಲ ಬಾರಿ ದೊಡ್ಡ ಸಂಖ್ಯೆಯಲ್ಲಿ ತಾವೇ ಸ್ವತಃ ಗಣೇಶ ಮೂರ್ತಿ ವಿತರಿಸಿ ಯುವಜನತೆಯ ಹಾಗೂ ಜನರ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಬಿಜೆಪಿಯ ಡಾ. ಇಂದ್ರೇಶ್ ಅವರು ಕಳೆದ ವಾರವಷ್ಟೇ ಬೃಹತ್ ಆರೋಗ್ಯ ಶಿಬಿರ ಆಯೋಜಿಸಿ, ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸಿದ್ದರು.

ಈ ಬಾರಿ ಗಣೇಶೋತ್ಸವದ ಪ್ರಯುಕ್ತ ತಮ್ಮ ಕ್ಷೇತ್ರ ವ್ಯಾಪ್ತಿಯ 220ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಪಾಂಡವಪುರ ಪಟ್ಟಣದ ಜನರಿಗೆ ಗೌರಿ-ಗಣೇಶ ಮೂರ್ತಿಗಳನ್ನು ವಿತರಿಸಿದ್ದಾರೆ.

ಡಾ.ಇಂದ್ರೇಶ್ ತಮ್ಮ ಸ್ವಗ್ರಾಮ ನೀಲನಹಳ್ಳಿಯ ಗಣಪತಿ ತಯಾರಕರು ಹಾಗೂ ತಮಿಳಿನಾಡಿನ ಗಣಪತಿ ತಯಾರಕರಿಂದ ಖರೀದಿಸಿದ್ದ ಸುಮಾರು 980ಕ್ಕೂ ಹೆಚ್ಚು 3 ರಿಂದ 5 ಅಡಿ ಎತ್ತರದ ಗಣಪತಿ ಮೂರ್ತಿ ಹಾಗೂ ಗೌರಿಯನ್ನು ವಿತರಿಸಿದ್ದಾರೆ.

ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ, ಚಿಕ್ಕಾಡೆ, ಹಿರೇಮರಳಿ, ಲಕ್ಷ್ಮೀಸಾಗರ, ಬನ್ನಂಗಾಡಿಯಂತಹ ದೊಡ್ಡ ಗ್ರಾಮಗಳಿಗೆ 4-5 ಹಾಗೂ ಉಳಿದ ಗ್ರಾಮಗಳಿಗೆ ತಲಾ ಎರಡು ಹಾಗೂ ಪಾಂಡವಪುರ ಪಟ್ಟಣ ವ್ಯಾಪ್ತಿಗೆ ಅಗತ್ಯಕ್ಕನುಗುಣವಾಗಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನ ವಿತರಿಸಲಾಗಿದೆ.

ಗಣಪತಿ ವಿತರಣೆಯಿಂದ ಯುವ ಜನಾಂಗದಲ್ಲಿ ಧಾರ್ಮಿಕ ಭಾವನೆ ಮೂಡಿಸಿದಂತಾಗಿದೆ ಎಂದು ಡಾ.ಇಂದ್ರೇಶ್ ಪ್ರತಿಕ್ರಿಯಿಸಿದರು.

ಹಾಗೆಯೇ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಯುವನಾಯಕ ಇಂಡುವಾಳು ಸಚ್ಚಿದಾನಂದ ಕೂಡ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಹಂಚುವ ಮೂಲಕ ಜನರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದ ಪುರಸಭೆ ವ್ಯಾಪ್ತಿಯಲ್ಲಿ ಹಾಗೂ 32 ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಒಟ್ಟಾರೆ 400ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿತರಿಸಲಾಗಿದೆ. ಯೋಜನೆಯಂತೆ ಎಲ್ಲರಿಗೂ ಟೋಕನ್ ಮೊದಲೇ ಹಂಚಿದ್ದರಿಂದ ವಿತರಣೆಯ ಸಂದರ್ಭದಲ್ಲಿ ಯಾವುದೇ ಗೊಂದಲ,ಗಲಾಟೆ ಆಗಲಿಲ್ಲ ಎಂದು ಯುವನಾಯಕ ಇಂಡುವಾಳು ಸಚ್ಚಿದಾನಂದ ತಿಳಿಸಿದರು.

ಮದ್ದೂರು ತಾಲ್ಲೂಕಿನಲ್ಲಿ ಗಣೇಶ ವಿತರಣೆ ರಾಜಕೀಯ ಜೋರಾಗಿದೆ.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಕದಲೂರು ಉದಯ್ ಹಾಗೂ ಎಸ್.ಪಿ.ಸ್ವಾಮಿ ಪೈಪೋಟಿಯಲ್ಲಿ ಗಣೇಶ ಮೂರ್ತಿ ವಿತರಿಸಿ ಸಂಭ್ರಮಿಸಿದ್ದಾರೆ.

ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ತಾಲ್ಲೂಕಿನ 188 ಹಳ್ಳಿಗಳಿಗೆ ಹಾಗೂ ಪಟ್ಟಣಕ್ಕೆ 501 ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನ ವಿತರಿಸಲಾಗಿದೆ.

ಹಲವು ಸಾಮಾಜಿಕ ಸೇವೆಗಳ ಮೂಲಕ ಮದ್ದೂರು ರಾಜಕಾರಣದಲ್ಲಿ ಪ್ರಸಿದ್ಧರಾಗಿರುವ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ನೇತೃತ್ವದ ಶ್ರೀನಿಧಿಗೌಡ ಪ್ರತಿಷ್ಠಾನದ ವತಿಯಿಂದ ಸುಮಾರು 300 ಕ್ಕೂ ಹೆಚ್ಚು ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ವಿತರಿಸಿದ್ದಾರೆ.

ಇದೇ ರೀತಿ ಜಿಲ್ಲೆಯ ಹಲವೆಡೆ ಹಲವಾರು ವಿಧಾನಸಭಾ ಆಕಾಂಕ್ಷಿಗಳು ಗಣಪತಿ ಮೂರ್ತಿಗಳನ್ನು ವಿತರಿಸುವ ಮೂಲಕ ತಮ್ಮ ಧಾರ್ಮಿಕ ಪ್ರೀತಿಯನ್ನು ಮೆರೆದಿದ್ದಾರೆ. ಕೆಲವು ರಾಜಕಾರಣಿಗಳು ಗಣೇಶೋತ್ಸವಕ್ಕೆ ಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.

ವಿಧಾಸಭೆ ಚುನಾವಣೆಗೆ ಇನ್ನು ಎಂಟತ್ತು ತಿಂಗಳಷ್ಟೇ ಬಾಕಿ ಉಳಿದಿರುವುದರಿಂದ ಈ ಬಾರಿ ಗಣೇಶೋತ್ಸವಕ್ಕೆ ಭಾರೀ ಮೆರಗು ಬಂದಿದೆ.

ಅದರಲ್ಲೂ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗೌರಿ-ಗಣೇಶ ಮೂರ್ತಿ ಹಂಚಲಾಗಿದ್ದು,ಜನರ ಮನಸ್ಸು ಸೂರೆಗೊಂಡಿದೆ.ಅದರಲ್ಲೂ ಗಣೇಶೋತ್ಸವದಲ್ಲಿ ಯುವಜನರೇ ಮುಂದಾಳತ್ವ ವಹಿಸುವುದರಿಂದ ಅವರ ವಿಶ್ವಾಸ ಗೆಲ್ಲಲು ಜಿಲ್ಲೆಯ ರಾಜಕಾರಣಿಗಳು ಮುಂದಾಗಿದ್ದಾರೆ.ವಿಧಾನಸಭೆ ಪ್ರವೇಶಿಸಲು ಈ ಬಾರಿ ಹಲವು ಆಕಾಂಕ್ಷಿಗಳು ವಿನಾಯಕನ ಮೊರೆ ಹೋಗಿರುವುದು,ಅಚ್ಚರಿಯ ಸಂಗತಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!