Wednesday, October 23, 2024

ಪ್ರಾಯೋಗಿಕ ಆವೃತ್ತಿ

“ನೀವು ನನಗೆ ಓಟು ಹಾಕಿಲ್ಲ, ಇನ್ಮುಂದೆ ನಿಮ್ಮ ದಿನಗಳು ಚೆನ್ನಾಗಿರಲ್ಲ” ಎಂದು ಮತದಾರರಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದ!

“ಮುಸ್ಲಿಮರು ಮತ್ತು ಯಾದವರು ನನಗೆ ಮತ ಹಾಕಿಲ್ಲ. ಹಾಗಾಗಿ, ನಾನು ಅವರಿಗಾಗಿ ಕೆಲಸ ಮಾಡಲ್ಲ” ಎಂದು ಬಿಹಾರದ ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿರುವ ನಡುವೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನೂತನ ಬಿಜೆಪಿ ಸಂಸದ ಬಿಷ್ಣು ಪದಾ ರೇ ಮತದಾರರಿಗೆ ಬೆದರಿಕೆ ಹಾಕಿರುವ ವಿಡಿಯೋ ಒಂದು ತಡವಾಗಿ ವೈರಲ್ ಆಗಿದೆ.

“ನಿಕೋಬಾರ್ ದ್ವೀಪದ ಜನರು ನನಗೆ ಮತ ಹಾಕಿಲ್ಲ. ಹಾಗಾಗಿ ಅವರು ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಸಂಸದ ಬಿಷ್ಣು ಪದಾ ರೇ ಹೇಳಿದ್ದಾರೆ. ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಮರುದಿನ, ಅಂದರೆ ಜೂನ್‌ 5ರಂದು ಈ ಹೇಳಿಕೆ ನೀಡಿದ್ದು, ಈಗ ವಿಡಿಯೋ ಹರಿದಾಡುತ್ತಿದೆ.

“ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ಆದರೆ, ನಮಗೆ ಮತ ಹಾಕದವರು ಯೋಚಿಸಬೇಕು. ನಿಕೋಬಾರ್ ದ್ವೀಪದ ಜನರು ನನಗೆ ಮತ ನೀಡಿಲ್ಲ. ಕಾರ್ ನಿಕೋಬಾರ್, ಈಗ ನಿಮಗೆ ಏನಾಗಲಿದೆ ಎಂದು ಯೋಚಿಸಿ” ಎಂದು ರೇ ವಿಜಯ ಭಾಷಣದಲ್ಲಿ ಹೇಳಿದ್ದಾರೆ.

“>

“ನಿಕೋಬಾರ್ ಹೆಸರಿನಲ್ಲಿ ನೀವು ಹಣ, ಮದ್ಯ ತಗೊಳ್ತೀರಿ. ಆದರೆ, ವೋಟ್ ಮಾತ್ರ ಕೊಡಲ್ಲ. ಎಚ್ಚರವಾಗಿರಿ, ಎಚ್ಚರವಾಗಿರಿ, ಎಚ್ಚರವಾಗಿರಿ. ಈಗ, ನಿಮ್ಮ ಕೆಟ್ಟ ದಿನಗಳು ಪ್ರಾರಂಭವಾಗಿವೆ. ಇನ್ಮುಂದೆ ನೀವು ಅಂಡಮಾನ್- ನಿಕೋಬಾರ್ ಅನ್ನು ಮೋಸ ಮಾಡಲು ಸಾಧ್ಯವಿಲ್ಲ. ಇನ್ಮುಂದೆ ನಿಮ್ಮ ದಿನಗಳು ಚೆನ್ನಾಗಿರಲ್ಲ” ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಕೇಳಲು ಕರೆ ಮಾಡಿದಾಗ ಬಿಷ್ಣು ಪದಾ ರೇ ಕರೆ ಸ್ವೀಕರಿಸಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಆದರೆ, ನಂತರ ಅವರು ಘಟನೆಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟನೆ ಕಳುಹಿಸಿದ್ದಾರೆ. ಅದರಲ್ಲಿ ಘಟನೆಯ ನಂತರ ಕಾರ್ ನಿಕೋಬಾರ್‌ನ ಪ್ರಮುಖ ಬುಡಕಟ್ಟು ನಾಯಕನ ನೇತೃತ್ವದ ನಿಕೋಬಾರ್‌ನ ಹಿರಿಯರು ಪೋರ್ಟ್ ಬ್ಲೇರ್‌ನಲ್ಲಿ ಸಂಸದರನ್ನು ಭೇಟಿಯಾಗಿ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಅಭಿನಂದಿಸಿದ್ದಾಗಿ ತಿಳಿಸಲಾಗಿದೆ” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಹೇಳಿದೆ.

“ನಿಕೋಬಾರ್‌ನ ಜನರು ತಮ್ಮ ಸಮಸ್ಯೆಗಳನ್ನು ಸಂಸದರೊಂದಿಗೆ ಹಂಚಿಕೊಂಡಿದ್ದು, ಸಂಸದರು ಕೋಬಾರ್‌ನ ಜನರ ಮೇಲಿನ ಆಳವಾದ ಪ್ರೀತಿ ಮತ್ತು ಅವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಸಮುದಾಯಕ್ಕಾಗಿ ಕೈಗೊಂಡ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಅವರು ಈ ಹಿಂದಿನದನ್ನು ಮರೆತುಬಿಡುವಂತೆ ಹಿರಿಯರನ್ನು ಕೇಳಿಕೊಂಡಿದ್ದಾರೆ. ಬುಡಕಟ್ಟು ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಇನ್ನೂ ಹೆಚ್ಚಿನ ಬದ್ಧತೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ” ಎಂದು ಪತ್ರಿಕಾ ಪ್ರಕಟನೆಯಲ್ಲಿ ಹೇಳಲಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ತಿಳಿಸಿದೆ.

“ನಿಕೋಬಾರ್‌ಗೆ ಭೇಟಿ ನೀಡುವಂತೆ ಮುಖ್ಯ ಕ್ಯಾಪ್ಟನ್ ಅವರು ನೀಡಿರುವ ಆಹ್ವಾನವನ್ನು ಸಂಸದರು ಸ್ವೀಕರಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಜನರಿಗೆ ಸೇವೆ ಸಲ್ಲಿಸುವ ಭರವಸೆ ನೀಡಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಬುಡಕಟ್ಟು ಹಿರಿಯರು ಶಕ್ತಿಯ ಆಧಾರ ಸ್ತಂಭಗಳಾಗಿರಲು ವಿನಂತಿಸಿದ್ದಾರೆ” ಎಂದು ಪತ್ರಿಕಾ ಪ್ರಕಟಣೆ ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವಿವರಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!