Saturday, May 18, 2024

ಪ್ರಾಯೋಗಿಕ ಆವೃತ್ತಿ

ಜಾತಿ ಗಣತಿ ವರದಿ ಸ್ವೀಕರಿಸಿ- ಒಳ ಮೀಸಲಾತಿ ಜಾರಿಗೆ ತನ್ನಿ: ಬಿಎಸ್ಪಿ ಪ್ರತಿಭಟನೆ

ಯಾವುದೇ ಸ್ವಾಮೀಜಿ, ಸಮುದಾಯಗಳ ಒತ್ತಡಕ್ಕೆ ಮಣಿಯದೆ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕಾಂತರಾಜು ಆಯೋಗ ಮತ್ತು ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಮಂಡ್ಯದಲ್ಲಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಕಾರ್ಯಕರ್ತರು, ಸಾಮಾಜಿಕ ನ್ಯಾಯ ಕಲ್ಪಿಸುವ ವರದಿಗಳನ್ನು ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಒತ್ತಾಯಿಸಿದರು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕಾಂತರಾಜ್ ಆಯೋಗ ಜಾತಿಗಣತಿ ವರದಿ ಸ್ವೀಕರಿಸಿ, ಸದಾಶಿವ ಆಯೋಗದ ವರದಿ ಜಾರಿಗೆ ತಂದು ದಲಿತರಿಗೆ ಒಳಮೀಸಲಾತಿ ಜಾರಿಗೆ ತರಬೇಕು ಎಂದರು.

ಹಿಂದುಳಿದ ವರ್ಗಗಳ ಸಾಮಾಜಿಕ- ಆರ್ಥಿಕ-ಶೈಕ್ಷಣಿಕ ಸ್ಥಿತಿಗತಿಯ ಕುರಿತು ಅಧ್ಯಯನ ಮತ್ತು ಜಾತಿವಾರು ಜನಗಣತಿ ನಡೆಸಲು ನೇಮಿಸಿದ್ದ ಕಾಂತರಾಜು ಆಯೋಗವು 2015ರಲ್ಲಿ ವರದಿಯನ್ನು ಸಿದ್ಧಗೊಳಿಸಿತು. ವರದಿಯು ಸೋರಿಕೆಯಾದಾಗ ಎಸ್.ಸಿ., ಎಸ್. ಟಿ. ಗಳ ಜನಸಂಖ್ಯೆಯು 1ಕೋಟಿ 50 ಲಕ್ಷ, ಮುಸ್ಲಿಮರು 85ಲಕ್ಷ, ಲಿಂಗಾಯತರು 60 ಲಕ್ಷ ಮತ್ತು ಒಕ್ಕಲಿಗರು 50 ಲಕ್ಷ ಇರುವುದಾಗಿ ಗೊತ್ತಾಯಿತು. ಶಿಕ್ಷಣ, ಉದ್ಯೋಗ, ರಾಜಕೀಯ ಅಧಿಕಾರದಲ್ಲಿ ಸಿಂಹಪಾಲು ಪಡೆದಿದ್ದ ಮೇಲ್ವರ್ಗ ವರದಿ ಜಾರಿಯಾದರೆ ತಾವು ಇದುವರೆಗೂ ಅನುಭವಿಸಿಕೊಂಡು ಬರುತ್ತಿರುವ ಸವಲತ್ತು ಕಳೆದುಕೊಳ್ಳಬೇಕಾಗುತ್ತದೆ ಎಂದು ಅಳುಕಿ ವರದಿ ಬಹಿರಂಗಗೊಳ್ಳುವುದನ್ನು ಅಂದಿನ ದಿನಗಳಲ್ಲಿ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು ಎಂದು ದೂರಿದರು.

ಅನಂತರ ಮುಖ್ಯಮಂತ್ರಿಯಾದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ . ಸರ್ಕಾರ ನಿರೀಕ್ಷಿಸಿದಂತೆ ಕಾಂತರಾಜು ಆಯೋಗದ ವರದಿಯ ಜಾರಿಗೆ ಮುಂದಾಗಲಿಲ್ಲ. ಕಾಂತರಾಜರ ಅವಧಿ ಮುಗಿದ ನಂತರ, ಆಯೋಗಕ್ಕೆ ಜಯಪ್ರಕಾಶ್ ಹೆಗ್ಗಡೆಯನ್ನು ಅಧ್ಯಕ್ಷರನ್ನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿ ಕೈ ತೊಳೆದುಕೊಂಡಿತು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂತರಾಜ್ ವರದಿ ಮತ್ತು ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ಆಶ್ವಾಸನೆ ನೀಡಿ ಅಧಿಕಾರ ಹಿಡಿದು ಆರು ತಿಂಗಳಾದರೂ ಮೌನ ವಹಿಸುವ ಮೂಲಕ ಸಮಾಜಕ್ಕೆ ನಿರಂತರವಾಗಿ ದ್ರೋಹ ಮಾಡುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎಸ್. ಶಿವಶಂಕರ್, ಯೋಗಾನಂದ, ಶಿವರಾಜ್ ಎಚ್.ಎಸ್.ದಿನೇಶ್, ಡಿ.ಬಿ. ಆನಂದ್, ವೀರಭದ್ರಯ್ಯ, ಚೆಲುವರಾಜ್, ಆನಂದ್ ಕುಮಾರ್, ರವಿ ಗೌಡ, ನಂಜುಂಡಸ್ವಾಮಿ, ಸುಧಾಕರ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!