Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೋಟೆ ದ್ವಾರ ಬಿರುಕು : ಸರಿಪಡಿಸಲು ಆಗ್ರಹ

ಶ್ರೀರಂಗಪಟ್ಟಣದಲ್ಲಿ ಕಳೆದ ಮೂರು ದಿನಗಳ ಹಿಂದೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಪಟ್ಟಣದ ಐತಿಹಾಸಿಕ ಪೂರ್ವ ಕೋಟೆ ದ್ವಾರದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಸಾರ್ವಜನಿಕ ಬಸ್ ನಿಲ್ದಾಣದ ಮೂಲಕ ಪಟ್ಟಣ ಪ್ರವೇಶಿಸುವ ಪೂರ್ವ ಕೋಟೆಯ ತಡೆಗೋಡೆಗೆ ಮಳೆಯಿಂದಾಗಿ ಹೆಚ್ಚಿನ ಹಾನಿಯುಂಟಾಗಿದೆ.

ಅಲ್ಲದೆ ಕೋಟೆಯನ್ನು ಸುತ್ತುವರೆದ ಕಂದಕದಲ್ಲಿ ಮಳೆ ಹಾಗೂ ಮಲಿನ ನೀರು ತುಂಬಿಕೊಂಡಿದ್ದು, ಶೀತ ಹೆಚ್ಚಾಗಿ ಕೋಟೆಯ ತಳಪಾಯ ಹಂತ ಹಂತವಾಗಿ ಶಿಥಿಲಗೊಂಡು ಸಂಪೂರ್ಣವಾಗಿ ಬಿದ್ದಹೋಗುವ ಸ್ಥಿತಿಗೆ ತಲುಪುತ್ತಿದೆ.

ಇತ್ತೀಚೆಗಷ್ಟೆ ಪೂರ್ವ ಕೋಟೆ ಮೇಲ್ಬಾಗದಲ್ಲಿ ಬೆಳೆದಿದ್ದ ಗಿಡ, ಗಂಟೆಗಳನ್ನು ತೆರವುಗೊಳಿಸಿ, ಬಿರುಕು ಬಿಟ್ಟಿದ್ದ ಕೋಟೆಯ ದುರಸ್ಥಿ ಕಾರ್ಯ ನಡೆದಿತ್ತು. ಆದರೆ ದುರಸ್ಥಿ ಮಾಡಲಾಗಿದ್ದ ಕೋಟೆಯ ತಡೆಗೋಡೆ ಬಿರುಕು ಬಿಟ್ಟಿರುವುದು ಕಾಮಗಾರಿಯಲ್ಲಿನ ಲೋಪ ಎದ್ದುಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪುರಸಭೆ ಕಚೇರಿ ಹಿಂಭಾಗ ಮತ್ತು ಆನೆಕೋಟೆ ದ್ವಾರದ ಬಳಿ ಕುಸಿದ ಕೋಟೆಯ ಭಾಗವನ್ನು ದುರಸ್ತಿಗೊಳಿಸುವ ಕಾರ್ಯ ನಡೆಸಿದ್ದಾದರೂ ಸಮರ್ಪಕ ನಿರ್ವಹಣೆ ಮಾಡದ ಕಾರಣ ಮಳೆಯಿಂದಾಗಿ ಕೋಟೆ ಕುಸಿಯುತ್ತಿದೆ.

ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಯ ವೀಕ್ಷಣೆಗಾಗಿ ದೇಶ- ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹಾಗೆ ಬಂದವರು ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವ ಕೋಟೆ, ಕಂದಕಗಳನ್ನು ವೀಕ್ಷಿಸಿ ಸರ್ಕಾರ ಹಾಗೂ ಪ್ರಾಚ್ಯ ವಸ್ತು ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಪುರಾತನ ಕೋಟೆ, ಕಂದಕಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಇತಿಹಾಸ ತಿಳಿಯಲು ಅನುವು ಮಾಡಿಕೊಡಬೇಕಿದೆ ಎಂದು ನಾಗರೀಕರು ಆಗ್ರಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!