Saturday, May 18, 2024

ಪ್ರಾಯೋಗಿಕ ಆವೃತ್ತಿ

ಭವಿಷ್ಯದ ಭರವಸೆಯ ನಾಯಕ ಪ್ರಿಯಾಂಕ್ ಖರ್ಗೆ: ಸಿ.ಡಿ ಗಂಗಾಧರ್

ರಾಜ್ಯ ಸರ್ಕಾರದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಹಾಗೂ ಐ.ಟಿ., ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭವಿಷ್ಯದ ಭರವಸೆಯ ನಾಯಕ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಬಣ್ಣಿಸಿದರು.

ಮಂಡ್ಯ ಜಿಲ್ಲಾ ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳ ಬಳಗ ಮತ್ತು ಶೋಷಿತ ಸಮುದಾಯಗಳ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಮಂಡ್ಯದ ಪತ್ರಕರ್ತರ ಭವನದಲ್ಲಿ ನಡೆದ ಪ್ರಿಯಾಂಕ್ ಖರ್ಗೆ ಅವರ 45 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ “ಸಂವಿಧಾನ ಓದು” ಪುಸ್ತಕ ವಿತರಣಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಿಯಾಂಕ್ ಖರ್ಗೆ ಅವರು ವಿದ್ಯಾರ್ಥಿ ದಿಸೆಯಿಂದಲೇ ಹೋರಾಟದ ಮನೋಭಾವ ಮೈಗೂಡಿಸಿಕೊಂಡು ಬಂದವರು, ಸದಾ ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಹಗಲಿರುಳು ದುಡಿಯುತ್ತಿದ್ದಾರೆ. ಅವರ ತಂದೆ ಎಐಸಿಸಿ ಸಾರಥ್ಯವಹಿಸಿದ್ದರೆ, ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ, ಬಿಜೆಪಿಯು ನಡೆಸುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದು, ಇಂದು ಕಾಂಗ್ರೆಸ್ ಸರ್ಕಾರ ರಚನೆಯಾಗಲು ಕಾರಣಕರ್ತರಲ್ಲೊಬ್ಬರಾಗಿದ್ದಾರೆ ಎಂದು ನುಡಿದರು.

ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಂ ಮಾತನಾಡಿ, ಎಲೆಮರೆ ಕಾಯಿಯಂತೆ ತಮ್ಮ ತಮ್ಮ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿರುವ, ಇದುವರೆಗೆ ಯಾರು ಗುರುತಿಸದಿರುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುತ್ತಿರುವ ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳ ಕಾರ್ಯ ಸ್ಮರಣೀಯ, ಇದರಿಂದ ಆಯಾಯ ಕ್ಷೇತ್ರದಲ್ಲಿ ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ದೊರೆತಂತಾಗುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿದರು. ಮಂಡ್ಯ ಜಿಲ್ಲಾ ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳ ಬಳಗ ಅಧ್ಯಕ್ಷ ಸುಂಡಹಳ್ಳಿ ಮಂಜುನಾಥ್ ಪ್ರಸ್ತಾವಿಕ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಆಶಯದಂತೆ ನಮ್ಮ ಸುತ್ತಮುತ್ತಲೇ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾಯಕಯೋಗಿಗಳನ್ನು ಸನ್ಮಾನಿಸುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಅವರ ಹುಟ್ಟುಹಬ್ಬವನ್ನು ಇನ್ನೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು

ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರನ್ನು ಅಭಿನಂದಿಸಲಾಯಿತು.

ದಲಿತ ಚಳವಳಿ  ಹೋರಾಟಗಾರರಾದ ಪ್ರೊ.ಹೆಚ್.ಎಲ್ ಮಹಾದೇವ, ಪ್ರೊ.ಬಿ.ಎಸ್ ಚಂದ್ರಶೇಖರನ್, ಪತ್ರಕರ್ತರಾದ ಎಲ್. ಶಿವಶಂಕರ್ ತುಂಬಕೆರೆ, ಹನಿಯಂಬಾಡಿ ಜಗದೀಶ್, ಮಲ್ಲಿಕಾರ್ಜುನ ಎಂ.ಬಿ., ಆಟೋ ಚಾಲಕರಾದ ಕೃಷ್ಣ. ಟಿ, ಮಹಮದ್ ಖಾದೀರ್, ಟ್ಯಾಕ್ಸಿ ಚಾಲಕ ರಾಜು ಹಾಲಹಳ್ಳಿ, ರೈತ ಮಹಿಳೆಯರಾದ ನಂಜಮ್ಮ(ಸೂಲಗಿತ್ತಿ), ಹೊನ್ನಮ್ಮ, ವಿಜಯಕುಮಾರಿ, ದುಂಡಮ್ಮ, ರಾಣಿ ಆಲಿಯಾಸ್ ಚಿಕ್ಕೋಳಮ್ಮ, ಮಹದೇವಮ್ಮ, ರತ್ನಮ್ಮ, ವಸಂತ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದೀಪ್ತಿ. ಕೆ.ಸಿ. ಮಂಜುಳ. ಕೆ.ಎಸ್, ಸೋಬಾನಪದ ಹಾಡುಗಾರ್ತಿ ತಿಮ್ಮಮ್ಮ, ಕ್ರೀಡಾ ಕ್ಷೇತ್ರದ ಕು.ಸ್ಪಂದನಾ, ತ್ರಿಶಾಂಕ, ಸೈಕಲ್ ರಿಪೇರಿ ಮಾಡುವ ವೆಂಕಟೇಶ ಎನ್. ಅವರನ್ನು ಸ್ಮರಣಿಕೆ ನೀಡಿ, ಶಾಲು ಹೊಡಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಸೋಮಶೇಖರ್ ಕೆರಗೋಡು, ನಗರಸಭಾ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಕಾಂಗ್ರೆಸ್ ವಿವಿಧ ಘಟಕಗಳ ಜಿಲ್ಲಾಧ್ಯಕ್ಷರಾದ ಮುಜಾಹಿದ್ ಆಲಿ ಖಾನ್, ಸಾತನೂರು ಕೃಷ್ಣ, ಜಿ.ಪಂ.ಮಾಜಿ ಸದಸ್ಯರಾದ ಜಯರಾಜು, ಪುರಸಭಾ ಸದಸ್ಯ ಪ್ರೇಮ್ ಕುಮಾರ್ ಭಾಗವಹಿಸಿದ್ದರು. ಪತ್ರಕರ್ತ ದೇವರಾಜ್ ಕೊಪ್ಪ, ಗಾಯಕ ಎನ್.ಶೇಖರ್ ಪ್ರಾರ್ಥಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!