Monday, September 23, 2024

ಪ್ರಾಯೋಗಿಕ ಆವೃತ್ತಿ

ಶಾಸಕರ ಅನುಮತಿ ಇಲ್ಲದೇ ಕಾಮಗಾರಿಯ ಹಣ ಬಿಡುಗಡೆ ಮಾಡಿದರೆ ಕ್ರಮ : ಎನ್. ಚಲುವರಾಯಸ್ವಾಮಿ

ಶಾಸಕರ ಅನುಮತಿ ಇಲ್ಲದೆ ಯಾವುದೇ ಅಭಿವೃದ್ಧಿ ಕಾಮಗಾರಿಯ ಹಣ ಬಿಡುಗಡೆ ಮಾಡಬಾರದು. ಒಂದು ವೇಳೆ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಕೆಲಸ ಮಾಡಿ, ಹಣ ಬಿಡುಗಡೆ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.

ಮಂಡ್ಯದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಈ ಹಿಂದಿನ ಶಾಸಕರ ಜೊತೆ ಅಧಿಕಾರಿಗಳು ಹೇಗೆ ನಡೆದುಕೊಂಡಿದ್ದರು ಗೊತ್ತಿಲ್ಲ ಆದರೆ ಈಗ ನಮ್ಮ ಸರ್ಕಾರ ಬಂದಿದೆ ಹಾಗೆಲ್ಲ ನಡೆಯಲು ಬಿಡುವುದಿಲ್ಲ ಶಾಸಕರ ಅನುಮತಿ ಇಲ್ಲದೆ ಯಾವುದೇ ಚಟುವಟಿಕೆಗಳು ನಡೆಯಬಾರದು ಒಂದು ವೇಳೆ ನಡೆದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಹೊರಬೇಕು ಎಂದರು‌.

ರೈತರು ಬೆಳೆಯುತ್ತಿರುವ ಬೆಳೆಗಳಿಗೆ ತೊಂದರೆಯಾಗದಂತೆ, ಜಿಲ್ಲೆಯ ಕೊನೆಯ ಭಾಗದ ಬೆಳೆಗಳಿಗೆ ನಾಲೆಗಳ ಮೂಲಕ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಗಲಿನಲ್ಲಿ ವಿದ್ಯುತ್
ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಿ. ರೈತರ ಕೃಷಿ ಮಾಡಲು ಬೇಕಿರುವ ವಿದ್ಯುತ್ ವ್ಯವಸ್ಥೆಯನ್ನು ಬೆಳಿಗ್ಗೆ ಸಮಯದಲ್ಲಿಯೇ ಕಲ್ಪಿಸಬೇಕು.ರಾತ್ರಿ ವೇಳೆ ಎಷ್ಟೊತ್ತಿಗಾದರೂ ಕೊಟ್ಟರೆ ಆಯಿತು ಎಂದುಕೊಳ್ಳಬೇಡಿ.ನಮ್ಮ ಸರ್ಕಾರ ರೈತರಿಗೆ ತೊಂದರೆ ಕೊಡುವುದನ್ನು ಸಹಿಸಲ್ಲ ಎಂದರು.

ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆ ಹಾಗೂ ಸೂಚನೆಗಳನ್ನು ನಿಗದಿತ ಸಮಯದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ಒದಗಿಸಬೇಕಾಗುತ್ತದೆ. ಅದಕ್ಕೆ ಅಗತ್ಯ ಸಿದ್ಧತೆ ಮತ್ತು ತಂಡಗಳನ್ನು ಮಾಡಿಕೊಂಡು ಅರ್ಹ ಫಲಾನುಭವಿಗಳು ಬಿಟ್ಟುಹೋಗದಂತೆ ನೋಡಿಕೊಳ್ಳಿ ಎಂದರು.

ರಸ್ತೆ ಸರಿಪಡಿಸಿ
ರೈತರು ಮತ್ತು ಸಾರ್ವಜನಿಕರ ಕೆಲಸ ಮಾಡಿಕೊಡಲು ತಾಲ್ಲೂಕು ಕಚೇರಿಗಳಲ್ಲಿ ಅನಗತ್ಯ ವಿಳಂಬ ಹಾಗೂ ಹಣದ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಸಾರ್ವಜನಿಕರ ಕೆಲಸಕ್ಕೆ ವಿಳಂಬ ಮಾಡುವುದು ಕಂಡು ಬಂದಲ್ಲಿ ‌ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ,ಚಿಕ್ಕಮಂಡ್ಯ ಬಳಿ ರಸ್ತೆ ಕಾಮಗಾರಿ ಮುಗಿದಿಲ್ಲ.ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ರಸ್ತೆ ಕಾಮಗಾರಿ ಮುಗಿಸಿಕೊಡಬೇಕೆಂದು ಸೂಚಿಸಿದರು.

ಶಿಕ್ಷಕರ ನೇಮಿಸಿ
ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಗತ್ಯವಿರುವ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ.ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆಯಾಗಬಾರದು ಎಂದರು.

50 ಕೋಟಿ ಬಿಡುಗಡೆ
ಮೈ ಷುಗರ್ ಕಾರ್ಖಾನೆ ಕಾರ್ಯಾರಂಭಕ್ಕೆ‌ ಸರ್ಕಾರ 50 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಿ. ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು. ಇದಕ್ಕೆ ಬೇಕಿರುವ ಪೂರಕ ಮಾಹಿತಿಯನ್ನು ಸಿದ್ಧ ಮಾಡಿಕೊಳ್ಳಿ ಎಂದರು.

ಜಲ ಜೀವನ್ ಅಕ್ರಮ
ಮಳವಳ್ಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ‌ ಅವರು ಮಾತನಾಡಿ, ಜಲಜೀವನ್ ಯೋಜನೆ ಕಾಮಗಾರಿ ದುರ್ಬಳಕೆಯಾಗಿದೆ.ಅಲ್ಲದೆ ಮಳವಳ್ಳಿ ಪಟ್ಟಣದಲ್ಲಿ 71 ಕೋಟಿ ರೂ. ವೆಚ್ಚದ ಅಮೃತ್ ಯೋಜನೆ ಕಾಮಗಾರಿ ಅಪೂರ್ಣವಾಗಿದ್ದರೂ ಬಿಲ್ ಪಾವತಿಸಲಾಗಿದೆ.ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ದೂರು ನೀಡಿ ತನಿಖೆಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಮುಂಗಾರು ಆರಂಭವಾಗಲಿದೆ, ಕೃಷಿ ಇಲಾಖೆ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ. ಮಣ್ಣಿನ ಸವಕಳಿಯಾಗದಂತೆ ಫಲವತ್ತತೆ ಕಾಪಾಡುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ. ನೀರಿನ ಮಿತವ್ಯಯ ಬಳಕೆ, ಹನಿ ನೀರಾವರಿ, ಅಂತರ್ಜಲ ಮರುಪೂರಣದ ಬಗ್ಗೆ ಚಿಂತಿಸಿ ಅನುಷ್ಠಾನ ಗೊಳಿಸಬೇಕಿದೆ ಎಂದರು.

ಮುಂದಿನ ತಿಂಗಳು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಹೊಸ ಯೋಜನೆಗಳನ್ನು ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿ.ಬಜೆಟ್ ಮೂಲಕ ಅಭಿವೃದ್ದಿ ಯೋಜನೆಗಳಿಗೆ ಅಗತ್ಯ ಅನುದಾನ ತರುವ ಪ್ರಯತ್ನಕ್ಕೆ ಅಧಿಕಾರಿಗಳು ಸಹಕಾರ ನೀಡುವಂತೆ ಸಲಹೆ ನೀಡಿದರು.

ರೈತರ ನೆರವಿಗೆ ಮುಂದಾಗಿ
ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಮಾತನಾಡಿ, ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆ. ಮುಂಗಾರು ಮಳೆ ಆರಂಭವಾಗಲಿದೆ. ರೈತರಿಗೆ ಅಗತ್ಯವಾಗಿರುವ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಎಲ್ಲವನ್ನೂ ಶೇಖರಣೆ ಮಾಡುವ ಮೂಲಕ ರೈತರ ನೆರವಿಗೆ ಮುಂದಾಗಿ ಎಂದರು.

ಮಂಡ್ಯ ಜಿಲ್ಲೆಗೆ ಜಿಲ್ಲಾಸ್ಪತ್ರೆ, ಸೂಪರ್ ಸ್ಪಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆಯ ಅಗತ್ಯತೆ ಇದೆ. ಯು.ಜಿ.ಡಿ ಸಮಸ್ಯೆ ಬಗೆಹರಿಸಬೇಕು. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿಯಿದೆ‌. ಈ ಬಗ್ಗೆ ಪೋಲಿಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಭ್ರಷ್ಟಾಚಾರ ತಾಂಡವ
ವಿಧಾನ ಪರಿಷತ್ ಸದಸ್ಯ ಮಧು ಜಿ‌ ಮಾದೇಗೌಡ ಅವರು ಮಾತನಾಡಿ, ಸರ್ವೆ ಇಲಾಖೆಯಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಖಾತೆಗಳು, ಪೋಡಿ ಮುಂತಾದ ಕೆಲಸಗಳಿಗೆ ಲಂಚ ನೀಡಬೇಕು.ರೈತರಿಗೆ ಭ್ರಷ್ಟ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರು ಮಾತನಾಡಿ, ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಬಹಳಷ್ಟು ಸಮಸ್ಯೆಗಳಿವೆ.ಪ್ರತಿನಿತ್ಯ ಅಪಘಾತಗಳಿಗೆ ಜನರು ಬಲಿಯಾಗುತ್ತಿದ್ದಾರೆ.ಈ ಬಗೆ ಡಿಬಿಎಲ್ ಕಂಪನಿ ಅಧಿಕಾರಿಗಳನ್ನು ಕರೆಸಿ ಅವೈಜ್ಞಾನಿಕ ಕಾಮಗಾರಿ ಸರಿಪಡಿಸಲು ಸೂಚಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಬೇಕು. ಪೋಲಿಸ್ ಠಾಣೆ ಮತ್ತು ತಾಲೂಕು ಕಚೇರಿಗಳು ರೈತರನ್ನು ಕಿತ್ತು ತಿನ್ನುತ್ತಿವೆ.ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಉತ್ತಮರನ್ನು ಉಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ. ಎಚ್. ಎನ್. ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯ ಸ್ಥಿತಿ ಗತಿ ಹಾಗೂ ಮಳೆ ಹಾನಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕ ರವಿಕುಮಾರ್‌ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎನ್.ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್,
ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಂಜೀವಪ್ಪ‌ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!