Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಾಂಷುಗರ್ಸ್: ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ

ಮದ್ದೂರು ತಾಲೂಕಿನ ಭಾರತೀನಗರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.

ಕಾರ್ಖಾನೆಯ ಉಪಾಧ್ಯಕ್ಷ ಆರ್.ಮಣಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 11ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಕಬ್ಬು ಅರೆಯುವ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಸರಕಾರ ನಿಗದಿಪಡಿಸುವ ದರಕ್ಕೆ ನಾವು ಬದ್ದರಾಗಿರುತ್ತೇವೆ. ಪ್ರಸಕ್ತ ಸಾಲಿನಲ್ಲಿ ಒಂದೇ ಕಂತಿನಲ್ಲಿ ಹಣ ಪಾವತಿಸಲು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದು ಅದರಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಳೆದ ಸಾಲಿನಲ್ಲಿ 45 ದಿನಗಳಿಗೆ ಕಬ್ಬಿನ ಹಣ ನೀಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಒಂದು ತಿಂಗಳಿಗೆ ಹಣ ಪಾವತಿಸಲು ತೀರ್ಮಾನಿಸಿದ್ದು ತಾಯಿ ಚಾಮುಂಡೇಶ್ವರಿ ರೈತರಿಗೆ ಮತ್ತು ಕಾರ್ಖಾನೆಯ ಅಭಿವೃದ್ಧಿಗೆ ಒಳಿತು ಮಾಡಲಿ ಎಂದು ಬೇಡಿದರು.

ಕಳೆದ ಸಾಲಿನಲ್ಲಿ 9,75,000 ಟನ್ ಕಬ್ಬು ಅರೆದಿದ್ದು ಈಗಾಗಲೇ ಮುಂಗಾರು ಆರಂಭವಾಗಿದ್ದು ತಾಯಿ ಚಾಮುಂಡೇಶ್ವರಿ ಆರ್ಶೀವಾದದಿಂದ ಮುಂದಿನ ದಿನಗಳಲ್ಲಿ ಮಳೆ ಕೂಡ ಚೆನ್ನಾಗಿ ಆದರೆ ಕಾರ್ಖಾನೆಗೆ ಮತ್ತಷ್ಟು ಕಬ್ಬು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಈ ಬಾರಿ ಹೆಚ್ಚಿನ ಕಬ್ಬು ಅರೆಯುವ ಉದ್ದೇಶದಿಂದ ಹೊಸ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.ಈ ಹಿನ್ನಲೆಯಲ್ಲಿ ಅವಧಿಗೂ ಮೊದಲೇ ಕಾರ್ಖಾನೆ ಆರಂಭಿಸಲಾಗಿದೆ. ದಿನಕ್ಕೆ5500 ಟನ್ ಕಬ್ಬು ಅರೆಯುವ ಸಾಮಾರ್ಥ್ಯ ಹೊಂದಿರುವುದಾಗಿ ವಿವರಿಸಿದರು.

ಕಳೆದ ಸಾಲಿನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲೂ ಕಾರ್ಖಾನೆಯ ಆರಂಭಿಸಿ ಕಬ್ಬು ಅರೆವಿಕೆಗೆ ಚಾಲನೆ ನೀಡಲಾಗಿತ್ತು. ಈ ಹಿಂದಿನ ಸಾಲುಗಳಲ್ಲಿ ಸಹಕರಿಸಿದಂತೆ ಈ ಸಾಲಿನಲ್ಲಿಯೂ ಸಹ ತಾವು ಬೆಳೆದಿರುವ ಕಬ್ಬನ್ನು ಒಪ್ಪಿಗೆ ಮಾಡಿರುವ ಎಲ್ಲಾ ರೈತರು ಕಾರ್ಖಾನೆಗೆ ಸರಬಾರಾಜು ಮಾಡುವ ಮೂಲಕ ಕಾರ್ಖಾನೆಯು ಉತ್ತಮವಾಗಿ ಕಬ್ಬು ಅರೆಯಲು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಕಳೆದ ಬಾರಿ ಕಾರ್ಖಾನೆ ಯಾವುದೇ ತೊಂದರೆ ಇಲ್ಲದೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರದ ನಿಗದಿ ಪಡಿಸಿರುವ ಮುಂಗಡ 2770 ರೂ.ನೀಡಿದ್ದರಿಂದ ಆರಂಭಿಸಲಾಗುವುದು.

ಈ ಹಿನ್ನಲೆಯಲ್ಲಿ ಕಬ್ಬು ಅರೆವಿಕೆಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಈಗಾಗಲೇ ರೈತರು ಕಬ್ಬು ಕಡಿಯಲು ಪರ್ಮೀಟ್ ನೀಡಿದ್ದು ಎತ್ತಿನಗಾಡಿ, ಟ್ರಾಕ್ಟರ್ ಮತ್ತು ಲಾರಿಗಳ ಮೂಲಕ ಕಾರ್ಖಾನೆಗೆ ಕಬ್ಬು ಆಗಮಿಸುತ್ತಿವೆ ಎಂದರು.

ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ ನಡೆಸಿ ಪೂರ್ಣಾಹುತಿ ನೀಡಿದ ನಂತರ ಕಾರ್ಖಾನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಕಾರ್ಖಾನೆಗೆ ಮೊದಲು ಕಬ್ಬು ತುಂಬಿಕೊಂಡು ಬಂದಂತಹ ಎತ್ತಿನಗಾಡಿ, ಟ್ಯಾಕ್ಟರ್, ಲಾರಿಗೆ ಬಹುಮಾನ ವಿತರಿಸಲಾಯಿತು.

ಇದೇ ವೇಳೆ ಕಾರ್ಖಾನೆಯ ಹಿರಿಯ ಉಪಪ್ರಧಾನ ವ್ಯವಸ್ಥಾಪಕ ಎಂ.ರವಿ, ಪ್ರಧಾನ ವ್ಯವಸ್ಥಾಪಕ ಸೆಂಥಿಲ್‌ಕುಮಾರ್, ಕಾರ್ಖಾನೆ ಅಧಿಕಾರಿಗಳಾದ ಮಣಿಮಾರನ್, ನಿತೀಶ್, ನಿಂಗಯ್ಯ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!